ಕವಿತೆಯಾಗುವ ಹೊತ್ತು
ಅಂಜನಾ ಹೆಗಡೆ
ಅಲ್ಲಿ
ಕರುಳ ಬಿಸುಪಿಗೆ
ಕದಲಿದ ಕುಡಿಯೊಂದು
ಕನಸಾಗಿ ಮಡಿಲುತುಂಬಿ
ಬೆಳ್ಳಿಗೆಜ್ಜೆಯ ಭಾರಕ್ಕೆ ಕನಲಿದರೆ
ನಕ್ಷತ್ರವೊಂದು
ದೃಷ್ಟಿಬೊಟ್ಟು ಸವರಿ
ಹಣೆ ನೇವರಿಸಿ ನಕ್ಕಾಗ
ಸೃಷ್ಟಿ ಸ್ಥಿತಿ ಲಯಗಳ
ಭಾಷ್ಯವಿಲ್ಲದ ಬರೆಹಕ್ಕೆ
ತಂಬೂರಿ ಹಿಡಿದು
ನಾನಿಲ್ಲಿ
ಅಕ್ಷರವಾಗುತ್ತೇನೆ
ಅಲ್ಲೊಂದು ಇಬ್ಬನಿ
ಹಸಿರೆಲೆಯ ಮೋಹಕ್ಕೆ
ಆವಿಯಾಗುವ ಹೊತ್ತಲ್ಲಿ
ಮುಂಗುರುಳೊಂದು ನಾಚಿ
ಕೆಂಪಾಗಿ
ಅರಳಿದ ದಾಸವಾಳದ
ಪ್ರೇಮಕ್ಕೆ ಬಿದ್ದಾಗ
ಅಂಗಳಕ್ಕಿಳಿದ ಬಣ್ಣಗಳ
ಒಂದೊಂದಾಗಿ ಹೆಕ್ಕುತ್ತ
ಜೋಡಿಸುತ್ತ
ಬೆಳಕಾಗಿ ಮೈನೆರೆದು
ನಾನೊಂದು
ಚಿತ್ರಕಾವ್ಯವಾಗುತ್ತೇನೆ
ಅಲ್ಲಿ
ಜೋಕಾಲಿಯೊಂದು
ಸ್ವಪ್ನಗಳ ಜೀಕುತ್ತ
ಮುಗಿಲಿಗೆ ಮುಖಕೊಟ್ಟು
ಹಗುರಾಗುವ ಕ್ಷಣದಲ್ಲಿ
ಗಾಳಿಗಂಟಿದ ಪಾದ
ನೆಲವ ಚುಂಬಿಸುವಾಗ
ಜೀಕಲಾಗದ
ನೆಲದೆದೆಯ ನಿಟ್ಟುಸಿರ
ಗಾಳಿಗೊಪ್ಪಿಸಿ
ನಾನಿಲ್ಲಿ
ಕವಿತೆಯಾಗುತ್ತೇನೆ
**********
ಅದ್ಭುತ ಕಾವ್ಯ…ಅಭಿನಂದನೆಗಳು..