ʼಯಾರು ಹೊಣೆ ?!!ʼ ಸಣ್ಣ ಕಥೆ, ಜಯಲಕ್ಷ್ಮಿ ಕೆ

ಮೈ ಕೊರೆವ ಚಳಿ ಇರಲಿ, ಎಡೆಬಿಡದೆ ಸುರಿವ ಮಳೆ ಇರಲಿ, ದೇವಕಿ ಮಾತ್ರ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರ್. ಕೆಲಸವೋ ಅದೆಷ್ಟು ಅಚ್ಚುಕಟ್ಟು! ಧಣಿಗಳ ಕಣ್ಗಾವಲಿರಲಿ, ಇಲ್ಲದಿರಲಿ, ಆಕೆ ನಿಯತ್ತು ಮೀರುವವಳಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅಯ್ಯಪ್ಪನ ಮನೆಯ ಕೆಲಸಕ್ಕೆ ಆಕೆ ಬರುತ್ತಿದ್ದರೂ ಮನೆಯೊಡತಿ ತಂಗಮ್ಮಳನ್ನು ಕೇಳದೆ ಒಂದು ಕಡ್ದಿ ಕೂಡಾ ಮುಟ್ಟಿದವಳಲ್ಲ. ಎಣ್ಣೆ ಹಾಕಿ ಬಾಚಿದ ಕೂದಲನ್ನು ಒಟ್ಟು ಸೇರಿಸಿ ತುರುಬು ಕಟ್ಟಿ ಅದಕ್ಕೊಂದು ಹೂವನ್ನು ಮುಡಿದು ಬರುತ್ತಿದ್ದ ದೇವಕಿ ನೋಡಲು ಅಂದವಾಗಿ ಇರದಿದ್ದರೂ ನಡೆ ನುಡಿ ಮಾತ್ರ ಬಹಳ ಚಂದ. ಅದಕ್ಕೇ ಒಡತಿ ತಂಗಮ್ಮನಿಗೆ ದೇವಕಿ ಎಂದರೆ ಅಚ್ಚುಮೆಚ್ಚು.

ಈ ದೇವಕಿ ತಂಗಮ್ಮನಿಗೆ ಸಿಕ್ಕಿದ್ದೇ ಒಂದು ಆಕಸ್ಮಿಕ. ಅಷ್ಟೇ ಅಲ್ಲ ಭಾಗ್ಯ ಅನ್ನಿ.  ಅಸಾಧ್ಯ ಬೆನ್ನು ನೋವಿನಿಂದ ಬಳಲುತ್ತಿದ್ದ ತಂಗಮ್ಮ ಒಬ್ಬಳು ನಂಬಿಗಸ್ಥ ಕೆಲಸದಾಕೆಯನ್ನು ಹುಡುಕುತ್ತಿದ್ದ ಸಂದರ್ಭ. ಪತಿ ಅಯ್ಯಪ್ಪನಿಗೆ ತೋಟ, ಅಂಗಡಿ, ಹೀಗೆ ಬಿಡುವಿಲ್ಲದ ಕೆಲಸ. ಅಪರೂಪಕ್ಕೆ  ಮನೆಗೆ ಬಂದಿದ್ದ ನಾದಿನಿ ಚಂಪಾಳನ್ನು ಬಸ್ಸು ಹತ್ತಿಸಿ ಕಳುಹಿಸಬೇಕೆಂದು ಮನೆಯ ಹತ್ತಿರದಲ್ಲೇ ಇದ್ದ ಮುಖ್ಯ ರಸ್ತೆಗೆ ಬಂದ ತಂಗಮ್ಮನಿಗೆ ಅದೇ ಬಸ್ಸಿನಿಂದ ಇಳಿದ ಸುಮಾರು ಮೂವತ್ತೈದು ನಲವತ್ತರ ಆಸುಪಾಸಿನ ವಯೋಮಾನದ ಹೆಂಗಸೊಬ್ಬಳು ಕಣ್ಣಿಗೆ ಬಿದ್ದಳು. ಕಾಣಲು ತುಸು ಹೆಚ್ಚೇ ಕಂದುಗಪ್ಪು ಮತ್ತು ತೆಳ್ಳಗೆ ಸಣಕಲಾಗಿದ್ದಳು.  ತೀರಾ ದಣಿದವಳಂತೆ ಕಾಣುತ್ತಿದ್ದ ಆಕೆ  ಮಂಕಾಗಿದ್ದಳು.  ಬಸ್ಸಿನಿಂದ ಇಳಿದು ಸುತ್ತಲೂ ವೀಕ್ಷಿಸಿ ಎತ್ತ ಹೋಗಬೇಕು ಎಂದು ಅರಿಯದೇ ತಬ್ಬಿಬ್ಬಾದವಳಂತೆ ಇದ್ದ ಆಕೆಯನ್ನು ತಂಗಮ್ಮನಿಗೆ ಮಾತನಾಡಿಸ ಬೇಕೆನಿಸಿತು.
” ನಿನ್ನ ಹೆಸರೇನಮ್ಮಾ “?
” ದೇವಕಿ “
“ಯಾವ ಊರಿನವಳು? “
” …… ದೂರದ ಊರು “
ಎಲ್ಲಿಗೆ ಹೋಗಬೇಕು?
ಅದೂ …..ಗೊತ್ತಿಲ್ಲ !
” ಈ ಊರಿಗೆ ಏಕೆ ಬಂದೆ “?
” ಕೆಲಸ ಹುಡುಕಿಕೊಂಡು “
” ನಿನ್ನ ಮನೆಯವರೆಲ್ಲ ಎಲ್ಲಿದ್ದಾರೆ? “
” ನನಗೆ…… ಯಾರೂ ಇಲ್ಲ “
ಕೇಳಿದ ಪ್ರಶ್ನೆಗಳಿಗೆಲ್ಲ ಚುಟುಕಾಗಿ ಮತ್ತು ಅಷ್ಟೇ ನಿರ್ಲಿಪ್ತವಾಗಿ ಉತ್ತರಿಸುತ್ತಿದ್ದವಳ ಅಸಹಾಯಕ ಸ್ಥಿತಿಯನ್ನು ಊಹಿಸಿ ತಂಗಮ್ಮ ಸಣ್ಣದಾದ ಆಸೆಯಿಂದಲೇ,
“ನಮ್ಮ ಮನೆಗೆ, ಮನೆ ಕೆಲಸಕ್ಕೆ ಬರ್ತೀಯಾ? ” ಅಂತ ಕೇಳಿದಳು.
” ಹಾ ಬರ್ತೇನೆ ” ಅಂದವಳು ತಂಗಮ್ಮನನ್ನು ಮೌನವಾಗಿಯೇ ಹಿಂಬಾಲಿಸಿದ್ದಳು.
ನೀರಿನಲ್ಲಿ ಮುಳುಗುವವನಿಗೆ ಕಡ್ದಿ ಸಿಕ್ಕರೆ ಅದೇ ಆಸರೆ. ತಂಗಮ್ಮನಿಗೆ ಕೆಲಸದಾಕೆಯ ಅವಶ್ಯಕತೆ ಇತ್ತು. ಹುಟ್ಟಿದೂರು ಬಿಟ್ಟು ಬಂದ ದೇವಕಿಗೆ ಆಸರೆಯ ಕರಗಳು ಬೇಕಾಗಿದ್ದವು. ಕೈ ಚೀಲವೊಂದರಲ್ಲಿ ಒಂದೆರಡು ಬಟ್ಟೆಗಳನ್ನು ತುಂಬಿ ತಂದಿದ್ದ ದೇವಕಿ ತಂಗಮ್ಮನ ಹಿಂದೆ ಹೆಜ್ಜೆ ಹಾಕಿದಳು. ಅಂದಿನಿಂದ ಆಕೆಗೆ ಆ ಒಡತಿಯ ಮನೆಗೆಲಸ, ಅಲ್ಲಿಂದ ಅನತಿ ದೂರದಲ್ಲಿದ್ದ ಪುಟ್ಟ ಗುಡಿಸಲೇ ಆಕೆಯ ನಿವಾಸ.

ಕೈ ಬಾಯಿ ಸ್ವಚ್ಛವಾಗಿದ್ದರೆ ಎಲ್ಲಿ ಬೇಕಾದರೂ ಬದುಕು ಕಟ್ಟಿಕೊಳ್ಳಬಹುದು ಎಂಬ ವಾಕ್ಯ ದೇವಕಿಗಾಗಿಯೇ ಹೇಳಿ ಬರೆಸಿದ ಮಾತೇನೋ ಎಂಬಂತೆ ಇತ್ತು ದೇವಕಿಯ ದಿನಚರಿ. ಅನಗತ್ಯ ಒಂದು ಮಾತನ್ನೂ ಆಡುವವಳಲ್ಲ. ಯಾರ ವಿಚಾರವನ್ನೂ ಕೇಳುವವಳಲ್ಲ. ಅವಳಿಗೆ ಸುಖ ದುಃಖಗಳೊಂದೂ ಇದ್ದಂತಿಲ್ಲ! ಊರಿಗೆ ಊರೇ ಹಬ್ಬ ಮಾಡುವಾಗಲೂ ಒಡತಿ ಕೊಟ್ಟ ಹೊಸ ಸೀರೆ ಉಟ್ಟವಳಲ್ಲ, ಆಕೆಗೆ ಯಾವುದೇ ಸಂಭ್ರಮವಿಲ್ಲ. ಅಮೇರಿಕಾದಲ್ಲಿದ್ದ ತಂಗಮ್ಮನ ಮಗಳು ಗಾಯನ ” ಅಮ್ಮಾ… ಊರು ಕೇರಿ ಗೊತ್ತಿಲ್ಲದ ಕೆಲಸದಾಕೆಯನ್ನು ಮನೆಗೆ ಸೇರಿಸಿಕೊಂಡಿದ್ದೀ… ಬಂಗಾರದೊಡವೆಗಳನ್ನೆಲ್ಲ ಲಾಕರ್ ನಲ್ಲಿ ಇರಿಸಿದ್ದೀ ತಾನೇ..? ಬೆಲೆ ಬಾಳುವ ವಸ್ತುಗಳಷ್ಟೇ ಅಲ್ಲ, ನೀನೂ ಜೋಪಾನ! ಏನೇನೋ ಅನಾಹುತಗಳು ಸುತ್ತ ಮುತ್ತ ನಡೆಯುತ್ತಿದೆ, ಗೊತ್ತಲ್ಲ? ಎಚ್ಚರ ವಹಿಸಮ್ಮಾ… “ಎಂದು ಹೇಳಿದಾಗಲೆಲ್ಲ ಹೌದೆನಿಸಿ ದೇವಕಿಯ ಮೇಲೆ  ಹದ್ದಿನ ಕಣ್ಣಿಡುತ್ತಿದ್ದಳು ತಂಗಮ್ಮ. ಆದರೆ, ದೇವಕಿಯ ನಡತೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣುತ್ತಿರಲಿಲ್ಲ.

ದೇವಕಿ ಮೌನ ಗೌರಿ. ಆದರೆ  ಆಕೆಯ ಪೂರ್ವಾಪರ ತಿಳಿದುಕೊಳ್ಳಬೇಕೆಂಬ ಕುತೂಹಲ, ಹಂಬಲ ತಂಗಮ್ಮನಿಗೆ. ಆದರೆ ದೇವಕಿ ಅದಕ್ಕೆ ಆಸ್ಪದವನ್ನೇ ನೀಡುತ್ತಿರಲಿಲ್ಲ. ಅದೊಂದು ದಿನ ತಂಗಮ್ಮ ಅಂಗಳದಲ್ಲಿ ಜಾರಿ ಬಿದ್ದ ಪರಿಣಾಮ ಆಕೆಯ ಬೆನ್ನು ನೋವು ಹೆಚ್ಚಾಯಿತು. ಹಗಲೂ ಇರುಳೂ ಆಕೆಯ ಜೊತೆಗೊಬ್ಬರು ಇರಲೇಬೇಕಾದ ಅನಿವಾರ್ಯತೆ ಉಂಟಾಯಿತು. ಪ್ರತಿ ದಿನ ಕೆಲಸ ಮುಗಿಸಿ ತನ್ನ ಗುಡಿಸಲಿಗೆ ಹೋಗುತ್ತಿದ್ದ ದೇವಕಿಯನ್ನು ತಂಗಮ್ಮ ತನ್ನ ಮನೆಯಲ್ಲಿಯೇ ಉಳಿಸಿಕೊಳ್ಳಬೇಕಾಯಿತು. ಅಂದು ಬಿತ್ತು, ತಂಗಮ್ಮನ ಕುತೂಹಲಕ್ಕೊಂದು ಅಂತಿಮ ತೆರೆ.
ಈ ಜಗತ್ತಿನಲ್ಲಿ ಎಷ್ಟೊಂದು ಜೀವರಾಶಿಗಳಿವೆ! ಅವುಗಳಲ್ಲಿ ಚರ್ಮದ ಬಣ್ಣಕ್ಕೆ, ಬಾಹ್ಯ ರೂಪಕ್ಕೆ ಮಿತಿ ಮೀರಿ ಬೆಲೆ ಕೊಡುವ ಏಕೈಕ ಜೀವರಾಶಿ ಎಂದರೆ ಅದು ಮನುಕುಲ. ಆಂತರ್ಯದ ಸೌಂದರ್ಯದ ಎದುರು ಬಾಹ್ಯ ಸೌಂದರ್ಯ ನಗಣ್ಯ ಎನ್ನುವ ಮಾತು ಆಡಂಬರಕೆ ಮಾತ್ರ ಬಳಕೆಯಲ್ಲಿದೆಯೇ ಹೊರತು ಪಾಲನೆಯಲ್ಲಿ ಇನಿತೂ ಇಲ್ಲ ಅನ್ನುವುದಕ್ಕೆ ಈ ದೇವಕಿಯಂತವರು ಜೀವಂತ ನಿದರ್ಶನ ಎನ್ನಬೇಕು.

ಗೀತಾ ಮತ್ತು ಮಣಿಕಾಂತ ದಂಪತಿಗಳಿಗೆ ಇಬ್ಬರು ಪುತ್ರಿಯರು. ದೇವಕಿ ಹಿರಿಯವಳು. ಯಾಕೋ ಸೃಷ್ಟಿಯಲ್ಲಿ ಬ್ರಹ್ಮನ ತಾತ್ಸಾರಕ್ಕೆ ಒಳಗಾದವಳಂತಿದ್ದಳು. ಕಿರಿಯವಳು ಜಾನಕಿ, ಬಹಳ ಚೆಲುವೆ. ಯಾವ ಜನುಮದ ಸುಕೃತದ ಫಲವೋ, ಅಕ್ಕನಿಗೆ ಕೊಡದೆ ಉಳಿಸಿಕೊಂಡಿದ್ದ ಸೌoದರ್ಯವನ್ನು ಸೇರಿಸಿ ಬ್ರಹ್ಮ ಈಕೆಗೆ ಧಾರೆ ಎರೆದಿದ್ದರಬೇಕು. ಹದಿನಾರರ ಹರಯದಲ್ಲಿ ಎಂತಹ ಹೆಣ್ಣುಮಕ್ಕಳಾದರೂ ಚಂದ ಕಾಣುತ್ತಾರೆ ಎನ್ನುವ ಮಾತಿದೆ. ಆದರೆ ದೇವಕಿಯ ವಿಚಾರಕ್ಕೆ ಬಂದರೆ ಈ ಮಾತೂ ಅರ್ಥಹೀನವಾಯಿತು. ಆಕೆಗೆ ವರ್ಷ ಇಪ್ಪತ್ತೈದು ದಾಟಿದರೂ ಯಾವುದೇ ಸಂಬಂಧ ಕೂಡಿ ಬರಲಿಲ್ಲ.ಆಕೆಯ ಬೆನ್ನ ಹಿಂದೆಯೇ ಸೌoದರ್ಯದ ಖನಿಯಾಗಿ ಬೆಳೆದು ನಿಂತ ಜಾನಕಿಗೆ ನಾ ಮುಂದು, ತಾ ಮುಂದು ಎಂಬಂತೆ ಸಂಬಂಧಗಳು ಬರತೊಡ ಗಿದವು. ಮೊದ ಮೊದಲು ” ಅಕ್ಕನಿಗೆ ಮದುವೆ ಮಾಡಿಸದೆ ತಂಗಿಯ ಮದುವೆ ಮಾಡುವುದಿಲ್ಲ ” ಎಂದು ಗೀತಾ ಮಣಿಕಂಠ ದಂಪತಿಗಳು ಹೇಳುತ್ತಿದ್ದರಾದರೂ ಕಾಲ ಕ್ರಮೇಣ ಅವರ ನಿಲುವು ಬದಲಾಯಿತು. ಯಾವ ವರನೂ ದೇವಕಿಯನ್ನು ಮದುವೆಯಾಗಲು ಒಪ್ಪದೇ ಹೋದಾಗ ಅಸಹಾಯಕತೆ ಅವರನ್ನು ಕಾಡತೊಡಗಿತು.

ಕೊನೆಗೊಂದು ದಿನ ದೇವಕಿಗೆ ಕೇಳುವಂತೆ ” ರೀ.. ಈ ಬಾರಿ ಜಾನಕಿಗೆ ಬಂದ ವರ ಬಹಳ ಸ್ಥಿತಿವಂತ, ವಿದ್ಯಾವಂತ, ಈತನನ್ನೂ ಬಿಟ್ಟು ಬಿಡುವುದೇ? ಇವನನ್ನು ಬಿಟ್ಟರೆ ಇನ್ನು ಜಾನಕಿಗೆ ಇಂತಹ ಸಂಬಂಧ ಇನ್ನು ಸಿಗಲಿಕ್ಕಿಲ್ಲ… “. ಅಮ್ಮ ಅಪ್ಪನಿಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದ ದೇವಕಿ ತಂಗಿ ಜಾನಕಿಯ ಮದುವೆಗೆ ತನ್ನ ಒಪ್ಪಿಗೆ ಕೊಟ್ಟೇ ಬಿಟ್ಟಳು. ಜಾನಕಿಯ ಮದುವೆಯನ್ನು ಅಪ್ಪ -ಅಮ್ಮ ಬಹಳ ಆಡಂಭರದಿಂದಲೇ ಮಾಡಿ ಮುಗಿಸಿದರು. ಅದ್ದೂರಿಯ ಮದುವೆ ಮಾಡಿ ಮುಗಿಸಿದ ಸಾರ್ಥಕತೆಯ ಆನಂದದಲ್ಲಿ ಅಪ್ಪ ಅಮ್ಮ,.. ಸುಂದರ ಬಾಳಿಗೆ ಹೆಜ್ಜೆ ಇಟ್ಟ ಖುಷಿಯಲ್ಲಿ ತಂಗಿ…ಮದುವೆ ಆಗದೆ ಉಳಿದ ಅಕ್ಕನ ಬಗ್ಗೆ ನಾನಾ ರೀತಿಯ ಮಾತುಗಳನ್ನಾಡುವ ಜನರು. ಇವರಾರಿಗೂ ಕೋಣೆಯಲ್ಲಿ ಭಿಕ್ಕುತ್ತಿದ್ದ ದೇವಕಿಯ ರೋದನೆ ಕೇಳಿಸಲೇ ಇಲ್ಲ.. ಕೇಳಿಸಲು ಸಾಧ್ಯವೂ ಇಲ್ಲ. ಆದರೆ ಕಾಲಕ್ರಮೇಣ ಹಿರಿ ಮಗಳಿಗೂ ಒಂದು ಮನಸ್ಸಿದೆ, ಅಲ್ಲೊಂದು ಅಳಲಿದೆ ಎನ್ನುವ ಸೂಕ್ಷ್ಮ ಅಪ್ಪ ಅಮ್ಮ ನವರಿಂದಲೂ ಮರೆಯಾದದ್ದು ವಿಪರ್ಯಾಸ!  ” ಪಾಪ! ಜಾನಕಿ ಗಂಡನ ಮನೆಯಲ್ಲಿ ಹೊಂದಿಕೊಂಡಳೋ.. ಇಲ್ಲವೋ.. ಹೇಗಿದ್ದಾಳೋ ಎಂದು ದಡ ಸೇರಿದ ಮಗಳ ಬಗ್ಗೆ ಕಾಳಜಿಯ ಮಾತುಗಳನ್ನು ಆಡುತ್ತಾ ಇರುವ ಗೀತಾ ಮಣಿಕಾಂತ ದಂಪತಿಗಳು ತಮ್ಮ ಮನೆಯಲ್ಲೇ ಉಳಿದು ಹೋದ ಕರುಳ ಕುಡಿ ದೇವಕಿಯ ಮನದ ಭಾವನೆಗಳನ್ನು ಅರ್ಥೈಸಿಕೊಳ್ಳಲೇ ಇಲ್ಲ!!
ಭೂಮಿಗೆ ಬಿದ್ದ ಘಳಿಗೆ ಚೆನ್ನಾಗಿದ್ದರೆ ಅದೃಷ್ಟ ತಾನಾಗಿ ಒಲಿದು ಬರುತ್ತದೆಯಂತೆ.. ಜಾನಕಿಗೆ ಒಲಿದಂತೆ! ದೇವಕಿಗೆ ಅದೃಷ್ಟ ಒಲಿಯಲಿಲ್ಲ. ಹೆತ್ತವರ ಪ್ರೀತಿ ಗಟ್ಟಿಯಾಗಿದ್ದರೆ ಎಂತಹ ಕಠಿಣ ಪರಿಸ್ಥಿತಿಯನ್ನು ಕೂಡಾ ನಿಭಾಯಿಸಬಹುದಂತೆ. ಆದರೆ ದೇವಕಿಗೆ ಆ ಭಾಗ್ಯ ಕೂಡಾ ದೊರೆಯಲಿಲ್ಲ.
ಅದೊಂದು ದಿನ ಜಾನಕಿಯ ಗಂಡ ಅರ್ಥಾತ್ ಮಣಿಕಾಂತನ ಅಳಿಯನ ಆಗಮನವಾಯಿತು. ಆತ ತನ್ನೊಂದಿಗೆ ಒಂದು ಶುಭ ವರ್ತಮಾನವನ್ನು ತಂದಿದ್ದ. ಅದೇನೆಂದರೆ ಜಾನಕಿ ಆತನ ವಂಶದ ಕುಡಿಯನ್ನು ಹೊತ್ತು ನಿಂತಿದ್ದಾಳೆ. ಆಕೆಯನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದು ಅವಳಿಗೆ ಫುಲ್ಲ್ ಬೆಡ್ ರೆಸ್ಟ್ ನ ಅವಶ್ಯಕತೆ ಇದೆ ಅಂತ. ಅವಳನ್ನು ನೋಡಿಕೊಳ್ಳಲು ಯಾರನ್ನು ಆಯೋಜಿಸುವುದು? ಗೀತಾ ಮಣಿಕಾಂತ ದಂಪತಿಗಳಿಗೆ ಚಿಂತೆ ಶುರುವಾಯಿತು. ಬಹು ಸಂಬಳದ ಅಳಿಯ ನೂತನ್ ಗೆ ಬಿಡುವಿಲ್ಲದ ಕೆಲಸ. ಜಾನಕಿಯ ಅತ್ತೆಯೋ ಮಗಳ ಮನೆಯಲ್ಲಿ ಪುಟ್ಟ ಮೊಮ್ಮಗುವಿನ ಚಾಕರಿಯಲ್ಲಿ ಉಳಿದುಬಿಟ್ಟಿದ್ದಾರೆ. ದೂರದ ಚೆನ್ನೈನಲ್ಲಿರುವ ಜಾನಕಿಯ ಬಗ್ಗೆ ಎಚ್ಚರ ವಹಿಸುವವರು ಯಾರು? ಬಹಳಷ್ಟು ಮಾತುಕತೆ ನಡೆದು ಕೊನೆಗೆ ಆ ಜವಾಬ್ದಾರಿ ದೇವಕಿಯ ಹೆಗಲ ಮೇಲೆ ಬಿತ್ತು. ಆಕೆ ಮರು ಮಾತಿಲ್ಲದೆ ತಂಗಿಯ ಮನೆ ಚೆನ್ನೈ ಗೆ ಬರಬೇಕಾಯಿತು.
ಜಾನಕಿ, ನೂತನ್ ಇಬ್ಬರೂ “ಅಕ್ಕಾ… ಅಕ್ಕಾ… ಎಂದು ಕರೆಯುತ್ತಾ ದೇವಕಿಯನ್ನು ಪ್ರೀತಿ ಕಾಳಜಿಯಿಂದಲೇ ನೋಡಿಕೊಳ್ಳುತ್ತಿರುವುದರಿಂದ ದೇವಕಿಗೆ ಆ ಮನೆಯಲ್ಲಿ ಹೊಂದಿಕೊಳ್ಳಲು ಕಷ್ಟವೆನಿಸಲಿಲ್ಲ. ತನ್ನನ್ನು ನೋಡಿಕೊಳ್ಳಲು ಬಂದ ಅಕ್ಕನ ಮೇಲೆ ಜಾನಕಿಗೆ ಅಪಾರ ಪ್ರೀತಿ ಗೌರವ ಇತ್ತು.
ಹೀಗಿರಲು ಅದೊಂದು ದಿನ ದೇವಕಿಯ ಬದುಕಿನಲ್ಲಿ ಊಹಿಸದ ಘಟನೆಯೊಂದು ನಡೆದು ಹೋಯಿತು. ದೇವಕಿಗೆ ಆ ಮನೆಯ ಮಹಡಿಯಲ್ಲಿದ್ದ ಒಂದು ಕೋಣೆಯನ್ನು ಕೊಟ್ಟಿದ್ದರು. ಅಂದು ರಾತ್ರಿ ಪಾರ್ಟಿಯಲ್ಲಿ ಕುಡಿದು ತಡವಾಗಿ ಮನೆಗೆ ಬಂದಿದ್ದ ನೂತನ್.  ಕೆಳಗಿನ ಕೋಣೆಯಲ್ಲಿ  ಜಾನಕಿ ಅದಾಗಲೇ ನಿದ್ರೆಗೆ ಜಾರಿದ್ದಳು.  ಎಂದಿನಂತೆ ರಾತ್ರಿ ಮನೆ ಕೆಲಸಗಳನ್ನೆಲ್ಲ ಮುಗಿಸಿ ಕಾಲು ಚಾಚಿದರೆ ಅದೇ ಸ್ವರ್ಗ ಎಂದುಕೊಳ್ಳುತ್ತಾ ತನ್ನ ಕೊಠಡಿಗೆ ಬಂದ ದೇವಕಿ ಲೈಟ್ ಆರಿಸಿ ಇನ್ನೇನು ಮಲಗಬೇಕು ಎನ್ನುವಷ್ಟರಲ್ಲಿ ಮೆಲುದನಿಯಲ್ಲಿ ‘ ಅಕ್ಕಾ ‘ ಎಂದ ದನಿ ಕೇಳಿಸಿತು. ತಿರುಗಿ ನೋಡಿದಳು ನೂತನ್ !. ಎವೆ ಮುಚ್ಚಿ ತೆರೆಯುವುದರೊಳಗೆ ಒಳಗೆ ಬಂದು ಬಾಗಿಲನ್ನು ಭದ್ರಪಡಿಸಿ ಲೈಟನ್ನು ಆರಿಸಿದ್ದ. ಯೋಚನೆಗೆ ಎಡೆ ಕೊಡದಂತೆ ದೇವಕಿಯನ್ನು ತಬ್ಬಿ ಹಿಡಿದು ಮಂಚದ ಮೇಲೊರಗಿಸಿ ಅನಿರೀಕ್ಷಿತವಾಗಿ ದೇವಕಿಯ ಮೇಲೆರಗಿದ್ದ!  ಆಕೆಯದ್ದೂ ಹರಯದ  ವಯಸ್ಸು. ಜೊತೆಗೆ ತನ್ನ ಬದುಕಿನಲ್ಲಿ ಏನೋ ಕೊರತೆಯಾಗಿದೆ ಎಂದು ಕೂಗಿ ಹೇಳುವ ವಯಸ್ಸು… ಇವೆರಡರ ಸಂಗಮದಿಂದ ಆ ಸಮಯ ದೇವಕಿ ಕೂಡಾ ತನ್ನ ಸಂಯಮವನ್ನು ಕಳೆದುಕೊಂಡಿದ್ದಳು. ನೂತನ್ ಪತ್ನಿ ಜಾನಕಿ ಗರ್ಭಿಣಿಯಾದ ಮೇಲೆ ವೈದ್ಯರು ಹೇಳಿದ ಪ್ರಕಾರ ಮಿಲನಕ್ರಿಯೆಗೆ ಕಡ್ಡಾಯ ವಿರಾಮ ಪಡೆದುಕೊಳ್ಳಬೇಕಾಗಿತ್ತು.  ಆರು ತಿಂಗಳುಗಳ ಕಾಲ ತಡೆಹಿಡಿದ ಉತ್ಕಟ ಹಸಿವಿನಿಂದ ಪಾರಾಗಲೆಂಬಂತೆ ನೂತನ್ ಆ ರಾತ್ರಿಯ ಭೋಜನಕ್ಕೆ ರಂಗಿನ ತಯಾರಿ ನಡೆಸಿಯೇ ಬಂದವನಂತೆ ದೇವಕಿಯ ದೇಹ ಸಾಂಗತ್ಯದಲ್ಲಿ ಕರಗಿ ತೃಪ್ತನಾಗಿದ್ದ.    ತನ್ನೊಡನೆ ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ನೂತನ್ ನ ಬಿಗಿಯಾದ ಬಿಸಿ ಅಪ್ಪುಗೆಯಲ್ಲಿ ಕರಗಿ ಹೋದ ದೇವಕಿಗೆ ಚೀರಲಾಗಲಿಲ್ಲ… ಕೊಸರಾಡಲಾಗಲಿಲ್ಲ. ಜಾನಕಿಗೆ ಎಚ್ಚರವಾಗಿಬಿಟ್ಟರೆ! ತನ್ನ ದೇಹದ ಮೇಲೆಲ್ಲಾ ಓಡಾಡುವ ಕೈಗಳನ್ನು ದೇವಕಿಗೆ ದೂರ ಸರಿಸಲು ಸಾಧ್ಯವಾಗಲಿಲ್ಲ. ಹಸಿ ಹರವಿನ ಬಿಸಿ ಮೈ ಎಂದೂ ಕಂಡರಿಯದ  ಸುಖವನ್ನು ಆ ರಾತ್ರಿ ಅನುಭವಿಸಿತ್ತು..
ಆಗ ಸುಖ ಇತ್ತು, ಆದರೇನು ? ಅದು ಆ ಕ್ಷಣಕ್ಕೆ ಅಷ್ಟೇ.!  ಅಂದು ರಾತ್ರಿ ಕದ್ದುಮುಚ್ಚಿ ಸದ್ದಿಲ್ಲದೇ ಮುಗಿದ ಕ್ರಿಯೆ ಕ್ರಮೇಣ ಆಕೆಯ ದೇಹದೊಳಗೆ ಸದ್ದು ಆರಂಭಿಸಿತ್ತು! ನೂತನ್ ಜೊತೆಗೆ ಆಕೆ ಬೆಳೆಸಿಕೊಂಡಿದ್ದ ಸಲಿಗೆ ಸಲ್ಲಾಪಗಳು ಈ ಹಂತ ತಲುಪಬಹುದು ಎಂಬ ಕಲ್ಪನೆ ಕೂಡಾ ಆಕೆಗೆ ಇದ್ದಿರಲಿಲ್ಲ. ದೇವಕಿಯ ಬದುಕಿನ ಲಯ ತಪ್ಪಿತ್ತು. ಜಾನಕಿ ತನ್ನ ವಂಶದ ಕುಡಿಯ ಆಗಮನದ ದಿನಗಳನ್ನು ಎಣಿಸುತ್ತಿದ್ದಂತೆ ಇತ್ತ ದೇವಕಿಯ ಮುಟ್ಟಿನ ಸರದಿ ನಿಂತು ಹೋಗಿತ್ತು.  ತನ್ನ ದೇಹದ ಜೊತೆಗೆ ಮನಸು ಕೂಡಾ ಕುರೂಪಗೊಂಡಂತಹ ತಪ್ಪಿತಸ್ಥ ಭಾವ ತುಮುಲದಿಂದಾಗಿ  ಮುಂದಿನ ದಾರಿ ತೋಚದಾಗಿತ್ತು. ಮುಳ್ಳು ಬಾಳೆಯ ಮೇಲೆ ಬಿದ್ದರೂ, ಬಾಳೆಯೇ ಮುಳ್ಳಿನ ಮೇಲೆ ಬಿದ್ದರೂ ಹರಿದು ಹೋಗುವುದು ಬಾಳೆಯೇ ! ಎಲ್ಲೋ ಓದಿದ್ದ ನುಡಿ ಸಾಲು ದೇವಕಿಗೆ ಈಗ ಸತ್ಯ ಎನಿಸಿತು.   ದಾಕ್ಷಿಣ್ಯಕ್ಕೆ ಬಸುರಿಯಾದವಳಿಗೆ ಹೆರಲು ಜಾಗವೆಲ್ಲಿ? ತಮ್ಮನಂತೆ ಕಾಣಬೇಕಾಗಿದ್ದ ತಂಗಿಯ ಗಂಡನಿಂದಲೇ ಹೊಟ್ಟೆ ತುಂಬಿಸಿಕೊಂಡು ಬಂದ ದೇವಕಿಗೆ ಅಪ್ಪ, ಅಮ್ಮನಿಂದ ಯಾವ ರೀತಿಯ ಸ್ವಾಗತ ದೊರಕೀತು? ತನ್ನ ಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣ ನೂತನ್ ಮಿಲನದ ಫಲ ಶ್ರುತಿ ಎನ್ನುವ ಅಂಶ ತಂಗಿಗೆ ತಿಳಿದರೆ ತುಂಬು ಗರ್ಭಿಣಿಯಾದ ಆಕೆ ಈ ವಿಚಾರವನ್ನು ಹೇಗೆ ತಾನೇ ಸಹಿಸಿಯಾಳು?
ಕಾಮತುರಂ ನ ಲಜ್ಜಾ ನ ಭಯಂ !! ಈ ಮಾತಿನ ಮರ್ಮ ನೂತನ್ ಗೆ ಅನ್ವಯವೋ, ಇಲ್ಲ ದೇವಕಿಗೋ ! ಒಟ್ಟಿನಲ್ಲಿ ಎರಡು ದೇಹ ಕಾಮನ ಕರೆಗೆ ಓಗೊಟ್ಟು ಈಗ ಆಕೆಗೆ ಮಾತ್ರ ಸಂಕಟಕ್ಕೆ ದಾರಿ ಮಾಡಿತ್ತು. ಅದೊಂದು ಘಟನೆ ನಡೆಯದೇ ಇದ್ದಿದ್ದರೇ..!!!  ಚಡಪಡಿಸಿದಳು ದೇವಕಿ. ಎಷ್ಟೇ ಯೋಚನೆ ಮಾಡಿದರೂ ಮುಂದಿನ ದಾರಿ ಸ್ಪಷ್ಟವಾಗಲಿಲ್ಲ.  ಆದರೆ ತಂಗಿ ಮನೆಯಲ್ಲಿ ಇನ್ನು ನಿಲ್ಲಬಾರದೆಂದು ಆ ರಾತ್ರಿಯೇ ನಿರ್ಧರಿಸಿದ್ದಳು.
ಕೊನೆಗೂ ದೇವಕಿ ಒಂದು ನಿರ್ಧಾರಕ್ಕೆ ಬಂದಳು. ಅದೆಲ್ಲಿತ್ತೋ ಹುಚ್ಚು ಧೈರ್ಯ! ಚೀಲವೊಂದಕ್ಕೆ ಬಟ್ಟೆಗಳನ್ನು ತುರುಕಿಕೊಂಡವಳೇ ರಾತ್ರೋ ರಾತ್ರಿ ಮನೆ ತೊರೆದು ಬಸ್ ಹತ್ತಿದ್ದಳು. ಎಲ್ಲಿಗೆ? ಎತ್ತ? ಗೊತ್ತುಗುರಿಯಿಲ್ಲದೆ ಎಲ್ಲೋ ಇಳಿದ ದೇವಕಿಗೆ ತಂಗಮ್ಮನ ಆಶ್ರಯ ದೊರೆತ ಒಂದೇ ತಿಂಗಳಿಗೆ ಗರ್ಭಪಾತವೂ ಆಗಿ ಹೋಯ್ತು! ಬಹುದೊಡ್ಡ ಭಾರವೊಂದು ಕಳೆದಂತಾದರೂ  ಭಾವನೆಗಳೆಲ್ಲ ಬತ್ತಿ ಹೋಗಿ, ಮಾತೆಲ್ಲ ಮೌನಕ್ಕೆ ಶರಣಾದ ದಿನಗಳವು.
ಇವೆಲ್ಲವನ್ನೂ ಹೇಳಿ ಮುಗಿಸಿದ ದೇವಕಿ ನಿಟ್ಟುಸಿರುಬಿಟ್ಟು ಮತ್ತೆ ಮೌನಕ್ಕೆ ಶರಣಾದಳು. ತಂಗಮ್ಮನ ಮನದೊಳಗಿನ ನಾನಾ ಪ್ರಶ್ನೆಗಳಿಗೆ ಉತ್ತರಗಳಾಗಿ ದೇವಕಿಯ ಕತೆಗಳೆಲ್ಲ ಹೊರ ಹೊಮ್ಮಿದ್ದವು. ಆದರೆ ಈಗ ತಂಗಮ್ಮನಲ್ಲಿ ಮತ್ತೆ ಹತ್ತು ಹಲವು ಪ್ರಶ್ನೆಗಳು ತಾಂಡವವಾಡತೊಡಗಿದವು.  ಸ್ವಾರ್ಥಿ ಪುರುಷನೊಬ್ಬನ ಕಾಮತೃಷೆಗೆ ಅಸಹಾಯಕ ಹೆಣ್ಣು ಜೀವವೊಂದು ನಲುಗಿ ಹೋಯಿತೇ? ಕುರೂಪ ನೀಡಿದ್ದ ಬ್ರಹ್ಮನನ್ನೇ ನಿಂದಿಸಬೇಕೆ? ಜವಾಬ್ದಾರಿ ನಿಭಾಯಿಸಲಾಗದ ತಂದೆ ತಾಯಿಯನ್ನು ದೂರಬೇಕೇ ? ಯಾರು….. ಯಾರು ಹೊಣೆ…..?!
  ——————————————-

3 thoughts on “ʼಯಾರು ಹೊಣೆ ?!!ʼ ಸಣ್ಣ ಕಥೆ, ಜಯಲಕ್ಷ್ಮಿ ಕೆ

Leave a Reply

Back To Top