ಪ್ರೀತಿಯ ಗೆಳತಿ,

 ಉಭಯ ಕುಶಲೋಪರಿಯನ್ನು ಕೇಳುವ ಮನಸ್ಥಿತಿಯಲ್ಲಿ ನಾನಿಲ್ಲ… ಚೆನ್ನಾಗಿದ್ದೇನೆ ಎಂದು ಹೇಳುವ ಸಿನಿಕತೆ ನಿನ್ನಲ್ಲಿಲ್ಲ. ನೇರ ವಿಷಯಕ್ಕೆ ಬರುತ್ತೇನೆ.

ಜಾರ್ಜ್ ಆರ್ವೆಲ್ ಎಂಬ ಪ್ರಸಿದ್ಧ ವ್ಯಕ್ತಿ ಹೇಳಿದ ಒಂದು ಮಾತು ಹೀಗಿದೆ ‘ಅತ್ಯಂತ ಭೀಕರವಾದ ಏಕಾಂತ ಎನ್ನುವುದು ಒಬ್ಬರೇ ಇರುವುದರಿಂದ ಸಂಭವಿಸುವುದಿಲ್ಲ.. ಬೇರೆಯವರು ನಮ್ಮನ್ನು ತಪ್ಪಾಗಿ ಭಾವಿಸಿದಾಗ ಒಂದು ತುಂಬಿದ ಕೋಣೆಯಲ್ಲಿ ಜನರಿಂದ ಸುತ್ತುವರಿದಿದ್ದರೂ ಕೂಡ ನಮಗೆ ನಾವು ಏಕಾಂಗಿ ಎಂದು ಭಾಸವಾಗುತ್ತದೆ. ನಿನ್ನನ್ನು  ನೋಡಿಯೂ ನೋಡದಂತೆ,  ಕೇಳಿಯೂ ಕೇಳದಂತೆ! ನಿನ್ನ ನೈಜವಾದ ವ್ಯಕ್ತಿತ್ವವನ್ನು ಅರಿತು ಕೂಡ ಅರಿಯದಂತೆ  ವರ್ತಿಸಿದಾಗ ನಿನಗೆ ಮಬ್ಬು ಮುಸುಕಿದಂತೆ ಭಾಸವಾಗುತ್ತದೆ, ನೀನು ಇದ್ದೂ ಇಲ್ಲದಂತೆ ಭಾಸವಾಗುತ್ತದೆ.ನಿನ್ನದೇ ಹಿಂದಿನ ವ್ಯಕ್ತಿತ್ವದ ನೆರಳಾಗಿ ಗೋಚರಿಸುವೆ ಬದುಕಿನಲ್ಲಿ  ನಾವು ನಗಣ್ಯರಾದಾಗ ಉಂಟಾಗುವ ಒಂಟಿತನದ ನೋವು ಅಸದಳ.

ನಮ್ಮನ್ನು ಸುತ್ತುವರಿದ ಜನ ಸ್ನೇಹಿತರು,ಸಂಬಂಧಿಗಳು, ಕುಟುಂಬ ಮತ್ತು ಸಹೋದ್ಯೋಗಿಗಳು ಇದ್ದರೂ ಕೂಡ  ಹೃದಯದ ಮೂಲೆಯನ್ನು ಒತ್ತಿ ನೋಯಿಸುವ ಒಂಟಿತನ ಬದುಕಿನಲ್ಲಿ ನಿರಾಶೆಯನ್ನು ಹುಟ್ಟಿಸುತ್ತದೆ.
ಅದೇನೇ ಬಾಹ್ಯ ಜಗತ್ತಿನ ಮುಂದೆ ನೀನು ಉಂಡು, ತಿಂದು, ಕೆಲಸ ಮಾಡುತ್ತಾ, ನಸು ನಗುತ್ತಾ ವ್ಯವಹರಿಸಬಹುದು ಆದರೆ ಆಂತರಿಕವಾಗಿ ಪದಗಳಲ್ಲಿ ವ್ಯಕ್ತಪಡಿಸಲಾಗದಷ್ಟು ಒಬ್ಬಂಟಿತನ ನಿನ್ನನ್ನು ಕಿತ್ತು ತಿನ್ನುತ್ತದೆ.

ನಿನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ, ನಿನ್ನ ನಿಜವಾದ ವ್ಯಕ್ತಿತ್ವ ಮರೆಯಾಗಿದ್ದು ಜಗತ್ತು ನಿನ್ನ ಭೌತಿಕ ದೇಹದಲ್ಲಿ ಬೇರೊಬ್ಬರನ್ನು ಕೂಡಿಸಬಯಸುತ್ತದೆ ಎಂಬ ಭಾವ ನಿನ್ನನ್ನು ಇನ್ನಿಲ್ಲದಂತೆ ಕಿತ್ತು ತಿನ್ನುತ್ತದೆ.

ಇಂತಹ ಒಂಟಿತನ ಅತ್ಯಂತ ಕಠಿಣ ಮತ್ತು ಅಪಾಯಕಾರಿ ಕೂಡ. ಇದು ನಿನ್ನ ಸುತ್ತ ಜನರು ಇಲ್ಲ ಎಂಬುದರ ಕೊರತೆಯಲ್ಲ ಬದಲಾಗಿ ಬೇರೊಬ್ಬರೊಂದಿಗೆ ನಿನಗೆ ಸಂವಹನ ಸಾಧ್ಯವಾಗುತ್ತಿಲ್ಲ ಎಂಬ ನೋವು, ಆತಂಕ, ಸಂಕಟ. ಇಂತಹ ಸಮಯದಲ್ಲಿ ನೀನು ನಿನ್ನನ್ನು ಹೃದಯ ಅಂತರಾಳದಿಂದ ಅರಿಯುವ, ಅರ್ಥಮಾಡಿಕೊಳ್ಳುವ ನಿನ್ನ ನೋವಿಗೆ ಮುಲಾಮು ಸವರುವ ಸ್ನೇಹಿತರನ್ನು  ಹುಡುಕುವೆ.

ನಿನ್ನ ಮನದ ಮಾತುಗಳಿಗೆ ಕಿವಿಯಾಗುವ, ನಿನ್ನ ಕನಸುಗಳನ್ನು ಕೇಳುವ ನಿನ್ನ ಮನದ ಗೊಂದಲಗಳನ್ನು ಪರಿಹರಿಸುವ ಒಂದೊಳ್ಳೆ ಸಾಂಗತ್ಯದ ಅವಶ್ಯಕತೆ ನಿನಗಿದೆ.ಆದರೆ ಯಾರಾದರೂ ಒಬ್ಬರು ನಿನ್ನನ್ನು ತಪ್ಪಾಗಿ ತಿಳಿದುಕೊಂಡರೆ ನಿನ್ನ ಅಂತರಂಗ ಮತ್ತು ಬಹಿರಂಗಗಳ ನಡುವೆ ಬಹುದೊಡ್ಡ ಕಂದಕ ಏರ್ಪಡುತ್ತದೆ. ಗಾಜಿನ ಪರದೆಯ ಹಿಂದೆ ನಿಂತಿರುವ ಯಾರಾದರೂ ಒಬ್ಬರು ಇಣುಕಿ ನೋಡಿ ನಿನಗೆ ಸಹಾಯ ಹಸ್ತ ಚಾಚಲಿ ಎಂಬ ಅತೀವ ಆಶಯ ನಿನ್ನದಾಗಿರುವಂತೆ ಭಾಸವಾಗುತ್ತದೆ.

 ನೀನು ನಗಣ್ಯ ಎಂದು ಭಾವಿಸುವ ಸಮಯದಲ್ಲಿ ನಿನ್ನನ್ನು ನೀನು ಪ್ರಶ್ನಿಸಿಕೊಳ್ಳಲಾರಂಭಿಸುತ್ತಿರುವೆ.. ನಿನ್ನನ್ನು ನೀನು ಜಗವು ನೋಡ ಬಯಸುವ ರೀತಿಯಲ್ಲಿ, ಒಪ್ಪಿಕೊಳ್ಳುವ ರೀತಿಯಲ್ಲಿ  ಬದಲಾಯಿಸಿಕೊಳ್ಳಲು ಪ್ರಯತ್ನಿಸಲು ಬಯಸಿ ಸೋತು ಹೋಗುತ್ತಿರುವೆ . ಬಹಿರಂಗವಾಗಿ ನೀನು ಸಾಮಾಜಿಕ ಪರಿಗಣನೆಯನ್ನು ಬಯಸಿದರೂ ಆಂತರಿಕವಾಗಿ ನೀವಲ್ಲದ ನಿಮ್ಮನ್ನು ಒಪ್ಪಿಕೊಳ್ಳಲು ಒದ್ದಾಡುತ್ತೀರಿ… ಆಗ ಒಬ್ಬಂಟಿತನ ಕಡಿಮೆಯಾಗುವುದಿಲ್ಲ ಮತ್ತಷ್ಟು ಹೆಚ್ಚಾಗುತ್ತದೆ. ನಿನ್ನ ನಿಜವಾದ ವ್ಯಕ್ತಿತ್ವವನ್ನು ನೀನು ಕಳೆದುಕೊಂಡಾಗ ನಿನ್ನದೇ ದೇಹದ ಅಂಗ ನಿನ್ನಿಂದ ಕಿತ್ತುಹೋದಷ್ಟು ನೋವು ನಿನ್ನನ್ನು ಬಾಧಿಸುತ್ತದೆ.  ನೀನು ನಿನ್ನದೇ ಈ ಹಿಂದಿನ ವ್ಯಕ್ತಿತ್ವದ ನೆರಳಾಗಿ ಭೂತವಾಗಿ ಯಾರಾದರೂ ಸಹೃದಯರು ನಿನ್ನನ್ನು ಅರ್ಥಮಾಡಿಕೊಳ್ಳಲಿ ಎಂಬ ಭರವಸೆಯ ಭಾವದಿಂದ ಮೌನವಾಗಿದ್ದೆ.ಅಳುವ ಕೂಸನ್ನೆ ಗಮನಿಸಲಾಗುವುದಿಲ್ಲ…. ಇನ್ನು ಅಳದಿರುವ ಕೂಸನ್ನು ಯಾರು ಗಮನಿಸಲು ಸಾಧ್ಯ .

 ಯಾರೂ ನನ್ನನ್ನು ಪ್ರೀತಿಸುತ್ತಿಲ್ಲ ಎಂಬ ನೋವಿಗಿಂತ ಯಾರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ನೋವಿನ ಭಾವ  ಮನವನ್ನು ಹೆಚ್ಚು ಕಾಡುತ್ತದೆ. ನಿನ್ನ ಬದುಕಿನ ಗೋಜಲಾದ, ಕಿರಿಕಿರಿಯ, ಅಸ್ತವ್ಯಸ್ತವಾದ, ಒಳಗಿಂದೊಳಗೆ ಬಿರುಕು ಬಿಟ್ಟ ಇಲ್ಲವೇ ಮುರಿದು ಹೋದ ನಿನ್ನ ವ್ಯಕ್ತಿತ್ವದ ಒಳಗೆ ಇಣುಕಿ ನಾನು ನಿನ್ನನ್ನು ನೋಡಬಲ್ಲೆ ಅರ್ಥಮಾಡಿಕೊಳ್ಳಬಲ್ಲೆ ಮತ್ತು  ಯಾವುದೇ ರೀತಿಯ ನಿರ್ಣಯತ್ಮಾಕ ಹೇಳಿಕೆಗಳನ್ನು ಕೊಡದೆ ನಿನ್ನ ಜೊತೆ ನೀಡಬಲ್ಲೆ, ಎಂದು ಹೇಳುವ ಸ್ನೇಹಿತರು ಬೇಕು.ನಿನ್ನ ಮನದ ಕೋಣೆಯ ಕದ ತೆರೆದು ನಿನ್ನ ಅಂತರಂಗದ ಪಿಸು ಮಾತುಗಳನ್ನು ಕೂಡ ಆಲಿಸಬಲ್ಲ ಸ್ನೇಹಿತರು ಬೇಕೇ ಬೇಕು.

 ಅಂತಹ ಅಪರಿಮಿತ ಒಬ್ಬಂಟಿತನದಲ್ಲೂ ಒಂದು ತಣ್ಣಗಿನ ಮೌನ ಗಟ್ಟಿತನ ನಿನ್ನ ಶಕ್ತಿಯಾಗಿರಲಿ. ನಿನ್ನ ವ್ಯಕ್ತಿತ್ವವನ್ನು ಮತ್ತೆ ಜೀವಂತವಾಗಿಸಿಕೊಳ್ಳುವ ಬದುಕಿನ ಉತ್ಸಾಹ ಮತ್ತೆ ನಿನ್ನಲ್ಲಿ ಒಡಮೂಡಲಿ. ನಿನ್ನ ಎಲ್ಲ ಧೈರ್ಯವನ್ನು ಒಗ್ಗೂಡಿಸಿಕೊಂಡು ಬದುಕು ಒಡ್ಡುವ ಸವಾಲುಗಳನ್ನು ಎದುರಿಸಿ ಹೋರಾಡುವ  ಚೈತನ್ಯ ಶಕ್ತಿ ನಿನ್ನದಾಗಲಿ. ಜನರು ನಿನ್ನನ್ನು ಅರ್ಥೈಸಿಕೊಳ್ಳುತ್ತಿಲ್ಲ ಎಂದು ನಿನ್ನದೇ ಬದುಕಿನ ಭರವಸೆಯ  ದೀಪವನ್ನು ನಂದಿಸದಿರು.
ಬೇರೆಯವರಿಗೆ ನೀನು ಕಾಣಿಸದಿರಬಹುದು ಆದರೆ ನಿನ್ನ ವ್ಯಕ್ತಿತ್ವದ ಅತ್ಯುತ್ತಮ ಭಾಗ ಮತ್ತು ಅತ್ಯಂತ ಸಂಕೀರ್ಣತೆಗಳನ್ನು ನೀನು ಮಾತ್ರ ಆರಂಭಿಸಿಕೊಂಡಿರುವೆ…ಅದುವೇ ನಿನ್ನನ್ನು ಸಾಮಾನ್ಯರಲ್ಲಿ ಅಸಾಮಾನ್ಯಳಾಗಿ ನಿಲ್ಲಿಸುತ್ತದೆ. ನಿನ್ನಲ್ಲಿರುವ ಆ ಮೌಲ್ಯವನ್ನು ಗುರುತಿಸು,ಗೌರವಿಸು
ಮತ್ತು ಪೋಷಿಸು.

 ಮತ್ತೆ ಕೆಲವೊಮ್ಮೆ ಬೇರೆಯವರು ನಿನ್ನನ್ನು ತಪ್ಪರ್ಥ ಮಾಡಿಕೊಳ್ಳುತ್ತಾರೆ ಎಂದಾದಾಗ ಅದು ನಿನ್ನನ್ನು ನೀನು ಮತ್ತಷ್ಟು ಹೆಚ್ಚು ಅರ್ಥ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ… ಈ ಜಗತ್ತು ಒಪ್ಪಲಿ ಬಿಡಲಿ ಆದರೆ ನೀನು ಇರುವ ರೀತಿಯಲ್ಲಿಯೇ ನಿನ್ನನ್ನು ನೀನು ಒಪ್ಪಿಕೊಳ್ಳಲು ಅಪ್ಪಿಕೊಳ್ಳಲು ಶಾಂತ ಮನಸ್ಥಿತಿಯನ್ನು ಕಾಯ್ದುಕೊಳ್ಳಲು ಮಾನಸಿಕವಾಗಿ ಗಟ್ಟಿಯಾಗಲು   ನಿನ್ನನ್ನು ಪ್ರೇರೇಪಿಸುತ್ತದೆ. ಅಂತಹ ಸಮಯದಲ್ಲಿ ನಿನ್ನ ಮನಸ್ಸಿನ ಮಾತುಗಳಿಗೆ ಕಿವಿಗೊಟ್ಟಾಗ ನೀನು ಒಬ್ಬಂಟಿಯಲ್ಲ ಎಂಬ ಚೈತನ್ಯ ಶಕ್ತಿ ನಿನ್ನನ್ನು ಬಡಿದೆಬ್ಬಿಸುತ್ತದೆ. ಬದುಕಿನಲ್ಲಿ ನಿನ್ನಂತೆಯೇ ತೊಂದರೆಗೊಳಗಾಗಿರುವವರನ್ನು ಅರ್ಥ ಮಾಡಿಕೊಳ್ಳುವ, ಸಂತೈಸುವ, ಧೈರ್ಯ ತುಂಬುವ ಮೂಲಕ ಬದುಕಿನೆಡೆ ಮುಖ ಮಾಡುವಂತೆ ಪೋಷಿಸುವಂತೆ ನಿನ್ನ ವ್ಯಕ್ತಿತ್ವದ ಗಾತ್ರವನ್ನು ಹಿರಿದಾಗಿಸಿಕೋ. ಆಗ ನಿನ್ನ ಮಾತನ್ನು ನೀನು ಹೇಳದೆಯೂ ಕೇಳುವ, ನೀನಿಲ್ಲದಿದ್ದರೂ ನಿನ್ನನ್ನು ಗುರುತಿಸುವ ಅನುಭವಿಸುವ, ಅರ್ಥ ಮಾಡಿಸಲು ಪ್ರಯತ್ನಿಸದಿದ್ದರೂ,ನೀನು ಅವರಿಂದ ನಿರೀಕ್ಷಿಸದೆ ಹೋದರೂ ಕೂಡ ನಿನ್ನನ್ನು ಅರ್ಥೈಸಿಕೊಳ್ಳುವವರು ಸಾಲುಗಟ್ಟಿ ನಿಲ್ಲುತ್ತಾರೆ.

 ಆದ್ದರಿಂದ ಗೆಳತಿ… ನಿನ್ನ ಬದುಕಿನ ಸಾರವನ್ನು ಉಳಿಸಿಕೋ, ಬದುಕಿನ ಪಯಣದಲ್ಲಿ ತುಸು ಹೊತ್ತು ಒಬ್ಬಂಟಿಯಾಗಿ ನಿಂತರೂ ಪರವಾಗಿಲ್ಲ  ನಿನ್ನ ನೆರಳೇ ನೀನಾಗದಿರು. ನಿನ್ನ ನಿಜವಾದ ವ್ಯಕ್ತಿತ್ವವನ್ನು ನೀನು ಅನುಭವಿಸು ಜೀವಿಸು ಆನಂದಿಸು.. ಅದೆಷ್ಟೇ ದೀರ್ಘವಾದ ಕಾಯುವಿಕೆಗೂ ಒಂದು ಅಂತ್ಯವಿದೆ ನಿನ್ನೊಳಗಿನ ನಿನ್ನತನವೆಂಬ ವ್ಯಕ್ತಿತ್ವವನ್ನು ಬಲಿ ಕೊಡದಿರು. ನಿನ್ನೊಳಗಿನ ಬದುಕಿನ ಸಾರ ಮಸುಕಾಗದಿರಲು ಬಿಡದಿರು ಮತ್ತಷ್ಟು ಉಜ್ವಲವಾಗಿ ಬೆಳಗಲು ಅವಕಾಶ ಮಾಡಿಕೊಡು…. ಆ ಬೆಳಕಿನಲ್ಲಿ ನಿನ್ನಂತೆಯೇ ಇರುವ ನೂರಾರು ಜನರು ತಮ್ಮ ಬದುಕಿನ ಭರವಸೆಯನ್ನು ಕಂಡುಕೊಳ್ಳಲಿ.
 ಎಲ್ಲೋ ಓದಿದ ಮತ್ತೊಂದು ಮಾತಿನೊಂದಿಗೆ ಮುಗಿಸುತ್ತೇನೆ…. ಗಿಡದಿಂದ ಉದುರಿದ ಎಲೆ  ಧರಾಶಾಯಿಯಾಗಿ ಕಣಿವೆಯ ಆಳವನ್ನೂ ಪೇರಬಲ್ಲದು ಹಿಮಾಲಯ ಪರ್ವತದ ನೆತ್ತಿಯನ್ನು ಚುಂಬಿಸಬಹುದು….. ಆಯ್ಕೆ ನಿನ್ನದು ಬದುಕು ಕೂಡ ನಿನ್ನದೇ.
 ಏನಂತೀಯಾ? ಬೇಗನೆ ಉತ್ತರಿಸು


Leave a Reply

Back To Top