ಎನೋ ಫೇಸ್ ಬುಕ್ ಆನ್ ಆದ ಕೂಡಲೇ ಒಂದಿಲ್ಲೊಂದು ಸುದ್ದಿಗಳು, ಚಿತ್ತ ವಿಚಿತ್ರ ದತ್ತ ಹೇಳಿಕೆಗಳು,ಕಣ್ಣೀರು ಬರುವಂತಹ ದೃಶ್ಯಗಳು,ಕೆಲವೊಂದು ಅತಿರೇಕ,ಇನ್ನೂ ಕೆಲವೊಂದು ತಿರುಚಿದ್ದು.ಒಟ್ಟಾರೆ ಹೇಳಬೇಕಾದ ಅಂಶಗಳಿಗಿಂತ ಮಾನಸಿಕವಾಗಿ ಕೊರಗುವ ಅಂಶಗಳೇ ಜಾಸ್ತಿ!. ಒಮ್ಮೊಮ್ಮೆ ನಾವು ಹುಟ್ಟಿದ್ದು ತಪ್ಪಾ? ಅಥವಾ ನಮ್ಮ ಜೀವನ ಶೈಲಿ ತಪ್ಪಾ? ಬದುಕಿನ ನಾನಾ ಸ್ತರಗಳು ಬಹಿರಂಗವಾಗಿ ಯಾವುದನ್ನು ಬಿತ್ತರಿಸದೆ; ಒಳಗೊಳಗೇ ಹಬ್ಬಿಕೊಂಡ ಬಳ್ಳಿಯಂತೆ ಮೌನವಾಗಿ ಚಿಗುರುತ್ತಿರುತ್ತದೆ.ನಾವುಗಳು ಹೀಗೆಕೆ ಎಂಬ ಪ್ರಶ್ನೆಗೆ ನಿಖರ ಉತ್ತರ ಕಂಡುಕೊಳ್ಳುವ ಸಾಹಸ ನಮ್ಮಲ್ಲಿ ಇಲ್ಲ.ಹೀಗಿರುವಾಗ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡುವ ಎಲ್ಲ ವಿಷಯಗಳು ನೂರಕ್ಕೆ ನೂರು ಸತ್ಯವಲ್ಲ…ಒಂದಿಷ್ಟು ನೈಜತೆಗೆ ತೆರೆದುಕೊಂಡರೆ,ಕೆಲವು ತಿಳಿದವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ!. ಆದರೂ,ಬೇರೆ ಯಾವ ವಿಷಯದ ಮೇಲೆ ದಾಳಿ ಮಾಡಿದರು ಅದು ಮುಖ್ಯ ಅನ್ನಿಸುವುದಿಲ್ಲ,ಯಾವಾಗ ಅದು ಸ್ವಾಭಿಮಾನಕ್ಕೆ ಪೆಟ್ಟು ಆಗ ಅದೊಂದು ಯುದ್ದದ ಅಖಾಡವಾಗಿ ನಿಲ್ಲುತ್ತದೆ.

“ಹೆಂಡತಿಯ ಮಾತು ಕೇಳಿ ಹೆತ್ತ ತಂದೆತಾಯಿಯನ್ನು ಮಹಾ ಕುಂಭಮೇಳದಲ್ಲಿ ಬಿಟ್ಟು ಬಂದ ಮಕ್ಕಳು” ಇದನ್ನು ಓದಿದಾಗ ಕರುಳು ಚುರ್ ಅನ್ನಿದಿರದು.ಅಬ್ಬಾ! ಎಂತಹ ವಿಕೃತ ಮನಸ್ಸು!. ನಾವು ಭವ್ಯ ಭಾರತದ ಕುಡಿಗಳು,ಸಂಸ್ಕಾರ ಸಂಸ್ಕೃತಿಗಳ ತವರೂರಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ನಮ್ಮ ಸಂಸ್ಕೃತಿಯನ್ನು ಎತ್ತದೂಡುತ್ತಿದ್ದೆವೆ ಎಂಬುದು ಅರಿವಾಗುತ್ತದೆ. ಮಕ್ಕಳಿಗೆ ಹೆತ್ತವರು ಭಾರವಾದ ಮೇಲೆ ಮುಂದೆನು?ಹಾಗಾದರೆ ಹೆತ್ತ ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುವಷ್ಟರಲ್ಲಿ ಹೆತ್ತವರ ಯೌವ್ವನದ ವೃದ್ಧಾಪ್ಯದ ಲಕ್ಷಣಗಳನ್ನು ಹೊತ್ತು ನಿಂತಿರುತ್ತದೆ.ಅವರಿಗೆ ತಮಗಾಗಿ ಏನನ್ನೂ ಮಾಡಿಕೊಳ್ಳುವ ಗೋಜಿಗೆ ಹೋಗದೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿದ್ದು,ತಮ್ಮ ಕೊನೆಗಾಲದಲ್ಲಿ ನೆರವಾಗುತ್ತಾರೆಂಬ ನಂಬಿಕೆಯಿಂದ.ಆದರೆ ಆಗುವುದು ಇನ್ನೇನೋ…ಹೆತ್ತವರೊಂದಿಗೆ ನಮ್ಮ ಬದುಕು ಹಿಂಗ್ಯಾಕೆ? ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತೆ. ಜಾನಪದ‌ ಹಾಡು ಕಣ್ಣೀರು ತರಿಸಿದ್ದುಂಟು.

ದುಡ್ಡು ಕೊಟ್ಟರ ಬೇಕಾದ್ದ ಸಿಗತೈತಿ ಈ ಜಗದಲಿ ಕಾಣೋ….
ಹಡೆದ ತಾಯಿಯನ್ನು ಕಳಕೊಂಡ ಮ್ಯಾಲ ಮತ್ತೆ ಸಿಗುವಳೇನೋ,
ತಮ್ಮಾ ಮರಳಿ ಬರುವಳೇನೋ, ತಮ್ಮಾ ಮರಳಿ ಬರುವಳೇನೋ
ಈ ಹಾಡು ಎಂದೆಂದಿಗೂ ಸೂಕ್ತ!.

ಅಪ್ಪ ಅಮ್ಮ ನಮಗ್ಯಾಕೆ ಭಾರ ಎಂಬ ಮಾತೆ ಅಪ್ರಸ್ತುತ.ಯಾಕೆಂದರೆ ವಾಸ್ತವ ಬದಲಾಗುತ್ತಿದೆ.ದೃಷ್ಟಿಕೋನಗಳು ಬದಲಾಗುತ್ತಿವೆ.ಒಂಟಿಯಾಗಿ ಅಥವಾ ವಿಭಕ್ತ ಕುಟುಂಬದ ಅನಿವಾರ್ಯತೆ ಈಗೀಗ ಹೆಚ್ಚುತ್ತಿದೆ. ವಯಸ್ಸಾದವರು ಎಲ್ಲರಿಗೂ ಭಾರ!.ವೃದ್ದಾಶ್ರಮಗಳು ತಲೆಯೆತ್ತುತ್ತಿರುವುದು ಈ ಕಾರಣದಿಂದ ಎಂದರೆ ತಪ್ಪಾಗದು.ಪಾಪ! ಇಡೀ ವಯಸ್ಸನ್ನು ಧಾರೆಯೆರೆದು ಜೀವನದ ಪಾಠ ಕಲಿಸಿದವರು ಅನಾಥರಾಗುತ್ತಿರುವುದು ಸಮಾಜದ ಅಧೋಗತಿಗೆ ಮುನ್ನುಡಿ ಬರೆಯುತ್ತಿರುವವರು ನಾವೆಂದರೆ‌ ವಿಶೇಷವೆನಲ್ಲ!. ಮನಸ್ಸು ಕಂಗಟ್ಟಿದೆ.ಅಲ್ಪಸ್ವಲ್ಪ ಮಾನವೀಯತೆ ಹೊಂದಿದ ಸಮುದಾಯ ಹಿರಿಯರು ನಮ್ಮ ಆಸ್ತಿಯಂತ ಪೂಜಿಸುವುದು ಇದೆ.ಮಕ್ಕಳೇ ಹೆತ್ತವರನ್ನು ಕೊಲೆಮಾಡುವ ಸ್ಥಿತಿಗೆ ತಲುಪಿರುವುದು ವಿಪರ್ಯಾಸ.
ಕೈಹಿಡಿದು ನಡೆಯಲು ಕಲಿಸಿದವರು ದಾರುಣ ಸ್ಥಿತಿಯಲ್ಲಿ!.

ಕರಾಳ ಕ್ಷಣಗಳು ಯಾರ ಬದುಕಲ್ಲಿ ಬರಬಾರದೆಂಬ ಆಶಯ ನಮ್ಮದು. ಆದರೆ ಅವೆಲ್ಲವೂ ಒಂದು ಕ್ಷಣದಲ್ಲಿ ನೀರ ಮೇಲಿನ ಗುಳ್ಳೆಯಂತಾದರೆ ಏನು ಗತಿ? ಪ್ರೀತಿ,ಪ್ರೇಮೆ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟು ಬೇಗ ಹುಟ್ಟಿ ಅಷ್ಟೇ ಬೇಗ ಅಂತ್ಯವಾಗುವುದನ್ನು ಕಾಣುತ್ತಿದ್ದೆವೆ.ಯಾಕೋ ಗೊತ್ತಿಲ್ಲ ಸಂಬಂಧ ಈಗ ಚೆನ್ನಾಗಿದೆ ಅಂತ ಹೇಳುವಷ್ಟರಲ್ಲಿ ಅದು ಕೊನೆಯಾಗುತ್ತಿರುವುದು ನಾಜೂಕಿನ ಜಗತ್ತಿಗೆ ಉದಾ.ಅಷ್ಟೇ. ಹಿರಿಯರು ಕಲ್ಲುತಿಂದು ಕಲ್ಲು ಕರಗಿಸುತ್ತಿದ್ದರು….ನಾವು ತಿಂದ ಅನ್ನಕ್ಕೆ ನಿಯತ್ತು ಇಲ್ಲದ ಪರಿಸ್ಥಿತಿ ಬಂದಿದೆ.ಒಟ್ಟಾರೆ ಮನಗೊಂದು ಮನೋರೋಗ.ಯಾರು ನಮ್ಮ ಜೊತೆ ಇರಲಾರದಂತ ಸ್ಥಿತಿಯಲ್ಲಿ ನಾವಿದ್ದೆವೆ.ಒಬ್ಬಂಟಿಯಾಗಿ ಬದುಕುವ ರೋಗ ಎಲ್ಲರ ನೆತ್ತಿಯಲಿ ರಾರಾಜಿಸುತ್ತಿದೆ.ಯಾರಿಗೆ ಯಾರು ಬೇಡ!. ಒತ್ತಾಯದಿಂದ,ಒಪ್ಪಿಸಿದ ಜೀವನ ಯಾರಿಗೂ ಬೇಡ.ಒಡೆದ ಕನ್ನಡಿ ಹರಳುಗಳನ್ನು ಮತ್ತೆ ಕೂಡಿಸಲಾದಿತೆ? ಕೂಡಿದರರೂ ಅದು ಪುನಃ ಮೊದಲಿನಂತಾಗುವುದಾ? ನೂರು ಪ್ರತಿಬಿಂಬಗಳ ನಡುವೆ ನೈಜತೆಯ ಹುಟುಕಾಟ!.

ಕುಟುಂಬ ವ್ಯವಸ್ಥೆ ಇಂದು ತೀರಾ ಕೆಳಮಟ್ಟಕ್ಕೆ ಇಳಿಯುತ್ತಿರುವುದನ್ನು ಕಂಡು ಕಾಣದಂತೆ ಮುಂದೆ ಸಾಗುವ ಮನಸ್ಥಿತಿಗೆ ಬಂದು ನಿಂತಿದ್ದೆವೆ.ಬರಿ ಗೋಡೆಗಳು ಇಂದು ಪರಸ್ಪರ ಮಾತುಕತೆಗೆ ಮಾತ್ರ ಸ್ಪಂದಿಸುವ ಸೂಕ್ಷ್ಮ ಪ್ರಜ್ಞೆ ಹೊಂದಿದ ಪ್ರಪಂಚ ಎದುರಾಗುತ್ತಿದೆ.ಈಗಿನ ಮೋಸ ಪದದ ಅರ್ಥ
ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ.ಅದು ಸಾಗರದಂತೆ ಆಳವಾಗಿ ಬೇರೂರಿ,ಕೊನೆಗೆ ಅದೊಂದು ಮಹಾ ಚಲ್ಲಾಟದಲ್ಲಿ ಅಲೆಯಾಗಿ ಆಗಾಗ ದಂಡೆಗೆ ಅಪ್ಪಳಿಸಿ ತನ್ನ ಮನದಿಂಗಿತವನ್ನು ಚಲ್ಲುತ್ತದೆ.ಅರಿತವ ಜಾಣ ಅಷ್ಟೇ. ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸುವ ಪ್ರತಿಬಿಂಬಗಳು ಕರಾಳ ಹಿನ್ನಲೆಯಲ್ಲಿ ಅಂತ್ಯವಾಗುತ್ತಿರುವ ದೃಶ್ಯ ಕಣ್ಣೇದುರು ಬಂದಾಗ ಅಯ್ಯೋ ಹೀಗಾಗಬಾರದಿತ್ತು ಎಂಬ ಅವಲೋಕನದಲ್ಲಿ ಮಗ್ನರಾಗಿಬಿಡುತ್ತೆವೆ.ನಮ್ಮ ಕುಟುಂಬದ ಸ್ವಾಸ್ಥ್ಯ ಕಾಪಾಡುವಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನು ಯಾರು ತಾನೆ ಅರ್ಥೈಸಲು ಸಾಧ್ಯ!.

ಹಿರಿಯರು ಇತ್ತಿತಲಾಗಿ ಬದಲಾಗಿದ್ದಾರೆ,ಅವರಿಗೆ ತಮ್ಮ ಕೆಲಸದ ಬಗ್ಗೆ ಅಸಮಾಧಾನ ಇದೆ.ನಾವ್ಯಾಕೆ ನಮ್ಮ ಜೀವನ ಇಂತಹ ಮಕ್ಕಳಿಗಾಗಿ ಬಲಿಕೊಟ್ಟೆವು? ವಯಸ್ಸಾದ ಹೆತ್ತವರ ಆರೈಕೆ ಮಾಡಲು ಮೀನ ಮೇಷ ಎಣಿಸುವ ಕ್ಷಣಗಳು ಬಂದ ಮೇಲೆ ಏನಿದೆ? ವಯಸ್ಸಾದವರು ಜಗತ್ತಿಗೆ ಭಾರ ಎನ್ನುವಷ್ಟರ ಮಟ್ಟಿಗೆ ಯುವಕರು ನಡೆದುಕೊಳ್ಳುತ್ತಿರುವುದನ್ನು ಗಮನಿಸಿದಾಗ,ಅವರಿಗೆ ರೆಕ್ಕೆ ಪುಕ್ಕ ಬಲಿಯಲು ಇವರೆ ಕಾರಣ ಎಂಬ ಕಟುಸತ್ಯ ಅರಿವಾಗಬೇಕಿದೆ!. ಸಮಾಜದ ಅಂಗ ಕುಟುಂಬ!. ಅದರ ಚಕ್ರಗಳು ಸರಿಯಾಗಿದ್ದರೆ ಮಾತ್ರ ಎಲ್ಲವೂ ಶ್ರೇಷ್ಠ. ಇಲ್ಲವಾದಲ್ಲಿ ಬದುಕಿದ್ದು ನಶ್ವರ.ಶ್ರವಣ ಕುಮಾರ ಕಣ್ಣುಕಾಣದ ವೃದ್ಧ ತಂದೆ ತಾಯಿ ಯರನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೊರಟ.ಕಣ್ಣುಕಾಣದ ಅವರಿಗೆ ತಾನು ಕಣ್ಣಾಗಿ ನಿಂತು ಭೇಷ್ ಅನ್ನಿಸಿಕೊಂಡವ.ನಾವುಗಳು ಹೆತ್ತವರ ಒಡಲು ತಂಪಾಗಿರಿಸಿದಷ್ಟು ಅವರ ಆಶೀರ್ವಾದ ನಮ್ಮನ್ನು ಸದಾ ಕಾಯುತ್ತದೆ ಎಂಬ ಪುಟ್ಟ ಮನಸ್ಸು ನಮ್ಮದಾದರೆ ಒಳಿತು.

ಒಟ್ಟಾರೆಯಾಗಿ ಹೇಳುವುದಾದರೆ, ನಾವೇನು ಈ ಭೂಮಿ ಮೇಲೆ ಶಾಶ್ವತವಲ್ಲ.ಹಿಂದಿನವರಿಗಿಂತ ಮೊದಲೆ ನಾವುಗಳು ಕಣ್ಮರೆಯಾಗುವ ಮಿಂಚುಹುಳು ಅಥವಾ ಲೈಟ್ ಹುಳುವಿನಂತೆ.ಆದರೂ ನಮ್ಮ ನಮದಿಂಗಿತಗಳು ಕಡಲಿಗಿಂತಲೂ ವಿಸ್ತಾರ!. ಕೊನೆ ಕಾಣದ ಆಗಸದಂತೆ
ನಾವುಗಳು ಸೋಶಿಯಲ್ ಮೀಡಿಯಾದಲ್ಲಿ ತೋರಿಸಿಕೊಳ್ಳುವ ಸಾಧು ಸಂತರಂತಹ ನಯ ನಾಜೂಕಿನ ಮುಖವಾಡಗಳು.ಕೇವಲ ತೋರಿಕೆಗೆ ಮಾತ್ರ ಇರದೆ,ನೈಜ ಜೀವನದಲ್ಲಿಯು ಕೂಡ,ಅಂತಹ ಬದುಕನ್ನು ಕಟ್ಟಿಕೊಂಡರೆ ಮಾತ್ರ ಅದಕ್ಕೊಂದು ಬೆಲೆ.ಹೆತ್ತವರಿಗೆ ನೋವು ಕೊಡದೆ,ನರಕ ತೋರಿಸದೆ,ಇದ್ದುದರಲ್ಲೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಹೊತ್ತು ನಡೆದರೆ ನಾವು ಶ್ರವಣಕುಮಾರ ನಂತೆ ಬದುಕಲು ಸಾಧ್ಯ.ಮಾಧ್ಯಮಗಳಲ್ಲಿ ಪ್ರಸಾರವಾಗುವ ಹೀನ ಕೃತ್ಯಗಳನ್ನು ಕಂಡಾಗೆಲ್ಲ ಹೆತ್ತೊಡಲು ಪ್ರತಿಕ್ಷಣ ಸಾಯುತ್ತದೆ. ನೋಡಿಕೊಳ್ಳಲು ಆಗದಿದ್ದರೂ ಅವರಪಾಡಿಗೆ ಅವರನ್ನು ನೆಮ್ಮದಿಯಾಗಿ ಇರುವಂತೆ ಬಿಡದ ಮಕ್ಕಳಿಗೆ ಏನು ಹೇಳಬೇಕು?

ಮಗ ಇದ್ದರೂ ಹಡೆದ ತಾಯಿ, ಪರದೇಶಿ ಆಗಿಹಳು….
ಅಲ್ಲಿ ಇಲ್ಲಿ ತಾ ಭಿಕ್ಷೇಯ ಬೇಡಿ, ದಿನಗಳ ಕಳೆದಾಳು…
ಬಂದ ನೋವುಗಳ ಸಹಿಸುತ ಮಗನ ಚಿಂತೆ ಮಾಡುತಾಳು…
ಕಣ್ಣು ಕಾಣಲಿಲ್ಲ, ಕಿವಿಯು ಕೇಳಲಿಲ್ಲ ಎಷ್ಟುದಿನ ಇರುತಾಳು…?
ನನ್ನ ಮಗನಿಗೆ ಚೆನ್ನಾಗಿ ಇಡು ಅಂತ ಮಾತನು ಬೇಡ್ಯಾಳು…
ತಾಯಿ ಬೀದ್ಯಾಗ ಸತ್ತಾಳು.

ಆಸ್ತಿ,ಪಾಸ್ತಿ ಕಿತ್ತುಕೊಂಡು ಅವರನ್ನು ನಿರ್ಗತಿಕರಾಗಿಸುವ ಮಕ್ಕಳ ವಿರುದ್ದ ನನ್ನ ದಿಕ್ಕಾರ.ಕಾನೂನು ಕಟ್ಟಳೆಗಳು ಹೆತ್ತವರ ಪರವಾಗಿದ್ದರೂ,ಹೋರಾಟ ಮಾಡುವ ತಾಕತ್ತು ಯೌವ್ವನದ ಕಸಿದುಕೊಂಡಿರುತ್ತದೆ.ಅಸಹಾಯಕರ ಪರವಾಗಿ ಕಾನೂನು ಇದ್ದರೂ ಅಲ್ಲಿಯ ತನಕ ಸುದ್ದು ಮಾಡುವ ತಾಕತ್ತು ಬೇಕಲ್ಲ..! ಹೆತ್ತವರು ಕರುಳು ಬಳ್ಳಿಯ ವಿರುದ್ಧ ಹೋಗಲಾರರು. ಮಕ್ಕಳ ಬದುಕು ಒಳ್ಳೆಯದಾಗಲಿ ಎಂದು ಹಾರೈಸುವರು,..ಅದಕ್ಕೆ ಅಲ್ಲವೆ ಹೆತ್ತವರು ಭಗವಂತನ ಸ್ವರೂಪ..!.


2 thoughts on “

  1. ಅತೀ ಸುಂದರ. ಅಷ್ಟ ಬೇಗ ಅಧ್ಭುತ ಲೇಖನ ನಿಮ್ಮ ಸಾಹಿತ್ಯ ಕೃಷಿಗೆ ಶರಣು. ವಾಸ್ತವ್ಯ ಬಿಂಬಿಸುವ ಪ್ರಯತ್ನ ಶ್ಲಾಘನೀಯ ರೀ ಮೇಡಂ

  2. ಸೂಪರ್ ಶಿವಲೀಲಾ ಅಕ್ಕಾ, ಎಷ್ಟು ಸತ್ಯವಾದ ವಿಚಾರ ಬರೆದಿದ್ದೀರಿ,ಈ ಬರಹ ಆದಷ್ಟು ಬೇಗ ಎಲ್ಲೆಡೆ ಹರಡಲಿ, ಅಂತಹ ಮಕ್ಕಳ ಮನಸ್ಸು ಪರಿವರ್ತನೆ ಆಗಲಿ, ನಮ್ಮ ಭಾರತೀಯ ಕುಟುಂಬ ಸಂಸ್ಕೃತಿಗೆ ಧಕ್ಕೆ ತರುವ ಈ ಮಕ್ಕಳು ಜಾಗೃತರಾಗಲಿ ಎಂದು ಹಾರೈಸುತ್ತೇನೆ, ನಿಜಕ್ಕೂ ಸ್ಪೂರ್ತಿದಾಯಕ, ಅಭಿನಂದನೆಗಳು ಅಕ್ಕ,

Leave a Reply

Back To Top