ಯಾವತ್ತೂ ಅವರ ಕತೆಯೇ
ಉಂಡೆಯಾ ಕೂಸೆ ಎಂದು
ಅವ್ವಗೆ ಕೇಳುವ ಆಸೆ
ಅಡ್ಡಿ ಮಾಡುವುದದಕೆ
ಅಪ್ಪನ ತೂತುಬಿದ್ದ ಕಿಸೆ
ಅವರ ಒಲೆಯ ಮೇಲಿನ ಮಡಕೆ
ಒಡೆದು ಹೋದುದು ಮುದ್ದೆ ಕೋಲಿನ
ಕಾರಣಕ್ಕೇನಲ್ಲ
ಎಸರಿಗೂ ನೀರ ಇಡಲಾರದ ಬರಡು
ನೋವಿಗೆ ಖಾಲಿ ಮಡಕೆಯೂ
ಬಾಯ್ದೆರೆಯಿತು ನೋಡಲ್ಲ.
ನೆಲೆ ನೀಡದ ಸೂರು, ಉರಿವ
ಸೂರ್ಯನ ತೇರು, ಕೆಂಡದುಂಡೆಯ
ಮೇಲೆಯೇ ನಡೆದರು ಅವರೆಲ್ಲ;
ಉರಿ ಹಾದಿ ಬರಿಗಾಲಿಗೆ ಊರ
ದಾರಿ ಮರೆಸಿತು, ಹರಿದ ಬೆವರು
ಕಣ್ತುಂಬಿ, ನೋಟ ಮಂಜಾಯಿತು
ಇವನಾರವ ಇವನಾರವ
ಎಂದವರೇ ಎಲ್ಲ ; ಇವ ನಮ್ಮವ
ಅವ ನಮ್ಮವ ಎನ್ನಲ್ಲಿಲ್ಲ. ಕಷ್ಟ
ಸಂಕಷ್ಟವಾಗಿ ಅವರನು ಕಾಡಿತಲ್ಲ
ಕಾಯಕಜೀವಿಗೆ ಯಾವ ಯುಗದಲೂ
ರಕ್ಷಣೆ ಸಿಗದಲ್ಲ..
*****
ವಸುಂದರಾ ಕದಲೂರು