ಕಾವ್ಯ ಸಂಗಾತಿ
ಸಾಕ್ಷಿ ಶ್ರೀಕಾಂತ ತಿಕೋಟಿಕರ
‘ಮುನಿಸಿ ಹೋದವನು’
ಮುಂಜಾನೆಗೆ ಮುನಸಿ ಹೋದವನು
ಮಧ್ಯಾಹ್ನವಾದರೂ ಅವನ ಸುಳಿವಿಲ್ಲ
ಮಾತಿನ ಮಿಂಚಿಗೆ ಕಿಡಿಕಿಡಿ ಆದವನು
ಹೊತ್ತು ಏರಿದರು ಮತ್ತೆ ಆತ ಬರಲಿಲ್ಲ.
ವಾದಕ್ಕೆ ಬಿದ್ದ ಮನಸುಗೆಳೆರಡು ದೂರ
ಆದೀತೆ ಎಲ್ಲವೂ ನಿನ್ನ ಮೂಗಿನ ನೇರ
ಸಿಟ್ಟಿನಲ್ಲಿ ಬಂದ ಮಾತು ಬಲು ಜೋರ
ಒಟ್ಟಿನಲ್ಲಿ ಸಂಗಾತಿ ಮನಸು ಚೂರ್ಚೂರ
ಬಾಗಿಲದಾಟಿ ಅಂಗಳಕ್ಕೆ ಬಂದು ನಿಂತೇನಿ
ತುದಿ ಓಣಿವರಗೂ ಕಣ್ಣಾಡಿ ಅವಂದೇ ಧ್ಯಾನ
ಬಿಸಿರೊಟ್ಟಿ ಬೇಳೆಕಾಳು ಮಾಡಿ ಕುಂತೀನಿ
ಬಂದು ಉಣಬಾರದೆ ಜೀವಕ್ಕೆ ಸಮಾಧಾನ
ಹೊತ್ತು ಕಳೆಯದೆ ಜಡವಾಗಿ ನಿಂತಂತೆ
ಬಿಸಿಲಿನ ಝಳ ಹೊರಹೊರಗೆ ಉರಿದಾವು
ಮತ್ತೆ ನೆನಪಿನಲಿ ಉರಳಿದ ಹನಿ ಚಿಂತೆ
ಹಸಿವು ಹಂಬಲಕೋ ಕಣ್ಣೀರು ಸುರಿದಾವು
ಕಂಬಕ್ಕೆ ಒರಗಿ ಕಾದು ಸಾಕೆನಿಸಿ ಕುಂತಾಗ
ಬಿತ್ತೊಂದು ನೆರಳು ಮುಂದೆ ಕೈ ಸರಿದು
ಮುಖವೆತ್ತೆ ನೋಡಿದರೆ ಆತನೇ ನಿಂತಾಗ
ಹಿಡಿದ ಮಲ್ಲಿಗೆ ಹಸ್ತ ಬಿಡಿಸಿ ನಗೆ ಸುರಿದು
ಹಟವಾದ ಜಗಳ ಮಂಜಿನಂತೆ ಕರಗಿತು
ಮುನಿಸಿಹೋದವನು ಮನ್ನಿಸಿ ಬಂದನು
ದಿಟವಾಗಿ ಪ್ರೀತಿ ಗೆದ್ದು ಹಸಿರು ಚಿಗುರಿತು
ಬಾಡಿದ ಮುಖಕೆ ಹೊಸ ಹುರುಪುತಂದನು.
ಸಾಕ್ಷಿ ಶ್ರೀಕಾಂತ ತಿಕೋಟಿಕರ