“ನಾನು ನನ್ನಂಥವರು” ಒಂದು ಸ್ವಗತ ಪ್ರೇಮಾ ಟಿ ಎಂ ಆರ್ ಅವರಿಂದ

ಅಡಿಗೆ ಊಟ ಬಳಿ ತೊಳಿ ಒರೆಸು ಬೆರಸು ನೆನೆಹಾಕುಗಳ ಚಕ್ರವ್ಯೂಹದಿಂದ ಬಿಡಿಸಿಕೊಂಡು ಒಂಚೂರು ಪುರುಸೊತ್ತಾದಾಗ ತಟ್ಟೆಯಲ್ಲೊಂದು ಮೋಸಂಬಿ ಇಟ್ಟುಕೊಂಡು ಬೀನ್ ಬೆಗ್ ಮೇಲೆ ಮೈಚೆಲ್ಲಿದೆ. ಒಂಥರಾ ಹಾಯೆನ್ನಿಸಿತು. ನಿತ್ಯದ ಸೆಲೆಯುಕ್ಕಿ ಹರಿವ ಬೆವರು ನಾಪತ್ತೆ.. ಅಂತೂ ಒಂಚೂರು ಚುಮು ಚುಮು ಚಳಿ ಕಾರವಾರಕ್ಕೆ ಕಾಲಿಟ್ಟಿದೆ… ಹೊಸದಾಗಿ ಕೊಂಡ ರಜಾಯಿಯನ್ನು ಇಂದು ಟ್ರೈ ಮಾಡೇಬಿಡೋದು ಅಂದ್ಕೊಳ್ಳುತ್ತ ಹೊಟ್ಟೆತುಂಬಾ ಉಂಡ ಭಾರಕ್ಕೆ ಹೆಬ್ಬಾವಿನಂತೆ ಮೈಮುರಿಯುತ್ತ ಕೂತಿದ್ದೆ.  ತೀರಾ ಅಪರೂಪಕ್ಕೆ ಗೆಳತಿಯೊಬ್ಬಳು ಕರೆಮಾಡಿದಳು… ಅರೇ ಏನು ವಿಚಿತ್ರ , ನಿನ್ಗೆ ನನ್ನ ನೆನಪು ಇದೆ ಅಂತಾಯ್ತು, ನಿಲ್ಲು ಸೂರ್ಯ ಯಾವ ದಿಕ್ಕಿಗೆ ಪಯಣ ಹೊರಟಿದ್ದಾನೆ? ನೋಡೇ ಬಿಡೋಣ ಅಲ್ವಾ? ಅವ್ನೆಲ್ಲಾದ್ರೂ ತಿರ್ಗಾಮುರ್ಗಾ ಹೊರ್ಟೇಬಿಟ್ನಾ ? ಅಂತ ಸುಮ್ಮನೆ ಅವಳ ಕಾಲೆಳೆದೆ.. ಏ ಸುಮ್ನಿರ್ತೀಯಾ ಕೋತಿ, ಅಥವಾ ನಾನು ಡಿಸ್ಕನೆಕ್ಟ್ ಮಾಡ್ಲಾ ಎಂದು ದಬಾಯಿಸಿದಳು… ಒಂಚೂರು ಗರಮ್ ಇದ್ದಾಳೆ ಅನ್ನಿಸ್ತು.  ಬಾಲ ಮುಡ್ಸಕೊಂಡು ಸುಮ್ಮನೆ ಕೂತು ಅವಳ ಮಾತನ್ನು ಆಲೈಸಿದೆ..
      ಸಾಯ್ಲೆ ನಂಗೆ ಎಲ್ಲಾದ್ರೂ ಹೋಗಿ ಜೀವ ತೆಕ್ಕೊಂಡುಬಿಡೋಣ ಅಂತ ಅನ್ನಿಸ್ತದೆ.. ಇಲ್ಲದಿದ್ರೆ ಎಲ್ಲಾ ಬಿಟ್ಟು ದೇಸಾಂತ್ರ(ಊರುಬಿಟ್ಟು) ಹೋಗ್ಬಿಡ್ತೇನೆ ಅಂದ್ಲು…. “ಅಂತದ್ದೇನಾಯ್ತೇ ನಿಂಗೆ? ಉಂಡು ತಿಂದು ಹಾಯಾಗಿದ್ದೋಳು ನೀನು, ದುಡ್ಡು ದುಗ್ಗಾಣಿ ಯಾವುದಕ್ಕೂ ಕೊರತೆ ಇಲ್ಲದವಳು, ಅವಾಕ್ಕಾಗಿ ಕೇಳಿದೆ.. “ಏನಿಲ್ವೆ. ದಿನಕ್ಕೊಂದು ರಾಮಾಯಣ ಅಂದ್ಲು.. ಇವತ್ತಿಂದು ಹೇಳು ಅಂದೆ..  “ಒಂಚೂರು ಅಡ್ಗೆ ಜಾಸ್ತಿ ಆಗೋಯ್ತು. ಅದ್ಕೇನೇ ಕಿರ್ಕಿರಿ. ಇಷ್ಟು ವರ್ಷದಿಂದ ಅಡ್ಗೆ ಮಾಡ್ತೀಯಾ ಇಬ್ಬರಿಗೆ ಎಷ್ಟು ಬೇಕು ಗೊತ್ತಾಗೋದಿಲ್ವಾ? ಅಂತ ಶುರುವಾಯ್ತು. ಇಷ್ಟು ವರ್ಷದಿಂದ ಊಟ ಮಾಡ್ತಾ ಇರೋ ಈ ಪ್ರಾಣಿಗಳಿಗೆ ಅನ್ನ ಬಡಿಸುವ ಸೌಂಟು ಯಾವ್ದು ಸಾರಿನ ಹುಟ್ಟು ಯಾವ್ದು ಅಂತ ಇನ್ನೂ ಗೊತ್ತಿಲ್ಲ.. ಒಂದಿನ ಮನೇಲಿ ಇಲ್ಲದಿದ್ರೆ ಅನ್ನಕ್ಕೆ ಸಾರಿನ ಹುಟ್ಟು ಸಾರಿಗೆ ಅನ್ನದ ಸೌಂಟು. ಎಲ್ಲ ಉಲ್ಟಾ ಪಲ್ಟಾ ಮಾಡುವ ಇವರಿಗೆ ಹೆಂಗಸರಿಗೆ ಕಾನೂನು ಮಾಡುವದು ಮಾತ್ರ ಗೊತ್ತು.. ಸಾಯ್ಲಿ ಈ ಬದ್ಕು…ಅಂದ್ಲು..”  ಅಯ್ಯೋ ದೇವ್ರೆ.. ಇದೇನೆ ಹೊಸ ರೀತಿ ಅಂದೆ.. “ಸಂಸಾರದಲ್ಲಿ ಅದೆಲ್ಲ ಒಂದಷ್ಟು ಮಾಮೂಲಿ ಕಣೇ.. ನೀ ನೋಡಿದ್ರೆ ಇಷ್ಟು ಸಿಕ್ರೆ ಸಾಕು, ಅದೇ ಕಡ್ಡೀನಾ ಗುಡ್ಡ ಮಾಡಿ ಬರೀತೀಯಲ್ಲೆ..” ಅಂತ ಹಂಗಿಸ್ದವ್ಳು ಇವ್ಳೇನಾ…? ನನ್ನೊಳಗೆ ಅಚ್ಚರಿ. “ಹೊಸ್ದಲ್ಲ ಏನಲ್ಲ, ಯಾವಾಗ್ಲೂ ಇದೇ ಹಾಡು…ಬೆನ್ನು ಹಿಂದೆ ಪರ್ವತ ನಡ್ದು ಹೋದ್ರೂ ಗೊತ್ತಾಗೋದಿಲ್ಲ. ಕಣ್ಣೆದ್ರು ಇರುವೆನೂ ಹರೀಬಾರ್ದು. ನಾವು ಹೆಂಗಸ್ರು ಸತ್ಯ ಎಲ್ಲಿ ಹೇಳ್ತೇವೆ? ನಮ್ಗೆ ಪ್ರಪಂಚದ ಎದ್ರು ನಾವು ತುಂಬಾ ಸುಖಿಗಳು ಎಂದು ತೋರಿಸ್ಕೊಳ್ಳೋ ಹುಕ್ಕಿ… ಹಾಗಾಗಿ ಈ ಗಂಡಸ್ರು ಪುರುಷೋತ್ತಮರೆಂದು ಪೋಸು ಕೊಡ್ತಾ ಬದುಕ್ತಾರೆ …. ಒಂಚೂರು ಅಡ್ಗೆ  ಉಳಿದಿದ್ದಕ್ಕೆ ಇಷ್ಟೊಂದು ರಾಮಾಯಣ ಮಾಡೋ ಗಂಡಂದಿರನ್ನ ಒಂದಿನ ಅಡ್ಗೆ ಮನೇಲಿ ಬಿಟ್ಟು ನೋಡ್ಬೇಕು ಇದು ಮನೆಯಾ, ರವಿವಾರದ ಸಂತೆ ಮಾರ್ಕೆಟ್ಟಾ? ಅಂತ ಎದೆ ಧಸಕ್ಕೆನ್ನಿಸ್ತದೆ” ಅಂದ್ಲು..
      ಪರ್ವಾಗಿಲ್ಲವೇ ಈ ನನ್ನ ಏಜಿನ ಹೆಂಗಸರು ಒಂದಷ್ಟು ಒಂಚೂರು ಮೈ ಚಳಿ ಬಿಟ್ಟು ಎದೆಯಲ್ಲಿದ್ದುದನ್ನು ಹೊರಹಾಕಿ ಹಗುರಾಗ್ತಿದ್ದಾರೆ ಅನ್ನಿಸಿದಾಗ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದೇನೋ ತಾನಾಗಿ ಬಂದು ಬೊಗಸೆಗೆ ಬಿದ್ದ ಖುಷಿ. ಮುಸ್ಸಂಜೆ ಮತ್ತೆ ದಟ್ಟವಾದ ಚಳಿಯಲ್ಲಿ ಗಟ್ಟಿಹಾಲಿನ ಫಿಲ್ಟರ್ ಕೊಫಿ ಕಪ್ ಹಿಡಿದು ನಡುಮನೆಯ ಉಯ್ಯಾಲೆಯಲ್ಲಿ ಕೂತು ತೂಗಿಕೊಳ್ಳುತ್ತಾ ಚಿಂತನೆಗೆ ಬಿದ್ದೆ….. ರಾತ್ರಿ ಊಟ ಮಾಡುವಾಗ “ನಾಳೆ ಹೆಸ್ರುಕಾಳು ಮೊಳ್ಕೆ ಪಲ್ಯ ಮಾಡು ದೋಸೆಗೆ ಆಯ್ತಾ” ಎನ್ನುವ ಯಜಮಾನರಿಗೆ ಹೆಸರು ಕಾಳು ಮೊಳಕೆ ಕಟ್ಟಲು ಇಡೀ ಒಂದು ಹಗಲು ನೆನಸಿಟ್ಟು, ರಾತ್ರೆ ನೀರು ಬಸಿದು ಬಟ್ಟೆ ಕಟ್ಟಿಡಬೇಕು. ದಿಢೀರನೆ ಮಾಡೋ ಅಡ್ಗೆ ಅಲ್ಲ. ನಾಳೆ ಮೊಳಕೆ ಕಾಳನ ಪಲ್ಯ ಬೇಕಾದ್ರೆ ನಿನ್ನೆನೇ ಹೇಳ್ಬೇಕು  ಎಂಬ ಅರಿವನ್ನು ನೂರು ಬಾರಿಗೆ ಎರೆದರೂ ನೂರಾ ಒಂದನೆಯ ಬಾರಿಯೂ ಅದೇ ಹಾಡು ಎಂಬುದು ನೆನಪಾಗಿ ಬುಸುಗುಟ್ಟುವಂತಾಯ್ತು….


Leave a Reply

Back To Top