ಹೊಲದ ಬದುವಿನಮೇಲೆ ಅಪ್ಪ
ಹೆಗಲ ಮೇಲೆ ಟವಲು ಹಾಕಿಕೊಂಡು
ಬರಿದಾದ ಆಗಸವ ನೋಡುತ್ತಿದ್ದ
ಅವನ ಕಣ್ಣೊಳಗೆ
ಎಲ್ಲಾದರೂ ಹಸಿ ಮೋಡ ಒಸರಿ
ಹನಿ ನೀರಾಗುವ
ಕನಸಿತ್ತು
ನಾಕಾರು ದಿನಗಳ ಹಿಂದೆ
ಒಣ ಮಣ್ಣಲ್ಲಿ ಬಿತ್ತಿದ್ದ ಬೀಜ
ಹನಿನೀರಿಗಾಗಿ ವಕ ವಕಾ
ಬಾಯಿ ಬಿಡುತ್ತಿದ್ದವು
ಮಣ್ಣಕಣವನ್ನು ಒದ್ದು ಸೀಳಿ
ಗಿಡವಾಗುವ ಆಸೆ ಅವಕ್ಕೂ
ಅಪ್ಪನಂತೆಯೆ ಇತ್ತು
ಇಬ್ವರೂ ಕಾಯುತ್ತಿದ್ದರು..
ಮೋಡ ಹನಿಯಾಗುವದಕ್ಕಾಗಿ
ಹನಿ ಬಂದು ನೆಲ ತಣಿದು
ಬೀಜ ಮಗುವಾಗುವ ಆಸೆಗಾಗಿ
ಊರ ತುಂಬ ನಿತ್ಯ ನಸುಕಿನೊಳೆದ್ದು
ಸುತ್ತಿದ್ದ ಯಾವ ಗುಡಿ ಗುಂಡಾರದೊಳಗಿನ
ಸಿದ್ದಯ್ಯ ಮಲ್ಲಯ್ಯಗಳೂ,
ಅಪ್ಪನಿಂದ ವರುಷ ವರುಷವೂ ಪಟ್ಟಿ
ಪೀಕಿಸುತ್ತಿದ್ದ ಕಡೆಮಠದ ನಡುಮಠದ
ಅಯ್ಯಗಳೂ ಕಣ್ಣು ಬಿಡುವ ಲಕ್ಷಣ ಕಾಣಿಸಲಿಲ್ಲ
ಊರ ಗೌಡರ ಮನೆಯಲಿ
ಬದ್ರವಾಗಿದ್ದ ಅಪ್ಪ ಒತ್ತೆ ಇಟ್ಟ ಹೊಲದ
ಪಹಣಿ ಪತ್ರಿಕೆ ಕೂಡ ಆಗಸ
ಮಳೆ ಒಡೆವ ಕನಸ ಕಾಣುತ್ತಿತ್ತು
ದುರುಳ ಮಳೆರಾಯನಿಗೊ
ಇದು ವರುಷ ವರುಷ ವೂ
ಸಲ್ಲಿಸುವ ಬೇಡಿಕೆಯಾಗಿತ್ತು
ಅವನೂ ಆ ರಾಜ್ಯ ಈ ರಾಜ್ಯ ತಿರುಗಾಡಿ
ಕರೆ ಕಟ್ಟೆ ನದಿ ಕೊಳ್ಳಗಳ ತುಂಬಿಸಿ
ಬರಬೇಕಿತ್ತು….
ಯಾವುದೋ ದೇಶ ರಾಜ
ಅವನಿಗೂ ಲಗಾಮು ಹಾಕಿದ್ದ
ಈಗೀಗ ಮಾನವ ಲೋಕದ
ಜಾಣರೆಂಬವರು ಅವನಿಗಂಕುಶವ
ಹಾಕುವ ಹುನ್ನಾರ ಕಲಿತಿದ್ದರು
ಕೃತಕ ಮಳೆಯೊ ಎಂಥದೋ
ಮೋಡಿ ಮಾಡಿ ತುಂಬಿದ ಮೋಡವ
ಖಾಲಿ
ಮಾಡುತ್ತಿದ್ದರು..
ಅಪ್ಪ ಬೇಸಿಕೆಯುದ್ದಕ್ಕೂ ಕಾಯುತ್ತಲೇ
ಇದ್ದ … ಕೆಲ ದಿನಗಳ ಹಿಂದೆ
ಆವುದೋ ದೇವರ ಗದ್ದುಗೆಯಿಂದ
‘ಪೂರ್ವ ದಿಕ್ಕಿಗೆ ರುಮಾಲು
ಹಾರಿ,ರೈತನ ಹಸರ ಟಾವೆಲ್
ವಿಧಾನ ಸೌಧದ ನಾಲ್ಕನೆಯ ಮಹಡಿ
ಹತ್ತಿತಲೇ ಚಾಂಗು ಬಲೋ ‘ ಎಂದ
ನುಡಿ ಅದೆಷ್ಟು ನೆನಪಿಸಿದರೂ
ಸಾದ್ಯವಾಗುವ ನನಸು ಕಾಣಿಸಲಿಲ್ಲ
ಅಪ್ಪ ಬೆಳ್ಳಬೆಳಕ ಬರಿಮೋಡ
ನೋಡುತ್ತ
‘ ಥೋ ಇದರವ್ವನ..’
ಎನ್ನುತ್ತ ಟವೆಲ್ ಜಾಡಿಸಿ
ಒತ್ತೆ ಇಟ್ಟ ಪಹಣಿ ಪತ್ರದ ಮೇಲೆ
ಮತ್ತೊಂದು ಬೊಟ್ಟು ಒತ್ತಲು
ಗೌಡರ ಮನೆ ಕಡೆ ನಡೆದ..
ತಿಜೊರಿಯೊಳಗಿನ ಪತ್ರ
ತಣ್ಣಗೇ ನಡುಗಿತು
—++++++++++—–
ವೈ.ಎಂ.ಯಾಕೊಳ್ಳಿ

ಹೃದ್ಯವಾಗಿದೆ ಸರ್ ಕವಿತೆ