![](https://sangaati.in/wp-content/uploads/2025/02/mahumumbai.jpg)
ಅಂಕಣ ಸಂಗಾತಿ
ಮುಂಬಯಿ ಎಕ್ಸ್ ಪ್ರೆಸ್
ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ..
![](https://sangaati.in/wp-content/uploads/2025/02/madhuumbai-766x1024.jpg)
ಮಧು ವಸ್ತ್ರದ
ಮುಂಬಯಿ
ಮಾಯಾ ನಗರಿಯ
ವಿಹಂಗಮ ನೋಟ…
![](https://sangaati.in/wp-content/uploads/2025/02/madhumumbai-1024x847.jpg)
ಅಂಕಣ ಅರಂಭಿಸುವ ಮುನ್ನ
ಆತ್ಮೀಯರೆ,
ನಾನು ಮಧು ವಸ್ತ್ರದ, ಮುಂಬಯಿನಲ್ಲಿ ಇರುವ ನಿಮ್ಮ ಕನ್ನಡತಿ
ಹೆಗಲ ಮೇಲೆ ಕನಸುಗಳ ಮೂಟೆ ಹೊತ್ತು ಬರುವ ಉತ್ಸಾಹಿಗಳ ಪಾಲಿನ ಸ್ವಪ್ನ ಲೋಕ ಈ ಮುಂಬಯಿ..
ಬದುಕಿನ ದಾರಿ ಅರಸುತ ಬರುವ ಶ್ರಮಿಕರಿಗೆ ಆಸರೆ ಕೊಡುವ ಭುವಿಯ ಮೇಲಿನ ನಾಕ ಈ ಮುಂಬಯಿ..
ಆಸರೆ ಬೇಡಿದವಗೆ ಆಧಾರವಿತ್ತು ಕೈಹಿಡಿದು ಮುನ್ನಡೆಸಿ ಆಶೀರ್ವದಿಸುವ ತಾಯಿ ಈ ಮುಂಬಯಿ..
ಮುಂಬಯಿ, ಮುಂಬೈ, ಬಾಂಬೆ, ಬಂಬೈ ಬೊಂಬಾಯಿ, ಬಂಬಯಿ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಮಾಯಾ ನಗರಿ ಜಗದಲ್ಲೆಡೆಯ ಕೋಟಿ ಗಟ್ಟಲೆ ಜನಮನಗಳ ಆಕರ್ಷಣೆಯ ಕೇಂದ್ರವಾಗಿದೆ..ಮಹಾರಾಷ್ಟ್ರ ರಾಜ್ಯದ ರಾಜಧಾನಿ,
ಉದ್ಯಮಗಳ ಬೀಡು, ಆರ್ಥಿಕ ಕೇಂದ್ರವಾದ ಮುಂಬಯಿ ತನ್ನ ವಿಭಿನ್ನ, ವಿಶಿಷ್ಟ, ಚರಿತ್ರೆ, ಸಂಸ್ಕೃತಿ, ಜೀವನಶೈಲಿಗಳಿಂದ ಪ್ರಸಿದ್ದಿ ಪಡೆದು ಜಗದ ಮೂಲೆ ಮೂಲೆಗಳ ಜನರನೆಲ್ಲ ಆಕರ್ಷಿಸುತ್ತ,ಇನ್ನೂ ಎತ್ತರೆತ್ತರಕೆ ಬೆಳೆಯುತ್ತಿದೆ.. ಸುಮಾರು ಮೂರು ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ನಗರದಲ್ಲಿ ಯಾವುದೇ ರೀತಿಯ ಜಾತಿ,ಮತ,ವೇಷ ಭಾಷೆಗಳ ಬೇಧ ಭಾವವಿಲ್ಲದ ವಿಭಿನ್ನ ಸಂಸ್ಕೃತಿ ಮನೆ ಮಾಡಿದೆ. ದೇಶದ ವಿವಿಧ ಭಾಗಗಳಿಂದ ಬದುಕನು ಅರಸಿ ಬಂದು ನೆಲೆಸಿದ, ಹಗಲಿರುಳು ಕಾರ್ಯನಿರತರಾದ ಜನರಿಂದ ತುಂಬಿದ, ಎಂದೂ ನಿದ್ರಿಸದ ನಗರವೆಂದೇ ಹೆಸರಾಗಿ,ವಿಶ್ವದ ಅತ್ಯಂತ ಆಕರ್ಷಕ ಮತ್ತು ಪ್ರಮುಖ ನಗರಗಳಲ್ಲಿ ಒಂದಾಗಿದೆ..
![](https://sangaati.in/wp-content/uploads/2025/02/493b4110-8e3d-4154-b670-d8adb43523c0.jpg)
ಭಾರತದ ಪಶ್ಚಿಮ ಕರಾವಳಿಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಮುಂಬಯಿ ಮೊದಲಿಗೆ ಏಳು ದ್ವೀಪಗಳ ಸುಂದರ ಸಮೂಹವಾಗಿತ್ತು. ಹಲವು ರಾಜವಂಶಗಳು ಮತ್ತು ಆಕ್ರಮಣಕಾರರ ಆಡಳಿತದಲ್ಲಿ ಸಿಲುಕಿ ಬದಲಾವಣೆಗಳೂ ಆದವು..೧೬೬೧ರಲ್ಲಿ ಬ್ರಿಟಿಷರು ಮುಂಬಯಿಯನ್ನು ತಮ್ಮ ಆಡಳಿತಕ್ಕೆ ತೆಗೆದುಕೊಂಡ ನಂತರ ಈ ಎಲ್ಲ ದ್ವೀಪಗಳನ್ನು ವಿಕಾಸಗೊಳಿಸುವ ಮೂಲಕ ಬೃಹತ್ ನಗರವನ್ನು ರೂಪಿಸಿದರು.
ಮುಂಬಯಿಯ ನಗರದ ಮೊಟ್ಟ ಮೊದಲ ಜನವಸತಿ ಇಲ್ಲಿನ ಕೋಳಿ (ಮೀನುಗಾರರು,ಬೆಸ್ತರು) ಸಮುದಾಯದಿಂದ ಪ್ರಾರಂಭವಾಯಿತು. ಮುಂಬಾ ದೇವಿ ಈ ಪ್ರದೇಶದ ಸ್ಥಳೀಯ ಮೀನುಗಾರ ಸಮುದಾಯದ ಆಶ್ರಯದೇವಿ..ಹಾಗಾಗಿ
ಮುಂಬಾ ದೇವಿ ನಮ್ಮ ಆಯಿ(ತಾಯಿ) ಎಂಬ ಭಾವನೆಯಿಂದ ಈ ಪ್ರದೇಶಕ್ಕೆ ಮುಂಬಯಿ ಎಂಬ ಹೆಸರನ್ನು ಇಡಲಾಯಿತು.
16ನೇ ಶತಮಾನದ ಮಧ್ಯಭಾಗದಲ್ಲಿ, ಪೋರ್ಚುಗೀಸರು ಈ ಪ್ರದೇಶವನ್ನು ವಶಪಡಿಸಿಕೊಂಡು, ಅದನ್ನು ‘ಬೊಮ್ಬಾ’ ಅಥವಾ ‘ಬೊಂಬೈಮ್’ ಎಂದು ಕರೆದರು. ನಂತರ, ಈ ಪ್ರದೇಶವನ್ನು ಬ್ರಿಟಿಷರು ವಶಪಡಿಸಿಕೊಂಡು, ‘ಬಾಂಬೆ’,ಬೊಂಬಾಯ್’ ಎಂದು ಹೆಸರಿಸಿದರು..ನಂತರ 1995ರಲ್ಲಿ, “ಮುಂಬಯಿ” ಹೆಸರನ್ನು ಮರು ಹೊಂದಿಸಲಾಯಿತು…
ಎಲ್ಲಾ ದೊಡ್ಡ ನಗರಗಳಲ್ಲಿ ಇರುವಂತೆ ಇಲ್ಲಿಯೂ ಬಡವರು,ಕೆಳ ಮಧ್ಯಮ ವರ್ಗ ಮಧ್ಯಮ ವರ್ಗ,ಮೇಲುವರ್ಗ,
ಶ್ರೀಮಂತರು, ಅತ್ಯಂತ ಸಿರಿವಂತರು ಹೀಗೆ ಎಲ್ಲ ವರ್ಗದ ಜನರೂ ಇದ್ದಾರೆ..ಎಲ್ಲ ವರ್ಗದ ಜನರಿಗೂ ದುಡಿಯಲು ಬೇರೆ ಬೇರೆ ರೀತಿಯ ಮಾರ್ಗಗಳನ್ನು ಮುಂಬಯಿ ಮಾಯಾನಗರ ಕಲ್ಪಿಸಿಕೊಡುತ್ತದೆ ಅಥವಾ ಕಲಿಸಿಕೊಡುತ್ತದೆ.
ಹಳ್ಳಿಯಲ್ಲಿ ತಾಯ್ತಂದೆಯರಿಗೆ ಹೇಳದಂತೆ ಮುಂಬಯಿಗೆ ಓಡಿ ಬಂದು ಕೂಲಿ ನಾಲಿ ಮಾಡಿ ಜೀವನ ಸಾಗಿಸಿದವರೂ ಇರುವಂತೆ, ಬಿಡಿಗಾಸೂ ಇಲ್ಲದೆ ಬರಿ ಕೈಲಿ ಇಲ್ಲಿಗೆ ಬಂದು ಕೆಲವೇ ವರ್ಷಗಳಲ್ಲಿ ಕೋಟ್ಯಾಧೀಶರಾದ ಜನರೂ ಇಲ್ಲಿದ್ದಾರೆ..ಇನ್ನೊಂದೆಡೆ ಆರಕ್ಕೇಳದೆ ಮೂರಕ್ಕಿಳಿಯದೆ ಶಾಂತ ಜೀವನ ಸಾಗಿಸುತ್ತಿರುವ ಶ್ರೀ ಸಾಮಾನ್ಯರೂ ಇದ್ದಾರೆ.ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸುವ ಮಾರ್ಗಗಳನ್ನು ಕಂಡುಕೊಂಡಿದ್ದಾರೆ..ಸಮಸ್ಯೆ,ಸಮಾಧಾನ,ಸಹಕಾರ, ಸಂಘಟನೆ, ಸ್ನೇಹ, ಸಂಗೀತ, ಸಾಹಿತ್ಯ,ಸಂಸ್ಕೃತಿ, ಸಂತಸ, ಸಂಭ್ರಮ ಮತ್ತು ಮಧುರ ಸಂಬಂಧಗಳಿಂದ ತುಂಬಿ ತುಳುಕುವ ಈ ಮಾಯಾ ನಗರದ ಜನರ ಒಂದು ವಿಶೇಷತೆಯೆಂದರೆ ವಿಶಾಲ ಮನೋಭಾವ ಮತ್ತು ಸಹಾಯ ಮಾಡುವ ಗುಣ..ಮುಂಬಯಿನ ಜನರು ಎಷ್ಟೇ ಸಮಸ್ಯೆಗಳು ಎದುರಾದರೂ, ಏನೇ ಕಷ್ಟಗಳು ಬಂದರೂ ತಮ್ಮ ಉತ್ಸಾಹವನ್ನು ಮಾತ್ರ ಎಂದೂ ಕಳೆದುಕೊಳ್ಳುವುದಿಲ್ಲ.ಇವರಲ್ಲಿ ಕೆಲಸಗಳನ್ನು ಕುರಿತಾದ ಆಸಕ್ತಿ ಮತ್ತು ಉತ್ಸಾಹ ಅತಿ ಹೆಚ್ಚು..ಅತ್ಯಂತ ಆಶಾವಾದಿಗಳಾಗಿ ಪರಿಸ್ಥಿತಿಯನ್ನು, ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇವರಲ್ಲಿದೆ..ಇಲ್ಲಿಯ ಜನರು ಸಹಾಯ ಮಾಡಲು ಸದಾ ತಯಾರಾಗಿರುತ್ತಾರೆ.
![](https://sangaati.in/wp-content/uploads/2025/02/f8c5e772-ebde-4e2b-98d7-b5ebb5f01448-1024x768.jpg)
ಭಾರತದ ಬೇರೆ ಬೇರೆ ಪ್ರದೇಶಗಳಿಂದ ಬಂದು ಇಲ್ಲಿ ನೆಲೆಸಿದ, ಎಲ್ಲ ಭಾಷೆ,ಎಲ್ಲ ಪಂಗಡಗಳ ಜನರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಸ್ವಭಾವ ಇವರದು..ಮುಂಬಯಿನಲ್ಲಿ ಜೀವನ ಅತ್ಯಂತ ವೇಗವಾಗಿ ಸಾಗುತ್ತದೆ ಎಂಬುದು ನಿಜ..ವಿವಿಧ ಸಂಸ್ಕೃತಿಗಳ ಮತ್ತು ಭಾಷೆಗಳ ಜನರು ಒಂದೆಡೆ ಸೇರಿ ಬಾಳುವುದರಿಂದ, ಇವರಲ್ಲಿ ಹೊಂದಿಕೊಳ್ಳುವ ಗುಣ, ತಾಳ್ಮೆ, ಸಹಿಷ್ಣುತೆ ಮತ್ತು ಸಹಕಾರ ನೀಡುವ ಮನೋಭಾವವೂ ಹೆಚ್ಚಾಗಿದೆ ಎನ್ನಬಹುದು..
ನಗರವು ನಿರಂತರವಾಗಿ ಬೆಳೆಯುತ್ತಲೇ ಇದ್ದರೂ, ಅದರ ಮೂಲಭೂತ ವ್ಯವಸ್ಥೆ, ಆಸ್ತಿ ಪಾಸ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಗರವನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
ಒಟ್ಟಾರೆ ಮುಂಬಯಿ ಮಹಾನಗರದ ಚಲನೆಯ ಪಧ್ಧತಿ ಅತ್ಯಂತ ವೇಗವಾಗಿದೆ.. ಇದನ್ನು ಎಂದಿಗೂ ನಿಲ್ಲದ, ಶಕ್ತಿ, ಅವಕಾಶ, ಮತ್ತು ತುರ್ತು ಕಾರ್ಯಗಳ ನಗರ ಎಂದು ಪರಿಗಣಿಸಲು ಕಾರಣವಾಗಿದೆ..
ಕಳೆದ ಮೂರೂವರೆ ದಶಕಗಳಿಂದ ಮುಂಬಯಿ ಮಹಾನಗರದ ನಿವಾಸಿಯಾಗಿ ಮರಾಠಿ ಸಂಸ್ಕೃತಿಯ ಮಹಾ ಸಾಗರದಲ್ಲಿ ತೇಲುತ, ಮುಳುಗುತೇಳುತ ಈಜುತ್ತಿರುವ ನಾನು ಬದುಕಿನ ಹತ್ತು ಹಲವಾರು ರೀತಿ ನೀತಿಗಳನ್ನು ಇಲ್ಲಿಂದ ಕಲಿತದ್ದು ನಿಜ..
ಗೃಹಿಣಿಯಾಗಿ, ದಕ್ಷ ಪೋಲಿಸ್ ಅಧಿಕಾರಿಯ ಪತ್ನಿಯಾಗಿ,ಇಬ್ಬರು ಪ್ರತಿಭಾವಂತ ಮಕ್ಕಳ ತಾಯಾಗಿ, ಪಕ್ಕಾ ಮುಂಬಯಿಕರ ಆಗಿ ಇಷ್ಟು ವರ್ಷಗಳಲ್ಲಿ ನಾನು ಕಂಡ, ಕಲಿತ, ಅರಿತ ಬಿನ್ನ ಭಿನ್ನ ವಿಷಯಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇನೆ..
ಮುಕ್ತ ಮನದಿಂದ ಸ್ಪಂದಿಸುವಿರೆಂದು ನಂಬಿದ್ದೇನೆ..
ವಂದನೆಗಳು..
ಮಧು ವಸ್ತ್ರದ
![](https://sangaati.in/wp-content/uploads/2025/02/madhuumbai-1-766x1024.jpg)
ಮಧು ಅಶೋಕ್ ವಸ್ತ್ರದ್ ಅವರ ಪರಿಚಯ
ಕಲ್ಲಿನ ನಗರಿ ಚಿತ್ರದುರ್ಗದ ಮಗಳು, ಪೇಢೆನಗರಿ ಧಾರವಾಡದ ಸೊಸೆ ಮತ್ತು ಮಾಯಾನಗರಿ ಮುಂಬಯಿನ ನಿವಾಸಿ ಹೊರನಾಡ ಕನ್ಮಡತಿ ಶ್ರೀಮತಿ ಮಧು ವಸ್ತ್ರದ ಇವರು ಕಳೆದ ೩೬ ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿ ಮರಾಠಿ ಭಾಷೆಯನ್ನು ಕಲಿತು ಮಹಾರಾಷ್ಟ್ರದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ..
ಮಹಾರಾಷ್ಟ್ರದಲ್ಲೇ ಹುಟ್ಟಿ ಬೆಳೆದ ಕನ್ನಡ ಭಾಷೆಯನ್ನು ಅರಿಯದ ದಕ್ಷ, ಕರ್ತವ್ಯನಿಷ್ಠ ಪೋಲೀಸ್ ಅಧಿಕಾರಿ ಶ್ರೀ ಅಶೋಕ್ ವಸ್ತ್ರದ್ ಅವರ ಪತ್ನಿಯಾಗಿ, ಸದ್ಗೃಹಿಣಿಯಾಗಿ, ಜವಾಬ್ದಾರಿಗಳೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತ, ತಮ್ಮ ಇಬ್ಬರು ಮಕ್ಕಳಿಗೂ ಉತ್ತಮ ಶಿಕ್ಷಣದೊಂದಿಗೆ ಸಂಗೀತ, ನೃತ್ಯ ಕಲೆಗಳಲ್ಲಿ ತರಪೇತಿಯನಿತ್ತು ಉತ್ತಮ ಸಂಸ್ಕಾರಿಗಳನ್ನಾಗಿ ಮಾಡಿರುವ
ಮಧು ವಸ್ತ್ರದ್ ಅವರು ಕಳೆದ ೪-೫ ವರ್ಷಗಳಿಂದ ಕನ್ನಡ ಸಾಹಿತ್ಯಲೋಕಕ್ಕೆ ಆಡಿಯಿಟ್ಟು ಪ್ರಸ್ತುತ ತಮ್ಮನ್ನು ಉತ್ತಮ ಕವಯತ್ರಿಯಾಗಿ, ಅಂಕಣಕಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಗಝಲ್, ರುಬಾಯಿ, ವಚನ, ಕವನ, ಹಾಯ್ಕು, ಹೀಗೆ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಇವರು ರಚಿಸ ಬಲ್ಲವರಾಗಿದ್ದಾರೆ..ತಮ್ಮ ಉತ್ತಮ ಸಾಹಿತ್ಯಕ್ಕಾಗಿ ಹಲವಾರು ರಾಜ್ಯ ಮಟ್ಟದ ಬಹುಮಾನಗಳನ್ನು ಪಡೆದ ಪ್ರತಿಭಾವಂತೆ ಈಕೆ..
ಉತ್ತಮ ಸಂಘಟಕಿಯಾಗಿ,ಸಾಮಾಜಿಕ ಕಾರ್ಯಕರ್ತೆಯಾಗಿ ನಗರದ ಹಲವಾರು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸ್ಪಂದಿಸಿ ಸಹಾಯ ಮಾಡುವ ಹೃದಯವಂತೆ, ಬೋರಿವಲಿಯಲ್ಲಿರುವ ಅಸ್ಮಿತಾ ಫೌಂಡೇಶನ್ ಸಂಸ್ಥೆಯ ವಿಶೇಷ ಚೇತನ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾ, ಅವರಿಗಾಗಿ ವಿಭಿನ್ನ ವಿಶಿಷ್ಟ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಅವರ ಮನವರಳಿಸಿ ಆನಂದ ನೀಡುವಲ್ಲಿ ಸಫಲರಾಗಿದ್ದಾರೆ..
ಜೀವನದಲ್ಲಿ ಕಲಿಕೆ ನಿರಂತರ ಎಂಬ ಮನೋಭಾವ ಹೊಂದಿರುವ ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ,
ಸುಗಮ ಸಂಗೀತ. ಹಿಂದಿ, ಮರಾಠಿ, ಕನ್ನಡ ಕರಾವೋಕೆ ಸಂಗೀತ ಪದ್ಧತಿಗಳ ಅಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ..
ಪಾಕಶಾಸ್ತ್ರದಲ್ಲಿ ವಿಶೇಷ ಪರಿಣತಿ ಇವರ ಹೆಗ್ಗಳಿಕೆ..ಮುಂಬಯಿನ ಹಲವಾರು ಪ್ರತಿಷ್ಟಿತ ಪಾಕಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸತತವಾಗಿ ನಾಲ್ಕು ಬಾರಿ ಅತ್ಯುತ್ತಮ ಪ್ರಶಸ್ತಿ ಪಡೆದ ಹೆಮ್ಮೆ ಇವರದು..
ಕ್ರಿಯಾಶೀಲ ವ್ಯಕ್ತಿತ್ವದ, ಚಟುವಟಿಕೆಯ ಚಿಲುಮೆಯಾದ ಮಧು ಅವರು ಯೋಗ, ಸಾಹಿತ್ಯ, ಸಂಗೀತ, ಸಮಾಜಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯವರೆಗೆ ತಮ್ಮ ಕಾರ್ಯವನ್ನು ವಿಸ್ತರಿಸಿಕೊಂಡಿದ್ದಾರೆ..ಮಕ್ಕಳ ದಿನಾಚರಣೆಯಂದು ಅವರಿಗಾಗಿ ಆಯೋಜಿಸಿದ ಅಡುಗೆ, ಮತ್ತು ವ್ಯಾಪಾರ ನಿರ್ವಹಣೆ ಸ್ಪರ್ಧೆಗಳು ಅದ್ಭುತ ಯಶಸ್ಸನ್ನು ಗಳಿಸಿವೆ.. ೭೦ ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ಅಮ್ಮಂದಿರಿಗಾಗಿ ಇವರು ಆಯೋಜಿಸಿದ ಪಾಕಕಲಾ ಸ್ಪರ್ಧೆ, ಬ್ಯೂಟಿಕ್ವೀನ್ ಸ್ಪರ್ಧೆ ಮತ್ತು ಫ್ಯಾಷನ್ ಷೋಗಳು ಅತ್ಯಂತ ಜನಪ್ರಿಯತೆಯನ್ನೂ, ಜನಮನ್ನಣೆಯನ್ನೂ ಪಡದಿವೆ. ಜೀವನದ ಸಂಧ್ಯಾಕಾಲದಲ್ಲಿ ಪಯಣಿಸುತ್ತಿರುವ ಈ ಹಿರಿಯ ಜೀವಗಳಲ್ಲಿ ಹೊಸ ಚೈತನ್ಯ, ಉತ್ಸಾಹಗಳನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ..ತಮ್ಮ ಸ್ನೇಹಮಯ ವ್ಯಕ್ತಿತ್ವದಿಂದ ಎಲ್ಲರೊಡನೆ ಬೆರೆಯುವ ಇವರ ಜೀವನದ ಮುಂದಿನ ಪ್ರವಾಸ ಶುಭಕರವಾಗಲಿ ಎಂಬುದೇ ನಮ್ಮ ಇಚ್ಛೆ..ಹೊರ ನಾಡಿನಲ್ಲಿ ಕಸ್ತೂರಿ ಕನ್ನಡದ ಕಂಪನ್ನು ಸೂಸುತ್ತ, ಮರಾಠಿ ನೆಲದಲ್ಲಿ ತಮ್ಮ ಛಾಪು ಮೂಡಿಸಿರುವ ಶ್ರೀಮತಿ ಮಧು ವಸ್ತ್ರದ್ ಅವರಿಗೆ ಶ್ರೀ ಶಕ್ತಿ ಫೌಂಡೇಶನ್ ಸಂಸ್ಥೆಯ ವತಿಯಿಂದ ಹೃದಯಪೂರ್ವಕ ಶುಭ ಹಾರೈಕೆಗಳು..
Wow ಮಧು ತುಂಬಾ ಚೆನ್ನಾಗಿ ಮೂಡಿಬಂದಿದೆ ಲೇಖನ. ನಾವೂ ಹೊತ್ತು ವರ್ಷ ಮುಂಬೈಯ ಭಾಂಡೂಪ ನಂತರ ಬೋರಿವಲಿಯಲ್ಲಿ ಇದ್ದೆವು.ನಿಜವಾಗಿಯೂ ಮುಂಬಯಿ ಜನರನ್ನು ಮೆಚ್ಚಲೇಬೇಕು. ನಾವು ಈಗ ಪುಣೇಕರ ಆಗಿದ್ದೇವೆ. ಹಾಗೂ ನೀವು multi talented lady ಇರುವಿರಿ.ದೇವರು ನಿಮಗೆ ಇನ್ನೂ ಸಾಮಾಜಿಕ ಕಾರ್ಯ ಮಾಡಲು ಶಕ್ತಿ ಕೊಡಲಿ.
ಅನು ಸಕ್ರೋಜಿ ಪುಣೆ
ಆಯಿ…ನಿಮ್ಮ ಅನಿಸಿಕೆಗಳು ನನಗೆ ತುಂಬಾ ಸಂತೋಷ ತಂದವು. ಮುಂಬಯಿನ ನೆನಪುಗಳು ನಿಜಕ್ಕೂ ಮಧುರ, ಇಲ್ಲಿನ ಜನರ ಆತ್ಮೀಯತೆ ಅನುಭವಿಸಿದವರು ಮಾತ್ರ ಅರಿಯಬಲ್ಲರು. ಈಗ ನೀವು ಪುಣೆಯಲ್ಲಿ ನೆಲೆಸಿದ್ದರೂ, ಮುಂಬೈಯ ಬಾಂಧವ್ಯ ಮನದಲ್ಲಿ ಉಳಿದಿರಬಹುದು.
ನಿಮ್ಮ ಪ್ರೀತಿಯ ಮಾತುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ದೇವರು ನಿಮಗೂ ಎಲ್ಲ ಪ್ರಗತಿ, ಸಂತೋಷ, ಹಾಗೂ ಶಕ್ತಿ ನೀಡಲಿ..