![](https://sangaati.in/wp-content/uploads/2023/09/rukku-2.jpg)
ಧಾರಾವಾಹಿ-69
ಒಬ್ಬ ಅಮ್ಮನಕಥೆ
![](https://sangaati.in/wp-content/uploads/2023/11/rukku-839x1024.jpg)
ರುಕ್ಮಿಣಿ ನಾಯರ್
ಎಸ್ಟೇಟ್ ನ ಕಾರ್ಮಿಕ ಮಕ್ಕಳ
ಶಿಕ್ಷಕಿಯಾದ ಸುಮತಿ
![](https://sangaati.in/wp-content/uploads/2025/02/cba01565-6f70-4a2f-a285-8f8154a14651-1024x768.jpg)
ಒಂದೆರಡು ವರ್ಷಗಳ ಬಳಿಕ ಸುಮತಿಯನ್ನು ಕೂಡ ಅನಾಥಾಶ್ರಮದಿಂದ ಬೇರಡೆಗೆ ವರ್ಗಾಯಿಸಬೇಕಿತ್ತು. ಪುನಃ ಅಮ್ಮ ಮತ್ತು ಮಕ್ಕಳು ಬೇರ್ಪಡುವ ಸಂದರ್ಭವನ್ನು ಬಾಳ ಪುಸ್ತಕದಲ್ಲಿ ವಿಧಿಯು ಬರೆದಿತ್ತು. ಬೇರೆ ಎಲ್ಲೂ ಸುಮತಿಗೆ ಆಶ್ರಯತಾಣವಿರಲಿಲ್ಲ. ಏನು ಮಾಡುವುದು? ಎಲ್ಲಿಗೆ ಸುಮತಿಯನ್ನು ಕಳುಹಿಸುವುದು? ಎಂದು ಯೋಚಿಸುತ್ತಿರುವಾಗ ಅನಾಥಶ್ರಮವನ್ನು ಸ್ಥಾಪಿಸಿದ್ದ ಕಾಫಿ ತೋಟದ ಮಾಲೀಕರಿಗೆ ಒಂದು ಆಲೋಚನೆ ಹೊಳೆಯಿತು. ತಮ್ಮ ತೋಟದಲ್ಲಿಯೇ ಏಕೆ ಸುಮತಿಗೆ ಆಶ್ರಯ ಕೊಡಬಾರದು? ಈಕೆಯೂ ಅನಾಥೆ… ಯಾರೂ ಅಶ್ರಯವಿಲ್ಲದ ಮೇಲೆ ಎಲ್ಲಿಗೆ ಹೋಗುತ್ತಾಳೆ? ಎಂದು ಅವರಿಗೆ ಅನಿಸಿದ್ದೇ ತಡ ಸುಮತಿಯನ್ನು ಕರೆದು …” ನಿಮಗೆ ಅಭ್ಯಂತ ಇಲ್ಲದಿದ್ದರೆ ನೀವು ನಮ್ಮ ಕಾಫೀ ತೋಟದ ಕೂಲಿ ಮಕ್ಕಳಿಗೆ ಟೀಚರ್ ಆಗಿ ಕೆಲಸ ಮಾಡಬಾರದೇಕೆ? ಹೇಗೂ ನೀವು ವಿದ್ಯಾವಂತರು, ವಿದ್ಯೆ ಕಲಿತ ನಿಮ್ಮನ್ನು ತೋಟದ ಕೂಲಿ ಕೆಲಸಕ್ಕೆ ಕಳುಹಿಸಲು ನನಗೆ ಮನಸ್ಸು ಬರುತ್ತಿಲ್ಲ….ಹಾಗಾಗಿ ಹೇಳುತ್ತಿರುವೆ. ನಿಮ್ಮೊಬ್ಬರಿಗೆ ವಾಸಕ್ಕೆ ಅನುಕೂಲ ಆಗುವ ಹಾಗೆ ತೋಟದಲ್ಲಿ ಮನೆ ಹಾಗೂ ಸಂಬಳವನ್ನು ಕೊಡುತ್ತೇನೆ….ಮಕ್ಕಳು ಬೆಳೆದು ಸ್ವಲ್ಪ ದೊಡ್ಡವರು ಆಗುವವರೆಗೂ ಅವರು ಅನಾಥಾಶ್ರಮದಲ್ಲಿ ಇರಲಿ…ಅವರ ವಸತಿ, ಊಟ, ವಿಧ್ಯಾಭ್ಯಾಸ ಹಾಗೂ ಇತರೇ ಖರ್ಚು ವೆಚ್ಚಗಳು ದಾನಿಗಳಿಂದ ದೊರೆಯುವ ಹಣದಲ್ಲೇ ನಡೆಯುತ್ತದೆ. ಅವರೂ ಇಲ್ಲಿ ಸುರಕ್ಷಿತವಾಗಿ ಇರುತ್ತಾರೆ ಎಂದರು. ಮಕ್ಕಳಿಂದ ದೂರವಾಗಿ ಬಾಳುವುದು ಅವಳಿಗೆ ಕಷ್ಟಕರವಾದ ಸಂಗತಿಯಾಗಿತ್ತು. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಆಲೋಚಿಸಿದಾಗ ಎಸ್ಟೇಟ್ ಮಾಲೀಕರು ಹೇಳಿದ ವಿಷಯ ಸುಮತಿಗೆ ಸೂಕ್ತವೆನಿಸಿತು. ಮತ್ತೊಮ್ಮೆ ಮಕ್ಕಳಿಂದ ಅಗಲಿ ಬದುಕುವ ವಿಧಿಯ ನಿರ್ಧಾರವನ್ನು ನೋವು ತುಂಬಿದ ಮನಸ್ಸಿನಿಂದಲೇ ಸ್ವೀಕರಿಸಿದಳು.
ಅಮ್ಮ ತಮ್ಮನ್ನು ಬಿಟ್ಟು ಮತ್ತೆ ದೂರ ಹೋಗುತ್ತಾಳೆ ಎಂದು ತಿಳಿದಾಗ ಮಕ್ಕಳು ಅಮ್ಮನನ್ನು ಅಪ್ಪಿ … “ಅಮ್ಮಾ ನಮ್ಮನ್ನು ಬಿಟ್ಟು ಹೋಗಬೇಡ…ನೀನಿರದೆ ನಾವು ಇರಲಾರೆವು… ನಮ್ಮನ್ನೂ ನಿನ್ನ ಜೊತೆಗೆ ಕರೆದುಕೊಂಡು ಹೋಗು”… ಎಂದು ದಂಬಾಲು ಬಿದ್ದರು. ಮನಸ್ಸಿನಲ್ಲಿ ಅಗಾಧ ನೋವು ಇದ್ದರೂ … “ಅಮ್ಮ ದೂರವೇನೂ ಹೋಗುತ್ತಿಲ್ಲ….ಇಲ್ಲಿ ಹತ್ತಿರದಲ್ಲಿಯೇ ಇರುತ್ತೇನೆ…ಗುರುವಾರ ಸಂತೆಗೆ ಬಂದಾಗ ಇಲ್ಲಿಗೆ ಬಂದು, ನಿಮಗೆ ಇಷ್ಟವಾದ ಸಿಹಿ ತಿಂಡಿ ಹಾಗೂ ಹಣ್ಣುಗಳನ್ನು ತರುತ್ತೇನೆ…ಅಮ್ಮನ ಮುದ್ದಿನ ಮಕ್ಕಳು ಅಲ್ಲವೇ?… ಹೇಳಿದ್ದು ಕೇಳಿ….ನೀವು ಅಕ್ಷರ ಕಲಿತು ದೊಡ್ಡವರಾಗಿ, ಒಳ್ಳೆಯ ಕೆಲಸಕ್ಕೆ ಸೇರುವಾಗ ನಾವೆಲ್ಲರೂ ಮತ್ತೆ ಒಟ್ಟಿಗೇ ಇರುವಂತೆ ಆಗುತ್ತದೆ”… ಎಂದ ಅಮ್ಮನ ಮಾತು ಆ ಪುಟ್ಟ ಮಕ್ಕಳಿಗೆ ಎಷ್ಟು ಅರ್ಥವಾಯಿತೋ ಏನೋ!! ಆದರೆ ಅಮ್ಮ ಹೇಳಿದ್ದು ಈಗ ಅವರುಗಳು ಅನುಸರಿಸಲೇ ಬೇಕಿತ್ತು. ಹಿರಿಯ ಮಗಳು ವಯಸ್ಸಿಗೆ ಬಂದಿದ್ದಳು ಹಾಗೂ ಕೊನೆಯ ಮಗಳು ಇನ್ನೂ ಚಿಕ್ಕವಳು ಹಾಗಾಗಿ ಅವರನ್ನು ಜೊತೆಗೆ ಕರೆದುಕೊಂಡು ಹೋಗುವ ಅನುಮತಿ ಸುಮತಿಗೆ ದೊರೆಯಿತು. ನಡುವಿನ ಇಬ್ಬರು ಮಕ್ಕಳನ್ನು ಅನಾಥಾಶ್ರಮದಲ್ಲಿಯೇ ಬಿಟ್ಟು ಹಿರಿಯ ಮತ್ತು ಕೊನೆಯ ಮಗಳನ್ನು ಕರೆದುಕೊಂಡು, ತನ್ನ ಆಸ್ತಿಯಾದ ಹಳೆಯ ಪೆಟ್ಟಿಗೆಯನ್ನು ತೆಗೆದುಕೊಂಡು ಕಾಫಿ ತೋಟದ ಮಾಲೀಕರು ಹೇಳಿದಂತೆಯೇ ಅಲ್ಲಿ ತಲುಪಿದಳು. ಎಸ್ಟೇಟ್ ತಲುಪಿದ ಮೇಲೆ ಮಾಲೀಕರು ಆದರದಿಂದ ಸುಮತಿ ಹಾಗೂ ಮಕ್ಕಳನ್ನು ಬರಮಾಡಿಕೊಂಡು ಹೊಟ್ಟೆ ತುಂಬಾ ಊಟ ಕೊಟ್ಟು, ತೋಟದ ಮ್ಯಾನೇಜರ್ ರವರಿಗೆ ಅಮ್ಮ ಮಕ್ಕಳ ವಾಸಕ್ಕೆ ಯೋಗ್ಯವಾದ ಎಲ್ಲಾ ಅನುಕೂಲವನ್ನು ಮಾಡಿ ಕೊಡಲು ಅಪ್ಪಣೆಯಿತ್ತರು.
ಮಾಲೀಕರ ಅಪ್ಪಣೆಯಂತೆ ಜೀಪಿನಲ್ಲಿ ಮೂವರನ್ನೂ ಕರೆದುಕೊಂಡು ಅನತಿ ದೂರದಲ್ಲಿ ಇದ್ದ ಅವರದೇ ತೋಟವೊಂದಕ್ಕೆ ಕರೆದುಕೊಂಡು ಹೊರಟರು. ಜೀಪಿನಲ್ಲಿ ಪ್ರಯಾಣ ಮಾಡುವಾಗ ಅಪ್ಪ, ಅಕ್ಕ ಹಾಗೂ ತಮ್ಮಂದಿರ ನೆನಪಾಯಿತು. ತಾವು ಕೇರಳದಿಂದ ಸಕಲೇಶಪುರಕ್ಕೆ ಬಂದಾಗ ಅಮ್ಮನ ಹೊರತು ಪಡಿಸಿ ಎಲ್ಲರೂ ಒಟ್ಟಾಗಿ ತೋಟ ನೋಡಲು ಹೋದದ್ದು ನೆನಪಾಗಿ ಸುಮತಿಯ ಕಣ್ಣುಗಳು ಹನಿಗೂಡಿದವು. ಮಕ್ಕಳು ಕಾಣದಿರಲೆಂದು ಸೀರೆಯ ಸೆರಗಿನಿಂದ ಮುಖವನ್ನು ಮರೆಮಾಡಿಕೊಂಡಳು.
ತಾವು ಕೊಂಡುಕೊಳ್ಳಲು ಬಂದಿದ್ದ ಆ ತೋಟಕ್ಕಿಂತಲೂ ಈ ತೋಟವು ಬಹಳ ಸುಂದರವಾಗಿದೆ ಎನಿಸಿತು. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಚ್ಚ ಹಸಿರಿನಿಂದ ಕೂಡಿದ ತೋಟ, ತೋಟದಲ್ಲಿ ಸುಳಿದು ಬಂದ ತಣ್ಣನೆ ಗಾಳಿಯು ಮನಸ್ಸಿನ ನೋವನ್ನು ಕೊಂಚ ಕಡಿಮೆ ಮಾಡಿತು.
ತಾವು ಕೊಂಡುಕೊಳ್ಳಲು ಬಂದಿದ್ದ ತೋಟದ ಮಾಲಿಕ ಆ ವರ್ಷ ತೋಟವನ್ನು ತಮಗೆ ಮಾರಿದ್ದರೆ ನಮಗೂ ಇಂತಹ ಸಂಪದ್ಭರಿತ ಕಾಫಿ ತೋಟವು ಇರುತ್ತಿತ್ತು ಅಲ್ಲವೇ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಕಳೆದುಹೋದ ಪ್ರತಿಯೊಂದು ಘಟನೆಯೂ ಚಲನಚಿತ್ರದ ದೃಶ್ಯದಂತೆ ಕಣ್ಣ ಮುಂದೆ ಮೂಡಿ ಮರೆಯಾಯಿತು. ನಿಟ್ಟುಸಿರೊಂದು ಅವಳಿಗೆ ಅರಿವಿಲ್ಲದೇ ಬಂತು. ನೆನಪುಗಳಿಂದ ಹೃದಯ ಭಾರವಾಯಿತು. ಎಷ್ಟೇ ಪ್ರಯತ್ನ ಪಟ್ಟರೂ ಅಪ್ಪ, ಅಕ್ಕ ತಮ್ಮಂದಿರ ಜೊತೆ ತೋಟಕ್ಕೆ ಭೇಟಿ ನೀಡಿದ ನೆನಪು ಕಣ್ಣ ಮುಂದಿನಿಂದ ಮರೆಯಾಗಲೇ ಇಲ್ಲ. ತಾನೀಗ ಆದೇ ರೀತಿಯಲ್ಲಿಯೇ ಪ್ರಯಾಣ ಮಾಡುತ್ತಿದ್ದೇನೆ. ಆದರೆ ತೋಟವನ್ನು ಕೊಂಡುಕೊಳ್ಳಲು ಅಲ್ಲ, ಇಲ್ಲಿಯ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಲು ಎನ್ನುವ ಸತ್ಯ ಅವಳನ್ನು ವಾಸ್ತವಕ್ಕೆ ಕರೆತಂದಿತು. ಎಷ್ಟೇ ಬೇಡವೆಂದರೂ ತಾವು ಕಳೆದ ಗತಕಾಲದ ನೆನಪುಗಳು ಮರುಕಳಿಸುತ್ತಲೇ ಇದ್ದವು.
ಕಡಿದಾದ ತಿರುವುಗಳಲ್ಲಿ ಜೀಪು ಚಲಿಸುತ್ತಿರುವಾಗ, ಅಲ್ಲಿಯೇ ರಸ್ತೆಯ ಬದಿಯಲ್ಲಿ ಒಂದು ಪುಟ್ಟ ದೇವರ ಗುಡಿಯು ಕಂಡಿತು….”ದೇವರೇ ನನ್ನನ್ನೂ ಮಕ್ಕಳನ್ನೂ ಕೈ ಬಿಡದೆ ಕಾಪಾಡು”… ಎಂದು ಬೇಡಿಕೊಂಡಳು. ಅವರು ಪ್ರಯಾಣಿಸುತ್ತಿದ್ದ ಜೀಪು ಇಳಿಜಾರಿನ ರಸ್ತೆಯಲ್ಲಿ ಬಹುದೂರ ಸಾಗಿ, ಒಂದು ಮನೆಯ ಮುಂದೆ ನಿಂತಿತು. ಮ್ಯಾನೇಜರ್ ಚಾಲಕನಿಗೆ ಹಾರ್ನ್ ಮಾಡುವಂತೆ ಹೇಳಿದರು. ಹಾರ್ನ್ ಸದ್ದು ಕೇಳಿದಾಗ ಮನೆಯ ಒಳಗಿನಿಂದ ತೋಟದ ಮತ್ತೊಬ್ಬರು ಕಾರ್ಯಕಾರಿ ಮ್ಯಾನೇಜರ್ ಹೊರಗೆ ಬಂದು ಹಿರಿಯ ಮ್ಯಾನೇಜರ್ ಗೆ ವಂದನೆ ಸಲ್ಲಿಸಿದರು. ಮ್ಯಾನೇಜರ್ ಸುಮತಿ ಹಾಗೂ ಮಕ್ಕಳನ್ನು ತೋರಿಸಿ…”ಮಾಲಿಕರು ಹೇಳಿದ ಹೊಸ ಟೀಚರ್ ಇವರೇ”… ಎಂದು ಅವರಿಗೆ ಪರಿಚಯ ಮಾಡಿಸಿದರು. ಸುಮತಿ ತಲೆಯ ಮೇಲೆ ಸೆರಗು ಹೊದ್ದು ಅವರಿಗೆ ನಮಸ್ಕರಿಸಿ, ಹಿರಿಯ ಮಗಳಿಗೂ ಅವರಿಗೆ ವಂದಿಸುವಂತೆ ಸೂಚಿಸಿದಳು. ಅವಳೂ ಕೈಜೋಡಿಸಿ ವಂದಿಸಿದಳು. ಕಾರ್ಯಕಾರಿ ಮ್ಯಾನೇಜರ್ ಇವರ ಜೊತೆ ಜೀಪನ್ನು ಏರಿದರು. ಜೀಪು ಒಂದು ಗುಡ್ಡದ ಕಡೆಗೆ ನಿಧಾನಗತಿಯಿಂದ ಸಾಗಿತು. ವರ್ತುಲವಾದ ರಸ್ತೆಯಲ್ಲಿ ಗುಡ್ಡವನ್ನು ಸುತ್ತಿ ಬಳಸಿ ಜೀಪು ಹೋಗುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಜಾತಿಯ ಹಣ್ಣುಗಳ ಮರಗಳು ಇದ್ದವು. ಮುಂದೆ ಸಾಗಿದ ಹಾಗೆ ಸುಂದರವಾದ ಬೋಗನ್ವಿಲ್ಲಾ ಹೂವು ತುಂಬಿದ ಗಿಡಗಳು ಬೀಸುತ್ತಿದ್ದ ಗಾಳಿಗೆ ತಲೆಬಾಗಿ ಇವರೆಲ್ಲರನ್ನೂ ಸ್ವಾಗತಿಸಿದವು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಸುಮತಿಗೆ ಬಹಳ ಸಂತೋಷವಾಯಿತು. ಸ್ವಲ್ಪ ಮುಂದೆ ಸಾಗಿದಂತೆ ಭವ್ಯವಾದ ಬಂಗಲೆಯೊಂದು ಕಾಣಿಸಿತು. ಜೀಪು ನೇರವಾಗಿ ಕಾರ್ ಶೆಡ್ ವೊಂದನ್ನು ಪ್ರವೇಶಿಸಿತು. ಶೆಡ್ ಗೆ ಹೋಗುವ ದಾರಿಯ ಎರಡೂ ಕಡೆಯೂ ಪರಿಮಳ ಭರಿತ ಪನ್ನೀರು ಗುಲಾಬಿಗಳ ಗಿಡಗಳಲ್ಲಿ ಅರಳಿ ನಿಂತಿದ್ದ ಹೂಗಳು ಕಂಪನ್ನು ಸೂಸಿದವು.
![](https://sangaati.in/wp-content/uploads/2023/09/rukku-1024x1024.jpg)