ʼಗೂಗಲ್ ಮಾರಿಯ ಕನ್ನಡ ..ʼಒಂದು ವಿಶೇಷ ಅನುಭವ- ರಾಜು ಪವಾರ್‌ ಅವರ ಮಾತುಗಳಲ್ಲಿ ಕೇಳಿ

ಇತ್ತೀಚೆಗೆ ಗೂಗಲ್ ಮ್ಯಾಪ್ ಹಾಕಿಕೊಂಡು ಹೋದಾಗ ಆದ ಅನುಭವ,

              “ಟೇಕ್ ರೈಟ್ ಟು ಮಗಾಡಿ ರೋಡ್” ಗೂಗಲ್ ಮ್ಯಾಪ್ ಆ್ಯಪ್ನಿಂದ ಬಂದ ಧ್ವನಿ ಕ್ಷಣಕಾಲ ದಂಗಾಗಿಸಿತು. ಅರೇ,ನಾನು ಸರಿಯಾದ ಮಾರ್ಗದಲ್ಲೇ ಇದ್ದಿನಾ ಅಥವಾ ದಾರಿ ತಪ್ಪಿದೇನಾ? ಅಂತ ಸುತ್ತ ಕಣ್ಣಾಡಿಸಿದೆ.ಇಲ್ಲ, ಪರಿಚಿತ ರಸ್ತೆಯೇ,ರಸ್ತೆಯ ಹೆಸರೇನಾದರು ಬದಲಾಯಿಸಿಬಿಟ್ಟರಾ ಎಂದು ಎದುರುಗಡೆಯ ಬೋರ್ಡ್ ನೋಡಿದೆ, ಇಂಗ್ಲಿಷ್ ನಲ್ಲಿ Magadi Road ಎಂದು ಬರೆದಿರುವುದು ಕಾಣಿಸಿತು. ಮತ್ತೊಮ್ಮೆ ಓದಿದೆ ಇಂಗ್ಲಿಷ್ ನಲ್ಲಿ ಬರೆದಿದ್ದನ್ನು ‘ಮಗಾಡಿ ರೋಡ್ ಅಥವಾ ಮಾಗಡಿ ರೋಡ್’ ಎಂದೂ ಕೂಡ ಓದಬಹುದಲ್ಲವೆ ಎಂದು ಯೋಚಿಸಿದೆ.ಇದು ಗೂಗಲ್ ನ ಕನ್ನಡಾನುವಾದ ಎಂದು ತಿಳಿಯಿತು. ಸಿಗ್ನಲ್ ಹಸಿರು ದೀಪ ತೋರಿಸಿತು, ಕಾರು ಚಲಾಯಿಸಿಕೊಂಡು ಹೊರಟೆ.

             ಮನೆಗೆ ಬಂದು ಯೋಚಿಸಿದೆ ಹಾಗೂ ಕುತೂಹಲಕ್ಕೆ ಕರ್ನಾಟಕದ ಹಾಗೂ ಬೆಂಗಳೂರಿನ ಇತರ ಸ್ಥಳಗಳ ಹೆಸರನ್ನು ಗೂಗಲ್ ಹೇಗೆ ಉಚ್ಛರಿಸುತ್ತದೆ ಎಂದು ತಿಳಿಯ ಬಯಸಿದೆ. ಒಂದೊಂದೆ ಸ್ಥಳಗಳ ಹೆಸರನ್ನು ಟಂಕಿಸಿ ಧ್ವನಿ ಕೇಳಿದಾಗ ಗೂಗಲ್ ಮಾರಿಯ ಕನ್ನಡಾನುವಾದ….
ಕೆಂಗೇರಿ => ಕೆಂಜೇರಿ, ತುಮಕೂರು => ತಂಕೂರ್, ಕರ್ನಾಟಕ => ಕರಾನಾಟಕಾ, ಉಲ್ಲಳು => ಅಲಾಲು, ಕೊಮ್ಮಘಟ್ಟ => ಕೊಮಗತ್ತಾ, ನಾಗದೇವನಹಳ್ಳಿ => ನಗಾದೇವನಹಲ್ಲಿ,
 ಕನ್ನಡ => ಕನಾಡಾ,
 ಜ್ಞಾನ ಭಾರತಿ => ಜಿನಾನಬಾರತಿ,
ನಾಗರಭಾವಿ => ನಗಾರಬಾವಿ, ಹುಬ್ಬಳ್ಳಿ => ಹಬ್ಬಲಿ, ಬಂಡೆಮಠ => ಬಾಂಡೆಮಾಟ, ಗುಡ್ಡದಹಳ್ಳಿ => ಗದಾದಹಲ್ಲಿ, ಹೀಗೆ ಸಾಗುತ್ತದೆ ಗೂಗಲ್ ಮಾರಿಯ ಕನ್ನಡಾನುವಾದ. ಬ್ರಿಟಿಷ್‌ ರ ಪ್ರಭಾವದಿಂದ ಕನ್ನಡದ ಹೆಸರುಗಳೆಲ್ಲ ಕಂಗ್ಲೀಷ್ ಆಗಿ ತನ್ನ ಮೂಲ ರೂಪವನ್ನು ಕಳೆದುಕೊಂಡಿದೆ ಎಂದು ಸರ್ಕಾರ ಒಂದಿಷ್ಟು ಊರುಗಳ ಹೆಸರನ್ನು ಕನ್ನಡಮಯವಾಗಿಸಿದೆ.ಆದರೆ ಗೂಗಲ್ ಮಾರಿಗೆ ಕನ್ನಡ ಕಲಿಸುವವರಾರು!? ಇನ್ನೂ ಪರ ಊರಿನವರು ಬಂದಾಗ ಅಥವಾ ಅಪರಿಚಿತ ಸ್ಥಳಕ್ಕೆ ಹೋದಾಗ ಈ ಗೂಗಲ್ ಮಾರಿಯ ಮೊರೆಹೋಗುವುದು ಸರ್ವೆ ಸಾಮಾನ್ಯ. ಕನ್ನಡದ ಹೆಸರುಗಳನ್ನು ಇದು ಹೀಗೆ ತೊದಲುತ್ತ ಅಪಭ್ರಂಶ ಮಾಡಿ ಉಚ್ಛರಿಸಿದರೆ ಹೊಸಬರಲ್ಲಿ ಇದೇ ಹೆಸರು ಅಚ್ಚಾಗುತ್ತದೆ. ಮೂಲ ಹೆಸರು ಮರೆತುಹೋಗಿ ಗೂಗಲ್ ಮಾರಿಯ ಕನ್ನಡದ ಹೆಸರುಗಳೇ ಉಳಿದು ಹೋಗಬಹುದು.

      ಸಂಬಂಧ ಪಟ್ಟ ಪ್ರಾಧಿಕಾರ ಹಾಗೂ ಆಡಳಿತ ಈ ಗೂಗಲ್ ಮಾರಿಗೆ ಕನ್ನಡ ಕಲಿಸುವ ಮೂಲಕ ಕನ್ನಡ ಉಳಿಸಲು ಸಹಕರಿಸಬೇಕೆಂದು ಈ ಕನ್ನಡಾಭಿಮಾನಿಯ
ಕಳಕಳಿಯ ಕೋರಿಕೆ.


Leave a Reply

Back To Top