ಪ್ರೇಮ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
ಪ್ರೇಮ ಲಹರಿ
‘ಜೇನ ದನಿಯೋಳೆ
ಮೀನ ಕಣ್ಣೋಳೆ’
[
ರಂಭೆ ಊರ್ವಶಿ ಮೇನಕೆ ತಿಲೋತ್ತಮೆ ನಿನ್ನ ಮುಂದೆ ಏನೂ ಅಲ್ಲ ಷೋಡಸಿ. ಅಪರೂಪದ ರೂಪಸಿ ನೀನು.
ನನ್ನ ಪ್ರೇಯಸಿ. ಯಾವ ಸೌಂದರ್ಯ ರಾಶಿಗೂ ಸೊಪ್ಪು ಹಾಕದ ಮನ್ಮಥ ನಾನು.
ಯಾರಿಗೂ ಸೋಲದ ಹೃದಯವನು ಸೂರೆಗೊಂಡೆ ನೀನು. ಸದ್ದು ಮಾಡದೇ ಹೃದಯದ ಸದ್ದು ಏರಿಸಿದವಳು. ಹೃದಯದ ಬಡಿತಕೆ ನಾಡಿಯ ಮಿಡಿತಕೆ ಲಯವಾದವಳು.
ಹೀಗೆ ಹೇಳುತ್ತ ಹೋದರೆ ದೊಡ್ಡ ಹೊತ್ತಿಗೆಯೇ ಆದೀತು. ಸರಳವಾಗಿ ಹೇಳಬೇಕೆಂದರೆ ನನ್ನ ಪಾಲಿಗೆ ನೀನು ಬರಿ ಗೆಳತಿಯಲ್ಲ. ಯಾರ ಕೈಗೂ ಸಿಗದ ಅಮೂಲ್ಯ ನಿಧಿ. ಅಸಾಧಾರಣ ಚೆಲುವು ನಿಲುವು ಇರುವ ನಿರಂತರ ಸ್ಪೂರ್ತಿ. ಖ್ಯಾತ ಕಲಾವಿದನೊಬ್ಬ ಉತ್ಸಾಹದಿ ಕೆತ್ತಿದ ಜೀವನೋತ್ಸಾಹದ ಶಿಲಾಬಾಲಿಕೆ. ಕವಿಯ ಪುಟಿವ ಯುವ ಕಾವ್ಯ ಕನ್ನಿಕೆ. ನಿನ್ನ ಬರುವಿಕೆಯನ್ನು ಎದುರು ನೋಡುವ ಸಂಭ್ರಮಿಸುವ, ಹಿಂಬಾಲಿಸುವ ನಿನ್ನ ನೆರಳಿಗೆ ಬೆನ್ನು ಹತ್ತುವ ಯುವ ತುಂಟ ನಾನು.
ಹಾಲಿನಲ್ಲಿ ಅದ್ದಿ ತೆಗೆದಂತಿರುವ ಮೈಬಣ್ಣ ಮೀನಿನ ಕಣ್ಣು ಕಂಗಳಲ್ಲಿ ಕಾಮನಬಿಲ್ಲು ಜೇನು ತುಂಬಿದ ಗುಲಾಬಿ ತುಟಿಯ ತುಂಟಿ ನೀನು.
ಜೀವ-ಜೀವನಕೆ ಜೀವ ತಳೆವ ಸಂಬಂಧ ಸಂವೇದನೆಗಳ, ಪರರ ಒಳಿತಿನ ಬೆನ್ನೇರಿ ಒಳಗೊಳಗೇ ಕುದಿಯುವ ನೋವು ಅಗಣಿತ ಸಂಕಟಗಳನ್ನು ಮುಚ್ಚಿಟ್ಟು ಅದೇಕೆ ಹೀಗೆ ಮೇಲೆ ನಗುತ ಬದುಕುತಿರುವೆ? ನಗೆ ಮನದ ಧಗೆಯನ್ನು ಕೊಂಚ ಸಹ್ಯಗೊಳಿಸಬಲ್ಲದು ಎಂದು ನಂಬಿ ನಗುತಿರವೆ ಎಂದೆನಿಸಿತು.
ಎಂಥ ದುಗುಡವನ್ನು ಹೊಡೆದೋಡಿಸುವ ಶಕ್ತಿ ನಿನ್ನಲ್ಲಿದೆ. ಅವ್ವ ಇಲ್ಲದ ನೀನು ಮಲತಾಯಿ ಕೈಯಲ್ಲಿ ಬೆಳೆದಿದ್ದು ನಿನ್ನನ್ನು ಭೂತದ ಹಾಗೆ ಕಾಡುತ್ತಿದೆ ಅಂತ ನನಗೆ ಗೊತ್ತು. ಉರಿವ ಬೆಂಕಿಯಲ್ಲಿ ಅಂಗೈ ಇಟ್ಟಷ್ಟು ನೋವು ತರುತ್ತಿದೆ ಅಂತನೂ ಗೊತ್ತು. ನಿನ್ನ ನೋವಿಗೆ ಮುಲಾಮು ಪ್ರೀತಿಯಲ್ಲಿದೆ ಅಂತ ನಿನಗೆ ಗೊತ್ತು ಅದಕ್ಕೆ ನೀನು ನೋವಿನಲ್ಲಿರುವ ಎಲ್ಲರಿಗೂ ಪ್ರೀತಿಯ ಬುತ್ತಿ ಹಂಚುತ್ತಿರುವೆ.
ಮನಸ್ಸು ತಾಕಲಾಟಕ್ಕೆ ಸಿಲುಕಿಕೊಂಡಿದ್ದರೂ ಮೊಗದಲ್ಲಿ ಸದಾ ಮಂದಹಾಸ. ನೋವಿನ ತುಡಿತದಲ್ಲಿಯೂ ನಿರಾಳ ಭಾವ, ಪ್ರಕೃತಿಯ ಸುಂದರ ಸೃಷ್ಟಿಯೆನಿಸಿದ ವಿಧವಿಧದ ರಂಗುರಂಗಿನ ಸಾಲು ಸಾಲು ಕುಸುಮಗಳ ನಡುವೆ ನಗುವ ಹೂಗಳೇ ನಾಚುವಂತೆ ನಗುತಲಿರುವೆ. ಸೋಜಿಗದಿಂದ ಮೈ ಮರೆತಿರುವೆ. ನಿನ್ನ ಆಟ ನೋಟ ಚೆಲ್ಲಾಟ ಎಲ್ಲವೂ ಬಣ್ಣಿಸಿದಷ್ಟು ರಂಜನೀಯ ರೋಮಾಂಚನ.
ಪದಗಳಿಗೆ ನಿಲುಕದವಳು ಮಾತು ಮಾತಿನಲ್ಲಿ ನಗೆಯ ಅಲೆಯ ಎಬ್ಬಿಸುವವಳು. ನೆನಪಿನಲ್ಲಿಯೇ ಒಂದು ರೀತಿಯ ಪುಳಕ ನೀಡುವವಳು. ನಿನ್ನ ರೂಪದಲ್ಲಿ ಸ್ವರ್ಗವೇ ಭುವಿಗಿಳಿದಿದೆ ಎಂದೆನಿಸುತ್ತದೆ. ಹಸಿಭಾವನೆಗಳ ಹತ್ತಿಕ್ಕಿ ತುಸು ಪಿಸುಮಾತಿನಲಿ ಮಾಯ ಮಾಡುವ ಮಾಯಗಾತಿ ಮನಸ್ಸಿನ ಕನಸಿಗೆ ಬಣ್ಣ ಹಚ್ಚುವ ಕಲಾಕಾರತಿ.
ರೋಜಾ, ಸಂಪಿಗೆ, ಮಲ್ಲಿಗೆ, ಸೇವಂತಿಗೆ ಹೀಗೆ ದಿನವೂ ಬಗೆ ಬಗೆ ಹೂಗಳು ದಟ್ಟನೆಯ ಕಪ್ಪು ಕೂದಲಿನಲ್ಲಿ ಕಂಪಿನ ನಗೆ ಬೀರುತ ನಿನ್ನೊಡಲ ಕಡಲ ಸೇರುವ ಭಾವ ತಂತಿ ಮೀಟಲು. ನಿನಗಿಷ್ಟವಾದ ಹೂವು ಕೊಟ್ಟೆ ಹೂವಿನ ಜೊತೆಗೆ ನಿನ್ನ ಜೀವದ ಜೀವ ಇಟ್ಟು ಕೊಟ್ಟೆ. ದಾನಗಳ ದಾನ ಮಹಾದಾನ ಹೃದಯದಾನ ಎನ್ನುತ್ತ ಹೃದಯಕ್ಕೆ ಪ್ರತಿಯಾಗಿ ನೀ ಹೃದಯ ನೀಡಿದೆ. ಅಂದು ನಾ ಎದೆ ತುಂಬಿ ಹಾಡಿದೆ. ಕನಸಲ್ಲಿ ಕಾಡಿದ ತಾರೆ ಇದುರಿಗೆ ಎದುರಾದರೆ ಕತ್ತಲಿನ ಕನಸಿನಲ್ಲಿ ಓಲೈಸಿದರೆ ಅದು ನನಗಾಗಿ ಅರಳಿದ ಕೆಂದಾವರೆ ಅಲ್ಲವೇ?
ಬೆಳದಿಂಗಳ ಬಾಲೆ ದಾರಿ ತಪ್ಪಿಸದಿರು ನಡುದಾರಿಯಲ್ಲಿ. ದಾರಿ ತಪ್ಪಿದರೆ ತಪ್ಪು ಮಾಡುವುದು ಮನದಲೆ, ಎಂದು ಆಶುಕವಿಯಂತೆ ಕವಿತೆ ಕಟ್ಟಿದೆ.
ದಟ್ಟವಾದ ತೋಪಿನಲ್ಲಿ ಪ್ರಕೃತಿಯ ಮಡಿಲಲ್ಲಿ ಊರಿನ ಹೊರವಲಯದಲ್ಲಿದ್ದ ನನ್ನ ಫಾರ್ಮ ಹೌಸ್‌ಗೆ ಕಾಲ್ಗೆಜ್ಜೆ ಸದ್ದಿನಲ್ಲಿ ನಿನ್ನ ಸಂಚಾರವಾಯಿತು. ಮನದಲ್ಲಿ ಪ್ರೀತಿಯ ಇಂಚರ ಮೂಡಿಸಿತು. ಎದೆಯಲ್ಲಿ ಸಂಚಲನ ಮೂಡಿಸಿತು. ಮಾದಕ ಕಂಗಳ ಮನಮೋಹಕ ನೋಟ ಇನ್ನಿಲ್ಲದಂತೆ ಸೆಳೆಯಿತು.ಏಳೇಳು ಜನ್ಮದ ಬಂಧವಿದು ಜೀವ ಸವೆದರೂ ಜೀವಕೆ ಜೀವ ನೀಡುವ ಪ್ರೀತಿಯಿದು ಎನಿಸಿತು. ನಿನ್ನೊಂದಿಗೆ ಪ್ರೇಮ ಕಾದಂಬರಿ ಬರೆಯಬೇಕೆನಿಸಿತು.
ನಿಧಾನವಾಗಿ ನಿನ್ನನ್ನೇ ನೋಡುತ್ತ ನಿನ್ನತ್ತ ಒಂದೊಂದೇ ಹೆಜ್ಜೆ ಹಾಕುತ್ತಿದ್ದೆ. ನಾಚಿ ನೀರಾದ ನೀನು ಕಣ್ಣಲ್ಲಿ ಕಣ್ಣಿಟ್ಟು ನೋಡದೇ ಗೋಡೆಗೆ ನೇತು ಹಾಕಿದ ಚಿತ್ರಗಳತ್ತ ಚಿತ್ತ ನೆಟ್ಟೆ. ಮಳೆಯಲ್ಲಿ ನೆನೆದಿರುವ ಅರೆನಗ್ನ ಸುಂದರಿಯ ಚಿತ್ರದ ಮೆಲೆ ಸಾವಧಾನವಾಗಿ ಕಣ್ಣು ಹಾಯಿಸಿದೆ. ಅಷ್ಟರಲ್ಲಿ ಉಸಿರು ತಾಕುವಷ್ಟು ಸನಿಹದಲ್ಲಿ ನಾ ನಿಂತಿದ್ದನ್ನು ಕಂಡ ನೀನು ಹೆದರಿದ ಹರಿಣಿಯಂತಾದೆ.
ಸುಯ್ಯೆಂದು ಸದ್ದು ಮಾಡುತ ತಣ್ಣನೆಯ ತುಸು ಹಿಮ ಬೆರೆತ ಗಾಳಿ ಬೀಸಿತು. ಆನಂದ ಸಾಗರದಲ್ಲಿ ಮುಳುಗೇಳುವ ಸಮಯ ಬಂತು ಅನಿಸಿತು. ಮೆಲ್ಲಗೆ ನಿನ್ನ ಹೆಗಲ ಮೇಲೆ ಕೈ ಇಟ್ಟೆ. ನನ್ನತ್ತ ಹೊರಳಿದಾಗ ನವಿರಾಗಿ ಕೆಂದುಟಿಗಳನ್ನು ಸವರಿದೆ. ಬಂಗಾರ ಬಣ್ಣದ ಬೆನ್ನಿನ ಮೆಲೆ ಮೇಲಿನಿಂದ ಕೆಳಗೆ ಬೆರಳಾಡಿಸಿದೆ. ಉಯ್ಯಾಲೆಯಲ್ಲಿ ಮೇಲೇರಿ ಕೆಳ ಬರುವಂತಹ ಒಂದು ರೀತಿಯ ಪುಳಕದ ಅನುಭವ ನೀಡಿದೆ. ಬಿಳಿ ವಜ್ರವಿರುವ ಉಂಗುರ ಧರಿಸಿದ ಬೆರಳಿನಿಂದ ಗೋಡೆಗೆ ನೇತು ಹಾಕಿದ ಪ್ರಣಯದಲ್ಲಿ ಮಗ್ನವಾದ ಪಕ್ಷಿಗಳ ಜೋಡಿಯನ್ನು ತೋರಿಸಿದೆ.
ಅಷ್ಟರಲ್ಲಿ ನನಗೆ ಪ್ರೇಮ ನಶೆ ಏರಿತ್ತು. ಮೈ ಕೈ ಸೋಕುತ್ತಿರುವಾಗ ನಿನ್ನ ಕೆನ್ನೆ ಕೆಂಪೇರಿತ್ತು.
ಮೊದಲ ಸಲದ ಹೊಸ ಅನುಭವಕ್ಕೆ ಬೆವರುತ್ತಿದ್ದೆ. ನಿನ್ನ ಬೆವರಿನ ಪರಿಮಳ ಹೀರುತ್ತ ನಿಂತೆ. ಕಂಗಳಲ್ಲೇ ಮಾತನಾಡಿಸುತ ಕಣ್ರೆಪ್ಪೆಯಲ್ಲಿ ನನ್ನ ಮೈ ಮನ ಸ್ಪರ್ಶಿಸಿದೆ. ಆಸೆ ಕೆರಳಿಸಿದೆ. ಬಯಕೆಯ ಹುಚ್ಚು ನಿಜಕ್ಕೂ ಹುಚ್ಚೆಬ್ಬಿಸಿತು. ಅಮಲೇರಿಸುವ ಕಣ್ಣಿಗೆನೇ ಬಿಡದೇ ಮುತ್ತಿಕ್ಕಿದೆ. ಎದೆಯ ದೀಪ ಹಚ್ಚಿದ ಕೈಗಳ ಮೆಲುವಾಗಿ ಸವರಿದೆ. ಪ್ರೀತಿಯ ನಿನಾದ ಇಬ್ಬರಲ್ಲೂ ತುಂಬಿರಲು ಪ್ರಣಯದಾಟಕೆ ಮನವ ಹದಗೊಳಿಸೆಂದಿತು ಎದೆ. ಹೇಳದೇ ಕೇಳದೇ ಯಾವ ಸುಳಿವು ನೀಡದೇ ತೋಳುಗಳು ತೋಳುಗಳಲ್ಲಿ ಬಂಧಿಯಾದವು. ಅಧರಗಳು ಅಧರಗಳಲ್ಲಿ ಬಂಧಿಯಾದವು, ಆ ಕ್ಷಣವೇ ಗೊತ್ತಾದದ್ದು ಜೇನಿಗಿಂತ ಸವಿ ನೀನೇ.
ಇತ್ತೀಚಿಗೆ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ‘ನಾನು ಮಾತ್ರ ಚೆನ್ನಾಗಿರಬೇಕು ಅನ್ನುವ ಕೆಟ್ಟ ಗಾಳಿ ಬೀಸುತ್ತಿದೆ.’ ಜೊತೆಜೊತೆಗೆ ತಿರುಗಾಡಿದವರು ಜೊತೆಯಲ್ಲೇ ಇದ್ದವರು ಎದುರಿಗೆ ಚೆಂದಗೆ ಮಾತನಾಡಿಕೊಂಡು ಇದ್ದವರು ಬೆನ್ನ ಹಿಂದೆ ಆಡಿಕೊಂಡು ನಕ್ಕವರು ನಗುನಗುತ್ತ ಮಾತನಾಡಿ ಬೆನ್ನಿಗೆ ಚೂರಿ ಇರಿದವರು ಗೊತ್ತೆ ಆಗದಂತೆ ಬುಡಕ್ಕೆ ಕೊಳ್ಳಿ ಇಡುವವರು ಹೀಗೆ ಹೇಳುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತದೆ. ನೊಂದವರು, ಕಣ್ಮುಂದೆ ನಿಂತು ತನ್ನ ಸಂಕಟದ ಪಾಡನ್ನು ಹೇಳಿದರೆ ವಿಚಿತ್ರ ಬುದ್ಧಿವಂತರ ತರಹ ತಮಾಷೆ ಮಾಡಿ ಅಹಂಕಾರದಿಂದ ನಗುವುದು ತರವೇ? ವ್ಯಂಗ್ಯವಾಗಿ ನಕ್ಕು ಕಂಬನಿಯ ಕಂದಕಕ್ಕೆ ನೂಕುವುದು. ಕಹಿ ಭಾವನೆಗಳಿಗೆ ಮತ್ತೆ ಕಹಿಯನ್ನೇ ಸುರಿದಳು ನಿನ್ನ ಗೆಳತಿ. ಏಕೆಂದರೆ ಅವಳಿಗೆ ನಾನಂದ್ರೆ ಇಷ್ಟವಂತೆ ನನ್ನ ಪಡೆಯಲು ಇಲ್ಲದ್ದನ್ನು ನಿನ್ನ ಕಿವಿಯಲ್ಲಿ ಊದಿದಳು.ಅಂದಿನಿಂದ ನೀನು ಮನೆಯಲ್ಲಿ ಬಂಧಿಯಾಗಿರುವೆ. ನೀನೇ ಹೇಳಿದಂತೆ ಚಿವುಟುವುದನ್ನು ಬಿಟ್ಟು ಚಿಗಿಯಲು ಬಿಡಬೇಕು.
ಕಾಣದ ಲೋಕದ ಕಾಮನಬಿಲ್ಲೊಂದು ತೋರಿ ಮರೀಚಿಕೆಯಂತೆ ದೂರಾದೆ. ನೀನಿಲ್ಲದೇ ಬೀದಿಬೀದಿಗಳಲ್ಲಿ ಹುಚ್ಚನಂತೆ ಅಲೆಯುತ್ತಿದ್ದೇನೆ. ಇದೀಗ ಮತ್ತೆ ಬಂದು ಬಿಡು ನಾ ನಿಂತ ಬೀದಿಗೆ. ಅರಿಷಣ ಕಟ್ಟಿದ ದಾರ ತಂದಿರುವೆ ಬ್ರಹ್ಮಚಾರಿ ಹನುಮಂತನ ಎದುರು ಅವನ ಸಾಕ್ಷಿಯಾಗಿಸಿ ಕೊರಳಿಗೆ ಕಟ್ಟುವೆ.
‘ಜೇನ ದನಿಯೋಳೆ ಮೀನ ಕಣ್ಣೋಳೆ ಸೊಬಗೆ ಮೈ ತುಂಬಿದೆ ಹಂಸ ನಡೆಯೋಳೆ ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ.’ ಎನ್ನುವ ನಿನಗಿಷ್ಟವಾದ ಹಾಡಿನ ಸಾಲನು ಗುನುಗುತ ಪ್ರತಿ ರಾತ್ರಿ ರತಿ ಸುಖದ ಉತ್ತುಂಗಕ್ಕೇರಿಸುವೆ. ಬೇಗ ಬಂದು ಬಿಡು ಷೋಡಸಿ ನನ್ನ ಕಾಡುವ ರೂಪಸಿ.
—————————————————————
ಜಯಶ್ರೀ.ಜೆ. ಅಬ್ಬಿಗೇರಿ