ಒಂಟಿಯಾಗಿರೋದು ಸುಲಭ , ಸಂಭಂಧಗಳೊಂದಿಗಿರೋದು ಬಾಳ ಕಷ್ಟ . ಅಂತ ಎಲ್ಲೋ ಓದಿದ ಸಾಲು ಇತ್ತಿಚಿಗಿ ತುಂಬಾ ‌ಕಾಡಲತದ.ಹೌದಲ್ಲ , ವಿಚಾರ ಮಾಡಿದ್ರ ಈ ಸಂಭಂಧಗಳು ನಾವು ಅಂದುಕೊಂಡು ಹೋದಷ್ಟು ಸುಲಭ ಅಲ್ಲ ಬಿಡ್ರಿ.

ಮದುವೆಯಾಗೋದೆ ತಡ ಅಲ್ಲಿ ಹೊಂದಾಣಿಕಿ ಸಂಭಂಧ ಶುರು ಆಗತದ. ಸ್ವಲ್ಪ ಏರು ಪೇರಾದ್ರೂ ಮುರಿದು ಬಿಳೋ ಸಂಭಂಧ ಅದು. ಈಗಿನ ಮಕ್ಕಳಿಗಿ ಮದುವಿ ಮಾಡೊದಂದ್ರ ಒಂದು ದೊಡ್ಡ ಚಿಂತೆ ಹೆತ್ತವರಿಗಿ. ಮದುವಿಯಾದ ಮ್ಯಾಲ ಹ್ಯಾಂಗ್ ಇರತಾರೋ , ಇಬ್ಬರ ನಡು ಹೊಂದಾಣಿಕಿ  ಇರತದೋ ಇಲ್ಲೋ , ಮದುವಿ ಸಂಭಂಧ ನಿಭಾಯಿಸತಾರೋ ಇಲ್ಲೋ . ಒಂದೇ ಎರಡೇ ,
ನಾವು ಅಂಜಿದಷ್ಟೋ ಈಗೀನ ಮದುವಿಗಳು ಬಾಳಿಕಿ ಬರತಿಲ್ಲ . ಅದ್ಯಾಕೋ ಗೊತ್ತಿಲ್ಲ . ಕಾರಣಗಳು ಬಾಳ ಇರಬಹುದು. ಆದ್ರ ಅವೆಲ್ಲ ಮದುವಿ ಮುರದು ಬಿಳೋ ಕಾರಣಗಳೆ ಅಲ್ಲ , ಎಲ್ಲಾ ಕಾರಣಗಳು ಬಾಳ ಕ್ಷುಲ್ಲಕ ವಾದವುಗಳು.
ಆದ್ರ ಇವೆ ಮದುವಿ ಮುರಿಲಾಕ ದೊಡ್ಡ ಕಾರಣ ಆಗಲತವ.

ಹೆತ್ತವ್ರಿಗೂ ಮಕ್ಕಳ ಸಮಸ್ಯೆ ಎನೆಂದೇ ತಿಳಿವಲ್ದು.
ತಮ್ಮ ಮಕ್ಕಳು ಈ ಸಂಭಂಧ ಬ್ಯಾಡ ಅಂದ್ರ ಹೂಂ
ಅನ್ನಲಾರದ ಬ್ಯಾರೆ ವಿಧಿನೆ ಇಲ್ಲ.ಇಲ್ಲಂದ್ರ ಜೀವಕ್ಕ ಎನಾರ ಮಾಡಕ್ಕೊಂಡಾರು ಅಂಬೋ ಅಂಜಿಕಿ ಅವ್ರೀಗಿ ಜೀವ ತಿಂತಿರತದ.

ಮುರಿದ ಮದುವೆ ನಂತರ ಗಂಡಿನದು ಹ್ಯಾಂಗೊ‌ ಆಗತದ. ಆದ್ರ ಹೆಣ್ಣು ಜೀವಂತ ಪರ್ಯಂತ ಒಬ್ಳೆ ಇರಬೇಕು. ದೊಡ್ಡ ದೊಡ್ಡ ಪಟ್ಣಗಳು , ಅಥವಾ ಸ್ವಲ್ಪ ಅಧುನಿಕ ಹೆಣ್ಣಮಕ್ಕಳು ಹೇಗೋ ತಮ್ಮ ಜೀವನ ನಡೆಸಬಹುದು. ಹಳ್ಳಿಗಳಲ್ಲಿ , ಓದದೆ ಇರೋಂತ ಹೆಣ್ಣುಮಕ್ಕಳ ಪಾಡು ಶೋಚನೀಯ. ತವರಿನಲ್ಲಿ ಅಣ್ಣ ತಮ್ಮಂದಿರ ಸಂಸಾರದ ಸಂಗಡ ಬಾಳುವೆ ಮಾಡೊದಂದ್ರ ಯುದ್ದ ಮಾಡಿದಂಗ. ಅವಳ ಅಪ್ಪ ಅಮ್ಮ ಇರೊ ತನ ಹ್ಯಾಂಗೊ ನಡಿತದ ನಂತ್ರದ ಜೀವನ ಅತಂತ್ರ. ಅದ್ಕ ನಮ್ಮ ಸಮಾಜ ಹೆಣ್ಣಿಗಿ ಗಂಡನ ಮನ್ಯಾಗ ಹ್ಯಾಂಗೆ ಇರಲಿ ಅನುಸರಿಸಿಕೊಂಡು ಹೋಗಬೇಕು ಅಂತ ಬುದ್ದಿಮಾತು ಹೆಳತಿದ್ರು. ಯಾಕಂದ್ರ ಕೊಟ್ಟ ಹೆಣ್ಣಿಗಿ ತಿರುಗಿ ತವರಮನ್ಯಾಗಿನ ಸ್ಥಾನ ಮಾನ ಎನಿರತದ ಅಂತ ಅವ್ರಿಗಿ ಗೊತ್ತಿತ್ತು.


ಆದ್ರ ಈಗ ಹೆಣ್ಣಮಗಳು ಮನಿ ಗಂಡ ಮಕ್ಕಳ ಜೋಡಿ ಅಪರೂಪದಾಗ ಬೆಳಿಲತಾರ. ಅಪ್ಪನಿಗಿ ತುಸು ಹೆಚ್ಚೆ ಪ್ರಿತಿಪಾತ್ರರು ಕೂಡ. ಸದಾ ತವರ ಮನಿ ತಮಗ ಆದರ ಅತಿಥ್ಯ ನಿಡತದ ಅಂತ ತಿಳಕೊಂಡಿರತಾರ.ಆದ್ರ ಅದು ಭ್ರಮೆ. ಮದುವೆ ಆದ ಮ್ಯಾಲ  ಮಗಳಿಗಿ ಹೆಚ್ಚು ಪ್ರಾಶಸ್ತ್ಯ ಕೊಡತಾ ಹೋದ್ರ ಮಗ ಸೋಸಿ  ವೈರತ್ವ ಅಥವಾ ಅಸಮಾಧಾನಕ್ಕ ಎದುರಾಗಬೇಕಾಗತದ.

ಹೀಗೆ ತಾನು ಹೆತ್ತ ಮಕ್ಕಳಿಂದ ಎದುರಿಸಬೇಕಾದ ಇಂತಹ ಪ್ರಸಂಗಗಳಿಗಿ ಬಹುತೇಕ ತಂದೆತಾಯಿಗಳು ಗುರಿಯಾಗಲತಾರ.

ಹುಟ್ಟುತ್ತ ಎಷ್ಟೊಂದು ಅಪರೂಪವಾಗಿ ಪ್ರೀತಿಯಿಂದ ಬೆಳೆಯುವ ಸಹೋದರ ಸಂಭಂಧಗಳು ಬೆಳಿತಾ ಅದೇಷ್ಟು ಜಲ್ದಿ ಹಳಸಿ ಬಿಡತಾವಂದ್ರ , ಒಂದೊಮ್ಮೆ ತಾವು ಒಡಹುಟ್ಟಿದವ್ರು ಆಗಿದ್ದೆವು  ಎಂಬೋ ನೆನಪು ಬರದಷ್ಟೂ. ಸಂಭಂಧಗಳು  ಹಳಸಲಕ್ಕೆ ಹೆಣ್ಣು ಮಕ್ಕಳೆ ಕಾರಣ ಅನ್ನೊ ಮಾತು ನಾವು ಕೆಳತಿರತಿವಿ.ಇದು ಪೂರಾ ಸತ್ಯ ಅನ್ನಲಿಕ್ಕ ಆಗೋದಿಲ್ಲ . ಸಂಬಂಧಗಳಲ್ಲಿ ಯಾವಾಗ ಹುಳಿ ಹಿಂಡಲ್ಪಡತದ ಅಂತ ಅರಿವು ಆಗೋದೆ ಇಲ್ಲ.

ಹಿಂದ ಇರೊ ಹಂಗ ಈಗ ಕೂಡು ಕುಟುಂಬಗಳಂತೂ ಇಲ್ಲ. ಮನೆಯಲ್ಲಿರೋ ನಾಲ್ಕು ಮಂದಿ ನಡುವೆನು ಹೊಂದಾಣಿಕಿ ಸಮಸ್ಯೆ. ಮಕ್ಕಳ ಮದುವಿ ಆಗೋ ತನ ತಂದಿ ತಾಯಿ , ಅಕ್ಕ ತಂಗಿ , ಅಣ್ಣತಮ್ಮ , ಅಂಬೋ ಸಂಭಂಧಗಳಿಗಿ ಬೆಲೆ. ಮದುವೆಯಾಗಿ ಅವರವರ ಸಂಸಾರ ಅವರವರಿಗಿ ಅಸ್ ಮ್ಯಾಲ ಇವೆಲ್ಲ ಸಂಭಂಧಗಳು ಭಾರ ಆಗಲಕ ಶುರುವಾಗತವ. ಅದರಾಗ ಅವರವರ ನಡು ಸ್ವಲ್ಪ ದುಡ್ಡಿದವ್ರು , ದುಡ್ಡಿಲ್ಲದವ್ರು ಇದ್ದರಂತೂ ಅಂತಹ ಸಂಭಂಧಗಳು ಕೋರ್ಟ , ಪೊಲಿಸ್ ಸ್ಟೇಷನ್ ತನಕ ಮೆರೆದಾಡತವ.

ನಮ್ಮ ದೇಶನೂ ಪಾಶ್ಚಾತ್ಯ ಸಂಸ್ಕತಿಗಿ ಒಳಪಡಲತದ. ಮಕ್ಕಳು ದೊಡ್ಡವರಾದ ಮ್ಯಾಲ ಅವ್ರಿಗಿ ಅವ್ರ ಪಾಡಿಗಿ ಬಿಟ್ರ ಹೆತ್ತವ್ರಿಗೂ ಮತ್ತು ಮಕ್ಕಳಿಗೂ ಇಬ್ರಿಗೂ ಒಳ್ಳೆದು. ತಂದಿ ತಾಯಿ ಮಕ್ಕಳಿಗಿ ಓದಿಸಿ , ಬೆಳೆಸಿ ಮದುವಿ ಮಾಡಿ ತಮ್ಮ ಜವಾಬ್ದಾರಿ ಮುಗಸಿರತಾರ. ಆದ್ರ ಮಕ್ಳು ಜೀವಂತ ಪರ್ಯಂತ ಹೆತ್ತವರಿಂದ ಅಪೇಕ್ಷೆ ಮಾಡತಾನೆ ಇರತಾರ. ಒಂದು ‌ಹಂತಕ್ಕ ಬಂದ ಮ್ಯಾಲ ಹೆತ್ತವ್ರಿಗೂ ಮಕ್ಕಳು ಭಾರನೆ.  ಹೌದು ಮತ್ತ , ಎಷ್ಟು ದಿನ ಅಂತ ಈ ಮಕ್ಕಳು‌‌‌ ಎಂಬೋ ಭಾರ ಹೊತ್ತಕ್ಕೊಂಡಿರೊದು. ಆದ್ರ ಅವ್ರು ಗಳಿಸಿದ್ದ
 ಮಕ್ಕಳಿಗಿ ಪೂರ್ತಿ ಕೊಡೋವರೆಗೂ ಯಾವ ಹೆತ್ತವ್ರಿಗೂ ಮಕ್ಕಳಿಂದ ಬಿಡುಗಡೆ ಇಲ್ಲ.

ಇದು ಇದ್ದವ್ರ ಕಥಿ ಆದ್ರ ಇರಲಾರದವ್ರ ಕಥಿ ಬ್ಯಾರೆನೆ.ಗಳಿಸೋ ಮಕ್ಕಳಿಂದ ಆಪೇಕ್ಷೆ ಪಟ್ಟರೆ ಮಕ್ಕಳಿಗಿ ಅಸಮಾಧಾನ. ಮಕ್ಕಳ ಸಲುವಾಗಿ ಇದ್ದದ್ದು ಎಲ್ಲ ಮಾರಿ ಅವ್ರಿಗಿ ಸೆಟಲ್ ಮಾಡಿ ಕೊನೆಗಾಲದಲ್ಲಿ ಒಂದಿಷ್ಟು ಮಕ್ಕಳಿಂದ ಅಪೇಕ್ಷೆ ಪಟ್ರೆ ಅದು ಮಕ್ಕಳಿಗೆ ಅಪರಾಧನೆ ಅನಿಸತದ.

ಅದ್ಕ ಈಗೀನ ಸಂಭಂಧಗಳಂದ್ರ ಸೂಜಿ ಮೊನೆ ಮೇಲೆ ನಡದಂಗ , ಎಷ್ಟೇ ಜಾಗರೂಕತೆಯಿಂದ ನಡದ್ರೂ ಬಿಳೋದು ಖರೆ.

ಈಗೀನ ಮಕ್ಕಳು ಮದುವೆ ಅಂದ್ರ ಒಲವು ತೊರಸೋದು ಕಡಿಮೆ ಆಗ್ಯಾದ ನೋಡ್ರಿ . ಸುಮ್ನ ಈ ಎಲ್ಲ ರಗಳೆಗಳು ಶುರು ಆಗತಾವ ಅಂತ ಭಯ ಅವ್ರಿಗಿ.ಆದ್ರೂ ಮದುವಿ ಅಂಬೋ ಬಾಂಧವ್ಯ ಅನಿವಾರ್ಯ. ಆದ್ರ ಈಗೀನ ಮಕ್ಕಳು ಮದುವೆಯ ಪದ್ದತಿ ಯಲ್ಲಿ ತೋರಿಸೋ ಆಸಕ್ತಿ ಮದುವೆ ನಂತ್ರ ಕೂಡಿ ಬಾಳೋದ್ರಾಗ ತೊರಿಸ್ತಿಲ್ಲ.

ಮದುವಿ ಅಂದ್ರ ಈಗೀನವರಿಗಿ ಅದು ಅದ್ದೂರಿ ಆಗಿರಬೇಕು.ಜೀವನದಲ್ಲಿ ಒಮ್ಮೆಯೆ ಬರುವ ಈ ಸಂದರ್ಬ ಫೋಟೋ ಶೂಟ್ ನೊಂದಿಗೆ ನೆನಪಿನಲ್ಲಿ ಉಳಿಯೊ ಹಂಗ ಮಾಡೋದು ಒಂದು ದೊಡ್ಡ ಟ್ರೇಂಡ್ ಆಗ್ಬಿಟ್ಟದ. ಅದಕ್ಕಾಗಿ ಎಷ್ಟು ಬೇಕಾದ್ರೂ ದುಡ್ಡು ಖರ್ಚು ಮಾಡತಾರ. ಎಲ್ಲಿ ಬೇಕು ಅಲ್ಲಿಗಿ ಹೋಗಿ ಪೋಟೋ ಶೂಟ್ ಮಾಡತಾರ.

ಇಷ್ಟೆಲ್ಲಾ ಖರ್ಚು ಮಾಡಿ , ಒಂದೊಂದು ಪದ್ದತಿ ನೂ ಬಿಡದಂತೆ ಅನುಸರಿಸಿದ ಮದುವೆಗಳು ಕೆಲವೆ ದಿನಗಳಲ್ಲಿ ಹಳಸಲಾಗತಿರೋದ್ಯಾಕೆ..!
ಅಷ್ಟು ಬೇಗ ಅದ್ಯಾಕೆ ಒಬ್ರಿಗೊಬ್ರು ವಿಮುಖರಾಗತಿದ್ದಾರೆ. ಒಂದು ಮೂರು ತಿಂಗಳಲ್ಲೆ ಜೀವನದ ಬಗ್ಗೆ ಉತ್ಸಾಹ ಕಳಕೊಂಡು ಬಿಡತಾರ.ಮಕ್ಕಳು ಮಾಡಿಕೊಳ್ಳೊ ಬಗ್ಗೆನೂ ಆಸಕ್ತಿ ಅಷ್ಡಕಷ್ಟೆ.

ಎಲ್ರಿಗೂ ಒಬ್ಬಂಟಿಯಾಗೆ ಬದುಕೋದು ಆರಾಮ ಅನಸ್ತಿರಬಹುದು.ಗಂಡ , ಹೆಂಡತಿ , ಮಕ್ಕಳು ಇತ್ಯಾದಿ.. ಆದ್ರ ಇವೆಲ್ಲ ಇರದಿದ್ರ ಜೀವನದಲ್ಲಿ ಇರೋ ಜವಾಬ್ದರಿ ಗಳಾದ್ರು ಎನು..! ಬದುಕಲಿಕ್ಕೆ ಇರೋ ಕಾರಣ ನೂರಿರಬಹುದು. ಸಂಭಂಧಗಳು ಹೊಸ ಹೊಸದು ಸಿಗಬಹುದು. ಆದ್ರ ಎಲ್ಲದಕ್ಕೂ ಒಂದು ಕೊನೆ ಎಂಬೊದು ಇರತದ. ಎಲ್ಲಾ ಮುಗಿದ ಮ್ಯಾಲ ಮತ್ತದೆ ಒಂಟಿತನ ಕಾಡತದ.

ಎಲ್ಲರೂ ಇದ್ರೂ ಈಗ ಎಲ್ಲರೂ ಎಕಾಂಗಿಗಳೆ ಅನ್ನಬಹುದು. ಭಾವನೆಗಳನ್ನು ಹೇಳಕೊಳ್ಳೋದು ಕಡಿಮೆ ಆಗಿಬಿಟ್ಟದ , ಎಲ್ಲಾ ಓಕೆ ಅಂತ ತೋರಸಿಕೊಳ್ಳೋ ಹಂಬಲನೆ ಹೆಚ್ಚು. ಒಳಗೊಳಗೆ ಹೊಗೆಯಾಡೊ ಸಂಭಂಧಗಳು ಯಾವಾಗ ಭುಗಿಲೆಳತಾವೋ ಗೊತ್ತೆ ಆಗವಲ್ದು. ಹೆಳಕೊಳ್ಳಕಾ ಸುತ್ತಲೂ ಬಾಳ ಸಂಭಂಧಿಕರು . ಆದ್ರ ಆ ಸಂಭಂಧಗಳೊಳಗಿನ ಆತ್ಮೀಯತೆ ಎಷ್ಟು ಎಂಬೋದು ಯಾರಿಗೂ ತಿಳಿವಲ್ದು. ಸುಮ್ನ ಮಂದಿಗಿ ತೊರಸಿಕೊಳ್ಳಕ ಇರೊ ಸಂಭಂಧಗಳೆ ಹೆಚ್ಚು.

ಕುಟುಂಬ ಮತ್ತು ಸಂಭಂಧಗಳು ಅನ್ನೊ ಪರಿಭಾಷೆ ಈಗ ಹ್ಯಾಂಗ ವಿವರಿಸಬೇಕು ಅನ್ನೊದೆ ಸಮಸ್ಯೆ.
ಕುಟುಂಬ ಅಂದ್ರ ಮೂರು ಮತ್ತೊಬ್ರು , ಸಂಭಂಧಗಳು ಅಂದ್ರ ಅದರೊಳಗಿನ ಪ್ರೀತಿಗಿಂತ  ದ್ವೇಷವೇ ಹೆಚ್ಚು.

ಆದ್ರೂ ನಮ್ಮವರೆಂಬ ಭಾಂಧವ್ಯಕ್ಕ ಮನಸ್ಸು ಸದಾ ಹಾತೊರಿತಿರತದ. ಆದ್ರ ಈ ಅಹಂ , ಮತ್ತು ಹೊಟ್ಟೆಕಿಚ್ಚು ಎಂಬೊದು ಎಲ್ಲರನ್ನೂ ದೂರ ಮಾಡತದ.

ಮದುವೆ ಎನ್ನೊ ಸಂಭಂಧ ಎರಡು ಮನಸ್ಸುಗಳನ್ನು , ಎರಡು ಮನೆಯ ಮನುಷ್ಯ ರುಗಳನ್ನು , ಎರಡು ಕುಟುಂಬಗಳನ್ನು , ಅಷ್ಟೆ ಏಕೆ..ಎರಡು ಊರುಗಳನ್ನು ಬೆಸೆಯುವ ಸಂಭಂಧ.
ಇಂತಹ ಸಂಭಂಧಗಳು ಮುಂದುವರೆದು ಮಕ್ಕಳು ಅಳಿಯಂದ್ರು , ಸೊಸೆಯರು , ಮೊಮ್ಮಕ್ಳು
 ಮತ್ತು ಇನ್ನೂ ಎಷ್ಟೊ ಹೊಸ ಸಂಬಂಧಗಳನ್ನು ಹುಟ್ಡು ಹಾಕತದ. ಅಣ್ಣ ತಮ್ಮಂದಿರು , ಹೆತ್ತವರು , ಮಕ್ಕಳು , ಕಾಲ ಸರಿದಂತೆ ಒಬ್ಬರಿಗೊಬ್ರು ಅಪರಿಚಿತರಾಗತಿರೋದು ಈಗಿನ ಕಾಲದ  ವಿಪರ್ಯಾಸ. ಈಗ ಪ್ರತಿಯೊಬ್ರು ಒಂದೊಂದು ದ್ವಿಪಗಳೆ. ತನ್ನ ಸುತ್ತಲೂ ಒಂಟಿತನದ ಕೋಟೆ ಕಟ್ಟಿಕೊಂಡು ಅದರೊಳಗೆ ಸುಮ್ಮನೆ ಉಸಿರಾಡತ ಇರೋ ಜೀವಿ ಆಗ್ಯಾನ ಮನುಷ್ಯ.


One thought on “

Leave a Reply

Back To Top