ಸಂಗೀತ ಸಂಗಾತಿ
ಎಲ್. ಎಸ್. ಶಾಸ್ತ್ರಿ
ಭಾರತ ರತ್ನ ಪಂ. ಭೀಮಸೇನ ಜೋಶಿ
ಅವರ ನೆನಪಿನಲ್ಲಿಒಂದು ಲೇಖನ
ಭಾರತರತ್ನ ಪಂ. ಭೀಮಸೇನ ಜೋಶಿಯವರನ್ನು ಹುಬ್ಬಳ್ಳಿ ಆರ್ಟ ಸರ್ಕಲ್ ಆಗಾಗ ಕರೆಸುತ್ತಿತ್ತು. ಅವರು ಬರುತ್ತಾರೆಂಬುದು ಸಂಯುಕ್ತ ಕರ್ನಾಟಕ ಪತ್ರಿಕೆಯಿಂದ ಗೊತ್ತಾದ ತಕ್ಷಣ ನಾನು ಏನಾದರೊಂದು ನೆಪ ಮಾಡಿಕೊಂಡು ಹೊನ್ನಾವರದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದೆ. ಇದು ೧೯೬೦-೭೦ ರ ಮಾತು.
ಹೋಗುವ ಕೆಲಸ ಇದ್ದೇ ಇರುತ್ತಿತ್ತು. ಹೋಗಿ ಅಲ್ಲೇ ಹತ್ತಿರ ಒಂದು ರೂಂ ಹಿಡಿದು ಟೌನ ಹಾಲ್ ನಲ್ಲಿಯ ಸಂಗೀತ ಕಾರ್ಯಕ್ರಮಕ್ಕೆ ಹಾಜರಾಗಿ ಮರುದಿನ ನನ್ನ ಕೆಲಸ ಮುಗಿಸಿಕೊಂಡು ವಾಪಸು ಬರುತ್ತಿದ್ದೆ.
ಪಂ. ಭೀಮಸೇನ ಜೋಶಿಯವರ ಸ್ಟೆಮಿನಾ ಹೇಗಿತ್ತೆಂದರೆ ರಾತ್ರಿ ಹತ್ತಕ್ಕೆ ಸಂಗೀತ ಸುರು ಮಾಡಿದರೆ ಮಧ್ಯೆ ೧೫ ನಿಮಿಷ ಚಹಾದ ಬಿಡುವಿನ ನಂತರ ಬೆಳಿಗ್ಗೆ ನಾಲ್ಕು ಗಂಟೆಗೆ ಮುಗಿಸುತ್ತಿದ್ದರು. ದೈತ್ಯಗಾಯಕ ಎಂದರೇ ಸರಿಯಾದೀತು. ಅಂತಹ ಬೇರೊಬ್ಬ ಗಾಯಕನನ್ನು ನಾನು ಕಂಡಿಲ್ಲ. ರಭಸದ ಮತ್ತು ದೀರ್ಘವಾದ ತಾನುಗಳನ್ನು ಹೊಡೆಯುವದರಲ್ಲೂ ಅವರನ್ನು ಮೀರಿಸುವವರು ಇಲ್ಲ. ಎಂತಹ ಅದ್ಭುತ ಸಾಧನೆ ಅದು! ಅವರ ಐವತ್ತಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಾನು ಕೇಳಿದ್ದೇನೆ. ಅಂತಹ ಹುಚ್ಚು ಅವರೆಂದರೆ . ಬೆಳಗಾವಿಯಲ್ಲಿ ಜರುಗಿದ ಅವರ ಕೊನೆಯ ಬೈಠಕ್ ಸಹ ನಾನು ಕೇಳಿದ್ದೇನೆ.
ಒಮ್ಮೆ ಮಾತ್ರ ಅವರು ನಿರಾಶೆ ಮಾಡಿದ್ದು. ಅದು ಹುಬ್ಬಳ್ಳಿ ಆರ್ಟ ಸರ್ಕಲ್ ರಜತ ಮಹೋತ್ಸವದ ಸಂದರ್ಭ. ಮೂರು ದಿವಸಗಳ ಕಾಲ ಸತತ ದೇಶದ ಪ್ರಖ್ಯಾತ ಗಾಯಕರು , ವಾದಕರು ಅದರಲ್ಲಿ ಭಾಗವಹಿಸಿದ್ದರು. ಮೂರನೆಯ ದಿನ ಮಧ್ಯರಾತ್ರಿ ವೇಳಗೆ ಕೊನೆಯ ಗಾಯನ ಜೋಶಿಯವರದು. ಅವರ ಮತ್ತು ನಮ್ಮ ಪ್ರೀತಿಯ ದರಬಾರಿ ಕಾನಡಾ ರಾಗ ಎತ್ತಿಕೊಂಡಾಗ ಎಲ್ಲರಿಗೂ ಖುಷಿಯಾಗಿತ್ತು. ಆದರೆ ಕೇವಲ ಹದಿನೈದು ನಿಮಿಷದಲ್ಲಿ ಹಾಡಲಾಗದೇ ನಿಲ್ಲಿಸಿಬಿಟ್ಟಾಗ ಎಲ್ಲರಿಗೂ ನಿರಾಶೆ.
ಪಂ. ಭೀಮಸೇನ ಜೋಶಿಯವರು ಒಂದು ತರಹ ಲಹರಿ ವ್ಯಕ್ತಿಯಾಗಿದ್ದರು. ಹೃದಯವಂತಿಕೆಯೂ ಇತ್ತು. ಒಮ್ಮೆ ಅವರು ಪ್ರಸಿದ್ಧಿಯ ಹಂತಕ್ಕೇರುತ್ತಿದ್ದಾಗ ತಾವು ಹಿಂದೆ ಸಂಗೀತಗುರುವನ್ನು ಹುಡುಕಿಕೊಂಡು ಮನೆ ಬಿಟ್ಟು ತಿರುಗುತ್ತಿದ್ದ ಕಾಲದಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅವರಿಗೆ ಬೆಳಗಿನ ತಿಂಡಿಯನ್ನು ಉಚಿತವಾಗಿ ನೀಡುತ್ತಿದ್ದ ಸಣ್ಣ ಚಹಾದಂಗಡಿಯವನನ್ನು ಹುಡುಕಿಕೊಂಡು ಹೋಗಿ ಅ ದಿನ ಅವರಿಗೆ ಸಿಕ್ಕ ಎಲ್ಲ ಇಪ್ಪತ್ತು ಸಾವಿರ ರೂ. ಗಳನ್ನು ಅವನಿಗೆ ಕೊಟ್ಟು ನಮಸ್ಕಾರ ಮಾಡಿ ಬಂದಿದ್ದರು. ಆತ ಇವರಿಗೆ ಒಂದು ಕರಾರು ಹಾಕಿದ್ದ. ನೀನು ಇಲ್ಲಿ ಹಾಡಬೇಕು. ನಾನು ನಿನಗೆ ತಿಂಡಿ ಕೊಡುತ್ತೇನೆ. ಆ ರೀತಿ ಜೋಶಿಯವರು ತಮ್ಮ ಕಷ್ಟ ಕಾಲದಲ್ಲಿ ನೆರವಾದವರನ್ನು ಪ್ರಸಿದ್ಧಿ ಪಡೆದ ಮೇಲೂ ಮರೆಯಲಿಲ್ಲ ಎನ್ನುವದು ಬಹಳ ಮಹತ್ವದ್ದು. ದೊಡ್ಡವರು ಯಾವಾಗಲೂ ದೊಡ್ಡವರೆ!
ಎಲ್. ಎಸ್. ಶಾಸ್ತ್ರಿ