ಕಾವ್ಯ ಸಂಗಾತಿ
ಎ.ಹೇಮಗಂಗಾ
ಗಜಲ್
ಬಿಗಿ ಅಪ್ಪುಗೆಯ ಹೊಸ ಬಿಸುಪಲಿ ಮೇಣದಂತೆ ಕರಗಿರುವೆ ನಲ್ಲ
ಅಧರಕೆ ಒತ್ತಿದ ಸವಿ ಮುತ್ತಿನ ಮತ್ತಲಿ ಎದೆಗೆ ಒರಗಿರುವೆ ನಲ್ಲ
ಪ್ರಣಯದ ಆರಾಧನೆಯಲಿ ಉತ್ಕಟ ಸುಖವಿಂದು ನಮ್ಮದಾಗಿದೆ
ಕೈ ಬೆರಳ ಮಾಂತ್ರಿಕ ಸ್ಪರ್ಶಕೆ ಸುಷುಪ್ತಿಯಲಿ ಮುಳುಗಿರುವೆ ನಲ್ಲ
ಸಪ್ತಪದಿಯ ಮಂತ್ರಗಳು ಕರ್ಣಗಳಲಿ ಅನುರಣಿಸುತ್ತಲೇ ಇವೆ
ಪವಿತ್ರ ಮಾಂಗಲ್ಯ ಬಂಧನದಲಿ ನಿನ್ನೊಡನೆ ಒಂದಾಗಿರುವೆ ನಲ್ಲ
ಲಜ್ಜೆ ಪೊರೆ ಕಳಚಿಹೋಗಿದೆ ಪ್ರಥಮ ಮಿಲನದ ಜೇನಿರುಳಿನಲಿ
ಜೊನ್ನ ಬೆಳಕ ತಂಪಲೂ ಕಾವೇರಿ ಕಂಪನಕೆ ಒಳಗಾಗಿರುವೆ ನಲ್ಲ
ಸೃಷ್ಟಿಕ್ರಿಯೆ ನಿರಂತರವಲ್ಲವೇ ಹೇಮ ಜಗದ ಎಲ್ಲ ಜೀವಿಗಳಲಿ
ಅನೂಹ್ಯ ದಿವ್ಯಾನುಭೂತಿಯಲಿ ಪೂರ್ಣ ನಿನ್ನ ವಶವಾಗಿರುವೆ ನಲ್ಲ
ಎ. ಹೇಮಗಂಗಾ
Excellent Madam,
Hearty Congratulations