‘ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾಲತಾಣಗಳ ಕೊಡುಗೆ ‘ನಾಗರಾಜ ಬಿ.ನಾಯ್ಕ

  ಸಾಹಿತ್ಯ ಸಾಲುಗಳ ಅಸ್ಮಿತೆ. ಅದೊಂದು ಭಾಷೆಯ ಹೃದಯಬಡಿತ. ವಿವಿಧ ಪ್ರಕಾರಗಳಲ್ಲಿ ಸಾಹಿತ್ಯದ ಪರಿಭಾಷೆಗಳಲ್ಲಿ ಪ್ರವಹಿಸಿ ಆಪ್ತವಾಗುವುದು ಜನರ ನಡುವಿನ ಆಡುವ ಭಾಷೆ. ಭಾಷೆ ಕಥೆಯಾಗಿ, ಕಾವ್ಯವಾಗಿ, ಕವನವಾಗಿ, ಕಾದಂಬರಿಯಾಗಿ, ವಿವಿಧ ರೂಪಕಗಳಾಗಿ, ಲೇಖನಗಳಾಗಿ ರೂಪ ತಳೆಯುವುದು. ಶಾಶ್ವತವಾಗಿ ನಮ್ಮ ನಡುವೆ ಉಳಿದುಬಿಡುವುದು. ಸಾಹಿತ್ಯ ಜೀವನದ ಪ್ರತಿ ಹಂತದ ಒಡನಾಡಿ. ಮಗುವೊಂದು ಲಾಲಿ ಹಾಡನ್ನು ಗುನುಗುನಿಸಿದರೆ ಅದು ಶಿಶುಸಾಹಿತ್ಯ. ಅಲ್ಲಿಂದ ಆರಂಭವಾಗಿ ಅದು ಬದಲಿಸುವ, ಪ್ರತಿರೂಪವಾಗುವ ಸಂದರ್ಭಗಳು ಅನೇಕ. ಅಲ್ಲೊಂದು ಅಪರೂಪದ ಪರಿಚಯದ ಬದುಕಿರುತ್ತದೆ. ವಿಸ್ತಾರವಾಗಿ ಉಳಿಯಬಲ್ಲ ಭರವಸೆ ಇರುತ್ತದೆ. ನೊಂದ ನೋವಿಗೆ ಋಣಿಯಾಗುವ ದನಿಯಿರುತ್ತದೆ. ನೆನಪಿಗೆ ಪಲ್ಲವಿಯಾಗುವ ಪದಗಳ ಲಾಲಿತ್ಯವಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಪ್ರೀತಿಸುವ ಜಗತ್ತಿರುತ್ತದೆ. ಸಮಾಧಾನವಿರುತ್ತದೆ. ಒಂದೊಂದು ಸಾಹಿತ್ಯದಲ್ಲಿಯೂ ಸಾವಿರ ಸಾಹಿತ್ಯದ ಮೂಲಗಳು ಇರುತ್ತವೆ. ಹುಡುಕಾಟವಿರುತ್ತದೆ. ಕನ್ನಡ ಸಾಹಿತ್ಯ ಎನ್ನುವಂತದ್ದು ಒಂದು ದೊಡ್ಡ ಸಾಗರದಂತೆ. ಅಲ್ಲಿರುವ ಸೃಜನಶೀಲ ಕೌತುಕಗಳನ್ನ, ಮನಸ್ಸಿನ ಮಾತುಗಳನ್ನ,ಭಾವಗಳನ್ನ ಒಳಗಣ್ಣಿನಿಂದ ನೋಡುವ ಪರಿ ವಿಶೇಷ ವಿಶಿಷ್ಟವೂ ಆದದ್ದು . ಬೆಳಗ್ಗಿನಿಂದ ಸಂಜೆಯವರೆಗೆ ಎಲ್ಲವೂ ಕಾವ್ಯ ಅಥವಾ ಸಾಹಿತ್ಯದ ಪಾತ್ರವಾಗಿ ನಿಲ್ಲುವುದು ಸಾಹಿತ್ಯಕ್ಕೊಂದು ಪುಟವಿಟ್ಟಂತೆ. ಎಲ್ಲಿ ಚಿಂತನಶೀಲತೆ ಇರುತ್ತದೆಯೋ ಅಲ್ಲೊಂದು ಸಮೃದ್ಧ ಸಾಲುಗಳ ಸಾಹಿತ್ಯ ಮನೆ ಮಾಡಿರುತ್ತದೆ.

         ಹೀಗೆ ಬೆಳೆಯುತ್ತಿರುವ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾಲತಾಣಗಳ ಕೊಡುಗೆ ವಿಶಿಷ್ಟವಾದದ್ದು. ಹಲವಾರು ವೇದಿಕೆಗಳು ಸಾಹಿತ್ಯಕ್ಕಾಗಿ ರೂಪುಗೊಂಡು ದಿನಂಪ್ರತಿ ಹಲವಾರು ಸ್ಪರ್ಧೆಗಳ ಏರ್ಪಡಿಸಿ ಹೊಸ ಸಾಹಿತಿಗಳಿಗೆ ಆಧಾರವಾಗಿ ನಿಂತಿರುವುದು ಜಾಲತಾಣಗಳ ಶ್ರೇಷ್ಠತೆ. ಸಾಹಿತ್ಯ ಹೃದಯ ಗೆಲ್ಲುವ ಪರಿ ಅನೇಕ. ಇಂದಿನ ಜಗತ್ತಿನಲ್ಲಿ ಮೊಬೈಲ್, ಅಂತರ್ಜಾಲ ಎನ್ನುವುದು ಊಟ ತಿಂಡಿ ಅಷ್ಟೇ ಆಪ್ತವಾದದ್ದು. ಅದರಲ್ಲಿ ಜಾಲತಾಣಗಳು ವಿಶೇಷವಾಗಿ ಅದರದೇ ಪರಿಧಿಯಲ್ಲಿ ಸಾಹಿತ್ಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡು ಭಾಷಾಭಿಮಾನಕ್ಕೆ ನಿಷ್ಠವಾಗಿರುವುದು ಓದುಗರ ಬರೆಯುವವರಿಗೆ ಆಧಾರವಾಗಿರುವುದು ಇಂದಿನ ನೈಜ ಸತ್ಯ. ಜಾಲತಾಣಗಳು ಅವುಗಳ ಸಾಹಿತ್ಯಗಳು ಜನರನ್ನ ತಲುಪುವುದು ಕ್ಷಣಾರ್ಧದಲ್ಲಿ. ಉತ್ತಮವಾದ ಸಾಹಿತ್ಯದ ಸಾಲುಗಳಿಗೆ ಇಲ್ಲಿ ವೇದಿಕೆ ಸದಾ ಸಿದ್ಧವಾಗಿರುತ್ತದೆ ಮತ್ತು ಸಾಹಿತ್ಯ ಪ್ರೇಮವನ್ನು ಇಮ್ಮಡಿಗೊಳಿಸಿ ಸಾರ್ಥಕವಾಗುತ್ತದೆ. ಒಂದು ಚಿಂತನೆಯನ್ನು ವಿಚಾರವನ್ನಾಗಿಸಿ ಹರಡಲು ವಿಸ್ತಾರವಾಗುವುದು ಜಾಲತಾಣಗಳ ಸಾಹಿತ್ಯ. ಅದೊಂದು ಅಭಿವ್ಯಕ್ತಿಯಾದರೂ ಅದು ಪ್ರವಹಿಸುವ ರೀತಿ ವಿವೇಚನೆಯ ಸನ್ಮಾರ್ಗವಾಗುತ್ತದೆ. ಅಲ್ಲಿ ಅನೇಕ ಹೊಸ ಮುಖಗಳ ಅನಾವರಣವಾಗುತ್ತದೆ. ಸಾಹಿತ್ಯದ ಹೊಸತನದ ಬಿಂಬಗಳಿಗೆ ಪ್ರತಿಬಿಂಬವಾಗಿ ನಿಲ್ಲುತ್ತದೆ. ಜೊತೆಗೆ ಜಾಲತಾಣಗಳು ಸಾಹಿತ್ಯದ ಸಂವಾದಗಳಿಗೆ ವೇದಿಕೆಯಾಗಿ ಬದುಕಿಗೆ ಬೇಕಾದ ಹೊಸತನದ ಸಾಲುಗಳಿಗೆ ಮಾರ್ಗದರ್ಶಿಯಾಗಿ ನಿಂತು ದಾರಿ ತೋರಿಸಿ ಕಥೆ, ಕವನ, ನಾಟಕ, ಚುಟುಕು ಹೀಗೆ ಹಲವು ಸಾಹಿತ್ಯದ ನೆಲೆಗಳಾಗಿ ನಿರಂತರವಾಗಿ ಬೆಳೆಯಲು ಸಹಾಯಕವಾಗುತ್ತದೆ.

        ಉತ್ಸಾಹ, ಆಸಕ್ತಿ ಇರುವ ಯುವಕ ಯುವತಿಯರಿಗೆ ಸಾಹಿತ್ಯದ ಪ್ರೇಮಿಗಳಿಗೆ ಮೂಡುವ ಸಾಲುಗಳಾಗಿ ಜೀವಂತವಾಗಿ ಉಳಿಯುತ್ತದೆ. ಅಭಿವ್ಯಕ್ತಿ ಎನ್ನುವುದು ವೇದಿಕೆ ಇದ್ದಾಗ ತಾನೇ ತಾನಾಗಿ ಬೆಳೆಯುತ್ತದೆ ಮತ್ತು ಪ್ರೋತ್ಸಾಹಿಸಿದಾಗ ಉತ್ಸಾಹದಿಂದ ಪಾಲ್ಗೊಳ್ಳುತ್ತದೆ. ಅಲ್ಲೊಂದು ವೈಚಾರಿಕ ನೆಲೆಗಟ್ಟು ಸಾಹಿತ್ಯವಾಗಿ ರೂಪುಗೊಂಡು ಸಂಭ್ರಮವಾಗುತ್ತದೆ. ಜಾಲತಾಣಗಳು ಅಂತಹ ಅನೇಕ ವೇದಿಕೆಗಳನ್ನು ಒದಗಿಸುತ್ತದೆ. ಜೊತೆಗೆ ಸಾಹಿತ್ಯದ ವಿಶ್ಲೇಷಣೆಯನ್ನು ಮಾಡಿ ಉತ್ತಮ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಪರಿಚಿತವಾದ ಏನೋ ಒಂದನ್ನು ವಿವರಿಸಿ ಅದರಲ್ಲಿನ ಒಂದು ನೈಜ ಭಾವವನ್ನು ತೆರೆದು ತೋರಿಸುವುದು ಅದರ ಪ್ರಾಮುಖ್ಯತೆಯನ್ನು ಹೆಚ್ಚು ಮಾಡಿದೆ. ಸಾಹಿತ್ಯದ ಹಲವು ಪ್ರಕಾರಗಳನ್ನು ಜನರಿಗೆ ಸುಲಭವಾಗಿ ತಲುಪಿಸಿ ಅದನ್ನು ಅರಿಯುವಂತೆ ಮಾಡುವ ಮಹಾ ಕಾರ್ಯವು ಅದರಿಂದ ನೆರವೇರುತ್ತಿರುವುದು ಇಂದಿನ ದಿನಗಳಲ್ಲಿ ಸಾಹಿತ್ಯದ ಬೆಳವಣಿಗೆಗೆ ಕಾರಣವಾಗಿದೆ. ಅದರ ಜೊತೆಗೆ ಸಂವಾದಗಳು, ನೈಜ ವಿಶ್ಲೇಷಣೆಗಳು, ವಿಜ್ಞಾನ ಲೇಖನಗಳು, ಹಳೆ ಹಾಡಿನ ಸಿರಿತನಗಳು, ಎಲ್ಲವೂ ಅನಾವರಣವಾಗುವುದು ಜಾಲತಾಣಗಳಿಂದ ಸಾಧ್ಯವಾಗಿಸಿದೆ. ಹಿಂದೆಲ್ಲ ಕವಿಗಳ, ಸಾಹಿತಿಗಳ, ಲೇಖಕರ ಭಾವಚಿತ್ರಗಳನ್ನು ಮಾತ್ರ ಪುಸ್ತಕದ ಪ್ರಕಟಣೆಗಳಲ್ಲಿ, ಪತ್ರಿಕೆಗಳಲ್ಲಿ ನೋಡಿ ಪರಿಚಯ ಮಾಡಿಕೊಳ್ಳಬೇಕಿತ್ತು. ಇಂದು ಜಾಲತಾಣಗಳು ಅವರ ಭಾವಚಿತ್ರಗಳ, ಲೇಖನಗಳ ಎಳೆ ಎಳೆಯಾಗಿ ಬಿಡಿಸಿ ಪರಿಚಯಿಸುತ್ತಿದೆ ಎಂಬುದು ಅತ್ಯಂತ ಖುಷಿಯ ವಿಚಾರ. ಹುಡುಕುವ ಸಾಹಿತ್ಯದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ತೋರಿಸುವ ಜಾಲತಾಣಗಳು ಕೂಡ ಇವೆ. ಬೇಕೆಂದಾಗ ಸಾಹಿತ್ಯವನ್ನು ಆಲಿಸುವ ಸೌಲಭ್ಯವನ್ನು ನೀಡಿ ಜಾಲತಾಣಗಳು ಶಬ್ದಗಳ ಮೂಲಕ ಆಡಿಯೋಗಳ ಮೂಲಕ ಜನರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದೆ. ಓದಬೇಕಾದ ಪುಸ್ತಕಗಳನ್ನು ಒದಗಿಸುವ ಜಾಲತಾಣಗಳು ಸಾಕಷ್ಟಿವೆ.‌ ಅಲ್ಲಿ ಪುಸ್ತಕಗಳನ್ನ ಸಾಹಿತ್ಯವನ್ನು ಡಿಜಿಟಲ್ ರೂಪದಲ್ಲಿ ಓದುವ ಸೌಲಭ್ಯವುಗಳು ಇದೆ. ಸಾಕಷ್ಟು ಗ್ರಂಥಾಲಯಗಳು ಕೂಡ ಇದ್ದು ಅವುಗಳನ್ನು ಜಾಲತಾಣಗಳಲ್ಲಿ ನೋಡಿ ಓದಬಹುದಾದ ಬಹುದೊಡ್ಡ ಅವಕಾಶ ಇಂದಿನವರಿಗೆ ಇದೆ. ಭಾಗವಹಿಸುವ ಕವಿಗಳಿಗೆ ಓದುಗರಿಗೆ ಸಾಹಿತ್ಯಕ್ಕಾಗಿ ನಡೆಯುವ ಹಲವು ಕಾರ್ಯಕ್ರಮಗಳನ್ನು ಪರಿಚಯಿಸುವ, ಸ್ಪರ್ಧೆ ನಡೆಸುವ ಕಾರ್ಯವ ಜಾಲತಾಣಗಳು ಮಾಡುತ್ತಿವೆ. ಅಕ್ಷರ ಎನ್ನುವುದು ಪದವಾಗಿ ಬದಲಾಗಿ ಸಾಹಿತ್ಯವಾಗಿ ರೂಪುಗೊಂಡು ಒಂದು ಚಿಂತನಶೀಲ ಸಾಹಿತ್ಯವಾಗುವಾಗ ಅದು ಹಲವು ಅನುಭವಗಳನ್ನು ಋಣಿಯಾಗಿಸಿಕೊಂಡು ಬೆಳೆಯಬೇಕಾಗುತ್ತದೆ. ಅದಕ್ಕೆಲ್ಲಾ ಅಂತ:ಪ್ರೇರಣೆಯನ್ನು, ನೈಜ ಸಿರಿತನವನ್ನು, ಹಿರಿತನವನ್ನು ತಂದು ಕೊಡುವುದು ಜಾಲ ತಾಣಗಳ ಶ್ರೇಷ್ಠತೆ. ಬೇಕೆಂದಾಗ ಓದಲು ನೆರವು ನೀಡಿ ಸಾಹಿತ್ಯದ ಬೆಳವಣಿಗೆಯ ಶ್ರೀಮಂತಿಕೆಗೆ ಆಧಾರವಾಗುವುದು ಭೂಮಿಯಲ್ಲಿರುವ ಮರ ಗಿಡದ ಬೇರುಗಳನ್ನು ಎಣಿಸಲು ಸಾಧ್ಯವಿಲ್ಲವೋ ಹಾಗೆ ಸಾಹಿತ್ಯದಲ್ಲಿರುವ ಒಳಮುಖದ ಒಳಿತನ್ನು ಜೀವಿತದ ಬಂಧುತ್ವವನ್ನು ಉಳಿಸಿ ಬೆಳೆಸುವ ಕಾರ್ಯ ಜಾಲತಾಣಗಳು ಮಾಡುತ್ತಿರುವುದು ಅವುಗಳ ವಿಶೇಷ ಜೊತೆಗೆ ಮಾದರಿ ಕಾರ್ಯ.

          ನಿಯತದಿ ಸಾಗುವ ಅನೇಕ ಸಾಹಿತ್ಯದ ಕಾರ್ಯಗಳು ಒಂದು ಮೈಲಿಗಲ್ಲು ನಿರ್ಮಿಸಿ ಸುಮ್ಮನಾಗುತ್ತದೆ. ಅಂತೆಯೇ ಸಾಮಾಜಿಕ ಜಾಲತಾಣಗಳು ರೂಪಿಸಿರುವ ಸಾಹಿತ್ಯ ಚಟುವಟಿಕೆಗಳು, ಸಾಹಿತ್ಯದ ಪ್ರಕಟಣೆಗಳು ಹಲವಾರು ಇವೆ. ಇವೆಲ್ಲವೂ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಆಧಾರವಾಗಿದೆ. ಹೊಸ ಹೊಸ ಮಾದರಿಗಳಲ್ಲಿ ನಿಂತು ಹೊಸತನದ ರೂಪಕಗಳೊಂದಿಗೆ ಸಾಹಿತ್ಯಕ್ಕಾಗಿ ಮಾದರಿಯಾಗುವುದು ಅದರ ವಿಶೇಷವಾಗಿದೆ. ಅದರೊಂದಿಗೆ ಸಾಮಾಜಿಕ ಜಾಲತಾಣಗಳು ಸದಾ ಸಂಪರ್ಕಕ್ಕೆ ಸಿಗುವುದರಿಂದ ಅಲ್ಲಿ ಸದಾ ಹೊಸತನ್ನು ಹೊಸತನವನ್ನು ಕಲಿಯುವುದರೊಟ್ಟಿಗೆ ಇತರರಲ್ಲೂ ಹೊಸತನ ತರಲು ಸಾಧ್ಯವಿದೆ. ಜನರಿಗೆ ಆಲೋಚನೆಯನ್ನು, ಮಾಹಿತಿಯನ್ನು, ಚಿಕ್ಕದಾಗಿ, ವಿಸ್ತೃತವಾಗಿ, ಸಾಹಿತ್ಯಿಕವಾಗಿ ಹಂಚಿಕೊಳ್ಳಲು ತುಂಬಾ ಅವಕಾಶಗಳು ಇರುವುದು ಇನ್ನೂ ವಿಶೇಷ. ಹೊಸತನದ ಹೊಸ ಸಾಹಿತ್ಯ ಪರಿಚಯ ಮತ್ತು ಅಭಿವ್ಯಕ್ತಿ ರಚನೆಗೆ ಸಾಕಷ್ಟು ವೇದಿಕೆಗಳನ್ನ ಅವಕಾಶಗಳನ್ನು ಒದಗಿಸುತ್ತ ಕನ್ನಡ ಸಾಹಿತ್ಯ ಬೆಳವಣಿಗೆಗೆ ಕಾರಣವಾಗಿದೆ. ಸಾಹಿತ್ಯದ ಒಂದು ಸೇತುವೆಯಾಗಿ ಜಾಲತಾಣಗಳು ಕಾರ್ಯ ನಿರ್ವಹಿಸುವುದರೊಟ್ಟಿಗೆ ಅದರ ಗಟ್ಟಿತನದ ನಿಲುವಿಗೆ ಆಧಾರವಾಗಿದೆ. ಸಾಹಿತ್ಯದ ಪ್ರಚಾರದ ದೃಷ್ಟಿಯಿಂದಲೂ ಉತ್ತಮ ಕಾರ್ಯ ಮಾಡುತ್ತಿದೆ. ಉತ್ತಮ ಪರಿಚಯದಿಂದ ಸಾಹಿತ್ಯ ಉಳಿಯಬಲ್ಲದು. ಬೆಳೆಯಬಲ್ಲದು. ಜನಸಾಮಾನ್ಯರಿಗೆ ಹತ್ತಿರವಾದ ಸಾಮಾಜಿಕ ಕಳಕಳಿಯ ಮಾನವೀಯತೆಯ ಅಂತ:ಕರಣದ ನೆಲೆಯಲ್ಲಿ ಅದು ಪ್ರಭಾವಿಸಿ ಪ್ರಸ್ತುತವಾಗುವುದು ಅದರ ಬಳಕೆಯಲ್ಲಿ.

         ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿ ಸಾಮಾನ್ಯನನ್ನು ಬೆಳೆಸಿದ್ದು ಸಾಮಾಜಿಕ ಜಾಲತಾಣಗಳು. ಇರುವ ವ್ಯಾಪ್ತಿಯೊಳಗೆ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತ ಸಾಹಿತ್ಯದ ರಚನೆಯ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಹಲವು ಜನರ ದೊಡ್ಡ ಸಮೂಹವೇ ಈ ಜಾಲತಾಣಗಳ ಬಹುದೊಡ್ಡ ಆಸ್ತಿ. ಅದರೊಟ್ಟಿಗೆ ಸಾಹಿತ್ಯ ಬಹುದೊಡ್ಡ ಸಂಪತ್ತು. ಹೊಳೆಯುವ ಕ್ಷಣಗಳೊಟ್ಟಿಗೆ ಸಾಹಿತ್ಯವಾಗುವ ಸಾಲುಗಳು ಜೀವಂತ ಪ್ರತಿಮೆಗಳಂತೆ ಉಳಿಯುವುದು ಜಾಲತಾಣಗಳಲ್ಲಿ. ಅವರವರ ವಿಚಾರಗಳಿಗೆ ಅಭಿಪ್ರಾಯ ವ್ಯಕ್ತಪಡಿಸಲು ಉತ್ತಮ ರಹದಾರಿಯನ್ನು ತೋರಿ ಸಾಹಿತ್ಯವನ್ನು ಬೆಳಸುತ್ತಿದೆ. ಓದಿ ನಲಿಯುವ ಖುಷಿ ಒಂದಡೆಯಾದರೆ ಓದಿ ಬರೆಯುವ, ಬರೆದಿದ್ದನ್ನ ಅರಿಯುವ ಖುಷಿ ಮತ್ತೊಂದೆಡೆ ಸಿಗುವುದು ಇವುಗಳಿಂದ.

        ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಆಧುನಿಕ ಜಗತ್ತಿನ ಸಂಪರ್ಕದ ಮಹಾ ಸುಜ್ಞಾನವಾಗಿ ನಿಂತಿರುವುದು ಎಲ್ಲರಿಗೂ ಹೆಮ್ಮೆ ಮತ್ತು ಖುಷಿಯ ವಿಚಾರ. ಅದರೊಟ್ಟಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ರಚನೆಗೆ, ತಿಳಿವಿಗೆ,ಅರಿವಿಗೆ ಕಾರಣವಾಗುವುದರೊಟ್ಟಿಗೆ ಕನ್ನಡಕ್ಕೆ ಭಾಷೆಗೆ ಒಂದು ಅಸ್ತಿತ್ವವನ್ನು ಬರಹ ರೂಪದಲ್ಲಿ ನೀಡಿ ಎಲ್ಲವನ್ನು ಸಾಧ್ಯವಾಗಿಸಿರುವುದು ಭಾಷೆಗೊಂದು ಹೆಮ್ಮೆ. ಉಪಯೋಗ  ಉಪಕಾರಿಯಾಗಲಿ.  ಹೊಸ ಮುಖಗಳ ಅನಾವರಣದೊಂದಿಗೆ ಹೊಸ ಹೊಸ ಸಾಲುಗಳು ಸಾಂಗತ್ಯ ಹೊಸದಾಗಲಿ. ಹಿರಿಯರ, ಜನಪದರ, ಹಳೆಯ ಸಾಹಿತ್ಯದ ಬೆಳಕು ಸದಾ ಬೆಳೆಸಿಕೊಳ್ಳುವ ಅರಿವಾಗಲಿ. ಹೊಸತು ಹಳೆಯದರ ಎರಡರ ಹರಿವಿನೊಟ್ಟಿಗೆ ಸಾಹಿತ್ಯದ ಸಿರಿ ಸಮೃದ್ಧವಾಗಲಿ. ಬದುಕು ಒಂದು ಪ್ರೇರಣೆಯಾಗಲಿ. ಸಾಹಿತ್ಯ ಬದುಕಿನ ಅಂತ:ಕರಣವಾಗಲಿ. ಹೃದಯ ಗೆಲ್ಲುವ ಮೂಲಕ ಒಂದು ಭಾಷೆಯ ಸೌಗಂಧ ಹೆಚ್ಚಲಿ. ನುಡಿ ಒಂದು ಸಂಪತ್ತಾಗಲಿ. ಎಲ್ಲರೂ ಆರಾಧಿಸುವ, ಬೆಳೆಸುವ, ಮನಸು ಕಟ್ಟುವ ಹೆಮ್ಮೆಯ ಜೊತೆಗೆ ನಮ್ಮದೆನ್ನುವ ಹೃದಯಸ್ಪರ್ಶಿ ಭಾವ ಭವಿಷ್ಯವಾಗಲಿ. ಜಾಲತಾಣಗಳ ಭಾಷೆ ಉಳಿಸುವ ಬೆಳೆಸುವ ಕಾರ್ಯ ಸಾರ್ಥಕವಾಗಿ ಮುಂದುವರೆಯಲಿ ಎಂಬುದು ಎಲ್ಲರ ಶುಭ ಹಾರೈಕೆಯಾಗಿ ಉಳಿಯಲಿ……..


Leave a Reply

Back To Top