ಗ್ರಾಮ ಸಂಗಾತಿ
ಯುವಜನ ಗ್ರಾಮಸಭೆ –
ಸವಾಲು ಮತ್ತು ಸಾಧ್ಯತೆಗಳು
ಮೇಘ ರಾಮದಾಸ್ ಜಿ
![](https://sangaati.in/wp-content/uploads/2025/02/08f17661-9b30-4734-a491-b471f42174be.jpg)
ಯುವಜನ ಗ್ರಾಮಸಭೆ – ಸವಾಲು ಮತ್ತು ಸಾಧ್ಯತೆಗಳು
ಯುವಜನತೆ ದೇಶದ ಆಸ್ತಿ, ಯುವಜನತೆಯಿಂದ ದೇಶದ ಭವಿಷ್ಯ ಉಜ್ವಲವಾಗುತ್ತದೆ. ದೇಶ ಕಟ್ಟುವುದರಲ್ಲಿ ಯುವಜನತೆಯ ಪಾತ್ರ ಬಹಳ ದೊಡ್ಡದು. ಯುವಜನತೆ ದೇಶದ ಆರ್ಥಿಕ ಬೆಳವಣಿಗೆಗಾಗಿ ಶ್ರಮಿಸಬೇಕು. ಯುವ ಮನಸ್ಸುಗಳು ಶಿಸ್ತು, ಸಂಯಮ, ಬದ್ಧತೆಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಯುವಜನತೆಯ ಅಭಿವೃದ್ಧಿಯ ಜೊತೆಜೊತೆಗೆ ದೇಶದ ಸಾಮಾಜಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಆದ್ದರಿಂದ ಯುವಜನರು ಹೆಚ್ಚು ಶ್ರಮಿಸಬೇಕು.
ಈ ಮೇಲಿನ ಎಲ್ಲಾ ಮಾತುಗಳು ಸಹಜವಾಗಿ ಯುವಜನರ ಬಗ್ಗೆ ಸಮಾಜದಲ್ಲಿ, ವೇದಿಕೆಗಳ ಭಾಷಣಗಳಲ್ಲಿ ಕೇಳಿಬರುತ್ತವೆ. ಪೋಷಕರಿಂದ ಹಿಡಿದು ದೇಶವನ್ನು ಮುನ್ನಡೆಸುವ ಸ್ಥಾನದಲ್ಲಿರುವ ರಾಜಕಾರಣಿಗಳ ವರೆಗೆ ಎಲ್ಲರೂ ಯುವಜನರನ್ನು ಅರ್ಥ ಮಾಡಿಕೊಂಡಿರುವುದು ಇದೇ ರೀತಿಯಾಗಿಯೇ. ಯುವಜನರು ಹಾಗೆ ಮಾಡಬೇಕು ಹೀಗೆ ಮಾಡಬೇಕು, ಅವರಿಗೆ ಜವಾಬ್ದಾರಿ ಇಲ್ಲ ಎಂದು ಹೇಳುತ್ತಾರೆಯೇ ವಿನಃ, ಆ ನಿಟ್ಟಿನಲ್ಲಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಎಷ್ಟು ನಿಭಾಯಿಸಿದ್ದಾರೆ ಎಂದು ಯಾವ ಪೋಷಕರಾಗಲಿ, ಶಿಕ್ಷಕರಾಗಲಿ, ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಯೋಚಿಸುವುದೇ ಇಲ್ಲ. ಇದು ಅತೀ ದುರಾದೃಷ್ಟಕರ ಸಂಗತಿಯಾಗಿದೆ.
ದೇಶದ ಒಟ್ಟು ಜನಸಂಖ್ಯೆಯಲ್ಲಿ (15 – 29 ವರ್ಶದವರು) 42 ಕೋಟಿ ಅಂದರೆ ಸರಿಸುಮಾರು ಶೇ. 29% ಯುವಜನರಿದ್ದಾರೆ. ಇನ್ನು ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ (15 – 29 ವರ್ಶದವರು) 2.11 ಕೋಟಿ ಅಂದರೆ ಶೇ. 30% ಯುವಜನರಿದ್ದಾರೆ. ದೇಶದಲ್ಲಿನ ಒಟ್ಟು ಜನರ ಸರಾಸರಿ ವಯಸ್ಸು 29 ವರ್ಷ. 2020 ಕ್ಕೆ ನಮ್ಮ ಭಾರತ ಪ್ರಪಂಚದಲ್ಲಿಯೇ ಅತೀ ಹೆಚ್ಚು ಯುವ ಸಮುದಾಯವನ್ನು ಹೊಂದಿರುವ ರಾಷ್ಟ್ರವಾಗಿದೆ. ಆದ್ದರಿಂದ ನಮ್ಮ ದೇಶವನ್ನು ” ಯುವರಾಷ್ಟ್ರ ” ಎಂದು ಕರೆಯಲಾಗುತ್ತಿದೆ. ಯುವಜನತೆಯ ವಿಷಯದಲ್ಲಿ ಇಷ್ಟೆಲ್ಲಾ ಸಕಾರಾತ್ಮಕ ಹೆಸರು ಮಾಡಿರುವ ದೇಶದಲ್ಲಿ ಅತೀ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅತೀ ದೊಡ್ಡ ಸಮುದಾಯ ಎಂದರೆ ಅದು ಯುವ ಸಮುದಾಯವಾಗಿದೆ. ಇವರಿಗಾಗಿ ಮಾಡಿರುವ, ಮಾಡುತ್ತಿರುವ ಎಷ್ಟೋ ಯೋಜನೆಗಳು ಇಂದಿಗೂ ಕೇವಲ ಹಾಳೆಗಳಲ್ಲಿಯೇ ಅಕ್ಷರ ರೂಪದಲ್ಲಿ ಮಾತ್ರ ಉಳಿದಿವೆ ಎನ್ನುವುದು ದೊಡ್ಡ ದುರಂತ. ಇದಕ್ಕೆ ಸೂಕ್ತ ಉದಾಹರಣೆ ನಮ್ಮ ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯತಿಯಲ್ಲಿ ಪ್ರತಿ ವರ್ಷ ನಡೆಯಬೇಕಿರುವ ಯುವಜನ ಗ್ರಾಮಸಭೆ.
ಜನವರಿ ತಿಂಗಳಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಪ್ರತಿ ವರ್ಷ ದಿನಾಂಕ 12 ರಿಂದ 18ರವರೆಗೆ ದೇಶದಾದ್ಯಂತ ” ಯುವ ಸಪ್ತಾಹ ” ಆಚರಿಸಲಾಗುತ್ತದೆ. ಇದರ ಅಂಗವಾಗಿ ರಾಜ್ಯದ ಎಲ್ಲಾ 5958 ಗ್ರಾಮ ಪಂಚಾಯತಿಗಳು ” ಯುವಜನ ಗ್ರಾಮಸಭೆ ” ಯನ್ನು ಮಾಡಬೇಕೆಂದು 2021 ರ ಡಿಸೆಂಬರ್ ತಿಂಗಳಲ್ಲಿಯೇ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಆದೇಶದಲ್ಲಿ ಪ್ರತಿ ವರ್ಷವೂ ಕಡ್ಡಾಯವಾಗಿ ಯುವಜನ ಗ್ರಾಮಸಭೆ ಮಾಡಬೇಕು ಎನ್ನುವ ಸ್ಪಷ್ಟ ಆದೇಶ ಇದ್ದರೂ ಬಹುಶಃ ರಾಜ್ಯದ ಯಾವುದೇ ಪಂಚಾಯತಿಗಳು ಈ ಸಭೆಯನ್ನು ಮಾಡಿದ್ದು ಕಂಡು ಬರುತ್ತಿಲ್ಲ. ಈ ಸಭೆಯನ್ನು ಕಡೆಗಣಿಸಲಾಗಿದೆ ಎಂದರೆ ತಪ್ಪಾಗುವುದಿಲ್ಲ.
ಯುವಜನ ಗ್ರಾಮ ಸಭೆ ಎಂದರೇನು?
ಅಧಿಕಾರ ವಿಕೇಂದ್ರಿಕರಣದ ಒಂದು ಅದ್ಭುತ ಭಾಗ ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯಿತಿಗಳು. ಇಲ್ಲಿ ಎಲ್ಲಾ ಹಿನ್ನೆಲೆಯ ಜನರಿಗೂ ಒಂದೊಂದು ವಿಶೇಷ ಗ್ರಾಮ ಸಭೆಗಳಿವೆ. ಅವುಗಳಿಗೆ ಉದಾಹರಣೆ ಎಂದರೆ ಮಕ್ಕಳ ಹಕ್ಕುಗಳ ಗ್ರಾಮ ಸಭೆ, ವಿಶೇಷ ಚೇತನರ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ, ಎಸ್ಸಿ ಎಸ್ಟಿ ಗ್ರಾಮ ಸಭೆ, ಸಾಮಾನ್ಯ ಗ್ರಾಮ ಸಭೆ ಹೀಗೆ ಸಮಾಜದ ಎಲ್ಲ ಸಮುದಾಯಗಳ ಧನಿ ಕೇಳಲು ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ವೇದಿಕೆ ಇರುವುದು. ಅದೇ ರೀತಿ ದೇಶದ ಹಾಗೂ ರಾಜ್ಯದ ಜನಸಂಖ್ಯೆಯಲ್ಲಿ ಅತಿ ದೊಡ್ಡ ಭಾಗವಾಗಿರುವ ಯುವಜನರಿಗೂ ಸಹ ವಿಶೇಷ ಗ್ರಾಮ ಸಭೆ ಆಯೋಜನೆ ಮಾಡುವ ಉದ್ದೇಶ ಬಹಳ ಉತ್ತಮವಾದದ್ದು. ಆದ್ದರಿಂದ ಪಂಚಾಯಿತಿ ವ್ಯಾಪ್ತಿಯ 15 ರಿಂದ 30 ವರ್ಷದ ಒಳಗಿನ ಯುವಜನರ ಸವಾಲುಗಳನ್ನು, ಅಗತ್ಯತೆಗಳನ್ನು, ನಿರೀಕ್ಷೆಗಳನ್ನು , ಅವರ ಸಬಲೀಕರಣಕ್ಕೆ ಬೇಕಿರುವ ಕೌಶಲ್ಯಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಆಲಿಸಲು ಇರುವ ಒಂದು ಸ್ಥಳ ಈ ಯುವಜನ ಗ್ರಾಮಸಭೆಯಾಗಿದೆ.
![](https://sangaati.in/wp-content/uploads/2025/02/3da1808e-8e52-4230-9f68-ecde3c369b95.jpg)
ಯುವಜನ ಗ್ರಾಮಸಭೆ ಏಕೆ ಮುಖ್ಯ?
1. ಗ್ರಾಮೀಣ ಯುವಜನರು ಗ್ರಾಮ ಪಂಚಾಯತಿಯಲ್ಲಿ ಸಕ್ರೀಯವಾಗಿ ಭಾಗವಹಿಸಲು ಉತ್ತೇಜಿಸುವುದು.
2. ಗ್ರಾಮೀಣ ಯುವಜನರ ಸಬಲೀಕರಣಕ್ಕೆ ಪೂರಕ ಯೋಜನೆ ರೂಪಿಸುವುದು.
3. ಗ್ರಾಮೀಣ ಯುವಜನರ ಸವಾಲುಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವುದು.
4. ಪಂಚಾಯತಿ ವ್ಯಾಪ್ತಿಯ ಯುವಜನರ ಅಂಕಿ ಅಂಶ, ಸ್ಥಿತಿಗತಿ ತಿಳಿಯುವುದು.
5. ಪಂಚಾಯತಿಯಲ್ಲಿನ ಯೋಜನೆಗಳನ್ನು ಯುವಜನರಿಗೆ ತಿಳಿಸುವುದು.
ಯುವಜನ ಗ್ರಾಮಸಭೆ ನಡೆಸಲು ಇರುವ ಸವಾಲುಗಳು.
1. ಅಧಿಕಾರಿಗಳಿಗೆ ಸ್ಪಷ್ಟತೆ ಹಾಗೂ ಆಸಕ್ತಿ ಇಲ್ಲದಿರುವುದು.
2. ಯುವಜನರಿಗೆ ಸಭೆಯ ಬಗ್ಗೆ ಮಾಹಿತಿ ಇಲ್ಲದೆ ಇರುವುದು.
3. ಸಭೆ ನಡೆಸುವಂತೆ ಒತ್ತಾಯಿಸುವಲ್ಲಿ ಯುವಜನ ಸಂಘಗಳ ಪಾತ್ರ ಕಡಿಮೆ ಇರುವುದು
4. ಜನಪ್ರತಿನಿಧಿಗಳಿಗೆ ಮಾಹಿತಿ ಹಾಗೂ ಆಸಕ್ತಿ ಇಲ್ಲದೆ ಇರುವುದು.
5. ಸರ್ಕಾರದಿಂದ ಪ್ರತಿ ವರ್ಷ ಸುತ್ತೋಲೆ ಬಾರದೆ ಇರುವುದು.
ಯುವಜನ ಗ್ರಾಮಸಭೆ ಪರಿಣಾಮಕಾರಿಯಾಗಿ ನಡೆಸಲು ಇರುವ ಸಾಧ್ಯತೆಗಳು.
1. ಯುವಜನ ಗ್ರಾಮಸಭೆಯ ಮಾಹಿತಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೂ, ಗ್ರಾಮಸ್ಥರಿಗೂ, ಯುವಜನ ಸಂಘಗಳಿಗೂ ತಿಳಿಯಬೇಕು.
2. ಪಂಚಾಯತಿ ವ್ಯಾಪ್ತಿಯ ಯುವಜನ ಸಂಘಗಳು ಈ ಸಭೆಗಳನ್ನು ನಡೆಸಲು ಮುಂದಾಳತ್ವ ತೆಗೆದುಕೊಂಡು ಪಂಚಾಯತಿ ಹಾಗೂ ಯುವಜನರ ಮಧ್ಯ ಸೇತುವೆಯಾಗಿ ಕೆಲಸ ಮಾಡಬೇಕು.
3. ಯುವಜನ ಸಬಲೀಕರಣಕ್ಕಾಗಿಯೇ ಕೆಲಸ ಮಾಡುತ್ತಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ನೆಹರೂ ಯುವ ಕೇಂದ್ರಗಳು ಪಂಚಾಯತಿಯೊಟ್ಟಿಗೆ ಸಹಕರಿಸಿ ಸಭೆ ನಡೆಯುವಂತೆ ನೋಡಿಕೊಳ್ಳಬೇಕು.
4. ಯುವಜನರೇ ಸೇರಿ ತಮ್ಮ ಪಂಚಾಯತಿಗಳಿಗೆ ಸಭೆ ನಡೆಸುವಂತೆ ಮನವಿ ನೀಡಬಹುದು.
ಈ ಎಲ್ಲಾ ಸಾಧ್ಯತೆಗಳ ಜೊತೆಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳೂ ಸಹಾ ಈ ಸಭೆಗೆ ಒತ್ತಾಯಿಸುವಂತೆ ಆಗಬೇಕು. ಎಲ್ಲರೂ ಸೇರಿ ಒಟ್ಟಿಗೆ ಶ್ರಮ ಹಾಕಿದಾಗ ಯುವಜನ ಗ್ರಾಮಸಭೆ ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಸರ್ಕಾರದ 29 ಇಲಾಖೆಗಳ ಮಾಹಿತಿಯೂ ಪಂಚಾಯತಿಯಲ್ಲಿ ಲಭ್ಯವಿರುವುದರಿಂದ ಇದನ್ನು ಸದುಪಯೋಗ ಪಡಿಸಿಕೊಳ್ಳಲು ಇಂತಹ ಸಭೆಗಳು ಅತೀ ಅವಶ್ಯಕವಾಗಿ ಆಗಬೇಕಿವೆ.
ಮೇಘ ರಾಮದಾಸ್ ಜಿ
ಯುವಜನ ಕಾರ್ಯಕರ್ತರು, ಹೊಂಬಾಳೆ ಟ್ರಸ್ಟ್
ಗುಳಿಗೇನಹಳ್ಳಿ ಸಿರಾ ತಾಲ್ಲೂಕು ತುಮಕೂರು ಜಿಲ್ಲೆ
7760908097
![](https://sangaati.in/wp-content/uploads/2024/12/megha-999x1024.jpg)