ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
ನಾ ನಿನ್ನ ಮಲ್ಲಿಗೆ
![](https://sangaati.in/wp-content/uploads/2025/02/download-3-6.jpg)
ಮಲ್ಲಿಗೆಯಾಗ ಬಯಸಿಹೆ ನಾ ಪ್ರಕೃತಿಗೆ ಹೂ ಬೆಳಕು ಚೆಲ್ಲಲು
ಶ್ವೇತ ವರ್ಣವು ಹಸಿರಿನೊಂದಿಗೆ ಬೆರೆತು ಎಲ್ಲರ ಮನವ ಸೆಳೆಯಲು
ಲತೆಯೊಂದಿಗೆ ಶುದ್ಧ ನೆಂಟು ಬೆಸೆಯಲು
ಧರೆಗಿಳಿದಾಗ ಮಣ್ಣಿನ ಕಂಪು ಉಕ್ಕಿಸಲು
ಸಕಲರ ಗ್ರಹಣೇಂದ್ರೀಯಗಳನ್ನು ಉದ್ದೀಪಿಸಿ ನಯನಗಳಿಗೂ
ಹೃದಯ ಕಮಲಕ್ಕೂ ಆಹ್ಲಾದವನ್ನುಂಟು ಮಾಡಲು
ಮಲ್ಲಿಗೆಯಾಗ ಬಯಸಿಹೆನಾ ಶಾಂತಿ ಬಯಸಿ ಸರ್ವರೊಂದಿಗೆ ಸುಖದಿ ಬೆರೆಯಲು
ಹೆಂಗಳೆಯರ ಹೆರಳನು ಅಲಂಕರಿಸಲು ಅವರ ಅಂದವನು ಮತ್ತಷ್ಟು ಹೆಚ್ಚಿಸಲು
ಶಿವನ ಪಾದದಲ್ಲಿ ಬಿದ್ದು ಸಾರ್ಥಕವಾಗಲು
ಹಲವು ಬಯಕೆಗಳ ಇರಿಸಿ ನಾ ಮಲ್ಲಿಗೆಯಾಗ ಬಯಸುವೆ
ಬೇಸಿಗೆಯ ಬೇಗೆ ತಣಿದು ಮನೆ ಮನಗಳ ಅಕ್ಷಿಗಳ ತಂಪಾಗಿಸಲು
ಸಕಲರಲ್ಲಿ ಸ್ನೇಹ ಬಯಸಿ ಮಲ್ಲಿಗೆ ಆಗಬೇಕೆಂದಿರುವ ನನ್ನನ್ನು
ಗುಲಾಬಿಯಾಗೆಂದು ಒತಾಯಿಸಬೇಡ
ನನ್ನತನವನೇ ಹೋಗಲಾಡಿಸಲು ಯತ್ನಿಸಬೇಡ
ಹಸಿರು ಬಳ್ಳಿಯ ತಬ್ಬಿ ಮೆದುವಾಗಿರುವ ಮನವು ಮುಳ್ಳುಗಳೊಂದಿಗೆ ಬದುಕಲಾರದು
ಬಿಳಿಯ ಶುಭ್ರತೆಯ ಕಳೆದು ರಂಗುಗಳ ಗೋಜಲಿಗೆ ಸಿಲುಕಲಾರದು
ಗುಲಾಬಿಯಾಗಿ ಹೃದಯಗಳ ಬೆಸೆವಲ್ಲಿ ಪಡುವ ಪಾಡನು ನಾ ಸಹಿಸಲಾರೆನು
ಪ್ರೇಮಸೌಧವ ಕಟ್ಟುವಲ್ಲಿ ಗುಲಾಬಿಯು ಸೋತಿದ್ದನ್ನು ನಾ ಕಂಡಿದ್ದೇನೆ
ಒತ್ತಾಯಿಸದಿರು ನಾ ನಿನ್ನಂತಾಗೆಂದು ನನ್ನಂತೆ ನನ್ನನ್ನು ಬದುಕಲು ಬಿಡು
ಇಂತಿ ನಾ ನಿನ್ನ ಮಲ್ಲಿಗೆ
ಶೋಭಾ ನಾಗಭೂಷಣ
![](https://sangaati.in/wp-content/uploads/2024/01/shobhanagbushan-779x1024.jpg)
One thought on “ಶೋಭಾ ನಾಗಭೂಷಣ ಅವರ ಕವಿತೆ-ನಾ ನಿನ್ನ ಮಲ್ಲಿಗೆ”