ಶಂಕರಾನಂದ ಹೆಬ್ಬಾಳ -ಗಾಲಿಬ್‌ ನೆನಪಿಗೊಂದು ಗಜಲ್

ಬೆನ್ನಹಿಂದೆ ಚೂರಿ ಹಾಕುವವರಿದ್ದಾರೆ
ಏನು ಮಾಡಲಿ ಗಾಲಿಬ್
ನಂಬಿಸಿ ಕತ್ತು ಕೊಯ್ಯುವವರಿದ್ದಾರೆ
ಏನು ಮಾಡಲಿ ಗಾಲಿಬ್

ಎಲ್ಲೆಲ್ಲೂ ಹಿಂಸೆ ಕ್ರೌರ್ಯತೆ ದರ್ಪಗಳೆ
ಕಾಣುತಿಹವು ಏಕೆ
ಕಣ್ಣಿಗೆ ಮಣ್ಣನು ಎರಚುವವರಿದ್ದಾರೆ
ಏನು ಮಾಡಲಿ ಗಾಲಿಬ್

ರಕ್ಕಸ ಬೀಜಗಳಾಗಿ ಅಣಬೆಯಂತೆ
ಹುಟ್ಟುತ್ತಲೆ ಇದ್ದಾರೆ
ಹಾಲಿನಲಿ ವಿಷ ಬೆರೆಸುವವರಿದ್ದಾರೆ
ಏನು ಮಾಡಲಿ ಗಾಲಿಬ್

ಗೋಮುಖ ವ್ಯಾಘ್ರದಂತಿದ್ದು ಜೀವವನ್ನೆ
ನುಂಗಲು ಕಾದವರು
ನಗುನಗುತ ಕತ್ತನ್ನು ಹಿಸುಕುವವರಿದ್ದಾರೆ
ಏನು ಮಾಡಲಿ ಗಾಲಿಬ್

ಅಭಿನವನ ಸರಳತೆಯು ದುರುಳರ
ಮನವನ್ನು ಬದಲಿಸೀತು
ಮಾಡದ ತಪ್ಪಿಗೆ ಶಿಕ್ಷಿಸುವವರಿದ್ದಾರೆ
ಏನು ಮಾಡಲಿ ಗಾಲಿಬ್


Leave a Reply

Back To Top