ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್‌ ಗಾಲಿಬ್‌ ನೆನಪಿನಲ್ಲಿ

ನಿನ್ಹಾದಿಯಲಿ ಸಿಕ್ಕ ಗುಲಾಬಿಯ ಹೂವಿನ ಕತೆಗಳನೆಲ್ಲ‌ ಆಯ್ದು ಪೋಣಿಸಿಟ್ಟಿರುವೆ ನಾ ಗಾಲಿಬ
ನಿನ್ನೊಲವಿನ ಭಾವನೆಗಳನೆಲ್ಲ ನನ್ನದಾಗಿಸಿಕೊಂಡು ಮಧುಶಾಲೆಯ ಅಮಲಿನಲ್ಲಿ ಮಿಂದಿರುವೆ ನಾ ಗಾಲಿಬ

ನನ್ನ ಮನದ ಅದೆಷ್ಟೋ ಕೊರಗಿಗೆ ಕವಿತೆಯ ಮುಲಾಮುಗಳನು ಹಚ್ಚಿರುವೆ ನೀನು.
ನಿನ್ನಿಂದಲೇ ಅಳುವ ನನ್ನ ಕಣ್ಣೀರ ಕಣ್ಣಿಗೂ ಕಾಡಿಗೆಯ ಸುಂಗಂಧವನ್ನು ಲೇಪಿಸಿಕೊಂಡಿರುವೆ ನಾ ಗಾಲಿಬ

ನಿನ್ನೊಲವಿನ ಕವಿತೆಯ ಸಾಲುಸಾಲು ನನ್ನನ್ನು ಆವರಿಸಿ ಕವಿದ ಮೋಡದಂತಾಗಿದೆ
ಕಳೆದು ಹೋದ ಪ್ರೀತಿಯು ಮರಳಿ ಸಿಗುವುದೆಂದು ಕಾಯುವುದಾ ಕಲಿತಿರುವೆ ನಾ ಗಾಲಿಬ

ಬಹಳ ಪ್ರೀತಿಯಿಂದ ಗುಲಾಬಿ ಪಡೆವಾಗ ಎದೆಗೆ ಮುಳ್ಳು ಚುಚ್ಚಿದರ ಅರಿವೇ ಆಗಿರಲಿಲ್ಲ.
ಯಾಕೆಂದರೆ? ನನ್ನ ಗಮನ ಪ್ರೀತಿಯ ಗುಲಾಬಿ ಮಾತ್ರವಾಗಿತ್ತು..! ಆದರೂ ಸುಖಿಯಾಗಿರುವೆ ನಾ ಗಾಲಿಬ  

ಬಹಳ ದಿನಕ್ಕೆ ತಿಳಿದೇ ತಿಳಿಯಿತು ಎನ್ನೆದೆ ಹೊಕ್ಕಿದ್ದು ಗುಲಾಬಿಯಲ್ಲ… ಬರಿಯ ಮುಳ್ಳುಗಳೆಂದು
ನನ್ನೆದೆಯಲಿ ನೆತ್ತರು ಸುರಿದ ಬಣ್ಣ ಬಣ್ಣವನು ನೆನೆದೂ ನೆನೆದೂ ನಿನ್ನೊಂದಿಗೆ ಮೌನವಾಗಿರುವೆ ನಾ ಗಾಲಿಬ


Leave a Reply

Back To Top