ಕಥಾ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
‘ಪುಟ್ಕಥೆಗಳು’
ಶೀರ್ಷಿಕೆ:- ಆಕೆ
ಸಂಜೆಯಾದರೆ ಸಾಕು ನೀಳ ಕೂದಲ ಹೆಣೆದು, ಹೂವ ಮುಡಿದು, ದಿನಕ್ಕೊಂದು ಹೊಸ ಸೀರೆಯನುಟ್ಟು ಅಲಂಕಾರ ಮಾಡಿಕೊಂಡು ಬಾಗಿಲ ಬಳಿಯೇ ಕಾಯುವ ಅವಳೆಂದರೆ, ಊರಿನ ಹೆಂಗಸರಿಗೆಲ್ಲ ತಿರಸ್ಕಾರ. ಅದೆಷ್ಟೇ ನಿಂದಿಸಿದರೂ ಅವಳದು ನಗುವೊಂದೇ ಉತ್ತರ. ತನ್ನ ಹುಡುಕಿ ಬರುವ ಗಿರಾಕಿಯಷ್ಟೇ ಆಕೆಗೆ ಮುಖ್ಯ.
ಕಥೆ – 2
ಶೀರ್ಷಿಕೆ:- ಗೆ(ಹೆ)ಜ್ಜೆ
ಅಟ್ಟದಲ್ಲಿ ಮುಚ್ಚಿಟ್ಟಿದ್ದ ಗೆಜ್ಜೆಗಳು ಕೈ ಬೀಸಿ ಕರೆದಂತಾಯಿತು. ಸಂತಸದಿಂದ ಅವುಗಳನ್ನು ಅಪ್ಪಿಕೊಂಡು ಕಣ್ಣೀರ್ಗರೆದವಳೇ ಮೆಲ್ಲನೆ ಹೊರಬಂದು ಕಡಲ ತೀರದಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವಳ ಕರ್ಣಗಳ ತುಂಬಾ ಚಪ್ಪಾಳೆಯ ಸದ್ದು. ತಿರುಗಿದರೆ, ಸದಾ ತಿರಸ್ಕಾರದ ನೋಟ ಬೀರುತ್ತಿದ್ದ ಮನದಿನಿಯ ಪುರಸ್ಕರಿಸಲು ಕಾಯುತ್ತಿದ್ದ.
ಕಥೆ – 3
ಶೀರ್ಷಿಕೆ :- ನೆಲೆ
ಆಕೆಯ ಬೆರಳುಗಳು ಬೀಡಿ ಎಲೆಯೊಳಗೆ ತಂಬಾಕು ತುಂಬಿ ಸುರುಳಿ ಸುತ್ತಿ ನೂಲಿನಲ್ಲಿ ಕಟ್ಟದಿದ್ದರೆ ಆ ಮನೆಯವರಿಗೆಲ್ಲಾ ಉಪವಾಸವೇ ಗತಿ. ಅದಕ್ಕೆ ಇರಬೇಕು ಆ ಭಗವಂತ ಆ ಹೆಣ್ಣ ಹಣೆಯಲ್ಲಿ ಮದುವೆ ಎಂಬ ಮೂರಕ್ಷರ ಬರೆಯಲು ಮರೆತಿದ್ದು. ಆಕೆಗೀಗ ಅರವತ್ತು. ಎಲ್ಲರೂ ಅವಳಿಂದಾಗಿ ನೆಲೆ ಕಂಡಿದ್ದರು. ಹಾಂ! ಆಕೆಗೂ ನೆಲೆಯೊಂದ ಕಲ್ಪಿಸಿದ್ದರು. ವೃದ್ಧಾಶ್ರಮದಲ್ಲಿ.
ತಿಲಕಾ ನಾಗರಾಜ್ ಹಿರಿಯಡಕ