ಕಾವ್ಯ ಸಂಗಾತಿ
ಸುಧಾ ಪಾಟೀಲ ( ಸುತೇಜ)
ಅವನಿಲ್ಲದೆ!
ಯಾಕೋ ಮೌನ
ಆವರಿಸಿತಲ್ಲಿ
ಜನರ ನಟ್ಟನಡುವೆ
ದಟ್ಟವಾದ ಬೀಡಿನಲ್ಲಿ
ಒಬ್ಬಂಟಿತನದ ಅನುಭವ
ಅವನಿಲ್ಲದೆ
ಮನಸು ಹೊರಳಿ ಹೊರಳಿ
ಅತ್ತಿತ್ತ ತಿರುಗುತ್ತಲಿತ್ತು
ಅಕ್ಕಪಕ್ಕದವರ ಮಾತಿಗೆ
ನಿಲುಕದೆ ನನ್ನದೇ
ಯೋಚನೆಯಲ್ಲಿ
ಮುಳುಗಿದ ನನಗೆ
ಏಕೋ ಮನ
ಖಾಲಿಯೆನಿಸಿತ್ತು
ಅವನಿಲ್ಲದೆ
ನನ್ನ ಹೆಸರು ನನಗೇ
ಕೇಳಿಸದೇ ಅವನ ಹೆಸರು
ಮನದಲಿ ಮೂಡಿ
ಮಾಯವಾಗುತ್ತಿತ್ತು
ಸಂಬಂಧವಿಲ್ಲದ ಜನರ
ನಡುವೆ ಅವನದೇ ಜಪ
ಯಾಕೋ ಮನ ಬಿಕೋ
ಎನ್ನುತ್ತಿತ್ತು ಅವನಿಲ್ಲದೆ
ಬೀಸುವ ಗಾಳಿಯಲೂ
ಅದೇನೋ ಸಂದೇಶ
ಗಿಡ -ಮರಗಳಲ್ಲೂ ಅವನದೇ
ಮಾತುಗಳ ಪ್ರತಿದ್ವನಿ
ಎಲ್ಲೆಲ್ಲೂ ಅವನದೇ ಚಹರೆ
ಮಡುಗಟ್ಟಿದ ದುಃಖ
ಹೊರಬರಲು ಕಾಯುತ್ತಿತ್ತು
ಅವನಿಲ್ಲದೆ
ಸುಧಾ ಪಾಟೀಲ ( ಸುತೇಜ )
Nice poem