ಸರ್ವಮಂಗಳ ಜಯರಾಂ…ಕವಿತೆ,’ಚಿತ್ತ ಚೋರ’

ಚೋರನಿವನು ಚಿತ್ತ ಚೋರನಿವನು …
ಎನ್ನ ಹೃದಯ ಕದ್ದ ಕಳ್ಳನಿವನು….

ಪಿಸುಮಾತಿನಲಿ ಹಸಿಭಾವನೆಗಳ ಹತ್ತಿಕ್ಕಿ…
ಕಣ್ಣಿಗೆ ಕನಸು ಕಟ್ಟುವ ಕನಸುಗಾರನಿವನು…

ಕೋಪದಲಿ ….ಉಬ್ಬಿಸಿದ ಗಲ್ಲವ ಮುದ್ದು ಮಾಡಿ..
ಲಲ್ಲೆಗರೆಯುವ ……ಲೋಲನಿವನು….

ಹೃದಯಗರ್ಭದೊಳು ಎನ್ನ ಆರಾಧಿಸುವ…
ಪ್ರೇಮಪೂಜಾರಿ ….. ಇವನು…

ಯಾರಿಗೂ ಸೋಲದ ಮನವನು …
ಸೂರೆಗೊಂಡವನು…ನನ್ನ ಪ್ರೀತಿಗೆ ಶರಣಾದವನು…

ಹೃದಯದ ಬಡಿತ ಏರಿಸುವವನು…
ನಾಡಿಯ ಮಿಡಿತಕೆ ಲಯವಾದವನು…

ಕೋಪ ತಾಪದ ಮಿಂಚು ಗುಡುಗನು….
ನಗೆಯ ಅಲೆ ಎಬ್ಬಿಸಿ …ಶಮನಗೊಳಿಸುವವನು…

ಮೊಗದಲಿ ಮಂದಹಾಸ ಮೂಡಿಸುವವನು….
ಕಲ್ಪನೆಯ ಕನಸಿಗೆ ಬಣ್ಣ ಹಚ್ಚುವ ಕಲೆಗಾರನಿವನು…

ಪದಗಳಲಿ ಹೇಳಲು ನಿಲುಕದವನು…
ಪದ್ಯಗಳಲಿ …..ಪದವಾದವನು…‌

ಚೋರನಿವನು …ಚಿತ್ತ ಚೋರನಿವನು….
ಎನ್ನ ಹೃದಯ ಕದ್ದ ಕಳ್ಳನಿವನು…….

Leave a Reply

Back To Top