ಶಂಕರಾನಂದ ಹೆಬ್ಬಾಳ ಅವರ ಗಜಲ್

ಕ್ರೋಧವೆಂಬ ಭಾವವು ಉಕ್ಕಿರಲು
ತಡೆಯುವುದು ಹೇಗೆ
ವಾದಿಸುತ ಕೆಂಗಿಡಿಯ ಕಕ್ಕಿರಲು
ಮೊಡೆಯುವುದು ಹೇಗೆ

ವೇದನೆಯು ಅನಿಯತದಿ ಬಂದಿರಲು
ಹಿಡಿಯಲಾದಿತೆ ಹೇಳು
ಶೋಧಿಸುತ ಆಂತರ್ಯವ ಹೆಕ್ಕಿರಲು
ಕಡೆಯುವುದು ಹೇಗೆ

ಭೇದಿಸುತ ರೋಷದಿ ಹೊರಟಿರಲು
ನಿಲ್ಲಿಸಲಾಗದು ಸಖ
ಬಾಧಿಸುವ ಕ್ಷಣಗಳು ಕುಕ್ಕಿರಲು
ತೊಡೆಯುವುದು ಹೇಗೆ

ವದನದಲಿ ಉದ್ವಿಗ್ನತೆ ಮೂಡಿರಲು
ಶಾಂತಭಾವ ಬರದು
ಚದುರತೆಯ ಜೀವವು ಬಿಕ್ಕಿರಲು
ನುಡಿಯುವುದು ಹೇಗೆ

ಉದಧಿಯ ಸಲಿಲದಂತೆ ಕಂಡೀತು
ಅಭಿನವನ ಮನಸು
ಕದನಗೈಯುವ ಉದ್ವೇಗ ನಕ್ಕಿರಲು
ಬಡಿಯುವುದು ಹೇಗೆ

ತನುವ ತಬ್ಬಿ ಅಳುವ ಸಖಿಯನ್ನು
ಹೇಗೆ ಮರೆಯಲಿ
ಮನದಿ ಅವಿತ ಜೀವದ ರಮೆಯನ್ನು
ಹೇಗೆ ಮರೆಯಲಿ


Leave a Reply

Back To Top