ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕುಸಿಯುತಲೇ ಕಹಿ ನುಂಗುವ ತಾವರೆಯ ವೇದನೆ ಅರಿತವರಾರು
ಜುಳುಗುಡುತ ತಾಪ ಸಹಿಸುವ ಜಲಧಾರೆಯ ವೇದನೆ ಅರಿತವರಾರು

ಉಸಿರು ನೀಡಿ ಸಲಹುವ ಭೂರಮೆಯ ಸಹನೆ ತಾಳ್ಮೆಗೆ ಸಮರುಂಟೆ
ಬೆಳಗುತಲಿ ಮೈಸುಟ್ಟುಕೊಳ್ಳುವ ದೀವಿಗೆಯ ವೇದನೆ ಅರಿತವರಾರು

ಸಿಡಿಯುವ ಜ್ವಾಲಾಮುಖಿ ಒಡಲನು ಕೊರೆದರೂ ಸಹಿಸಬೇಕಿದೆ
ಕರಗುತಲೆ ಕೊರಗದೆ ತಾಳುವ ಮೊಂಬತ್ತಿಯ ವೇದನೆ ಬಲ್ಲವರಾರು

ಪ್ರಸವವೇದನೆಯ ನೋವು ಬಸುರಿಗಲ್ಲದೆ ಮತ್ತಾರಿಗೆ ತಿಳಿಯಲುಂಟು
ಬೆತ್ತಲೆ ದೇಹವೊಡ್ಡಿ ಏಟುಗಳ ತಿನ್ನುವ ಬಂಡೆಯ ವೇದನೆ ಅರಿತವರಾರು

ಬೂದಿಮುಚ್ಚಿದ ನಿಗಿನಿಗಿಪ ಕೆಂಡದಂತೆ ಅನುಳ ಕಷ್ಟ ಬಣ್ಣಿಸಲಾಗದು
ಮಿಂಚು ಗುಡುಗಿನೊಂದಿಗೆ ಸುರಿವ ಮಳೆಯ ವೇದನೆ ಅರಿತವರಾರು

3 thoughts on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

  1. ನೀರಿನೊಳಗಳುವ ಮೀನಿನ ಅಳು ನಮಗೆಲ್ಲಿ ಕಾಣುವುದು.
    ಚಂದವಾಗಿದೆ ಗಜಲ್

  2. ಉತ್ತಮವಾದ ಗಜ಼ಲ್ ; ಭಾವನಿವೇದನೆಯ ದ್ರವ್ಯ ಪರಮಾಭಿನಂದನೀಯ , ಮೇಡಮ್ .
    ಶುಭೋದಯ.

Leave a Reply

Back To Top