ಬದುಕೆಂದರೆ ಮರುಳು: ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ

[9:49 pm, 06/11/2024] Dr. Yallamma K.: ಮೊನ್ನೆ ದಿನ ಅಂದರೆ ಮೊನ್ನೆ ಅಂತಲ್ಲ, ಇಂತಹ ನಿನ್ನೆ ಮೊನ್ನೆಗಳು ನಮ್ಮ ಬಾಳಿನಲ್ಲಿ ಅದೆಷ್ಟೋ ಬಂದು ಹೋಗಿದ್ದಾವೆ ಆ ಮಾತು ಬೇರೆ. ಕಳೆದ ಹದಿನೈದು ದಿನ ರಜೆ ಮೇಲೆ ತೆರಳಿದ ನಮ್ಮ ಸಹೋದ್ಯೋಗಿ ಮಿತ್ರರೊಬ್ಬರು, ಯರ್ರೀಸ್ವಾಮಿ ಅಂತ ಹೆಸರು (ಹೆಸರು ಬದಲಾಯಿಸಿಲ್ಲ) ಉಸ್ಸಪ್ಪಾ ಎಂದು ನನ್ನೆದುರಿನ ಕುರ್ಚಿಗೆ ಒರಗಿ ಕೂತರು, ಯಾಕ್ ಸರ್ ಏನಾಯ್ತು ಅಂದೆ..? ತಮ್ಮ ಅಪ್ಪ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಇದ್ದಕಿದ್ದ ಹಾಗೆ ಬಿ.ಪಿ. ಲೋ ಆಗಿಬಿಟ್ಟು ಕೆಳಗೆ ಬಿದ್ದುಬಿಟ್ಟರು, ಕೂಡಲೇ ಬಳ್ಳಾರಿ ಆಸ್ಪತ್ರೆಗೆ ಕರಕೊಂಡು ಹೋಗಿ ಅಡ್ಮಿಟ್ ಮಾಡಿದೀವಿ, ಪರಿಸ್ಥಿತಿ ಕೈ ಮೀರಿದ್ದು ತೀವ್ರ ನಿಗಾ ಘಟಕದಲ್ಲಿ (ಐ.ಸಿ.ಯು) ಇರಿಸುವುದಾಗಿ ಡಾಕ್ಟರ್ ಹೇಳಿದಾಗ ನಮ್ಮ ಉಸಿರೇ ನಿಂತುಹೋಗಿತ್ತು ಎಂದು ಆಸ್ಪತ್ರೆಯ ಇತಿವೃತ್ತವನ್ನು  ಬಿಚ್ಚಿಟ್ಟರು.

‘ಮುಪ್ಪಿನಲ್ಲಿ ನಾಸ್ತಿಕನೂ ಆಸ್ತಿಕನಾಗುತ್ತಾನಂತೆ’ ಎಂಬ ಡೈಲಾಗನ್ನು ಹಾಸ್ಯರತ್ನ ತೆನಾಲಿ ರಾಮಕೃಷ್ಣ ಸಿನಿಮಾದಲ್ಲಿ ಕೇಳಿದ ನೆನಪು.., ಮೇಡಂ ನೀವು ನಿಜ ಹೇಳಿದರು ಕೇಳ್ತೀರಾ, ಸುಳ್ಳು ಹೇಳಿದರೂ ಕೇಳ್ತೀರಾ.., ಸರಿ ಯಾವುದೋ ಒಂದು ಹೇಳಿ ಸರ್, ನಮ್ಮ ಅಪ್ಪ ಮೊದಲಿನಿಂದಲೂ ದೈವಭಕ್ತ, ದೇವರು-ಡಿಂಡರು, ಗುಡಿ-ಗುಂಡಾರ, ಜಾತರಿ-ಜಮಾತಿ ಅಂತ ಇಲ್ಲದ ಉಸಾಬರಿ ಮಾಡಿಕೊಂಡು ಬಂದಾತ, ಆ ದಿನ ರಾತ್ರಿ ಇದ್ದಕಿದ್ದ ಹಾಗೆ ಕಿರುಚಿದ ಐ.ಸಿ.ಯು ನಿಂದ ನರ್ಸ್ ಒಬ್ಬಳು ಓಡಿಬಂದು ಕೂಗಿ ಕರೆದಳು, ಸರಹೊತ್ತಿನ ನಿದ್ದೆ ಮಂಪರಿನಲ್ಲಿದ್ದ ನಾನು ಎದ್ದು ಹೋದೆ, ಬಂದಾ.., ಬಂದಾ.., ನಮ್ಮ ವಿಟ್ಲ ಬಂದಾ.., ಪಂಡರಾಪುರದಿಂದ ವಿಟ್ಲ ಬಂದ.., ನನಗಾಗಿ ಬಂದ, ನನ್ನನ್ನು ಕರೆದುಕೊಂಡು ಹೋಗಲು ಬಂದಾ.., ಅಂತ ನನ್ನ ಕೈ ಹಿಡಿದು ಗಳಗಳನೇ ಕಣ್ಣೀರು ಗರೆದ, ನಿಜಾ ಮೇಡಂ ನಿಮಗೆ ಇದು ಯಾವುದೋ ಡಾಕ್ಟರ್ ರಾಜಕುಮಾರ ರವರ ಹಳೇ ಚಿತ್ರದ ಸ್ಟೋರಿ ಅನಿಸ್ಬಹುದು, ಅದೊಂದು ತರಹ ಮರಳು ಮೇಡಂ ನಮ್ಮ ಅಪ್ಪನಿಗೆ, ಹೆಂಗೆಂಗೋ ಆಡ್ತಾ  ಇದ್ದ ಅಂದರೂ, ಸರಿ ಬಿಡಿ,  ಅಪ್ಪಯ್ಯ ಈಗ ಹೇಗಿದ್ದಾರೆ ಅಂದೆ, ಆರಾಮ್ ಇದ್ದಾರೆ, ಬೆಳಿಗ್ಗೆ ಎದ್ದು ಪೇಪರ್ ಓದ್ತಾರೆ, ಮೆತ್ತಗೆ ಹೊರಗೆ ಒಳಗೆ ಓಡಾಡಿಕೊಂಡು ಇದ್ದಾರೆ, ಹದಿನೈದು ದಿನ ನರಕದಲ್ಲಿ ಒದ್ದಾಡಿ ಮನೆಗೆ ಬಂದ್ವೀ, ಸ್ವರ್ಗಕ್ಕೆ ಬಂದಷ್ಟೇ ಖುಷಿ ಆಯ್ತು ನೋಡಿ ಅಂದರು..,
ಸ್ವರ್ಗವಂತೆ, ನರಕವಂತೆ ಇದು ಕೂಡ ಒಂಥರಾ ಮರುಳೇ ತಾನೇ..?

ಯಾರ್ ಪಾಡು ಅವರಿಗೆ.., ಇದರ ನಡುವೆಯೇ ಬಸ್ ಗಾಗಿ ಪೇಟೆ ಸ್ಟ್ಯಾಂಡ್ ನಲ್ಲಿ ಕಾಯ್ತಾ ಕುಳಿತಿದ್ದೆ, ಅಲ್ಲೇ ಮೂಲೆಯೊಂದರಲ್ಲಿ ಮಲಗಿದ್ದ  (ಸುಮಾರು ವರುಷಗಳಿಂದ ಅಲ್ಲಿಯೇ ಮಲಗಿರುವಂತೆ) ನಮಗೆಲ್ಲ ಅರೆಹುಚ್ಚನಂತೆ ತೋರುವವ, ಆತನೆಡೆಗೆ ದೃಷ್ಟಿ ಹರಿತು, ಅವನು ಒಬ್ಬನೇ ಒಳಒಳಗೇ ನಗ್ತಾ ಇದ್ದ, ನಾನು ನೋಡ್ತಾ ನಿಂತೆ, ಕುತೂಹಲ ತಡೆಯಲಾಗದೆ ಅವನಲ್ಲಿಗೆ  ನಡೆದು, ಮಾತಿಗೆ ಎಳೆದೆ, ಯಾಕೆ ನಗ್ತಾ ಇದಿಯಾ ಅಂತ ಕೇಳ್ದೆ..? ಈ ಹುಚ್ಚರ ಸಂತೆ ಕಂಡು ನಗದೇ ಇನ್ನೇನು ಮಾಡಲಿ ಅಂದ! ಅದ್ಹೇಗೆ ಸ್ವಲ್ಪ ಬಿಡಿಸಿ ಹೇಳು.., ಏನಮ್ಮಾ ನೋಡೋಕೆ ತುಂಬಾ ಓದಿಕಂಡ್ಹಂಗೆ  ಕಾಣ್ತೀಯ ನಿಮಗೆ ನಾನೇನು ಬಿಡಿಸಿ ಹೇಳೋದು? ಇಲ್ಲ ಅಂಗ
ಕಾಣ್ತೀನಿ ಅಷ್ಟೇ ಇನ್ನು ತುಂಬಾ ಓದ್ಕೋಬೇಕಿದೆ ನಾನು, ಪರವಾಗಿಲ್ಲ ನೀ ಹೇಳು ಅಂದೆ..,

ಬಸ್ ಸ್ಟ್ಯಾಂಡ್ ತುಂಬಾ ಈ ಜನಗಳನ್ನು ನೋಡಿ, ಗಂಟು- ಮೂಟೆ ಕಟ್ಟಿಕೊಂಡು, ಗಂಡ-ಹೆಂತಿ, ಮಕ್ಳು-ಮರಿ ಅಂತ ಬಡದಾಡಿ ಹತ್ತತಾವೆ.., ಇಳಿತಾವೆ.., ಎಲ್ಲಿಗೆ ಹೋಗ್ತಾವೋ, ಎಲ್ಲಿ ಇಳಿತಾವೋ?  ನಾಳೆ ಸತ್ತಮೇಲೆ ಏನು ಹೊತಗಂಡು ಹೋಗ್ತಾವ? ಇವುಗಳ ಹುಚ್ಚುತನ ಕಂಡು ನಾನು ಆಗಾಗ್ಗೆ ನಗ್ತಾ ಇರತೀನಿ, ಮರಾಗ್ತಾ  
ಇರತೀನಿ, ಕೊರಗ್ತಾ ಇರತೀನಿ ಅಂದ! ಇದರಲ್ಲಿ ನಿಜಕ್ಕೂ ಹುಚ್ಚರು ಯಾರು? ಆತನೋ, ನಾವೋ ಎಂದು ತಿಳಿಯದೆ, ತಲೆಕೆರೆದು ಕೊಳ್ಳುತ್ತಾ ಮನೆಕಡೆ ದಾರಿ ಹಿಡಿದೆ.

ನನ್ನ ಗೆಳತಿಯೊಬ್ಬಳು ಹೀಗೆಯೇ ಕಾಲೇಜು ದಿನಗಳಲ್ಲಿ ಓದಿನ ಕಡೆ ಗಮನ ಹರಿಸದೆ ಪ್ರೀತಿ, ಪ್ರೇಮ ಮತ್ತು ಪ್ರಣಯ ಅಂತೆಲ್ಲ ಅಲೆದಲೆದು, ಇದ್ದರೂ ಅವನೊಂದಿಗೆ, ಸತ್ತರೂ ಅವನೊಂದಿಗೆ ಅಂತ್ಹೇಳಿ! ಇಲ್ಲದ ರಾದ್ಧಾಂತ ಮಾಡಿ ಮದುವೆ ಮಾಡಿಕೊಂಡು, ಈಗ ನಾಲ್ಕು ಮಕ್ಳು ತಾಯಾಗಿ ಎರಡು ಕೈಯಲ್ಲಿ ಸುಖ ಉಣ್ಣುತ್ತಿದ್ದಾಳೆ, ಮೊನ್ನೆ ಸಿಕ್ಕಾಗ ಹೇಳತಿದ್ಳು.., ನಿಂದೆ ಆರಾಮ್ ನೋಡು, ಒಳ್ಳೇ ನಿರ್ಧಾರ ತಗೊಂಡೆ, ಆಗ ನಾವು ತಪ್ಪು ಮಾಡಿ ಈಗ  ಪಶ್ಚಾತ್ತಾಪ ಪಡ್ತಿದೀವಿ ನೋಡೇ, ಆವಯಸ್ಸೇ ಅಂಗೇ ಅನಿಸುತ್ತೆ.., ಹುಚ್ಚುಹುಚ್ಚಾಗಿ ಆಡಿ, ‘ಸುಖದ್ಜೀವಕ್ಕೆ ನಾವೇ ಮುಳ್ಳು ಚುಚಿಕೊಂಡಿವಿ’ ನೋಡು ಪ್ರೀತಿ ಹುಚ್ಚಿನಲ್ಲಿ ಅಂದ್ಲು.., ಪ್ರೀತಿ ಹುಚ್ಕೋ, ಹುಚ್ಚು ಪ್ರೀತಿಯೋ? ನಾನರಿಯೆ, ಅಂತ ಪ್ರೀತಿಯ ಹುಚ್ಚಿಗೆ, ಹದಿಹರೆಯದ ವಯಸ್ಸಿನ ಕೆಚ್ಚಿಗೆ ಸಿಕ್ಕದೆ ಹೋದೆ, ಹೇಗೋ ಬದುಕಿತು ಬಡಪಾಯಿ ಜೀವಾ.
ದೂರದ ಸಂಬಂಧಿಯೊಬ್ಬರು ಮೊನ್ನೆ ಹಬ್ಬಕ್ಕೆಂದು ಮನೆಗೆ ಬಂದಿದ್ದರು, ಮೊನ್ನೆ ಅಂದ್ರೆ ಮೊನ್ನೆ ಅಲ್ಲ, ಹತ್ತು ವರುಷದ ಹಿಂದಿನ ಮಾತು, ಲೋಕಾಭಿರಾಮವಾಗಿ ಮಾತನಾಡುತ್ತಾ.., ಅಲ್ಲಾ.., ಎನ್ ಉಳಿಸಿದಿ, ಎನ್ ಗಳಿಸಿದೀ ಅಂತ ನಮ್ಮನ್ನ ಯಾರಾದರೂ  ಕೇಳ್ತಾರಾ? ಮಕ್ಕಳ ಸಂಪತ್ತು ಕೇಳ್ತಾರಾ? ನೋಡು, ಮಕ್ಕಳಾ ಒಂದು ಸಂಪತ್ತು! ಏನಿದ್ದರೇನು? ಸರ್ಕಾರಿ ನೌಕರಿ, ಕೈತುಂಬಾ ಸಂಬಳ,  ಒಂದು ಮದುವೀ ಅಂತಾಗಿ ಗಂಡ-ಹೆಂಡತಿ, ಮಕ್ಳು-ಮರಿಯಂತ ಸಿಂಬಳ ವರಸಕಂತ ಕುಂದ್ರದಾಗ ಇರೋ ಸುಖ ಇನ್ನೆಲ್ಲಿ ಸಿಗತೈತಿ ಅಂತೀನಿ? ನಾಳೆ ಮುಪ್ಪಿನ ಕಾಲಕ್ಕ ನಮ್ಮನ್ನ  ಯಾರು ನೋಡ್ತಾರ? ನಾಕಕ್ಷರ ಕಲ್ತು ಬುಟ್ರಾ ಮಳ್ಳುವು ಆಡಿದಂಗ ಆಡ್ತಾವ.., ನೀವು ಹಿರಿಯೋರು ಆದವರು ವಸಿ ಕರಿಸಿ, ಕುಂದ್ರಿಸಿ, ತಿಳಿಸಿ, ಬುದ್ಧಿ ಹೇಳಿ, ಒಂದು ಲಗ್ನ ಅಂತ ಮಾಡಿದರ ತಮ್ಮ ಸಂಸಾರ ಅಂತ ತಾವೇ ಮಾಡಿಕೊಂಡು ಹೋಗ್ತಾವ, ‘ಎತ್ತು ಏರಿಗೆಳೀತು ಕೋಣ ನೀರಿಗೆಳೀತು’ ಅಂದ್ರೆ ಸಂಸಾರ ಆಗತೈತೇನು..? ಅಂತ ಸೊಲ್ಲು ಎತ್ತಿದ್ದಾಗಲೇ, ಇದು ಯಾಕೋ ಎತ್ತ ಸುತ್ತಿ ನನ್ನ ಬುಡಕ್ಕೆ ಬರುವಂಗ ಕಾಣತೈತಿ ಎಂದು ತಿಳಿದು ನಾನು ಅಲ್ಲಿಂದ ಕಾಲ್ಕಿತ್ತೆ.

ಆಡೋರ ಮಾತಿಗೆ ತುತ್ತಾಗದೆ, ಹೆರವರ ತೊತ್ತಾಗದೆ, ಜನ-ದನ ಗಡಿಗಿ ಬಾಯಿ ಮುಚ್ಚೋಕೆ ಆಗದೇ ಇದ್ದರೂ ಒಂದಲ್ಲ ಒಂದು ದಿನ ಒಡೆದು ಹೋಗೋದೇ, ಅಷ್ಟಕ್ಕೂ ಮೂಲಿಮನಿ ನಿಂಗವ್ವನ ಕತಿ ಹೇಳ ತೀರದು, ಹತ್ತು ಮಕ್ಳ ಹೆತ್ತರು ಮನಿ ಮನಿ ತಿರುಗಿ ತಿನ್ನಾಂಗ ಆಗೈತಿ! ಮಕ್ಕಳಿಲ್ಲದವರಿಗೆ ಅದೊಂದೇ ಚಿಂತೆ, ಇದ್ದವರಿಗೆ ಸಾವಿರ ಚಿಂತೆ!, ಸಂಸಾರಿಗೆ ತನ್ನ ಸಂಸಾರದ ಚಿಂತೆಯಾದರೆ, ಸಂನ್ಯಾಸಿಗೆ ಮಠ ಕಟ್ಟಿಸಬೇಕು, ಬೆಳಸಬೇಕು ಅಂತ ಇಡೀ ಜಗತ್ತಿನದ್ದೆ ಚಿಂತೆ, ಹೀಗೆಯೇ ಬದುಕೆಂಬ ಹುಚ್ಚರ ಸಂತೆಯಲ್ಲಿ
ಸಿಲುಕಿದ ನಾನೊಬ್ಬಳು ಹುಚ್ಚಿ, ಜನ ಮರುಳೋ , ಜಾತರಿ ಮರುಳೋ, ಬದುಕೆಂದರೆ ಮರುಳಯ್ಯ ಮರಳು.


ಡಾ. ಯಲ್ಲಮ್ಮ ಕೆ

Leave a Reply

Back To Top