ಕಾವ್ಯ ಸಂಗಾತಿ
ಸುಧಾ ಪಾಟೀಲ ( ಸುತೇಜ )
ಮತ್ತೆ ಚಿಗುರಿತು ಕನಸು
ಮನದೊಳಗಿನ ಭಾವಗಳು ತಣ್ಣಗೆ ಕೊರೆದು
ಮಿಸುಕಾಡದೆ ಕುಳಿತಾಗ
ಹಠಹಿಡಿದು ಅಲ್ಲೇ
ಮುದುರಿಕೊಂಡಾಗ
ಜಗದ ಆಗು -ಹೋಗುಗಳ
ಪರಿವೆ ಇಲ್ಲದಾದಾಗ
ಮೂಡಿತು ಭರವಸೆಯಬೆಳಕು
ನಾಂದಿಹಾಡಿತು
ಚಿಗುರುವ ಕನಸಿಗೆ
ಬಾಳ ಬುತ್ತಿಯ ಹೊಸ
ಪರಿಕಲ್ಪನೆಗೆ
ನಂಬಿಕೆಯೇ ಬುಡಮೇಲಾಗಿ
ವಿಶ್ವಾಸದ ಕೊಂಡಿ ಕಳಚಿದಾಗ
ನಾಟಕೀಯ ಜಗದಲಿ
ನನ್ನ ನಾ ಕಳೆದುಕೊಂಡಾಗ
ಸ್ನೇಹದ ಸಿಂಚನದ ಮಧುರತೆ
ಮರೆತುಹೋದಾಗ
ಮತ್ತೆ ಚಿಗುರಿತು ಕನಸು
ಅರಳಿತು ಮನವು
ನಂಬಿಕೆಯೆoಬ ಆಲದ
ಮರದಲ್ಲಿ
ವಿಶಾಲ ನೆರಳಿನ ಗಮ್ಯದಲಿ
ವಿಚಾರಧಾರೆಗಳ ಒಡ್ಡೋಲಗದಲಿ ನಾ ಮುಂದು
ತಾ ಮುಂದು ಎನ್ನುವ
ಸ್ಪರ್ಧೆಯಲಿ
ರೋಸಿಹೋದ ಮನಕೆ
ತಣ್ಣೆಳಲ ತಂಗಾಳಿ ಸೋಕಿ
ತನ್ನ ತಾ ಅರಿತು
ಚಿಗುರಿತು ಕನಸು
ತನ್ನಷ್ಟಕ್ಕೆ ತಾನೇ ಯಾವುದೇ
ಬಿಂಕು -ಬಿಗುಮಾನವಿಲ್ಲದೆ
ನಿರಾಳವಾಗಿ ಹರಿಯಬಿಟ್ಟಿತು
ತನ್ನ ಕನಸುಗಳ ಮುಂದಿನ
ದಾರಿದೀಪವಾಗಿ
ಬೆಳಕಿoಡಿಯಾಗಿ
ಹೊತ್ತಿ ಉರಿದ ಮನಕೆ
ತಂಪನೆರೆಯುತಾ ಬಿದಿಗೆಯ
ಚಂದ್ರ ಬಂದಾಗ
ನೀಲಾಕಾಶದಿ ನಾನೂ
ಚುಕ್ಕಿಯಾಗಹೊರಟೆ
ಕನಸುಗಳ ಹೆಣೆಯುತ್ತ
ಸಾಕಾರಗೊಳಿಸುತ್ತ
ಚಿಗುರುವ ಕಾರ್ಯ ಸದಾ
ಮಾಡುವ ನಿಟ್ಟಿನಲ್ಲಿ
ನಾಗಾಲೋಟವ ಓಡುತ್ತ
ಬಂದು ನಿಂತೆ ಆಗಸದ
ತುತ್ತತುದಿಗೆ
ಯಾರೂ ಮುಟ್ಟದ ಜಾಗಕೆ
ಸುಧಾ ಪಾಟೀಲ ( ಸುತೇಜ )