ಕಾವ್ಯಯಾನ

ಏಕಾಂಗಿಯೊಬ್ಬನ ಏಕಾಂತ

Colorful Sand

ಕಣ್ಣೀರು ಖಾಲಿಯಾಗುವುಂತೆ
ತುಂಬಿಕೊಳ್ಳುತ್ತದೆ ಮತ್ತೆ ಮತ್ತೆ
ಏಕಾಂತ ಖಾಲಿಯಾದರೂ
ಏಕಾಂಗಿಯಾಗುವಂತೆ
ಕಣ್ಣೀರು ಕೂಡ ನೀರಾಗುತ್ತದೆ
ಅವಳ ಬಸಿದು ತಾನೇ ಉಳಿದಾಗ

ಮೂರುಗಂಟಿನ ಆಚೆ ನೂರುಗಂಟುಗಳಾಚೆ
ತೆರೆದುಕೊಂಡ ಹೊಸಲೋಕಕೆ
ಪಕ್ಷಿಯ ರೆಕ್ಕೆಗಳ ಕಸುವಿನಂತೆ
ಜಿಗಿದ ಕನಸುಗಳನೆಲ್ಲಾ ಗಂಟಿನೊಳಗೆ
ಮನದೊಡೆಯನ ಸಂಗಾತಕೆ
ಇಬ್ಬನಿಯ ಜೀವದಂತೆ ಕಾದುಕೂತವಳು

ಅಲೆಯೊಡೆವ ರುಚಿ ತಂಗಾಳಿಗೆ ಸವರಿ
ಕಾಮನ ಬಿಲ್ಲನು ಕಂಡವಳು
ತೆಂಡೆಯೊಡೆದ ಕಣ್ಣೀರ ಮಾತಿಗೆ
ಗಾಳಿಯನೆ ಸೀಳಿ ಹೊರಟಾಗ
ತಂಗಾಳಿಗೆ ಬಸಿರಾಗಿ ಕನಸುಗಳ ಹೆತ್ತವಳು

ಅಕ್ಷರಕ್ಕೆ ಸಿಗದ ಅಕ್ಕರೆಯನು
ಲಿಪಿಮಾಡಿ ಅವನಿಗೆ ತಲುಪಿಸಲು
ಹಾರಿ ಹಾರಿ ನೆಲೆ ಕಾಣದೆ ಅಲೆಯುವಳು
ಆಗೊಮ್ಮೆ ಈಗೊಮ್ಮೆ ಟಿಸಿಲೊಂದು ಕಂಡಾಗ
ಮುಂಗಾಲಿನಲೆ ಜೀವ ಹಿಡಿಯುವಳು
ನಂಬಿಕೆಯ ಮಾತು ಹೇಳಿದ ಆ ಮರಕೆ
ಅವಳ ಹಳಹಳಿಕೆಗಳನು ಮಳೆಯಂತೆ ಸುರಿಸುವಳು

ನಯವಾದ ಖತ್ತಿಗೆ ಮುತ್ತಿಟ್ಟು ಸಾಕಾಗಿದೆ
ಬಂಜೆಯಾದ ಭರವಸೆಗಳ ಹೊತ್ತು ಸಾಕಾಗಿದೆ
ಹೊಸದಾದ ಶ್ಯಬ್ಧ ಯಾರೇ ನುಡಿದರು
ಎದೆಯ ಸಾಗರದಲ್ಲಿ ತರಂಗಾಂತರಗಳು
ಮಿಡಿಯುವ ಮಾರ್ಮಲೆತವೇನಲ್ಲ !
ಅವು ಭಯದ ಕಂಪನಗಳು
ನಾಡಿಯನು ನಿರ್ಜೀವ ಗೊಳಿಸುವ ಪ್ರೀತಿ
ಮತ್ತೆ ಬಡಿಯುವನಕ ಅವಳು ಬೆಂದವಳು

ನಯವಾದ ಮೊನಚು ಕೆನ್ನೆಗೆ
ಮತ್ತೆ ಮುತ್ತನಿಡು ಎಂದು ಕೇಳಲಾರೆ
ಕಣ್ಣೀರಿಗೆ ತಾಯಿ ಒಬ್ಬಳೇ ತಂದೆಯರು ಬೇರೆ
ಬಸಿದುಕೊಂಡ ಬೇಸರಕ್ಕಿಂತ
ಉಳಿದ ಕಾಳಿನ ಬರಡುತನವೇ ಉಳಿಸು
ಈ ಬದುಕಿನ ಖಾಲಿತನವನ್ನು
ಕಂಪನಗಳ ತಗ್ಗಿಸಲು ಆಗದಿರಬಹುದು
ಮಮತೆಯ ಮಡಿಲಾಗಿ
ಅವಳನ್ನು ಹಡೆಯಲು
ಫಲವೀವ ಕಾಳುಗಳಾಗಿ ಮೊಳೆಯುವೆ ಮತ್ತೆ ಮತ್ತೆ….

*****

ಸತ್ಯಮಂಗಲ ಮಹಾದೇವ

Leave a Reply

Back To Top