ಕಾವ್ಯ ಸಂಗಾತಿ.
ಗಿರಿಜಾ ಇಟಗಿ
ಬೆಂದೊಡಲ ಬೇಂದ್ರೆ
ಬೇಂದ್ರೆ ನೀನಂದು ಬೆಂದೆ
ಬೆಂದೊಡಲಿನೊಳಗೆ ಬದುಕನ್ನು ಬೆಸೆದೆ
ಬೆಸೆದ ಬದುಕನೇ ತೇಯ್ದು ರಸಗಂಧವನಿತ್ತೆ
ಅದು ಇಂದಿಗೂ ಪರಿಮಳವ ಸೂಸುತಿದೆ ನೋಡು
ನೀನಂದು ಹೋಳಿಗೆ ಉಣಬೇಕೆಂದಾಗಲೆಲ್ಲ
ವಿಧಿಯು ಏಕಾದಶಿಗೆ ಅಣಿಯಾಗಿಸುತಿತ್ತು
ಜಗ್ಗಿದರೂ ಜಗ್ಗದೆ ಕುಗ್ಗಿದರೂ ಕುಗ್ಗದೆ
ಅಂತರಾತ್ಮದ ಧ್ವನಿಗೆ ಓಗೊಟ್ಟವನು ನೀನು
ಕಾಮನ ಕಟ್ಟೆಯಲಿ ಕಾಮನೆಗಳ ಸುಟ್ಟೆ
ಭಗವಂತನಿತ್ತ ಕುಲುಮೆಯಲಿ ಕುದ್ದೆ
ಕನ್ನಡಮ್ಮನ ಕೊರಳಿಗೆ ಕಂಠಿಹಾರವಾದೆ
ಸಾಧನಕೇರಿಯ ಸಾಧನೆಯ ಪಥವಾಗಿಸಿದೆ
ನೋವಿನುದಕವನು ಅಮೃತದಂತೆ ಕುಡಿಕುಡಿದು
ರಾಮಪಾನಕವನು ನಮಗಿತ್ತವನು ನೀನು
ನಾದಲೀಲೆಯೊಳು ನಾದಿ ನಾದಿ ಹದವಾದಳು ಕಾವ್ಯಕನ್ನಿಕೆ
ನಿನ್ನ ಕಾವ್ಯಸುಧೆಯೊಳು ಮಿಂದೆದ್ದ ನಾವೇ ಧನ್ಯರು
ಸಖೀಗೀತೆಯೊಳು ದಾಂಪತ್ಯದ ಸವಿಗಾನ
ನಾಕುತಂತಿಯೊಳು ಯೋಗದ ದರ್ಶನ
ನಿನ್ನ ಕಾವ್ಯಗಂಗೆಯೊಳು ಪುನೀತಳಾಗುತಾ
ನಿತ್ಯ ಮುತ್ತೈದೆಯಾದಳು ಕನ್ನಡದ ತಾಯಿ
ಗಿರಿಜಾ ಇಟಗಿ