ಲಹರಿ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
‘ನೀನೊಂದು ಮುಗಿಯದ ಮೌನ
ನಾ ಹೇಗೆ ತಲುಪಲಿ ನಿನ್ನ’
ಪ್ರೀತಿಯ ದೀಪಿಕಾ
ನೀನು ಮೊದಲ ಸಲ ಕಣ್ಣಿಗೆ ಬಿದ್ದ ಅವಿಸ್ಮರಣೀಯ ಕ್ಷಣಗಳನ್ನು ಮರೆಯಲಾದೀತೆ ? ಗಣೇಶ ಚೌತಿಯ ಸಂಜೆ ಗಣಪತಿ ನೋಡುವ ನೆಪದಲ್ಲಿ ಸಿಂಗರಿಸಿಕೊಂಡ ಹುಡುಗಿಯರ ನೋಡಲೆಂದೇ ಗೆಳೆಯರೊಂದಿಗೆ ಹೊರಗೆ ಕಾಲಿಟ್ಟೆ. ಅಂದು ಅಚ್ಚರಿಯೊಂದು ಕಾದಿದೆಯೆಂದು ನನಗೂ ತಿಳಿದೇ ಇರಲಿಲ್ಲ. ಎಂದೂ ಕೇಳರಿಯದ ಕಂಡರಿಯದ ಸ್ನಿಗ್ದ ಚೆಲುವಿನ ಅನಾವರಣಗೊಂಡಿತು ಅಕ್ಷಿಗಳ ಕುಕ್ಕಿತು. ಅಪರೂಪದ ರೂಪ ಕಂಗಳ ಬರ ಸೆಳೆಯಿತು. ಅತ್ತ ಇತ್ತ ತಿರುಗಾಡಿ ದಣಿದ ದೇಹ ತಣಿಯಿತು. ಜನದಟ್ಟಣೆಯಿಂದ ಬಸಿವ ಬೆವರ ಹನಿಗಳು ಇಂಗಿದವು. ಅದೇನು ಮೋಡಿ ಮಾಡಿದೆಯೋ ಹೃನ್ಮನಗಳು ಮುದಗೊಂಡವು. ಈ ಹಿಂದೆ ಎಂದೂ ಕಾಣದ ನಿಜ ಸೌಂದರ್ಯ ಕಂಡು ಹೃದಯ ರಿಂಗಣಿಸಿತು.
ಅಂದ-ಚೆಂದದ ಕಾವ್ಯ ಕನ್ನಿಕೆ ಕಂಡಿದ್ದು ಕಣ್ಣು. ಆದರೆ ತಾಳ ತಪ್ಪಿದ್ದು ಹೃದಯದ್ದು. ಒಮ್ಮೆಲೇ ಪುಳಕಿಸುವ ಭಾವ ಪುಟಿದಿದ್ದೆತು. ಒಂದು ಕ್ಷಣವೂ ಕಾಯದೇ ನಿನ್ನ ಹಿಂದೆ ಹೆಜ್ಜೆ ಹಾಕಿದವು ಕಾಲುಗಳು. ಕಂಡ ಗಳಿಗೆಯೇ ಜೀವ ತಂತಿಯ ಮೀಟಿಯಾಗಿತ್ತು. ನಿನ್ನುಸಿರ ಶೃತಿಗೆ ನನ್ನುಸಿರ ಬೆಸೆಯಬೇಕೆಂಬ ಬಯಕೆ ಮನದಲ್ಲಿ ಮೂಡಿತ್ತು. ಬೇಲೂರ ಶಿಲಾ ಬಾಲಿಕೆಯೂ ನಾಚುವಳು ನಿನ್ನ ಕಂಡು. ಚೆಲುವಿನ ಕಡಲೋ ಒಲವಿನ ಒಡಲೋ ಒಂದೂ ತಿಳಿಯದೇ ಚಿಕ್ಕಮಗು ಜಾರು ಬಂಡಿಯಲ್ಲಿ ಜಾರಿದಂತೆ ಆನಂದತುಂದಿಲನಾದೆನು. ‘ಲವ್ ಆ್ಯಟ್ ಫಸ್ಟ್ ಸೈಟ್’ ಅಗಿದೆ ನನಗೆ. ಪಡ್ಡೆ ಹುಡುಗ ನಾನಲ್ಲ ನೀ ನನ್ನ ಲೈಲಾ ನಾ ನಿನ್ನ ಮಜನು ಎಂದು ಹೇಳಲು ಅನುವಾದೆನು. ಆದರೆ ಧೈರ್ಯ ಸಾಲಲಿಲ್ಲ.
ಆಗಿದ್ದಾಗಲಿ ಎಂದು ಮರುದಿನ ಧೈರ್ಯವನ್ನು ಒಟ್ಟಡುಗೂಡಿಸಿಕೊಂಡು ಮೋಹಕ ಮೂರು ಶಬ್ದಗಳನ್ನು (ಐ ಲವ್ ಯೂ) ಹೇಳಿದೆ. ಜಗತ್ತಿನ ಅದ್ಭುತವೆಂಬಂತೆ ನೀನೂ ಅದೇ ಪದಗಳನ್ನು ಮಧುರ ದನಿಯಲ್ಲಿ, ನಾಚುತ್ತ ಮರುನುಡಿದೆ. ಆಗ ನನಗೆ ಮುಗಿಲು ಮೂರೇ ಗೇಣು ಉಳಿದೆಂತನಿಸಿತು.
ಅಂದಿನ ಆ ದೃಶ್ಯ ನೆನೆಪಿಸಿಕೊಂಡರೆ ಮತ್ತಷ್ಟು ಮಗದಷ್ಟು ಮುದಗೊಳ್ಳುವುದು ಮನ. ಬಣ್ಣ ಬಣ್ಣದ ಚಿತ್ತಾರದ ಕನಸುಗಳ ಮೆರವಣಿಗೆ ಕನಸಿನಲ್ಲಿ ನವಿರಾಗಿ ಮೂಡಿದ ಭಾವ. ನಿತ್ಯವೂ ಕಾಣುವ, ಕಾಡುವ ಕನಸೂ ಅದೇ. ಅದೆಂದು ನೆರವೇರುತ್ತದೆಂದು ಸದಾ ಬೆಂಬತ್ತುತ್ತದೆ ಮನಸ್ಸು.
ಬದುಕೆಂದರೆ ಪ್ರೀತಿ ಪ್ರೇಮದ ಯಾತ್ರೆ. ಆದರೆ ಇದು ಎಲ್ಲರ ಬಾಳಲ್ಲೂ ಸಿದ್ಧಿಸುವುದಿಲ್ಲ. ಪವಿತ್ರ ಪ್ರೀತಿ ಸಿಕ್ಕ ಮೇಲೆ ಇನ್ನೊಬ್ಬಳ ಕಡೆ ಕಣ್ಣು ಹಾಕದಂತೆ ಗಟ್ಟಿಯಾಗೆಂದಿತು ಆಂತರ್ಯ. ಅದುವೇ ನಿಜ ಪ್ರೇಮದ ಮಾಧುರ್ಯ.
ಸಾವಿರಾರು ವರುಷಗಳು ಉರುಳಿದರೂ ನಿನಗಾಗಿಯೇ ಹಾತೊರೆಯುವೆ. ನನಗಾಗಿ ಮಿಡಿವ ಜೀವದ ಕ್ಷೇಮವನ್ನೇ ಅನುಕ್ಷಣವೂ ಬೇಡುವೆ. ಏಳೇಳು ಜನುಮಕೂ ನೀನೇ ನನ್ನ ದೊರೆಸಾನಿ. ನಮ್ಮಿಬ್ಬರ ಭವಿಷ್ಯದ ಹಿತಕ್ಕಾಗಿ ಎಲ್ಲ ರೀತಿಯ ಕಷ್ಟಗಳನ್ನು ಎದುರಿಸಲು ನಾನು ಸಿದ್ಧ. ಹೃದಯದ ಬಡಿತಕ್ಕೆ ನೀನೇ ಇಂಧನ. ಗಂಧವನ್ನು ಉಜ್ಜಿದರೆ ಸುಗಂಧ ಪಸರಿಸಿದಂತೆ ನನ್ನ ನಿನ್ನ ಮಿಲನ. ಎಂದೆಲ್ಲ ತಲೆಗೆ ತೋಚಿದ್ದನ್ನೆಲ್ಲ ಗಪದ್ಯದಂತೆ ಗೀಚಿ ನಿನ್ನೆದೆಯ ಸಿಂಹಾಸನದಲ್ಲಿ ನೆಲೆಯೂರುವ ಸಾಕ್ಷ್ಯವನ್ನು ನಿರೂಪಿಸಿದೆ.
ಹೂದೋಟದಲ್ಲಿ ಮುಸ್ಸಂಜೆ ರಂಗಿನಲ್ಲಿ ಮೈ ತೀಡುವ ಮೆಲುಗಾಳಿಗೆ ಮೈಯೊಡ್ಡಿ ಕೂತಿದ್ದೆ. ಅಂದು ನಿನ್ನ ಹುಟ್ಟು ಹಬ್ಬವಾದ್ದರಿಂದ ಭರ್ಜರಿಯಾಗಿ ತಯಾರಾಗಿದ್ದೆ. ತಿಳುವಾದ ತಿಳಿ ಕೆಂಗುಲಾಬಿ ಸೀರೆಗೆ ಬಂಗಾರದಂಚಿನ ಕಪ್ಪು ರವಿಕೆ ತೊಟ್ಟಿದ್ದೆ. ಕತ್ತಿನಲ್ಲಿದ್ದ ಮಿರ ಮಿರ ಮಿಂಚುವ ನೆಕ್ಲೆಸ್ ನಿನ್ನ ಮುಂದೆ ಮಿಂಚದೆ ನಾಚುತ್ತಿತ್ತು. ಮಲ್ಲಿಗೆ ಮಾಲೆಯೊಂದು ದಟ್ಟ ಕೇಶರಾಶಿಯಲ್ಲಿ ಮೆಲ್ಲನೇ ನಗುತ್ತಿತ್ತು. ದೇವಲೋಕದ ರಂಭೆಯೋ ಮೇನಕೆಯೋ ಧರೆಗಿಳಿದಿರಬಹುದು ಅಂತ ಅಂದುಕೊಂಡೆ. ಉಸಿರು ತಾಕುವಷ್ಟು ಹತ್ತಿರ ನಿಂತಿದ್ದೆ. ಅಪ್ಪಟ ಅಪ್ಸರೆಯಂತೆ ಕಾಣುತ್ತಿದ್ದೆ.
ಮೀನಿನಂತಹ ಕಣ್ಣಲ್ಲಿ ಕಣ್ಣಿಟ್ಟು ಹುಟ್ಟು ಹಬ್ಬದ ಶುಭಾಶಯಗಳನ್ನು ನಿನಗೆ ಹೇಳಿದೆ. ಉನ್ಮಾದದ ಹೊಳೆಯಲ್ಲಿ ಮಿಂದೆದ್ದವನಂತೆ ನಿನ್ನನ್ನು ನೋಡುತ್ತ ಕರಗಿ ಹೋದೆ. ಅದೆ ಕ್ಷಣ ನಿನ್ನಲ್ಲಿ ಕಳೆದು ಹೋದೆ.
ನಿಧಾನವಾಗಿ ನನ್ನ ಮುಖದ ಮೇಲೆ ಕೋಮಲ ಕೈಯೊಂದು ಹರಿದಾಡಿತು. ಚಿಗುರು ಮೀಸೆಯನ್ನು ಮುದ್ದಾದ ಕೆನ್ನೆಯೊಂದು ಸವರಿತು.ನಾನು ರೋಮಾಂಚಿತನಾಗುವ ಹೊತ್ತಿನಲ್ಲಿ ನೀನು ಜ್ಞಾನೋದಯವಾದಂತೆ ತುಸು ದೂರ ಸರಿದೆ. ನನ್ನತ್ತ ಎಳೆದುಕೊಂಡು ನನ್ನ ತೋಳ ಬಂಧನದಲ್ಲಿ ಬಳಸಿ ಹಿಡಿದು, ಅದರಗಳು ಅದರಗಳನ್ನು ಬಿಗಿಯಾಗಿ ಅಪ್ಪಿಕೊಂಡರೆ ಎಷ್ಟು ಚಂದ ಅಲ್ಲವೆ ಅಂತ ಸಪೂರವಾದ ಕೆನ್ನೆ ಚಿವುಟಿದೆ. ನಾಚಿಕೆಯ ರಂಗು ಕೆನ್ನೆಗೇರಿ ಗೊಂಬೆಯಂತೆ ಕಾಣತೊಡಗಿದೆ. ಮೈಮರೆತು ಮತ್ತಿನ್ನೇನೋ ಆಗಬಾರದು ಎನ್ನುತ್ತ ಹುಸಿ ಮುನಿಸು ತೋರಿದೆ. ಮೊದಲೇ ಚೆಲುವೆ ಮುನಿಸಿಕೊಂಡರೆ ಮತ್ತಷ್ಟು ಚೆಲುವೆಯಾಗಿ ಕಂಡೆ. ನನ್ನ ಖುಷಿಗೆ ಪಾರವೇ ಇರಲಿಲ್ಲ. ಬಾನಂಚಿನ ಸೂರ್ಯನ ಕಿರಣಗಳು ಮೆಲ್ಲನೆ ನಿನ್ನ ಮುಖದ ಕಾಂತಿ ಹೆಚ್ಚಿಸಿತು. ಆಗ ಮತ್ತೇರದಂತಾಗಿ ಎರಡೂ ಕೆನ್ನೆಗಳಿಗೆ ತುಟಿಗಳ ಮುದ್ರೆಯನ್ನೊತ್ತಿದೆ..
ಪ್ರೀತಿಯ ನಶೆಯಲ್ಲಿದ್ದಾಗ ಬಿಸಿ ರಕ್ತ ಏನು ಬೇಕಾದರೂ ನಡೆಯಬಹುದು. ನನಗೆ ಹೆದರಿಕೆಯಾಗುತ್ತೆ ನನ್ನಪ್ಪನ ಒಪ್ಪಿಗೆ ಪಡೆದ ಮೇಲೆ ಮುಂದಿನ ಚೆಲ್ಲಾಟ ಎನ್ನುತ್ತ ಬೆದರಿದ ಹರಿಣಿಯಂತೆ ಓಡಿದೆ.
ಸಮುದ್ರದ ದಂಡೆಯ ಬಳಿ ಮನೆ ಕಟ್ಟಿ ಅಲೆಗಳಿಗೆ ಅಂಜಿದರೆ ಹೇಗೆ? ಪ್ರೀತಿ ಮಾಡಿ ಹೆದರಿದದರೆ ದಕ್ಕೀತೆ ಅಮೂಲ್ಯ ಪ್ರೇಮ? ಯರ‍್ಯಾರಿಗೋ ಅಂಜಿ ಪ್ರೇಮದ ಸುಧೆಯನ್ನು ಸವಿಯದೇ ಇರಲಾದಿತೇ? ಬಾಳಿಗೆ ಜೊತೆಯಾದವಳ ನಗುವಿನಲ್ಲೇ ಸಾಗಬೇಕು ಬಾಳು. ಒಂದಿಷ್ಟು ನಲಿವು ನೋವು ಒಂದಿಷ್ಟು ಕೋಪ ತಾಪ ಒಂದಿಷ್ಟು ಇರುಸು ಮುರುಸು ಇದ್ದರೆ ತಾನೆ ಜೀವನದ ನಂದನವನ ಚೆನ್ನ? ಬರಿ ನಲಿವಿರುವ, ಬರಿ ನೋವಿರುವ ಬಾಳು ಇರದು ಅಂತ ನಿನಗೂ ಗೊತ್ತು ಚಿನ್ನ. ಪ್ರೀತಿಯೆಂದರೆ ದೊಡ್ಡ ಮಂಜುಗಡ್ಡೆ ಸ್ಪರ್ಶಸಿದಂತೆ.ಪ್ರೀತಿ ವಿಶ್ವಾಸದ ಕೊರತೆಯಾದರೆ ಅವರಿವರ ಬುದ್ಧಿಮಾತು ಕೇಳಬೇಕಾಗುವುದು. ವಕೀಲರ ಬಳಿ ಹೋಗುವ, ಕೋರ್ಟ್ ಮೆಟ್ಟಿಲು ಹತ್ತುವ ಪ್ರಸಂಗ ಬರುವುದು.
ನೀನು ಕಣ್ಣೆದುರಿಗೆ ಕಾಣದಿದ್ದರೆ ತಲೆ ಓಡೋದೇ ಇಲ್ಲ. ಅಷ್ಟೇ ಅಲ್ಲ ಕಣ್ಣಕೊಳ ತುಂಬಿ ತುಳಕಿದ್ದೂ ಇದೆ. ಮನದ ತುಂಬ ನಿನ್ನದೇ ಬಿಂಬ.ಸವಿ ಸವಿ ಕ್ಷಣಗಳನ್ನು ಮರೆಯೋದಕ್ಕೆ ಪ್ರಯತ್ನಿಸಿದರೂ ಮರೆಯಲಾಗದೇ ಇರೋ ಕಟು ಸತ್ಯ ಅದು. ಪ್ರೀತಿಯೆಂಬುದು ಈ ಸೃಷ್ಟಿಯ ಮಹಾ ಬೆರಗು. ಪ್ರೀತಿಯ ಸೆಳೆತ ಎಳೆತವನ್ನು ನಿಬಾಯಿಸಲೆಂದೇ ಇರೋದು ಮದುವೆ. ನಾ ಹೆಚ್ಚು ನೀ ಹೆಚ್ಚು ಎಂದು ಕಿತ್ತಾಡುವುದು, ಹಮ್ಮು-ಬಿಮ್ಮು ಅಡ್ಡ ಬರುವುದು ಸರಿಯಲ್ಲ. ಒಬ್ಬರನ್ನೊಬ್ಬರು ಛೇಡಿಸುತ್ತ, ಪರಸ್ಪರ ಸೋತು ಒಂದಾಗುವುದೇ ಚೆಂದ ಅಲ್ವೇ ಸುಮತಿ?
ಒಲುಮೆ ನಲುಮೆಗಳ ಗಣಿ. ನಯ ವಿನಯ ಲಯ ಲಾಲಿತ್ಯ ಮಾತಿನಲ್ಲಿ ಸಾಹಿತ್ಯ ಕಂಡಾಗ ಜೀವಂತ ಕಾವ್ಯ ಬಾಲಿಕೆಯಂತೆ ಕಾಣುವೆ. ನಿನ್ನನ್ನು ಪೂರ್ತಿ ತೆರೆದಿಟ್ಟ ಪುಸ್ತಕದಂತೆ ಅಂದುಕೊಂಡಿದ್ದೆ. ಒಮ್ಮೊಮ್ಮೆ ಬಿಡಿಸಲಾಗದ ಒಗಟಾಗಿ ಬಿಡುವೆ. ಅದೇಕೆ ಹೀಗೆ ದೂರ ಸರಿದೆ ಅಂತ ಗೊತ್ತಾಗುತ್ತಿಲ್ಲ. ಮತ್ತೆ ಗಣೇಶ ಚೌತಿ ಬಂದಿದೆ. ನಿನ್ನ ಗಲ್ಲಿಗೆ ಬಂದೇ ಬರುವೆ. ಚಿಗುರಿದ ಕನಸುಗಳ ಕಮರಿ ಹೋಗಲು ಬಿಡುವುದಿಲ್ಲ. ಕೋಪ ಬಿಟ್ಟು ಬಾ ಹೊಂದಾಣಿಕೆಯೆಂಬ ಬಾಳಿನ ಬೆಸುಗೆಯಲ್ಲಿ ಬೆಸೆದುಕೊಳ್ಳೋಣ. ಮೆತ್ತನೆಯ ಹಾಸಿಗೆಯಲ್ಲಿ ಬೆಚ್ಚನೆಯ ಆಟದಲ್ಲಿ ಒಂದಾಗೋಣ.
ನಿನ್ನ ಬರುವಿಗಾಗಿ ಕಾಯುತ್ತಿರುವ
ಇಂತಿ ನಿನ್ನ ದೀಪಕ
ಜಯಶ್ರೀ.ಜೆ. ಅಬ್ಬಿಗೇರಿ