ವೈಚಾರಿಕ ಸಂಗಾತಿ
ʼಮಹಾಭಾರತ ಮತ್ತು ಸ್ತ್ರೀವಾದʼ
ವೈಚಾರಿಕ ಲೇಖನ
ಡಾ.ಯಲ್ಲಮ್ಮ ಕೆ
![](https://sangaati.in/wp-content/uploads/2025/02/images-7.jpg)
ವಿಸ್ತೃತ ಓದು ಅಥವ ಆಳವಾದ ಅಧ್ಯಯನವೆಂದರೆ..? ‘ವರ್ತಮಾನದಿಂದ ಭೂತದೆಡೆಗಿನ ಪಯಣವಾಗಿರುತ್ತದೆ’. ಓದಿಗೆ ಯಾವುದೇ ವಸ್ತು-ವಿಷಯವನ್ನು ಆಯ್ದುಕೊಂಡಾಗ ವೇದೋಪನಿಷತ್ತು, ಪುರಾಣದ-ಪುಣ್ಯಕಥೆಗಳು, ರಾಮಾಯಣ ಮತ್ತು ಮಹಾಭಾರತದಂಥ ಮಹಾಕಾವ್ಯಗಳನ್ನು ಮೂಲ ಆಧಾರಗಳಾಗಿ ಪರಿಗಣಿಸಲ್ಪಡುತ್ತವೆ. ಈ ನೆಲದ ಭಾಷೆ ಮತ್ತು ಭಾಷಾ ಸಾಹಿತ್ಯ ಸಂದರ್ಭಕ್ಕೆ ಬಂದರೆ.., ಅಧ್ಯಯನದ ಅನುಕೂಲಕ್ಕಾಗಿ ಭಾಷಾಚರಿತ್ರೆಯನ್ನು ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಮತ್ತು ನವಗನ್ನಡ ಕಾಲವೆಂದು ಸ್ಥೂಲವಾಗಿ ವರ್ಗೀಕರಿಸಲಾಗಿದೆ.
ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಕಾಲಘಟ್ಟದಲ್ಲಿ ಚಂಪೂ ಸಾಹಿತ್ಯ ಪ್ರಕಾರಗಳನ್ನು, ನಡುಗನ್ನಡದ ಸಂದರ್ಭದಲ್ಲಿ ವಚನ, ರಗಳೆ, ಷಟ್ಪದಿ, ಕೀರ್ತನೆ, ಸುಳಾದಿ, ಸಾಂಗತ್ಯ, ಶತಕ ಹಾಗೂ ತ್ರಿಪದಿಗಳನ್ನು, ಹೊಸಗನ್ನಡ ಮತ್ತು ನವಗನ್ನಡ ಕಾಲದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತಬಂಡಾಯ ತದನಂತರದಲ್ಲಿ ಅಂದರೆ ತೊಂಬತ್ತರ ದಶಕದಲ್ಲಿ ಸ್ತ್ರೀವಾದದ ಹುಟ್ಟನ್ನು ಗುರುತಿಸಲಾಗಿದೆ. ಸ್ತ್ರೀ-ವಾದ ಎಂಬ ಪರಿಕಲ್ಪನೆಯ ಹುಟ್ಟು-ಬೆಳವಣಿಗೆ, ಪ್ರೇರಣೆ ಮತ್ತು ಪ್ರಭಾವ ಪಾಶ್ಚಾತ್ಯರಿಂದಲೇ ಪಡೆದುದಾಗಿ ನಂಬಿಸಿಕೊಂಡು ಬರಲಾಗಿದೆ.
ಎಲ್ಲ ಜೀವಿಗಳಲ್ಲಿಯೂ ಈ ಪ್ರತಿರೋಧ ಎಂಬುದು ಹುಟ್ಟುಗುಣವಾಗಿದೆ. ಚಾರ್ಲ್ಸ್ ಡಾರ್ವಿನ್ ನ ವಿಕಾಸವಾದವನ್ನು ನೋಡಿದಾಗ ‘ಉಳಿವಿಗಾಗಿ ಹೋರಾಟ ನಡೆಸಿದ ಪ್ರಬಲ ಜೀವಿಗಳು ಉಳಿದುಕೊಂಡಿವೆ ಅಬಲ ಎನಿಸಿದವುಗಳು ಕಾಲಗರ್ಭದಲ್ಲಿ ನಶಿಸಿಹೋಗಿವೆ’ ಅಂತೆಯೇ ಪ್ರಾಚೀನ ಕಾಲದಿಂದಲೂ ಹೆಣ್ಣುತೋರುತ್ತ ಬಂದಿರುವ ಪ್ರತಿರೋಧವನ್ನು ಪುರುಷ ಪ್ರಧಾನ ಸಮಾಜವು ಹತ್ತಿಕ್ಕಿಕೊಂಡೇ ಬಂದಿದೆ. ‘ಸಮಾಜ. ಉದ್ಯೋಗ ಮತ್ತು ಕೌಟುಂಬಿಕ ವ್ಯವಸ್ಥೆಗಳಲ್ಲಿ ಮಹಿಳೆಯರ ತುಳಿತ ಹಾಗೂ ಶೋಷಣೆಯ ಬಗ್ಗೆ ಅರಿವು ಮೂಡಿಸಿ, ಈ ಪರಿಸ್ಥಿತಿಯನ್ನು ಸುಧಾರಿಸಲು ಪುರುಷರು ಮತ್ತು ಸ್ತ್ರೀಯರು ಸೇರಿ ನಡೆಸುವ ಪ್ರಜ್ಞಾ ಪೂರ್ವಕ ಪ್ರಯತ್ನವನ್ನು ಸ್ತ್ರೀವಾದ’ ಎಂದು ಸ್ತ್ರೀವಾದಿ ನೆಲೆಯನ್ನು ವ್ಯಾಖ್ಯಾನಿಸುವುದರೊಂದಿಗೆ ಎಂಬತ್ತರದಶಕದಲ್ಲಿ ಈ ಚಿಂತನೆಯು ಮತ್ತಷ್ಟು ಪ್ರಖರವಾಯಿತು. ದಲಿತ ಬಂಡಾಯದಜೊತೆ-ಜೊತೆಗೆ ಸಾಗಿ, ಸ್ತ್ರೀಯರ ಜಾಗೃತ ಪ್ರಜ್ಞೆಯ ಮತ್ತು ಗಂಭೀರ ಚಿಂತನೆಗಳನ್ನು ಒಳಗೊಂಡ ಸ್ತ್ರೀವಾದಿ ಚಳುವಳಿಯು ೧೯೭೫ರ ಅಂತರ್ ರಾಷ್ಟ್ರೀಯ ಮಹಿಳಾ ವರ್ಷದಿಂದ ಪ್ರಾರಂಭಗೊಂಡಿತು. ಈ ಹಿನ್ನಲೆಯಲ್ಲಿ ಕನ್ನಡ ಸಾರಸ್ವತ ಲೋಕದಲ್ಲಿ ಅನೇಕ ಸಾಹಿತಿಗಳು ಸ್ತ್ರೀವಾದಕ್ಕೆ ತೆರೆದು ಕೊಳ್ಳತೊಡಗಿದರು.
ಸ್ತ್ರೀ-ವಾದವು ತ್ತೊಂಬತ್ತರ ದಶಕದಲ್ಲಿ ಪಾಶ್ಚಾತ್ಯರ ಪ್ರೇರಣೆ-ಪ್ರಭಾವಕ್ಕೆ ಸಿಲುಕಿ ಹೆಚ್ಚು ಪ್ರಚುರತೆಯನ್ನು ಪಡೆದಿರಬಹುದೇ ಹೊರತು ಅದರ ಮೂಲ ಬೇರುಗಳನ್ನು ಹುಡುಕಿದರೆ.., ಅದು ನಮ್ಮಲ್ಲೇ ಹರವಿಕೊಂಡಿವೆ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ಕೊಡಬಹುದು. ಮಹಾಭಾರತವನ್ನು ಒಂದು ಕಥಾನಕ ಎಂದು ಪರಿಭಾವಿಸುವುದಾದರೆ.., ಆ ಕಥಾನಕವು ಕಳೆಗಟ್ಟುವ ನಿಟ್ಟಿನಲ್ಲಿ ಕವಿಭಾವವು ಕಟ್ಟಿಕೊಟ್ಟ ಕಥಾಸಂವಿಧಾನವು ಎಲ್ಲರಿಗೂ ಒಪ್ಪಿತವಾಗುವ ಸಂಗತಿ. ಅದೊಂದು ನೈಜಘಟನೆಯೆಂದು ; ಧರ್ಮಾಧರ್ಮ-ಕರ್ಮಗಳ ನೆಲೆಗಳಲ್ಲಿ ನೋಡುವುದಾದರೆ.., ಇಲ್ಲಿ ಹೆಣ್ಣು-ಗಂಡೆಂಬ ತರತಮವನ್ನು ಗುರುತಿಸಬಹುದಾಗಿದೆ.
ಮಹಾಭಾರತದ ಬಹುಮುಖ್ಯ ಸ್ತ್ರೀ-ಪಾತ್ರಗಳು :
ಮತ್ಸ್ಯಗಂಧಿ, ಅಂಬೆ, ಅಂಬಾಲಿಕೆ, ಅಂಬಿಕಾ, ಗಂಗಾಮಾತೆ, ಕುಂತಿ, ಮಾದ್ರಿ, ದ್ರೌಪದಿ, ಸುಭದ್ರೆ, ಚಿತ್ರಾಂಗದೆ, ಊಲುಚಿ, ಹಿಡಂಬಿ, ಉತ್ತರೆ, ಪ್ರಮಿಳ, ಗಾಂಧಾರಿ, ಭಾನುಮತಿ, ದುಶ್ಯೀಲೆ, ದಮಯಂತಿ, ದೇವಕಿ, ರೋಹಿಣಿ, ಶಕುಂತಲೆ, ಶಿಖಂಡಿ, ಶುಭಾಂಗಿ, ಸತ್ಯವತಿ, ಸತ್ಯಭಾಮೆ, ಸಾವಿತ್ರಿ, ರುಕ್ಮೀಣಿ ಇತರ..,
![](https://sangaati.in/wp-content/uploads/2025/02/download-2-4.jpg)
ಸ್ವಯಂವರ:
ಪ್ರಾಚೀನ ಕಾಲದಲ್ಲಿ ರಾಜವಂಶಸ್ಥರಲ್ಲಿ ರಾಜನಾದವನು ತನ್ನ ಬೆಳೆದ ಮಗಳು, ಯುವರಾಣಿ ಮದುವೆ ಸಂದರ್ಭದಿ ಸ್ವಯಂವರವನ್ನು ಏರ್ಪಡಿಸಿ ಪಂದ್ಯವನ್ನು ನೀಡಿ ಅದರಲ್ಲಿ ಗೆದ್ದವರು ಕನ್ಯೆಯನ್ನು ವರಿಸಬಹುದು ಅಥವ ರಾಜಮಹಾರಾಜರ – ವರರ ಸಮಾವೇಶ ನಡೆಸಿ ತನಗೆ ಇಷ್ಟ ಬಂದವರ ಕೊರಳಿಗೆ ಹಾರವನ್ನು ಹಾಕಿ ವರಿಸುವುದು. ಈ ಎರಡು ಮಾದರಿಯಲ್ಲಿ ಹೆಣ್ಣಿಗೆ ಆಯ್ಕೆ ಎಲ್ಲಿತ್ತು..? ಎಂಬುದು ಪ್ರಶ್ನೆ. ಗೆದ್ದವರಿಗೆ ನೀಡುವ ಬೆಲೆಬಾಳುವ ಬಹುಮಾನದ ವಸ್ತುವಾಗಿಬಿಟ್ಟಳು. ಅವಳ ಆತ್ಮಸಮ್ಮಾನಕ್ಕೆ ನೆಲೆ-ಬೆಲೆ ಎಲ್ಲಿ..?
ಅಂಬೆ :
ಅಂಬೆ ಕಾಶೀರಾಜನ ಹಿರಿಯ ಮಗಳು ಅಂಬಿಕೆ ಮತ್ತು ಅಂಬಾಲಿಕೆ ಸಹೋದರಿಯರು. ಸ್ವಯಂವರದಿ ಮಹಾರಥಿ ಭೀಷ್ಮನು ಸೆಳೆದೊಯ್ದು ಅಂಬಿಕೆ ಮತ್ತು ಅಂಬಾಲಿಕೆಯನ್ನು ತನ್ನ ತಮ್ಮಂದಿರಿಗೆ ಮದುವೆ ಮಾಡಿಸುತ್ತಾನೆ, ‘ಹೆಣ್ಣೆಂದರೆ? ಪೆರರ್ಒಡವೆ’ ಎಂಬ ಮಾತು ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖವಿದೆ. ಇಲ್ಲಿ ಹೆಣ್ಣು ಗೆದ್ದುತಂದವರ ಸೊತ್ತು ಎನ್ನುವುದಾದರೆ, ನೀನು ನನ್ನನ್ನು ಮದುವೆಯಾಗಬೇಕೆಂದು ಹಠ ತೊಡುತ್ತಾಳೆ. ಭಿಷ್ಮನು ಇದಕ್ಕೆ ಒಪ್ಪದಿದ್ದಾಗ ಬುದ್ಧಿವಾದ ಹೇಳಲು ಪರಶುರಾಮರನ್ನು ಕರೆತಂದಳು, ಗುರುಗಳೊಂದಿಗೆ ಮಹಾಕದನವೇ ನಡೆದು ಪರಶುರಾಮರು ಪರಾಭವಗೊಂಡರು, ಇದರಿಂದ ಮನನೊಂದು ಅಂಬೆಯು ಗಂಗಾ ನದಿಯ ತಡದಿ ಅಗ್ನಿಕುಂಡವನ್ನು ಮಾಡಿ ಅದರಲ್ಲಿ ಹಾರಿ ಆತ್ಮಹತ್ಯೆಮಾಡಿಕೊಳ್ಳುತ್ತಾಳೆ. ಅಂಬೆ ಪುನರ್ಜನ್ಮದಲ್ಲಿ ಶಿಖಂಡಿಯಾಗಿ ಹುಟ್ಟಿ ಭೀಷ್ಮನ ಮರಣಕ್ಕೆ ಕಾರಣವಾಗುತ್ತಾಳೆ. ಇದು ಮಹಾಭಾರತದ ಕಥೆ. ಇಲ್ಲಿ ಹೆಣ್ಣು ತನ್ನ ಅಸ್ತಿತ್ವಕ್ಕೆ ಧಕ್ಕೆ ಒದಗಿಬಂದಾಗ ಒಡ್ಡಿದ ಪ್ರತಿರೋಧವು ನಿಷ್ಫಲಗೊಂಡ ಹಿನ್ನಲೆಯಲ್ಲಿ ಅದನ್ನು ಮುಂದಿನ ಜನ್ಮಾಂತರಗಳಲ್ಲಿಯೂ ತೀರಿಸಿಕೊಳ್ಳುತ್ತಾಳೆ ಎಂಬುದನ್ನು ಗಮನಿಸಬೇಕು.
![](https://sangaati.in/wp-content/uploads/2025/02/download-3-4.jpg)
ಕೃಷ್ಣ ಮತ್ತು ಭಾನುಮತಿ ನದಿಯ ತಟದಲ್ಲಿ ಭೇಟಿಯ ಸಂದರ್ಭದಿ ಸಂಭಾಷಣೆ :
ಒಂದೆಡೆ.., ಮಹಾಭಾರತ ಯುದ್ಧ ಮುಗಿದಿದೆ, ಹತರಾದ ವೀರಾಧಿವೀರರೆಲ್ಲರ ಚಿತೆಗಳು ಅನತಿದೂರದಲ್ಲಿ ಉರಿಯುತ್ತಿವೆ..! ಅರಮನೆಯ ಊಳಿಗದವರು ಅಲ್ಲಲ್ಲಿ ಚಿತೆಯ ಕಟ್ಟಿಗೆಗಳನ್ನು ಮುಂದಕ್ಕೆ ಚಾಚುತ್ತ ನಿಂತಿದ್ದಾರೆ. ಮತ್ತೊಂದಡೆ.., ಕೃಷ್ಣ ಗಂಗೆಯಲ್ಲಿ ಮಿಂದು-ಮಡಿಯುಟ್ಟು ಸತ್ತವರಿಗಾಗಿ ಜಲಾಂಜಲಿ ಕೊಡುತ್ತಿದ್ದಾನೆ. ಅನತಿದೂರದಲ್ಲಿ ಒಬ್ಬ ಸ್ತ್ರೀಯು ಸ್ನಾನ ಮಾಡಿ ದಡದ ಮೇಲೆ ನಿಂತಿದ್ದಾಳೆ. ಮಧ್ಯವಯಸ್ಸಿನ ಚೆಲುವೆ, ನವವೈಧವ್ಯ ಪ್ರಾಪ್ತಿಯಾದದ್ದು ಅವಳ ಮೈ ಒಪ್ಪಿದಂತಿಲ್ಲ. ದೂರದ ದಡದ ಮೇಲೆ ಅವಳ ಬರವಿಗಾಗಿ ಪಲ್ಲಕ್ಕಿಯೊಂದಿಗೆ ಆಳುಗಳು ಕಾದು ನಿಂತಿದ್ದಾರೆ.
ಕೃಷ್ಣನನ್ನು ಕಂಡು ಒಂದು ಕ್ಷಣ ಅವಾಕ್ಕಾಗಿ ನಿಂತಳು. ಈ ಚೆಲುವ ಚೆನ್ನಿಗರಾಯ ಇಂಥ ಘನಘೋರ ರಾಜಕಾರಣವನ್ನು ನಡೆಸಿ. ಕೋಟ್ಯಾವಧಿ ವೀರರ ಹೆಣಗಳ ರಾಶಿ ಬೀಳಿಸಿದ್ದಲ್ಲದೇ ಅವರ ಹೆಣಗಳನ್ನು ಸುಡುವುದರಲ್ಲೂ ಅಷ್ಟೇ ವಿಚಕ್ಷಣ ಎಂಬುದನ್ನು ಅವಳು ಇನ್ನೂ ನಂಬುತ್ತಿಲ್ಲ..! ಇತ್ತ ಕೃಷ್ಣನಿಗೂ ನಂಬಿಕೆ ಬರುತ್ತಿಲ್ಲ, ಸ್ತ್ರೀಯರ ವಯಸ್ಸು, ಚೆಲುವು, ಗುಣ, ಬುದ್ಧಿಮತ್ತತೆ, ನಿರಪರಾಧಿತ್ವಗಳನ್ನು ಪರಿಗಣಿಸದಯೇ ಇಂಥಕೋಟ್ಯಂತ್ರ ಸ್ತ್ರೀಯರ ಬಾಳನ್ನು ಒಂದು ಯುದ್ಧ ಹಾಳುಮಾಡಬಹುದು ಎಂದು..!
ಅಷ್ಟು ದೂರದಲ್ಲಿರುವ ಸ್ತ್ರೀಯು ಯಾರೆಂದು ಸರಿಯಾಗಿ ಕಾಣದೇ ಇದ್ದರೂ, ಇವನೇ ಕೃಷ್ಣನೆಂದು ಅವಳು ಮಾತ್ರ ಗುರುತು ಹಿಡಿದಿದ್ದಾಳೆ. ಸೂರ್ಯ-ಚಂದ್ರರ ಗುರುತು ಯಾರಿಗಿಲ್ಲ ಹೇಳಿ..? ಹಾಗೆ ಅವಳು ನಿಂತದ್ದನ್ನು ಕಂಡು ಕೃಷ್ಣ ಅವಳ ಬಳಿ ಸಮೀಪಿಸಿ ಬರುತ್ತಾನೆ. ಅವಳೊಡನೆ ಎಂದೂ ಹಾಗೆ ಏಕಾಂತದಲ್ಲಿ ಮಾತನಾಡಿದವನಲ್ಲ. ಇಂದು ಆಪತ್ತಿನ ಕಾಲದಲ್ಲಿ ತನ್ನ ಸಾಂತ್ವಾನ ಬಯಸಿ ಬಂದಳೇ..? ಅಥವ ನನ್ನನ್ನು ಬೈಯ್ಯಲು ನಿಂತಿದ್ದಾಳೆಯೇ..? ಅಥವ ದಾರಿ ತಿಳಿಯಲಿಲ್ಲವೇ..? ಎಂದು ಮನದೊಳಗೆ ಎಣಿಸುತ್ತ ಸಮೀಪಿಸಿ, ಗುರುತು ಹಿಡಿದು ಕೇಳುತ್ತಾನೆ.
ಕೃಷ್ಣ: ನೀ ಭಾನುಮತಿ..! ಅಲ್ಲವೇ..? ಈ ಯುದ್ಧದ ನಿಮಿತ್ತ ನಾನೇ ಕಾರಣನೆಂದು ಬೈದವರು, ಬೈಯ್ಯುತ್ತಿರುವವರು, ಬೈಯ್ಯಲಿರುವವರು ಎಷ್ಟೋ ಜನ..! ಅದಕ್ಕಾಗಿ ನೀನಿಲ್ಲಿ ನಿಂತಿದ್ದರೆ.., ಮನಸಾರೆ ಬೈಯ್ಯಬಹುದು. ಶಾಪವನ್ನು ಬೇಕಾದರೂ ಹಾಕಬಹುದು ; ನಿನ್ನಅತ್ತೆ–ಗಾಂಧಾರಿ ಶಪಿಸಿದಳಲ್ಲ ಹಾಗೆ..! ನಾನೇ ಕೃಷ್ಣ..! ದೇವಕಿ-ವಾಸುದೇವನ ಮಗ..! ಗುರುತು ಹತ್ತಿತೇ..?
ಭಾನುಮತಿ: ಪ್ರಭು ನಿನ್ನನ್ನು ಅರಿಯದವರಾರು..? ನನ್ನಕರ್ಮಫಲ ನನಗೆ..! ವೃತಃ ನಿನ್ನನ್ನೇಕೆ ಬೈಯಲಿ..? ಯಾರನ್ನು ಬೈದು ಈಗ ಪ್ರಯೋಜನವಾದರೂ ಏನು..? ನೀನು ಯುದ್ಧವನ್ನು ತಡೆಯಲು ಎಷ್ಟು ಯತ್ನಿಸಿದೆ ಎಂಬುದು ನನಗೆ ಗೊತ್ತು..! ನನ್ನ ಅತ್ತೆಯ ಶಾಪಕ್ಕಾಗಿ.., ನಿನ್ನಲ್ಲಿ ಕ್ಷಮೆಯಾಚಿಸಲು ಇಲ್ಲಿ ನಿಂತೆ..! ದಡದಲ್ಲಿರುವವರು ತಪ್ಪುಕಲ್ಪನೆ ಮಾಡಬಾರದು.
ಕೃಷ್ಣ: ಅವಕ್ಕಾಗಿ ಅವಳ ವಿವೇಕಕ್ಕೆ ಮೆಚ್ಚಿ ಅನಿವಾರ್ಯವಾಗಿ ಒಸರಿದ ಆನಂದಾಶ್ರುಗಳನ್ನು ಒರೆಸಿಕೊಳ್ಳದೇ ಕೌರವನ ಪತ್ನಿ, ಒಬ್ಬ ದುಷ್ಟರಾಜನ ಹೆಂಡತಿ ಇಷ್ಟು ವಿವೇಕಿ ಇರಬಹುದೆಂದು ನಾನು ಭಾವಿಸರಿಲಿಲ್ಲ..! ದೇವಿ ನಿನ್ನ ಪರಿಚಯ ನನಗೆ ಮೊದಲೇ ಆಗದಿದ್ದದ್ದು ನನ್ನ ದೌರ್ಭಾಗ್ಯವೇ ಸರಿ..! ನಿನ್ನ ಮೂಲಕವೇ ಸಂಧಾನ ನಡೆಸಿದ್ದರೆ, ನಿನ್ನ ಪತಿದಾರಿಗೆ ಬರುತ್ತಿದ್ದನೇನೋ..?
ಭಾನುಮತಿ: ಅಳುತ್ತ.., ಪ್ರಭು ನೀನು ಸರ್ವೇಶ್ವರ ನಿನ್ನನ್ನೇ ಕೇಳುತ್ತೇನೆ.., ರಾಮಾಯಣದಿ ತಾರೆ, ಮಂಡೋದಿಯರ ಸಂಧಾನದಿಂದ ವಾಲಿ, ರಾವಣರು ತಿದ್ದಿಕೊಂಡರೆ..? ಇವಳ ವಾಕ್ಚಾತುರ್ಯಕ್ಕೆ, ಇತಿಹಾಸ ಪ್ರಜ್ಞೆಗೆ, ದಿಟ್ಟತನಕ್ಕೆ ಕೃಷ್ಣ ಅಪ್ರತಿಭನಾಗುತ್ತಾನೆ. ಆನಂದಾಶ್ರುಗಳು ಸುಮ್ಮನೇ ಒಸರುತ್ತಿವೆ..! ಆ ಗತಕಾಲದ ಇತಿಹಾಸ ಪ್ರಸಂಗಗಳು ಕೃಷ್ಣನ ಕಣ್ಣಿಗೆ ಈಗ ಕಟ್ಟುತ್ತವೆ..! ಇವಳೇ ತಾರೆಯೋ..? ಇವಳೇ ಮಂಡೋದರಿಯೋ..? ಎಂದು ಕ್ಷಣಮಾತ್ರ ಭ್ರಮೆಯೂ ಆದಂತಿದೆ..! ಮೆಲ್ಲನೆ ಕೃಷ್ಣನು ಮುಂದುವರೆದು ಕೇಳುತ್ತಾನೆ..,
ಕೃಷ್ಣ: ನಿನ್ನ ಪತಿಗೆ ನೀನೇ ವಿವೇಕ ಹೇಳಲಿಲ್ಲವೇಕೆ..?
ಭಾನುಮತಿ: ಹೇಳಲಿಲ್ಲವೆಂದು ನಿಮಗೆ ಯಾರು ಹೇಳಿದರು..? ಅದನ್ನೆಲ್ಲ ಸಂಜಯ ನನ್ನ ಮಾವನಿಗೆ ಹೇಳಲಿಲ್ಲವಷ್ಟೇ..! ಅವನಿಗೆ ಯುದ್ಧಭೂಮಿಯತ್ತ ಕಣ್ಣಿತ್ತೇ ಹೊರತು.., ರಾಣೀವಾಸದಲ್ಲಿನ ಯಃಕಶ್ಚಿತ್ತ ಸ್ತ್ರೀಯರ ಕಷ್ಟವನ್ನು ಅವನೇನು ವರ್ಣಿಸಿಯಾನು..? ಯಾರು ವರ್ಣಿಸಿದರೂ ಬಿಟ್ಟರೂ ಈಗ ಫಲವೇನು..?
ಕೃಷ್ಣ: ನೀನು ಧನ್ಯೆರಾಜಪುತ್ರಿ..! ನೀನು ಸಹಗಮನ ಮಾಡದೇ ಉಳಿದದ್ದು ವಿವೇಕ..! ಮುಂದಿನವರಿಗೆ ನಿನ್ನ ವಿವೇಕ ಬರಲಿ..!
ಭಾನುಮತಿ: ಬದುಕಿರುವಾಗಲೇ ಪತಿಯ ದಾರಿಯಲ್ಲಿ ಹೋಗದವಳಿಗೆ ; ಪತಿ ಹೋದಮೇಲೆ ಆ ದಾರಿಯಲ್ಲಿ ಹೋಗಿ ಸಾಧಿಸುವುದೇನಿದೆ ಪ್ರಭು..? ನಾನು ವಾನಪ್ರಸ್ಥಕ್ಕೆ ಹೊರಟೆ..! ಮುಂದಿನವರ ವಿವೇಕಾವಿವೇಕ ಅವರಿಗೆ, ನನ್ನದಾರಿ ನನಗೆ..! ಈ ದೇಶದಲ್ಲಿ ಸ್ತ್ರೀಯರ ಬುದ್ಧಿವಾದ ಯಾರಿಗೆ ಬೇಕು..?
ಕೃಷ್ಣ: ರಾಜಕುಮಾರಿ..! ನಿನ್ನ ಒಂದೊಂದು ಅಣಿಮುತ್ತಿನಂಥ ವಿವೇಕದ ಮಾತುಗಳಿಗೆ ಮೆಚ್ಚಿದ್ದೇನೆ..! ನಿನಗೊಂದು ವರಕೊಡುತ್ತೇನೆ ಕೇಳಿಕೋ..,
ಭಾನುಮತಿ: ಪ್ರಭು..! ವಾನಪ್ರಸ್ಥಳಾಗಿ ಹೊರಟು ನಿಂತವಳಿಗೆ ಯಾವ ವರದಿಂದೇನು ಪ್ರಯೋಜನ..? ದ್ರೌಪದಿದೇವಿಯನ್ನು, ಸುಭದ್ರೆಯನ್ನು, ಉತ್ತರೆಯನ್ನು, ಅತ್ತೆಕುಂತಿದೇವಿಯರನ್ನು ಕಂಡು – ನನ್ನ ಪತಿ ನನ್ನ ಕುಲದವರ ಅಪರಾಧಕ್ಕಾಗಿ ಕ್ಷಮೆ ಕೇಳಿ ನಾಳೆಯೋ ನಾಡಿದ್ದೋ ಹೊರಟುನಿಂತಿದ್ದೇನೆ..! ನಿನ್ನನ್ನು ಈಗ ಸಂದರ್ಶಿಸಿದ್ದೇ ನನಗೆ ಮಹಾವರ ಪ್ರಾಪ್ತಿ..! ನನ್ನ ವೈಫಲ್ಯಗಳನ್ನು ಕ್ಷಮಿಸು.., ನನ್ನಗಂಡ ನನ್ನ ಬುದ್ಧಿವಾದಗಳನ್ನು ಕೇಳಲಿಲ್ಲ..! ಅಥವ ನೀನೇ ಅವನಿಗೆ ಸದ್ಬುದ್ಧಿಯನ್ನು ಕೊಡದೇ.., ಅವನನ್ನು ನಿಮಿತ್ತವಾಗಿಸಿಕೊಂಡು ಭೂ-ಭಾರವ ಇಳುಹಿಸಿದೆ..! ಮಾನುಷ ಭಾವದಲ್ಲಿ ನಾನು ಕರ್ತವ್ಯ ವಿಫಲಳು..! ಗಂಡನಿಗೆ ಹೆಂಡತಿಯು ಮಂತ್ರಿಯಾಗಬೇಕೆಂದು ಶಾಸ್ತ್ರ ಹೇಳುತ್ತದೆ, ನನ್ನ ಪತಿಗೆ ಮಂತ್ರಿಗಳು, ದುರ್ಮಂತ್ರಿಗಳು ಬೇರೆಯವರೇ ಇದ್ದರು.., ಮುಂದಿನ ಇತಿಹಾಸಕ್ಕೆ ಇದರಲ್ಲಿ ನನ್ನ ಪಾತ್ರಾಪಾತ್ರಾ ತಿಳಿದಿರಲಿ..! ನನ್ನನ್ನು ಕ್ಷಮಿಸು.
ಕೃಷ್ಣ: ಇವಳ ವಿವೇಕಕ್ಕೆ, ಸಮಚಿತ್ತಕ್ಕೆ ಕೃಷ್ಣನ ಮನ ಕರಗುತ್ತದೆ. ಸ್ತ್ರೀಯರೆಲ್ಲರೂ ನಿನ್ನಂತೆಯೇ ಇದ್ದರೆ..!
ಭಾನುಮತಿ: ಪುರುಷೋತ್ತಮ..! ಪುರುಷರೆಲ್ಲರೂ ನಿನ್ನಂತೆಯೇ ಇದ್ದರೆ..! ಎಂದು ಆಶಿಸಲೇ..? ಸ್ತ್ರೀಯರ ಕಷ್ಟಗಳಿಗೆ ಮರುಗುವವನು ಒಬ್ಬನಾದರೂ ಈ ಲೋಕದಲ್ಲಿ ಇದ್ದೀಯಲ್ಲ..! ಅದು ಸ್ತ್ರೀಕುಲದ ಸೌಭಾಗ್ಯ..! ನರಕಾಸುರನ ಅಂತಃಪುರದಲ್ಲಿದ್ದ ಗತಿಗೆಟ್ಟ ಸ್ತ್ರೀಯರಿಗೆ ಗತಿತೋರಿದವನು ನೀನೇ ಅಲ್ಲವೇ..? ದ್ರೌಪದಿ ದೇವಿಗೆ ಮಾನ ಮುಚ್ಚಿದವನೂ ನೀನೇ ಅಲ್ಲವೇ..?
ಕೃಷ್ಣ: ನಿನ್ನನ್ನೊಂದು ಕೇಳಲೇ..?
ಭಾನುಮತಿ: ಸರ್ವೇಶ್ವರನಿಗೆ ನನ್ನ ಅನುಮತಿ ಬೇಕೆ..?
ಕೃಷ್ಣ: ದ್ರೌಪದಿಗೆ ಅಪಮಾನವಾಗುತ್ತಿದ್ದಾಗಲೇ.., ಆ ಸಭೆಯಲ್ಲೇ ಅಂದೇ ನೀನು ಕಾಣಿಸಿಕೊಂಡು ಇದು ತಪ್ಪು ಈ ಗತಿ ನನಗೆ ಒದಗಿ ಬಂದಿದ್ದರೆ ಏನು ಮಾಡುತ್ತಿದ್ದಿರಿ..? ಎಂದು ನಿನ್ನ ಪತಿಯನ್ನೇಕೆ ಕೇಳಲಿಲ್ಲ..? ನಿನ್ನ ಮಾವನವರನ್ನೇಕೆ ಕೇಳಲಿಲ್ಲ..?
ಭಾನುಮತಿ: ಅಳುತ್ತ.., ಆ ಘಟನಾವಳಿಗಳೆಲ್ಲ ಸರಸರನೇ ಒಂದರಮೇಲೊಂದರಂತೆ ನಡೆದ ಮೇಲೆಯೇ ನನಗದು ತಿಳಿದದ್ದು..! ಈ ಸಂಚಿನ ಸುಳಿವೂ ನನಗಿರಲಿಲ್ಲ. ಪ್ರಭು..! ನೀನಾದರೂ ನನಗೆ ಅಷ್ಟು ಸೂಚನೆ ಇತ್ತಿದ್ದರೆ ಆಗಿತ್ತು ತಾನೇ..?
ಕೃಷ್ಣ: ಆಮೇಲಾದರೂ ಕೇಳಿದೆಯಾ..?
ಭಾನುಮತಿ: ಕೇಳಿದೆ..! ಪ್ರಯೋಜನವೇನು..? ‘ಬಾಯಿ ಮುಚ್ಚು’ ಎಂಬ ಉತ್ತರ ಪತಿಯಿಂದ ಬಂದಿತು. ಅದು ಈ ದೇಶದ ಸ್ತ್ರೀಯರ ಸ್ಥಿತಿ..! ಬಾಯಿ ಮುಚ್ಚಿ ಮುಚ್ಚಿ ಈ ಸ್ಥಿತಿಗೆ ಬಂದೆವು.
ಕೃಷ್ಣ: ನನ್ನನ್ನು ಸರ್ವೇಶ್ವರ ಅಂದೆಯಲ್ಲ..! ವರಕೊಡುತ್ತೇನೆ ಎಂದರೂ ಕೇಳಲಿಲ್ಲ. ಇಗೋ ನಾನಾರು ನೋಡು.., ಎನ್ನತ್ತ ಕೃಷ್ಣ ಶಂಖಚಕ್ರ ಗದಾಪದ್ಮಧಾರಿಯಾಗಿ ಬ್ರಹ್ಮಾಂಡವನ್ನೆಲ್ಲ ತನ್ನ ಶರೀರದಲ್ಲಿಟ್ಟು ದಿವ್ಯರೂಪವನ್ನು ಅವಳಿಗೆ ತೋರಿ ಹರಸಿ, ಈ ದೇಶದ ಭವಿಷ್ಯ ನಿನ್ನಂಥ ಉತ್ತಮ ಸ್ತ್ರೀಯರ ಕೈಯಲ್ಲಿದೆ..! ನಿನಗಾಗಿ, ದ್ರೌಪದಿಯಾಗಿ, ಕುಂತಿಗಾಗಿ, ಸುಭದ್ರೆಗಾಗಿ ನಿನ್ನಂಥ ಸ್ತ್ರೀಯರ ಸಲುವಾಗಿ ನಾನು ಶತಸಹಸ್ರ ಅವತಾರಗಳನ್ನಾದರೂ ಎತ್ತಿ ಮತ್ತೆ ಮತ್ತೆ ಬರುತ್ತೇನೆ..!
ಭಾನುಮತಿ: ಆದರೆ ನನ್ನ ಪತಿಯಂತಹವರೂ ಪದೇ ಪದೇ ಹುಟ್ಟಿಬಂದರೆ..?
ಕೃಷ್ಣ: ಅದು ಕಾಲ ಪ್ರವಾಹದ ಗುಟ್ಟು..! ಸೂರ್ಯ ಮುಳುಗುತ್ತಿದ್ದಾನೆ, ಪಲ್ಲಕ್ಕಿ ಕಾಯುತ್ತಿದೆ ಹೊರಡು ಎಂದು ಹೇಳುತ್ತಾನೆ.
-ಕಾಲಪ್ರವಾಹದ ಹುಟ್ಟಿನ ಗುಟ್ಟು ಏನಿರನಹುದು..? ಕೃಷ್ಣ ಹೇಳದೇ ಮುಚ್ಚಿ ಇಟ್ಟುದರ ಹಿಂದಿನ ಘನ ಉದ್ದೇಶವಾದರೂ ಏನು..? ಹೆಣ್ಣಿನ ಮನಸ್ಸಿನಲ್ಲಿ ಗುಟ್ಟು ನಿಲ್ಲುವುದಿಲ್ಲ ಎಂದೆಣಿಸಿದನೋ..? ಅಥವ ‘ಹೆಣ್ಣು ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ’ ಎಂದು ಎಲ್ಲ ಗಂಡಸರಂತೆ ಬಗೆದನೋ..?
ಈ ನಾಟಕದ ಸಂಭಾಷಣೆಯಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಸಂಗತಿ ಎಂದರೆ? ಕೃಷ್ಣನ ಈ ಮಾತು ಕೇಳಿ ; ‘ಕೌರವನ ಪತ್ನಿ; ಒಬ್ಬ ದುಷ್ಟರಾಜನ ಹೆಂಡತಿ ಇಷ್ಟು ವಿವೇಕಿ ಇರಬಹುದೆಂದು ನಾನು ಭಾವಿಸರಿಲಿಲ್ಲ..! ಎಂಬ ಮನೋಧೋರಣೆಯೇ,- ಅವಜ್ಞೆಯೇ ಯುದ್ಧದ ಅಂತ್ಯದವರೆಗೂ ಅವಳನ್ನು ಭೇಟಿ ಮಾಡದಿರುವುದಕ್ಕೆ ಕಾರಣ,
ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೆಣ್ಣನ್ನು ಗೌರವಿಸದ, ಅವಳ ವಿಚಾರಗಳಿಗೆ ಕಿವಿಗೊಡದ ಮನಸ್ಸುಗಳಿಗೆ, ಸ್ತ್ರೀವಾದಿ ಸಾಹಿತ್ಯ ಎಂದರೆ..? ಬರೀ ಟೊಳ್ಳು, ಅದು ಅಡುಗೆ ಮನೆಯ ಸಾಹಿತ್ಯ, ಸ್ತ್ರೀವಾದಿ ಬರಹಗಳಿಗೆ ಕಾಲುಗಳಿವೆ ಹೊರತು ತಲೆಗಳಿಲ್ಲ ಎಂಬಂಥ ವಿಮರ್ಶಕರ ಹಿತನುಡಿಗಳಿಗೆ ; ಈ ಹಿನ್ನಲೆಯ ವಿಚಾರವಾದಿ-ಬುದ್ಧಿಜೀವಿಗಳೆನಿಸಿದವರ ಮತಿಗೆ ಸಾಣೆ ಹಿಡಿಯುವಂತಾದರೆ..! ಅದರಲ್ಲಿಯೇ ಈ ಲೇಖನದ ಸಾರ್ಥಕ್ಯ ಅಡಗಿದೆ.
ಡಾ.ಯಲ್ಲಮ್ಮ ಕೆ
![](https://sangaati.in/wp-content/uploads/2025/02/yallamma-2.jpg)
V nice