ಧಾರಾವಾಹಿ-58
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ವಿಷವಾದ ಹಣಬೆ
ಹೊಟ್ಟೆ ನೋವಿನಿಂದ ಅಳುತ್ತಾ ಬಂದ ಮಗಳನ್ನು ತನ್ನ ಪಕ್ಕದಲ್ಲಿ ಕುಳ್ಳಿರಿಸಿ, ಅವಳ ಬೆನ್ನನ್ನು ಸವರಿದಳು ಸುಮತಿ.
ಆಗ ಎರಡನೇ ಮಗಳು ವಾಂತಿ ಮಾಡಲು ಪ್ರಾರಂಭಿಸಿದಳು. ಸುಮತಿಗೆ ಗಾಭರಿಯಾಯ್ತು. ಕಂಕುಳಲ್ಲಿದ್ದ ಮಗುವನ್ನು ಬಿಟ್ಟು ಉಳಿದಿಬ್ಬರು ಮಕ್ಕಳು ವಾಂತಿ ಮಾಡಿಕೊಳ್ಳತೊಡಗಿದರು. ಕೋಣೆಯಲ್ಲಿ ಮಲಗಲು ತೆರಳಿದ್ದ ವೇಲಾಯುಧನ್ ರವರಿಗೂ ಹೊಟ್ಟೆ ನೋವು ಪ್ರಾರಂಭವಾಯಿತು. ಅಷ್ಟು ಹೊತ್ತಿಗೆ ಸುಮತಿ ಅಳುತ್ತಲೇ….”ಏನೂಂದ್ರೆ ಮಕ್ಕಳಿಬ್ಬರೂ ವಾಂತಿ ಮಾಡಿಕೊಳ್ಳುತ್ತಿದ್ದಾರೆ…. ನನಗೂ ತುಂಬಾ ಹೊಟ್ಟೆ ನೋವು ಆಗುತ್ತಿದೆ….ಸ್ವಲ್ಪ ಇಲ್ಲಿ ಬನ್ನೀ”….ಎಂದು ಬರುವ ವಾಂತಿಯನ್ನು ತಡೆದುಕೊಳ್ಳುತ್ತಾ ಕೂಗಿಕೊಂಡಳು. ವೇಲಾಯುಧನ್ ಹೊಟ್ಟೆಯ ಸಂಕಟ ತಾಳಲಾರದೇ ಅಡುಗೆ ಮನೆಗೆ ಬಂದರು. ಊಟದ ನಂತರ ಹೀಗೆ ಎಲ್ಲರಿಗೂ ಆಗಿದೆಯಲ್ಲಾ!!! ಹಾಗಾದರೆ ತಾವೆಲ್ಲರೂ ತಿಂದ ಅಣಬೆ ಸರಿಯಿಲ್ಲವೇ? ಈ ಆಲೋಚನೆ ಅವರ ಮನದಲ್ಲಿ ಬಂದ ಕೂಡಲೇ ತಡ ಮಾಡದೇ ಹೊರಗೆ ಬಂದು ಹೊಟ್ಟೆ ಹಿಡಿದುಕೊಂಡು ರಸ್ತೆಯಲ್ಲಿ ನಿಂತರು. ಅವರಿಗೆ ಹೊಟ್ಟೆ ನೋವು ತಾಳಲು ಸಾಧ್ಯವಾಗಲಿಲ್ಲ. ಆಗ ಆ ರಸ್ತೆಯ ತಿರುವಿನಲ್ಲಿ ಒಂದು ಜೀಪ್ ಬರುತ್ತಿದ್ದದ್ದು ಕಾಣಿಸಿತು. ಕೂಡಲೇ ಓಡಿ ಹೋಗಿ ರಸ್ತೆಯ ನಡುವೆ ನಿಂತು ಸಹಾಯಕ್ಕಾಗಿ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿ ಜೀಪ್ ನಿಲ್ಲಿಸುವಂತೆ ಸನ್ನೆ ಮಾಡಿದರು. ಕೂಡಲೇ ಜೀಪ್ ಅವರ ಮುಂದೆ ನಿಂತಿತು….”ಸುಮತೀ….ಮಕ್ಕಳನ್ನು ಕರೆದುಕೊಂಡು ಬಾ…ಬೇಗ…ಎಂದರು. ಪತಿಯ ಕೂಗು ಕಿವಿಗೆ ಬಿದ್ದದ್ದೇ ತಡ ಕಂಕುಳಲ್ಲಿ ಸಣ್ಣ ಕೂಸನ್ನು ಎತ್ತಿಕೊಂಡು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಕ್ಕಳನ್ನು ಕರೆದುಕೊಂಡು ಬೇಗ ಮನೆಗೆ ಬೀಗ ಹಾಕಿ ಜೀಪಿನ ಕಡೆಗೆ ಬಂದಳು. ಅಷ್ಟು ಹೊತ್ತಿಗಾಗಲೇ ವೇಲಾಯುಧನ್ ಜೀಪ್ ಚಾಲಕನಿಗೆ ನಡೆದ ವಿಷಯವನ್ನು ಚುಟುಕಾಗಿ ವಿವರಿಸಿ ತಮ್ಮನ್ನು ಸಕಲೇಶಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದರು.
“ಸರಿ ಬೇಗ ಬನ್ನಿ ಎಲ್ಲರೂ”…. ಎಂದು ಹೇಳಿ ಚಾಲಕ ಅವರನ್ನೆಲ್ಲಾ ಜೀಪಿನಲ್ಲಿ ಕುಳ್ಳಿರಿಸಿಕೊಂಡನು. ಜೀಪು ಶರವೇಗದಲ್ಲಿ ಸಕಲೇಶಪುರದ ಕಡೆಗೆ ಸಾಗಿತು. ಅಷ್ಟು ಹೊತ್ತಿಗೆ ಎಲ್ಲರಿಗೂ ಹೊಟ್ಟೆ ನೋವು ಬಹಳ ಜಾಸ್ತಿ ಆಗಿತ್ತು. ಮಕ್ಕಳಿಬ್ಬರಿಗೂ ಪ್ರಜ್ಞೆ ತಪ್ಪಿತು. ಅದನ್ನು ಕಂಡ ಸುಮತಿಗೆ ದಿಗಿಲಾಯಿತು. ವೇಲಾಯುಧನ್ ಗೆ ಕಣ್ಣು ಬಿಡಲೂ ಕೂಡಾ ಆಗುತ್ತಿರಲಿಲ್ಲ. ಇದೆಲ್ಲವನ್ನೂ ಕಂಡ ಸುಮತಿ ತನ್ನ ಕುಲದೈವ ಶ್ರೀ ಕೃಷ್ಣನನ್ನು ಮನದಲ್ಲಿ ನೆನೆಯುತ್ತಾ ನಮ್ಮನ್ನು ಕಾಪಾಡು ಎಂದು ಬೇಡಿಕೊಂಡಳು. ಅವರ ಮನೆಯಿಂದ ಸಕಲೇಶಪುರ ಹೆಚ್ಚು ದೂರ ಇರದ ಕಾರಣ ಜೀಪು ಬೇಗ ಆಸ್ಪತ್ರೆಯನ್ನು ತಲುಪಿತು. ಅಷ್ಟು ಹೊತ್ತಿಗೆ ಮಕ್ಕಳು ವೇಲಾಯುಧನ್ ಹಾಗೂ ಸುಮತಿಯು ಬಹಳ ಅಸ್ವಸ್ಥರಾಗಿದ್ದರು. ಜೀಪಿನಿಂದ ಇಳಿದ ಚಾಲಕ ಕೂಡಲೇ ತುರ್ತು ಚಿಕಿತ್ಸಾ ಕೊಠಡಿಯ ಕಡೆಗೆ ಓಡಿದನು. ಅಲ್ಲಿದ್ದ ಸಿಬ್ಬಂದಿಗಳಿಗೆ ವಿವರವನ್ನು ತಿಳಿಸಿದನು. ಸಿಬ್ಬಂದಿ ಸ್ಟ್ರೆಚ್ಚರ್ ತೆಗೆದುಕೊಂಡು ಬಂದು ಒಬ್ಬೊಬ್ಬರನ್ನಾಗಿ ತುರ್ತು ಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋದರು. ತುರ್ತಾಗಿ ವೈದ್ಯರನ್ನು ಕರೆತರುವಂತೆ ನರ್ಸ್ ಗೆ ಅಲ್ಲಿನ ಸಿಬ್ಬಂದಿ ಹೇಳಿದರು. ನರ್ಸ್ ಡ್ಯೂಟಿ ಡಾಕ್ಟರನ್ನು ಕರೆದುಕೊಂಡು ಬಂದಳು. ಸುಮತಿಯ ಕಂಕುಳಲ್ಲಿ ಇದ್ದ ಕೂಸನ್ನು ಬಿಟ್ಟು ಉಳಿದ ನಾಲ್ವರನ್ನೂ ಪರೀಕ್ಷಿಸಿದರು. ಏನಾಯಿತೆಂದು ಕೇಳಿದಾಗ ಪತಿ ಪತ್ನಿ ಇಬ್ಬರೂ ಉತ್ತರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಬಹುಶಃ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿರಬಹುದೇ ಎಂದು ಅವರನ್ನೆಲ್ಲಾ ಪರೀಕ್ಷಿಸಿದ ವೈದ್ಯರು ಶಂಕೆ ವ್ಯಕ್ತ ಪಡಿಸಿದರು. ಅವರಿಗೆಲ್ಲಾ ತುರ್ತಾಗಿ ಚಿಕಿತ್ಸೆ ಕೊಡಲು ನರ್ಸ್ಗಳಿಗೆ ಡಾಕ್ಟರ್ ಹೇಳಿದರು. ಕೂಡಲೇ ಬೇರೆ ಕೊಠಡಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಹೊಟ್ಟೆ ತೊಳೆಸಿ ವಾಂತಿ ಮಾಡಿಸಲು ಕ್ರಮ ಕೈಗೊಳ್ಳಲಾಯಿತು. ವೇಲಾಯುಧನ್ ಎಲ್ಲರಿಗಿಂತಲೂ ಹೆಚ್ಚು ಬಳಲಿದ್ದರು. ಆಸ್ಪತ್ರೆ ತಲುಪುವ ವೇಳೆಗೆ ಅವರಿಗೂ ಪ್ರಜ್ಞೆ ಸಂಪೂರ್ಣವಾಗಿ ಹೋಗಿತ್ತು. ಅವರನ್ನು ಕೂಡಾ ತುರ್ತು ಚಿಕಿತ್ಸೆಗೆ ಒಳಪಡಿಸಲಾಯಿತು. ಸುಮಾತಿಯೂ ಪ್ರಜ್ಞೆ ತಪ್ಪುವ ಹಂತಕ್ಕೆ ತಲುಪಿದ್ದಳು.
ಅವಳನ್ನು ಮಹಿಳಾ ಕೊಠಡಿಗೆ ಕರೆದುಕೊಂಡು ಹೋದರು.
ಹರಸಾಹಸ ಪಟ್ಟು ಅವರೆಲ್ಲರ ಜೀವವನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದರು ವೈದ್ಯರು. ಎಲ್ಲರಿಗೂ ವಿಷ ಮೈಯಿಂದ ಇಳಿಯುವಂತಹ ಚುಚ್ಚುಮದ್ದನ್ನು ಡ್ರಿಪ್ಸ್ ಮೂಲಕ ನೀಡಲಾಯಿತು. ಕೆಲವು ಗಂಟೆಗಳ ನಂತರ ಮಕ್ಕಳಿಬ್ಬರಿಗೂ ಪ್ರಜ್ಞೆ ಬಂತು. ಸಧ್ಯ ಮಕ್ಕಳು ಅಪಾಯದಿಂದ ಪಾರಾಗಿದ್ದರು. ಸುಮತಿ ಹಾಗೂ ವೇಲಾಯುಧನ್ ಇಬ್ಬರಿಗೂ ಪ್ರಜ್ಞೆ ಬಂದಿರಲಿಲ್ಲ. ಚಿಕಿತ್ಸೆ ಮುಂದುವರೆಯಿತು. ಅಸ್ವಸ್ಥಳಾದ ಸುಮತಿಯ ಬಳಿಯಿಂದ ಪುಟ್ಟ ಮಗುವನ್ನು ಪಡೆದು ಬೇರೆ ಕೊಠಡಿಯಲ್ಲಿ ಇರಿಸಲಾಗಿತ್ತು. ಅಮ್ಮನನ್ನು ಕಾಣದೇ ಮಗುವು ಒಂದೇ ಸಮ ಅಳುತ್ತಿತ್ತು. ಸ್ವಲ್ಪ ಸಮಯದ ಬಳಿಕ ಸುಮತಿಗೂ ಪ್ರಜ್ಞೆ ಬಂತು. ಕೂಡಲೇ ವೈದ್ಯರು ಅವಳ ಬಳಿಗೆ ತೆರಳಿ ಏನಾಯ್ತು ಎಂದು ಕೇಳಿದರು. ಸುಮತಿ ತಾವು ಅಣಬೆಯಿಂದ ಮಾಡಿದ ಆಹಾರವನ್ನು ಸೇವಿಸಿದ ಮೇಲೆ ಹೀಗಾಯಿತು ಎಂದಳು. ವೈದ್ಯರಿಗೆ ತಮ್ಮ ಮನದಲ್ಲಿ ಮೂಡಿದ ಶಂಕೆ ದೂರವಾಯಿತು. ಹೆಚ್ಚು ಅಣಬೆಯನ್ನು ಸೇವಿಸಿದ್ದ ವೇಲಾಯುಧನ್ ರವರಿಗೆ ಇನ್ನೂ ಪ್ರಜ್ಞೆ ಬಾರದ್ದು ಎಲ್ಲರ ಆತಂಕಕ್ಕೆ ಕಾರಣವಾಯಿತು. ಸುಮತಿಯ ಬಳಿಗೆ ಬಂದ ವೈದ್ಯರು…”ನೋಡಿ ಸುಮತಿ…ನಿಮ್ಮ ಯಜಮಾನರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ…ನಾವು ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅವರಿಗೆ ಕೊಟ್ಟ ಚಿಕಿತ್ಸೆಯ ಪ್ರಕಾರ ಇಷ್ಟು ಹೊತ್ತಿಗೆ ಪ್ರಜ್ಞೆ ಬರಬೇಕಿತ್ತು….ಆದರೆ ಅವರಿಗಿನ್ನೂ ಪ್ರಜ್ಞೆ ಬಂದಿಲ್ಲ…..ನಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನೂ ಮಾಡುತ್ತೇವೆ….ಉಳಿದದ್ದು ದೇವರ ಕೈಲಿ”…. ಎಂದರು.
ವೈದ್ಯರ ಮಾತನ್ನು ಕೇಳಿದ ಸುಮತಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಷ್ಟು ದಿಗಿಲಾಯಿತು. ಅಯ್ಯೋ ದೇವರೇ!! ಇದೇನಾಯ್ತು… ಛೇ ಮಗಳು ತಂದ ಅಣಬೆಯನ್ನು ಎಲ್ಲಿಂದ ತಂದೆ ಎಂದು ಕೂಡಾ ವಿಚಾರಿಸದೇ ಅಡುಗೆ ಮಾಡಿ ಎಲ್ಲರಿಗೂ ಬಡಿಸಿದೆನಲ್ಲ!!
ಇಡೀ ಕುಟುಂಬವನ್ನೇ ಸಾವಿನ ದವಡೆಗೆ ದೂಡಿದೆನಲ್ಲ…
ಮಕ್ಕಳು ಹಾಗೂ ತಾನು ಹೆಚ್ಚು ತಿನ್ನದ ಕಾರಣ ಸಾವಿನ ದವಡೆಯಿಂದ ಪಾರಾದೆವು. ವೈದ್ಯರು ಹೇಳಿದರು ಅದು ವಿಷಪೂರಿತ ಅಣಬೆಯೆಂದು. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದ ಕಾರಣ ಸರಿಯಾದ ಚಿಕಿತ್ಸೆ ನೀಡಿ ತನ್ನನ್ನು ಹಾಗೂ ಮಕ್ಕಳನ್ನು ಉಳಿಸಲು ಸಾಧ್ಯವಾಯಿತು. ಆದರೆ ಹೆಚ್ಚು ಅಣಬೆಯನ್ನು ಸೇವಿಸಿದ ಪತಿ ಇನ್ನೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಯ್ಯೋ ದೇವರೇ ಇದೇನಾಯ್ತು!!! ಹೇಗಾದರೂ ಮಾಡಿ ಅವರನ್ನು ಈ ಕಂಟಕ ದಿಂದ ಪಾರು ಮಾಡು. ಅವರ ಜೀವ ಉಳಿಸು ದೇವರೇ. ನಮಗೆ ಬೇರೆ ಯಾರೂ ಇಲ್ಲ. ನೀನೇ ಏನಾದರೂ ಚಮತ್ಕಾರ ಮಾಡಬೇಕು ಕೃಷ್ಣಾ ಎಂದು ಬೇಡಿಕೊಂಡಳು.
ಇತ್ತ ಅವಳಿಂದ ಬೇರ್ಪಡಿಸಿ ಮತ್ತೊಂದು ಕೊಠಡಿಯಲ್ಲಿ ದಾದಿಯರ ಬಳಿ ಇರಿಸಿದ್ದ ಮಗು ಹಸಿವಿನಿಂದ ಅಮ್ಮನ ಹಾಲಿಗಾಗಿ ಅಳುತ್ತಿತ್ತು. ವಿಷದ ಅಂಶ ಇನ್ನೂ ಪೂರ್ತಿಯಾಗಿ ಇಳಿಯದಿದ್ದ ಕಾರಣ ಸುಮತಿ ಹಸಿವಿನಿಂದ ಅಳುತ್ತಿದ್ದ ತನ್ನ ಮಗುವಿಗೆ ಹಾಲು ಉಣಿಸಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಸಿಲುಕಿದ್ದಳು. ಅಯ್ಯೋ!!! ನನ್ನಿಂದ ಎಂತಹಾ ಅಚಾತುರ್ಯ ಸಂಭವಿಸಿದೆ. ಮಕ್ಕಳನ್ನು ಪತಿಯನ್ನು ಸಾವಿನ ದವಡೆಗೆ ನೂಕಿದೆನಲ್ಲಾ. ದೇವರು ಕರುಣಾಮಯಿ ಮಕ್ಕಳನ್ನು ಮತ್ತೆ ನನ್ನ ಮಡಿಲಿಗೆ ಹಾಕಿದ ಆದರೆ ನನ್ನ ಪತಿ ಇನ್ನೂ ಅಪಾಯಿಂದ ಪಾರಾಗಿಲ್ಲವಲ್ಲ. ಅವರನ್ನು ಕಾಪಾಡು ದೇವರೇ ಅವರಿಗೆ ಜೀವದಾನ ಮಾಡು. ಎನ್ನುತ್ತಾ ದೇವರ ಮೊರೆಹೊಕ್ಕಳು. ಪತಿಯನ್ನು ಒಮ್ಮೆ ಹೋಗಿ ನೋಡುವಂತೆಯೂ ಇರಲಿಲ್ಲ. ವೈದ್ಯರು ಇನ್ನೂ ಚಿಕಿತ್ಸೆ ಮುಂದುವರೆಸಿದ್ದರು. ಇನ್ನೂ ಕೆಲವೇ ಗಂಟೆಗಳಲ್ಲಿ ಅವರಿಗೆ ಪ್ರಜ್ಞೆ ಬರದಿದ್ದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಸಮಯವೂ ಮಿರುತ್ತಾ ಬರುತ್ತಿತ್ತು. ಏನು ಮಾಡಲೂ ತೋಚದೇ ವೈದ್ಯರು ಚಿಂತಾಕ್ರಾಂತರಾದರು. ಆದರೂ ಯಾವುದೋ ಆಶಾಭಾವದ ಭರವಸೆಯ ಮೇರೆಗೆ ಚಿಕಿತ್ಸೆ ಮುಂದುವರೆಸಿದರು.