“ಎಂದೂ ಮರೆಯಲಾಗದ ಕನ್ನಡ ಸಿನಿ ನಿರ್ದೇಶಕ, ಪುಟ್ಟಣ್ಣ ಕಣಗಾಲ್” ಲೇಖನ-ಶಾರದಜೈರಾಂ.ಬಿ, ಚಿತ್ರದುರ್ಗ

shaeadhajairam

ಪುಟ್ಟಣ್ಣ ಕಣಗಾಲ್ ಅವರ ಜನುಮ ದಿನ ಡಿಸೆಂಬರ್ 1,ಅಂದೇಕೋ ಮನವ ಪರಿ ಪರಿಯಾಗಿ ಕಾಡಿದ್ದು ಅವರ ನಿರ್ದೇಶನದ ಸಿನಿಮಾಗಳು.
ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸೃಜನಶೀಲ ನಿರ್ದೇಶಕ ಮತ್ತು ನಿರ್ಮಾಪಕ.ವಿಭಿನ್ನ ಕಥಾವಸ್ತು ಒಳಗೊಂಡ ಕಾದಂಬರಿ ಆಧಾರಿತ ಚಿತ್ರಗಳಿಂದಲೇ ಪ್ರಸಿದ್ಧರಾದವರು.ಇವರು ಕನ್ನಡ ಚಿತ್ರರಂಗದಲ್ಲಿ ಚಿತ್ರ ಬ್ರಹ್ಮನೆಂದೇ ಹೆಸರಾದವರು.
ಪಿರಿಯಾಪಟ್ಟಣದ ಕಣಗಾಲ್ ಗ್ರಾಮದಲ್ಲಿ ಜನಿಸಿದ ಪುಟ್ಟಣ್ಣರ ಬಾಲ್ಯದ ಹೆಸರು ಶುಭ್ರವೇಷ್ಟಿ ರಾಮಸ್ವಾಮಿ ಸೀತಾರಾಮ ಶರ್ಮಾ,ಬಡತನ ತಾಂಡವವಾಡುತ್ತಿದ್ದ ಕುಟುಂಬದಲ್ಲಿ ಹುಟ್ಟಿ , ಹೊಟ್ಟೆ ಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳು ಮಾಡಿ, ಸಿನಿಮಾ ಚಿತ್ರ ವಿತರಕರ ಸಂಪರ್ಕ ಬೆಳೆದು ಹಾಗೇಯೇ ಸಿನಿಮಾ ನಿರ್ದೇಶಕರಾದ ಬಿ.ಆರ್.ಪಂತುಲು ಅವರ ಜೊತೆ ಸಿನಿಮಾಗಳಿಗೆ ಸಹನಿರ್ದೇಶಕರಾಗಿ ನಿರ್ವಹಿಸಿದರು.
1967ರಲ್ಲಿ ತೆರೆಕಂಡ ಬೆಳ್ಳಿಮೋಡ, ತ್ರಿವೇಣಿ ಅವರ ಕಾದಂಬರಿ ಆಧಾರಿತ ಸಿನಿಮಾ, ಮೇರು ಕಲಾವಿದರಾದ ಸಿ.ಅಶ್ವಥ್, ಪಂಡರಿಬಾಯಿ, ಬಾಲಕೃಷ್ಣ, ಕಲ್ಯಾಣ್ ಕುಮಾರ್,ಕಲ್ಪನಾ ತಾರಗಣದ ಉತ್ಕೃಷ್ಟ ಸಿನಿಮಾವಾಗಿದೆ.
ವರಕವಿ ಬೇಂದ್ರೆಯವರ ಗೀತೆ ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ ಗೀತೆ ಇಂಪಾಗಿ, ಸುರ್ಯೋದಯ ದೃಶ್ಯ ಕಾವ್ಯದಂತೆ,ಹಾಗೇ ಕಲ್ಪನಾ ಅವರ ಸಹಜ ಸೊಬಗು,ಸಹಜ ಅಭಿನಯ ಗೀತೆಯ ದಿವ್ಯತೆಗೆ ಸಾಕ್ಷಿಯಂತಿದೆ.


ಅವರ ನಿರ್ದೇಶನದ ಸಿನಿಮಾಗಳು ಹಲವಾರು ಕಥಾ ಸಂಗಮ, ಎಡಕಲ್ಲು ಗುಡ್ಡದ ಮೇಲೆ, ಶರಪಂಜರ,ಕರುಳಿನ ಕರೆ, ಸಾಕ್ಷಾತ್ಕಾರ,ಧಮ೯ಸೆರೆ, ನಾಗರಹಾವು, ಕಪ್ಪುಬಿಳುಪು,ಮಾನಸ ಸರೋವರ, ಹೀಗೆಯೇ ಒಂದೊಂದು ಮೈಲಿಗಲ್ಲು.
ಆ ಸಿನಿಮಾಗಳ ಕಥಾವಸ್ತು ವಿಭಿನ್ನ, ವಿನೂತನ ಪ್ರಯೋಗ, ಸಂಗೀತ, ಸಾಹಿತ್ಯ ಲಾಲಿತ್ಯಕ್ಕೇ ಮನಸೋಲದವರಿಲ್ಲ ಹಾಗೇಯೇ ಅಥ೯ಪೂಣ೯, ಸಂದರ್ಭಕ್ಕೆ ಸೂಕ್ತ ಗೀತೆಯ ಆಯ್ಕೆ,ಗೀತೆಯ ಚಿತ್ರೀಕರಣಕ್ಕೂ ಒಳಾಂಗಣ, ಹೊರಾಂಗಣ ವೈವಿಧ್ಯ ಮತ್ತು ವಣ೯ರಂಜಿತ.ಇಂದಿಗೂ ಕೂಡಾ ಆ ಸಾಹಿತ್ಯ, ಸಂಗೀತ ಸಂಯೋಜನೆ ಗೀತೆಗಳು ಮೆಲುಕುಹಾಕದವರಿಲ್ಲ.
ಕಥಾಸಂಗಮ ಮೂವರು ಸಾಹಿತಿಗಳ ಕಥೆಗಳನ್ನು ಆಯ್ದುಕೊಂಡು ಸಿನಿಮಾವನ್ನಾಗಿ ಮಾಡಿದರು.
ಒಂದು ಹಂಗು,ಮುನಿತಾಯಿ,ಅತಿಥಿ.ಒಂದೊಂದು ವಿಭಿನ್ನ ಕಥಾವಸ್ತು ಒಳಗೊಂಡ ಚಿತ್ರಗಳು.
ಹಂಗು ಪ್ರಮುಖ ಪಾತ್ರಧಾರಿ ತಾನು ಪಾಲಿಸಿಕೊಂಡು ಬಂದಂತ ಆದಶ೯ಗಳ ಬಿಡುವಂತ ದೈನೇಸಿ ಸ್ಥಿತಿ ನಿರ್ಮಾಣವಾದಾಗ ಮಾನಸಿಕ ಚಡಪಡಿಕೆ, ತೊಳಲಾಟ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಇನ್ನು ಅದರದೇ ಮುನಿತಾಯಿಯ ಕಥಾನಾಯಕಿ ಅಂಧಳು (ಆರತಿ)ಅವಳ ವಿವಾಹದ ನಂತರ, ಆ ಕುರುಡುತನ ಲಾಭವಾಗಿ ಬಳಸಿಕೊಂಡು ಅವಳನ್ನು ಲೈಂಗಿಕವಾಗಿ ಶೋಷಿಸುವ ಅನ್ಯ ಪುರುಷರ ಕಾಮತೃಷೆಗೆ ಒಳಗಾಗಿ ಆಘಾತಕ್ಕೊಳಗಾದ ಕಥಾವಸ್ತು,ಆದರಲ್ಲಿ ರೌಡಿಯ ಪಾತ್ರದಲ್ಲಿ ಇಂದಿನ ಯಶಸ್ವಿ ನಾಯಕನಟ ರಜನೀಕಾಂತ್ ಅವರು ಅಭಿನಯಿಸಿದ್ದರು.
ಅವರ ಸಿನಿಮಾಗಳ ಕೊನೆಯ ದೃಶ್ಯ ಒಗಟಿನಂತೆ ಸಂಪೂರ್ಣ ತೋರಿಸುವುದಿಲ್ಲ,ಆ ಅಂತ್ಯದ ಚಿತ್ರೀಕರಣ ಅನೂಹ್ಯ ಚಕ್ರವ್ಯೂಹಧಂತೆ ನಾವೇ ದೃಶ್ಯ ನೋಡಿ ಅರಿಯಬೇಕು.
ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳು ಎಲ್ಲಾ ಪ್ರಕಾರದಲ್ಲೂ ಅಭ್ಯಸಿಸಬಲ್ಲ,ಆಕರಗಳಾಗಿ,ಹೊಸಬರಿಗೆ, ನಿರ್ದೇಶಕರಿಗೆ ಕಲಿಕೆಯ,ಮಾಗ೯ದಶಿ೯ತ್ವದ ಹಲವಾರು ಅತ್ಯುಪಯುಕ್ತ ಮಾಹಿತಿ ಒಳಗೊಂಡಿವ, ಇಂದಿಗೂ ಇಂದಿನವರಿಗೆ ದಾರಿದೀಪದಂತಿವೆ.
ಅವರ ಸಿನಿಮಾಗಳೇ ಒಂದು ವಿಶ್ವವಿದ್ಯಾನಿಲಯದಂತೆ ಸಂಶೋಧಿಸಿದರೆ ಬಗೆದಷ್ಟು ಮುತ್ತು,ರತ್ನಗಳಂತಹ ಪ್ರಯೋಗಶೀಲತೆ,ಪರಿಪಕ್ವತೆ, ಪರಿಪೂರ್ಣತೆ ಸಾಧಿಸಲು ಸಹಾಯ ಮಾಡುವ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅಮೂಲ್ಯ ಕೊಡುಗೆಗಳಾಗಿವೆ


ಚಿತ್ರರಸಿಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು.
ಅವರ ಸಿನಿಮಾಗಳೇ ಹಾಗೇ ಸದಭಿರುಚಿಯ, ಸಾಂಸಾರಿಕ ಜೀವನದ ಕಥಾವಸ್ತು ಒಳಗೊಂಡ ಸಾಹಿತ್ಯಿಕ ಪರಿಭಾಷೆ ಸಂಪದ್ಭರಿತವಾದವು.
ಹೆಸರಿಗಷ್ಟೇ ಪುಟ್ಟಣ್ಣ ಅವರು ದೈತ್ಯ ಪ್ರತಿಭೆ, ಸಿನಿಮಾ ನಿರ್ದೇಶನದಲ್ಲೀ ಅವರೆಂದಿಗೂ ಎಂದೆಂದಿಗೂ ದೊಡ್ಡಣ್ಣನೇ.

—————————————————————————————————————-

Leave a Reply

Back To Top