ಗಿರಿಜಾ ಇಟಗಿ ಅವರ ಹೊಸ ಗಜಲ್

ಮಧುಖಾನೆಯಲಿ ಮಧು ತುಂಬಿ ತುಳುಕುತಿತ್ತು ಬೇಕೆನಿಸಲಿಲ್ಲ
ಒಲವಿನ ಒರತೆಯು ಪುಟಿದು ಮೇಲೆಳುತಿತ್ತು ಬೇಕೆನಿಸಲಿಲ್ಲ

ಬಯಸಿದ ಭೌತಿಕ ವಸ್ತುಗಳೆಲ್ಲಾ ಕಣ್ಮುಂದೆ ನರ್ತಿಸುತ್ತಿದ್ದವು
ಝಗಮಗಿಸುವ ವೈಭೋಗ ದೃಷ್ಟಿಗೆ ಎಟಕುತಿತ್ತು ಬೇಕೆನಿಸಲಿಲ್ಲ

ಮೌನದಲಿ ಮಾಮರವು ಚಿಗುರಿ ಫಲವ ಸೂಸುತಿತ್ತು
ಹಸಿರು ಐಸಿರಿಯು ಮೈದುಂಬಿ ಆಹ್ವಾನಿಸುತಿತ್ತು ಬೇಕೆನಿಸಲಿಲ್ಲ

ಸೂಜಿಯ ಮೊನೆಯಲಿ ನಡೆದು ಡೊಂಬರಾಟವ ಆಡಿದೆ
ಜಯಕಾರದ ಘೋಷಣೆಗಳು ಕಿವಿಗೆ ಅಪ್ಪಳಿಸುತಿತ್ತು ಬೇಕೆನಿಸಲಿಲ್ಲ

ಸಮಷ್ಠಿಯ ತೊಟ್ಟಿಲೊಳಗೆ ತೂಗುತಿತ್ತು ಗಿರಿಯ ಆತ್ಮ
ಭವದ ಮೆಟ್ಟಿಲುಗಳು ಕೈಬೀಸಿ ಕರೆಯುತಿತ್ತು ಬೇಕೆನಿಸಲಿಲ್ಲ


#

Leave a Reply

Back To Top