ʼಹೆಣ್ಣಿಗೆ ತಾಯ್ತನ ಜವಾಬ್ದಾರಿಗಳ ಬೇಲಿಯಾಗದಿರಲಿʼವಿಶೇಷ ಬರಹ-ಜಿ ಮೇಘ ರಾಮದಾಸ್

ಹೆಣ್ಣಿಗೆ ತಾಯ್ತನ ಜವಾಬ್ದಾರಿಗಳ ಬೇಲಿಯಾಗದಿರಲಿ

ಪ್ರಕೃತಿಯ ಒಂದು ದೊಡ್ಡ ವಿಸ್ಮಯ ಹೆಣ್ಣು. ಆಕೆ ಎಲ್ಲದರಲ್ಲಿಯೂ ವಿಶಿಷ್ಟಳು. ಛಲ, ಧೈರ್ಯ, ಸ್ಥೈರ್ಯ, ತಾಳ್ಮೆ, ಮನೋಬಲ ಈ ಎಲ್ಲದರಲ್ಲಿಯೂ ದೃಢ. ಅವಳು ಆಕೆಯ ವೈಯಕ್ತಿಕ ಬೆಳವಣಿಗೆಗೆ ಎಷ್ಟು ಶ್ರಮಿಸುತ್ತಾಳೋ ಅದರ ದುಪ್ಪಟ್ಟು ತನ್ನ ಕುಟುಂಬದ ಏಳಿಗೆಗೆ ಹೆಗಲು ನೀಡುತ್ತಾಳೆ. ಇದು ಸಹಜವಾಗಿಯೇ ಆಕೆಯಲ್ಲಿ ರಕ್ತಗತವಾಗಿರುತ್ತದೆ. ಅವಳು ಎಷ್ಟೇ ಸ್ವತಂತ್ರಳಾಗಿದ್ದರು ಸಹ ಸಂಸಾರದಲ್ಲಿ ಹಲವು ಬಾರಿ ರಾಜಿಯಾಗುವ ಸರದಿ ಅವಳದ್ದೆ ಆಗಿರುತ್ತದೆ. ಈ ಕಾರಣಕ್ಕಾಗಿ ತನ್ನ ಎಷ್ಟೋ ಕನಸುಗಳನ್ನು ಆಕೆ ಅದುಮಿಟ್ಟುಕೊಳ್ಳುತ್ತಾಳೆ. ಆದರೆ ಸಮಾಜ ಇದನ್ನು ಸಹಜ ಎಂದುಕೊಳ್ಳುವುದು ಮಹಾಪರಾದವಾಗುತ್ತದೆ.

ಹೌದು ರಾಜಿ ಮಾಡಿಕೊಳ್ಳುವುದು ಸಹಜ ಅಲ್ಲ ಅದು ಆಕೆಯ ಮನಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಅವಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ ಎನ್ನುವುದು ಸತ್ಯ. ಹೆಣ್ಣು ತನ್ನ ಬಾಲ್ಯ ಮತ್ತು ಯೌವನಾವಸ್ಥೆಯಲ್ಲಿ ಹೆಚ್ಚು ಆಯ್ಕೆಯ ಸ್ವತಂತ್ರವನ್ನು ಹಾಗೂ ಅದಕ್ಕೆ ತಕ್ಕ ಬೆಂಬಲವನ್ನು ಹೊಂದಿರುತ್ತಾಳೆ. ಆದರೆ ಮದುವೆಯ ನಂತರದ ಆಕೆ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅದರಲ್ಲಿಯೂ ಆಕೆ ತಾಯಿಯಾದ ನಂತರ ಮತ್ತಷ್ಟು ಸ್ವತಂತ್ರ ಕಳೆದುಕೊಳ್ಳುತ್ತಾಳೆ ಎನ್ನುವುದು ಸುಳ್ಳಲ್ಲ. ಅವಳು ಯಾವುದೇ ದೊಡ್ಡ ಹುದ್ದೆಯಲ್ಲಿ ಇರಲಿ ಅಥವಾ ಮನೆಯ ಜವಾಬ್ದಾರಿ ಹೊತ್ತ ಗೃಹಣಿಯಾಗಿರಲಿ, ತಾಯ್ತನ ಎಂಬುದು ಆಕೆಯನ್ನು ಸ್ವಲ್ಪ ಮಟ್ಟಿಗಾದರೂ ಹಿಡಿದಿಡುತ್ತದೆ ಎಂಬುದು ಕಣ್ಣಿಗೆ ಕಾಣುವ ಸತ್ಯ. ಅದು ತಾಯಿಯ ಮಮತೆ, ಕಾಳಜಿ, ಪ್ರೀತಿ, ವಾತ್ಸಲ್ಯ ಎನ್ನುವ ಮನೋಭಾವನೆಗಳಿರಬಹುದು ಅಥವಾ ಆ ಮಗುವನ್ನು ಅವಳೇ ನೋಡಿಕೊಳ್ಳಬೇಕು ಎಂಬ ಸಮಾಜದ ಹೆರಿಕೆಯಿಂದ ಇರಬಹುದು.

ಅದೇನೇ ಇದ್ದರೂ ಹೆಣ್ಣು ತಾನು ತಾಯಿಯಾಗುತ್ತಿದ್ದೇನೆ ಎಂದು ತಿಳಿದ ಕ್ಷಣದಿಂದಲೇ ಸಹಜವಾಗಿಯೇ ಮಗುವನ್ನು ರಕ್ಷಿಸುತ್ತಾ ಬರುತ್ತಾಳೆ. ಆದರೆ ಅದೇ ಮಗು ಬೆಳೆಯುತ್ತಾ ಹೋದಂತೆ ಆಕೆಯ ಕನಸುಗಳು ಸಹ ಬೆಳೆಯುತ್ತಾ ಹೋಗುತ್ತವೆ. ಆ ಮಗುವನ್ನು ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ,  ಸಾಮಾಜಿಕವಾಗಿ ಬಲಗೊಳಿಸಬೇಕು ಎನ್ನುವ ಕನಸಿನ ಜೊತೆಗೆ ತಾನು ಕೂಡ ವೈಯಕ್ತಿಕವಾಗಿ ತನ್ನದೇ ಆದ ಐಡೆಂಟಿಟಿ ಬೆಳೆಸಿಕೊಳ್ಳಬೇಕು ಎನ್ನುವ ಹಂಬಲವೂ ಕೂಡ ಹೆಮ್ಮರವಾಗತೊಡಗುತ್ತದೆ. ಈ ಸಮಯದಲ್ಲಿ ಆಕೆಗೆ ಅವಳ ಕುಟುಂಬದ ಬೆಂಬಲವೂ ಕೂಡ ಅತ್ಯವತ್ಯವಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ ಕುಟುಂಬ ಸಿಕ್ಕರೆ ಹಾಕಿ ಎತ್ತರಕ್ಕೆ ಬೆಳೆಯುತ್ತಾಳೆ ಇಲ್ಲವಾದಲ್ಲಿ ತನ್ನೆಲ್ಲ ಆಸೆಗಳನ್ನು ತಡೆದಿಟ್ಟುಕೊಂಡು ಮಾನಸಿಕವಾಗಿ ಕುಗ್ಗುತ್ತಾ ಹೋಗುತ್ತಾಳೆ. ಒಂದು ರೀತಿಯಲ್ಲಿ ಆಕೆ ಜೀವ ಇರುವ ಯಂತ್ರ ವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಬಹುಶಃ ಆಕೆಗೆ ಅವಳ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಲು ಬಿಡುವ ಕುಟುಂಬ ಸಿಕ್ಕರೆ ಅವಳು ತನ್ನ ಜೀವನ ಬದಲಿಸಿಕೊಳ್ಳುವುದರ ಜೊತೆಗೆ ತನ್ನ ಇಡೀ ಕುಟುಂಬದ ಸ್ಥಾನಮಾನವನ್ನೇ ಬದಲಿಸುತ್ತಾಳೆ. ಇಂತಹ ದಿಟ್ಟ ಹೆಣ್ಣು ಮಕ್ಕಳು ತಮ್ಮ ಮಗುವಿನ ಭವಿಷ್ಯವನ್ನು ಆ ಕಂದನ ಕನಸಿನಂತೆಯೇ ಕಟ್ಟಿಕೊಡಲು ಸ್ವತಂತ್ರರಾಗಿರುತ್ತಾರೆ. ಇದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಯು ಸಹ ಆಗುತ್ತದೆ. ಯಾವ ಕುಟುಂಬದಲ್ಲಿ ಹೆಣ್ಣಿಗೆ ಸ್ವತಂತ್ರ, ಸಮಾನತೆ, ಘನತೆ, ಗೌರವ, ಬೆಂಬಲ ಸಿಗುತ್ತದೆಯೋ ಅಂತ ಕುಟುಂಬದ ಮಗುವೂ ಕೂಡ ಅದೇ ಮಾನಸಿಕ ಗುಣಗಳನ್ನು ಕಲಿತು ಮುಂದೆ ಅದನ್ನೇ ಪಾಲಿಸುತ್ತಾರೆ. ನಾವು ಈಗಿನ ಮಕ್ಕಳನ್ನಲ್ಲ ಬದಲಿಗೆ ಭವಿಷ್ಯದ ಪೋಷಕರನ್ನು ಬಳಸುತ್ತಿದ್ದೇವೆ ಎನ್ನುವ ಮಾತಿದೆ. ಆದ್ದರಿಂದ ತಾಯಿಯಾಗಿರುವ ಆ ಹೆಣ್ಣಿಗೆ ಕುಟುಂಬದ ಸಕಾರಾತ್ಮಕ ಬೆಂಬಲ ಬಹಳ ಮುಖ್ಯವಾಗುತ್ತದೆ. ಇದು ತಾಯಿ ಹಾಗೂ ಮಗು ಇಬ್ಬರ ಮೇಲೆಯೂ ನೇರ ಪ್ರಭಾವ ಬೀರುತ್ತದೆ ಹಾಗೂ ಅವರನ್ನು ಸದೃಢಗೊಳಿಸುತ್ತದೆ.

 ಆದ್ದರಿಂದ ತಾಯ್ತನ ಹೆಣ್ಣಿಗೆ ಜವಾಬ್ದಾರಿಗಳ ಬೇಲಿಯಾಗಬಾರದು. ಬದಲಿಗೆ ಆಕೆಯ ದೊಡ್ಡ ಖುಷಿ ಹಾಗೂ ಶಕ್ತಿಯಾಗಬೇಕು. ಇದು ಆಕೆ ಒಬ್ಬಳಿಂದ ಸಾಧ್ಯವಾಗುವುದಿಲ್ಲ. ಆಕೆಯ ಇಡೀ ಸಂಸಾರ ಅವಳಿಗೆ ಪ್ರೋತ್ಸಾಹ ನೀಡಬೇಕು. ಆಗ ಅವಳು ಮತ್ತಷ್ಟು ದೃಢವಾಗಿ ಗಟ್ಟಿಯಾಗಿ ನಿಂತು ತನ್ನ ಮಗು ಹಾಗೂ ಕುಟುಂಬವನ್ನು ಕಾಪಾಡಿಕೊಳ್ಳುತ್ತಾಳೆ. ಸಾಮಾಜಿಕವಾಗಿಯೂ ಸಹ ಅವಳು ಇತರರಿಗೆ ಪ್ರೇರಣೆಯಾಗಿ ನಿಲ್ಲುತ್ತಾಳೆ. ಆದ್ದರಿಂದ ಮಗುವಿನ ಜವಾಬ್ದಾರಿಯನ್ನು ಇಡೀ ಕುಟುಂಬ ನಿಭಾಯಿಸುವ ಮೂಲಕ ಒಂದು ಹೆಣ್ಣಿನ ಮರುಹುಟ್ಟನ್ನು ಸಂಭ್ರಮದಿಂದ ಕೂಡಿರುವಂತೆ ಮಾಡಬೇಕಿದೆ. ಇದು ಆಕೆಯ ಮುಂದಿನ ಜೀವನಕ್ಕೆ ಮೈಲಿಗಲ್ಲು ಸ್ಥಾಪಿಸುತ್ತದೆ.


ಯುವಜನ ಕಾರ್ಯಕರ್ತರುಹೊಂಬಾಳೆ ಟ್ರಸ್ಟ್, ಗುಳಿಗೇನಹಳ್ಳಿ, ಸಿರಾ. ತುಮಕೂರು.

One thought on “ʼಹೆಣ್ಣಿಗೆ ತಾಯ್ತನ ಜವಾಬ್ದಾರಿಗಳ ಬೇಲಿಯಾಗದಿರಲಿʼವಿಶೇಷ ಬರಹ-ಜಿ ಮೇಘ ರಾಮದಾಸ್

Leave a Reply

Back To Top