ವಿಶೇಷ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ
‘ಈ ಸಾವು ನ್ಯಾಯವೇ…!?’
ಮೊನ್ನೆ ಮೊನ್ನೆ ಕನ್ನಡ ಸಿನಿಮಾದ ಖ್ಯಾತ ನಿರ್ದೇಶಕ ಗುರುಪ್ರಸಾದರವರು ಆತ್ಮಹತ್ಯೆ ಮಾಡಿಕೊಂಡು, ನಾಲ್ಕೈದು ದಿನಗಳಾದ ಅವರ ಮನೆಯಲ್ಲಿಯೇ ಕೊಳೆತ ಶವ ಸಿಕ್ಕಿತು.
ಈ ವಾರ್ತೆಯನ್ನು ಕೇಳಿದಾಗ ಎದೆ ಝಲ್ ಅನ್ನುತ್ತದೆ. ಈ ಸಾವು ನ್ಯಾಯವೇ…? ಈ ರೀತಿ ಒಬ್ಬ ಸಾಂಸ್ಕೃತಿಕ ವ್ಯಕ್ತಿ ಯಾಕೇ ಆತ್ಮಹತ್ಯೆ ಮಾಡಿಕೊಂಡರು..? ಅವರ ಕುಟುಂಬ ಅವರ ಮನೆತನದವರನ್ನು ಬಿಟ್ಟು, ಅಷ್ಟೇ ಅಲ್ಲದೆ ಒಬ್ಬ ಸಾಂಸ್ಕೃತಿಕ ಲೋಕದ ವಿಭಿನ್ನ ಅಭಿರುಚಿಗಳು ಸಿನಿಮಾ ನೀಡಿದ ನಿರ್ದೇಶಕ ಸಮಾಜಕ್ಕೆ ನೀಡಿರುವ ಸಂದೇಶವಾದರೂ ಏನು…? ವ್ಯವಸ್ಥೆಯ ತಪ್ಪೋ…? ವ್ಯಕ್ತಿಯ ತಪ್ಪೋ..?
ಸಾವು ಅಂದರೆ ಅಷ್ಟೊಂದು ಸುಲಭವಾಯಿತಾ ಅವರಿಗೆ. ಸಾವಾಗಿ ಕಾಡಿದ್ದು ಸಾಲ..! ಮನುಷ್ಯನ ಬದುಕಿಗೆ ಸಾಲ ಬೇಕು. ಸಾಲವಿಲ್ಲದೆ ಬದುಕಿಲ್ಲ. ಹಾಗಂತ ನಮ್ಮ ಬದುಕನ್ನೇ ನುಂಗುವಷ್ಟು ಸಾಲ ಮಾಡಿದರೆ ಹೇಗೆ..?
ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಸಮಯದಲ್ಲಿ ನಮ್ಮ ವೈಯಕ್ತಿಕ ಬದುಕನ್ನು ಕೂಡ ನಾವು ಗಮನಿಸಬೇಕು. ಆ ಎಚ್ಚರಿಕೆ ಇಲ್ಲದೆ ಹೋದರೆ ಅದು ನಮ್ಮನ್ನು ಇದೇ ರೀತಿ ನುಂಗಿ ಹಾಕಿಬಿಡುತ್ತದೆ. ಕುಟುಂಬದಲ್ಲಿ ತನ್ನ ಪಾತ್ರ ಏನು..? ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದೇನೆಯೇ..? ಎನ್ನುವ ಮನಸ್ಸಿನ ಮಾತಿಗೆ ಕಿವಿಗೊಡದೆ ಹೋದರೆ, ಆತ ಸಮಾಜಕ್ಕೆ ಎಷ್ಟೇ ಉತ್ತಮ ಸಂದೇಶಗಳನ್ನು ನೀಡಿದರೂ ಅವು ವ್ಯರ್ಥವಾಗುತ್ತವೆ.
ಇಂತಹ ಸಾವುಗಳಿಗೆ ಸಮಾಜ ಜವಾಬ್ದಾರಿಯಾಗುವುದಿಲ್ಲವೇ…? ಅಥವಾ ಸರ್ಕಾರಗಳು ಜವಾಬ್ದಾರಿಗಳಾಗುವುದಿಲ್ಲವೇ…? ಕೇವಲ ವ್ಯಕ್ತಿ ತನ್ನ ಹಿತಾಸಕ್ತಿಗೆ ಮಾಡಿದ ಸಾಲವಾದರೆ, ಅದನ್ನು ವ್ಯಕ್ತಿಯ ಮೇಲೆ ಹೊರಿಸಬಹುದು. ಆದರೆ ಒಂದು ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸುವುದಕ್ಕಾಗಿ ಮಾಡಿಕೊಂಡ ಸಾಲ ತೀರಿಸಲು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಕನಿಷ್ಠಪಕ್ಷ ಸರ್ಕಾರಗಳಾದರೂ ಧನಸಹಾಯ ಮಾಡಬಹುದಿತ್ತಲ್ಲವೇ…? “ಸ್ವಲ್ಪ ಕೈ ಹಿಡಿದರೆ ಬದುಕು ಉಳಿಯಬಹುದು” ಎನ್ನುವ ಆಲೋಚನೆಗಳು ನಮ್ಮೆಲ್ಲರೆದೆಯೊಳಗೆ ಉಳಿಯದೆ ಇರಲಾರವು.
ಆದರೂ…. ಸಿನಿಮಾ ಮಾಡುವ ಬಣ್ಣ ಬಣ್ಣದ ಲೋಕದೊಳಗಿನ ವ್ಯಕ್ತಿಗಳು ಬಹುತೇಕ ಇದನ್ನು ಅರ್ಥೈಸಿಕೊಂಡು, ತುಸು ಸಮಚಿತ್ತದಿಂದ ಹೆಜ್ಜೆ ಇಟ್ಟರೆ ಒಳಿತಾಗಬಲ್ಲದು. ಇಲ್ಲದೆ ಹೋದರೆ ಇಂತಹ ಅಕಾಲಿಕ ಆತ್ಮಹತ್ಯೆಗಳು ನಮ್ಮ ಕಣ್ಣೆದುರು ಕಾಣುತ್ತಲೇ ಹೋಗುತ್ತೇವೆ.
ವ್ಯಕ್ತಿ ಸತ್ತನಂತರ ಏನೆಲ್ಲಾ ಕಥೆಗಳನ್ನು ಕಟ್ಟುತ್ತಾರೆ. ಈ ಜನರು ಇದ್ದಾಗ ವಿಭಿನ್ನ ಚಿತ್ರಗಳನ್ನು ನೀಡಿದ ನಿರ್ದೇಶಕರಿಗಸಗಲಿ, ಪುಸ್ತಕಗಳನ್ನು ಪ್ರಕಟಿಸುವ ಸಾಹಿತಿಗಳಿಗಾಗಲಿ, ತನ್ನ ಬದುಕನ್ನೇ ಅರ್ಪಿಸಿದ ಕಲಾವಿದರಿಗಾಗಲಿ, ಪ್ರೀತಿಯಿಂದ ಮಾತನಾಡಿಸುವ, ಗೌರವಿಸುವ, ಕಷ್ಟದಲ್ಲಿದ್ದಾಗ ಸಾಧ್ಯವಾದರೆ ಕೈ ಹಿಡಿಯುವ, ಹೃದಯ ಮಿಡಿಯುವ ಮನಸ್ಸುಗಳು ಇಂದು ಕಡಿಮೆಯಾಗಿವೆ ಎಂದರೆ ತಪ್ಪಲ್ಲ. ಹಾಗಂತ ಸಮಾಜದ ಎಲ್ಲಾ ಜನರು ನಿರ್ದಯಿಗಳಲ್ಲ. ಕಷ್ಟದಲ್ಲಿದ್ದವರನ್ನು ಪ್ರೀತಿಯಿಂದ ಅಪ್ಪಿಕೊಂಡವರಿದ್ದಾರೆ. ಸಾಂಸ್ಕೃತಿಕ ವಲಯದ ವ್ಯಕ್ತಿಗಳಿಗೆ ನಮಗೊಂದು ಚೌಕಟ್ಟಿದೆ. ಸಮಾಜ ನಮಗೆ ವಿಭಿನ್ನ ದೃಷ್ಟಿಯಿಂದ ನೋಡುತ್ತದೆ. ನಾವು ಸಾಂಸ್ಕೃತಿಕ ಪರಂಪರೆಯನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಇಲ್ಲದೆ ಹೋದರೆ ನಮಗೆ ನಿರ್ದೇಶಕ ಗುರುಪ್ರಸಾದ್ ಅವರ ಸಾವು ನಮಗೆ ಸಾಕ್ಷಿಯಾಗುತ್ತದೆ.
ಹಾಗಾಗಿ ನಾವು…
ಪತ್ರಕರ್ತರಾಗಲಿ, ಸಾಹಿತಿಗಳಾಗಲಿ, ಕಲಾವಿದರಾಗಲಿ, ಸಿನಿಮಾ ನಿರ್ದೇಶಕರಾಗಲಿ, ನಟರಾಗಲಿ, ನಿರ್ಮಾಪಕರಾಗಲಿ ಬಹು ಎಚ್ಚರಿಕೆಯಿಂದ ಸಮಾಜಕ್ಕೆ ಕೊಡುಗೆಗಳನ್ನು ಕೊಡಬೇಕು. ನಮ್ಮನ್ನು ನಾವು ಕಳೆದುಕೊಂಡು ಈ ಸಮಾಜಕ್ಕೆ ಕೊಡುವುದಕ್ಕಿಂತ, ಸಮಾಜದೊಳಗೆ ನಾವು ಒಬ್ಬೊರಾಗಿ, ಜೊತೆ ಜೊತೆಗೆ ಬೆರೆಯುವುದರ ಮೂಲಕ ಕೊಡುಗೆಯನ್ನು ನೀಡಿದರೆ ಸಾರ್ಥಕವೆನಿಸುತ್ತದೆ. ಆಗ ನಾವು ಹೇಳಿದ ಚಿಂತನೆಗಳು, ಆಲೋಚನೆಗಳು, ಸಮಾಜದ ಹೃದಯದೊಳಗೆ ಮೂಡುತ್ತವೆ. ಸಮಾಜದೊಳಗೆ ಮಾದರಿ ವ್ಯಕ್ತಿಗಳಾಗಬೇಕೆಂದರೆ ನಾವು ಮೊದಲು ದಿಟ್ಟವಾಗಿ ನಿಲ್ಲಬೇಕು.
ನಮ್ಮ ಮನಸ್ಸನ್ನು ಎಲ್ಲೆಂದರಲ್ಲಿ ಲಗಾಮಿಲ್ಲದ ಕುದುರೆಯಂತೆ ಹರಿಬಿಟ್ಟು ಆತ್ಮಹತ್ಯೆಯಂತಹ ಹೇಡಿ ಕೃತ್ಯಕ್ಕೆ ಬಲಿಯಾದರೆ…!? ನಮ್ಮಿಂದ ಸಮಾಜ ಪಾಠ ಕಲಿಯುವದಿಲ್ಲ. ಸಮಾಜದಿಂದಲೇ ನಾವು ಸಾಕಷ್ಟು ಪಾಠ ಕಲಿಯಬೇಕಾಗುತ್ತದೆ. ಬದುಕಿನಲ್ಲಿದ್ದಾಗ ನಾವು ಸಮಾಜದಿಂದ ಪಾಠ ಕಲಿಯುವುದು ತಪ್ಪಲ್ಲ. ಆಪ್ತರು, ನೆರೆಹೊರೆಯವರು, ವಾರಿಗೆಯವರು, ಊರಿನವರು, ಅವರು ಇವರು ಎಲ್ಲರೂ ನಮಗೆ ಕೆಲವು ಸಲ ಪಾಠ ಕಲಿಸುತ್ತಾರೆ. ಮತ್ತು ನಾವು ಕಲಿಯಲೇಬೇಕು.
ನಾವು ಕಲಿತ ಅನುಭವದ ಪಾಠಗಳನ್ನು ನಮ್ಮ ಸಾಂಸ್ಕೃತಿಕ ಚಹರೆಗಳಲ್ಲಿ, ಆಯಾಮಗಳಲ್ಲಿ ಮೂಡಿಸಿದಾಗ ಅವು ಗಟ್ಟಿಯಾಗಿ ಉಳಿಯಬಲ್ಲವು. ಆದರೆ ಬದುಕಿನಲ್ಲಿ ಬರುವ ಸಂಕಟಗಳನ್ನು ನುಂಗಿಕೊಳ್ಳಬೇಕು. ಅವುಗಳು ಎಂತಹದೇ ಪ್ರವಾಹ ಹೊತ್ತು ಬರಲಿ ಆ ಪ್ರವಾಹದ ಎದುರು ಈಜಿ ದಡ ಸೇರಬೇಕು. ಬದುಕಿನ ಮಧ್ಯದಲ್ಲಿ ಹೀಗೆ ಮುಳುಗಿ, ನಮ್ಮ ಸಾವನ್ನು ನಾವು ಕಂಡುಕೊಂಡರೆ, ಕುಟುಂಬ, ಸಮಾಜ ನಮ್ಮನ್ನು ಎಂದೂ ಕ್ಷಮಿಸಲಾರದು. ನಾವು ಇಷ್ಟು ದಿವಸ ಮಾಡಿದ ಸಾಧನೆಗಳು, ಚಿಂತನೆಗಳು, ಆಶಯಗಳು ಎಲ್ಲವೂ ವ್ಯರ್ಥವಾಗಿ ಬಿಡುತ್ತವೆ. ಅಂತಹ ಪ್ರಮಾದ ನಮ್ಮಿಂದ ಎಂದೆಂದಿಗೂ ಆಗಬಾರದು.
ಇಂದು ನಿರ್ದೇಶಕ ಗುರುಪ್ರಸಾದ್ ರವರು ಆ ತಪ್ಪನ್ನು ಮಾಡಿದ್ದಾರೆ. ಎಷ್ಟೇ ಸಾಲವಿದ್ದರೂ ಅದನ್ನು ತೀರಿಸಬಹುದಿತ್ತು. ಬದುಕಿನಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ನಮ್ಮ ಕಣ್ಣೆದುರಿರುವ ಸಮಸ್ಯಗೆ ಪರಿಹಾರದ ಕಡೆಗೆ ಗಮನಹರಿಸಬೇಕೆ ಹೊರತು, ಸಾವಿನ ಕಡೆಗೆ ಅಲ್ಲ..! ಒಂದು ಕ್ಷಣ ಆಲೋಚನೆಯಿಲ್ಲದ ನಿರ್ಧಾರ ನಮ್ಮ ಬದುಕನ್ನು ನುಂಗಿ ಹಾಕಿಬಿಡುತ್ತದೆ. ಅಂತಹ ಕೆಟ್ಟ ನಿರ್ಧಾರ ತೆಗೆದುಕೊಂಡ ಖ್ಯಾತ ನಿರ್ದೇಶಕ ಗುರುಪ್ರಸಾದರವರ ಸಾವು ನಮಗೆ ಪಾಠವಾಗುತ್ತದೆ.
ಮತ್ತೆ ಮತ್ತೆ ನಮ್ಮ ಮನಸ್ಸು “ಈ ಸಾವು ನ್ಯಾಯವೇ…”? ಎಂದು ಪ್ರಶ್ನಿಸುತ್ತದೆ.
ಗೆಳೆಯರೇ,
ಇದು ಕೇವಲ ಸಾಂಸ್ಕೃತಿಕ ವಲಯದ ವ್ಯಕ್ತಿಗಳಿಗಷ್ಟೇ ಸಂಬಂಧಿಸಿದ ಆಶಯದ ಮಾತುಗಳಲ್ಲ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕುಟುಂಬ, ಸ್ನೇಹವಲಯ, ಸಹೋದ್ಯೋಗಿ ವಲಯ, ವ್ಯಾಪಾರ, ಉದ್ದಿಮೆ ಮುಂತಾದ ವಲಯಗಳಲ್ಲಿ ಉಂಟಾದ ಸಮಸ್ಯೆಗಳನ್ನು ಪ್ರತಿಯೊಬ್ಬರು ಅತ್ಯಂತ ಜಾಣ್ಮೆಯಿಂದ ಅದನ್ನು ಎದುರಿಸಬೇಕು. ಆಗ ನಾವು ಬದುಕನ್ನು ಗೆದ್ದಂತೆ. ಇಲ್ಲವಾದರೆ ‘ಸಾವು’ ಎಂಬ ಎರಡಕ್ಷರಕ್ಕೆ ‘ಬದುಕು’ ಎಂಬ ಮೂರಕ್ಷರವನ್ನು ಬಲಿ ಕೊಡಬೇಕಾಗುತ್ತದೆ. ಅಂತಹ ಋಣಾತ್ಮಕ ಮನಸ್ಥಿತಿಯಿಂದ ಹೊರಬಂದು, ಬದುಕು ಸುಂದರವಾಗಲು ಧನಾತ್ಮಕ ಚಿಂತನೆಗಳು ನಮ್ಮದಾಗಲಿ. “ಸಾವೇ ಅಂತಿಮವಲ್ಲ” ಎನ್ನುವ ಆಶಯ ನಮ್ಮದಾಗಲಿ. ಅದನ್ನು ಎದುರಿಸುವ ಛಲ ನಮ್ಮೊಳಗೆ ಮೂಡಲಿ ಎಂದು ಆಶಿಸುವೆ.
ರಮೇಶ ಸಿ ಬನ್ನಿಕೊಪ್ಪ
ಮೇಲಿನ ಸ್ಥಳದಲ್ಲಿರುವ ಜನರು ಕೆಳಗಿನ ಸ್ಥಳದಲ್ಲಿ ಬದುಕುವವರ ಬವಣೆಗಳನ್ನು ಕಂಡು ಪಾಠ ಕಲಿಯುವುದಿಲ್ಲ. ಎಲ್ಲರೂ ತಮ್ಮದೇ ಸ್ಟೈಲಿನಲ್ಲಿ ಜೀವಿಸಲು ಪ್ರಯತ್ನಿಸುತ್ತಾರೆ. ಎಲ್ಲರಿಗೂ ಐಶಾರಾಮಿ, ಆಡಂಬರದ ಜೀವನ ಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚುವುದಿಲ್ಲ. ಸರಳ ಜೀವನ ಯಾರಿಗೂ ಬೇಕಿಲ್ಲ. ಕೂಲಿನಾಲಿ ಮಾಡುವವರು ಅದೆಷ್ಟೋ ಜನರು ಸಂತೃಪ್ತಿಯ ಜೀವನ ನಡೆಸುವುದನ್ನು ನೋಡುತ್ತಿದ್ಸೇನೆ. ಮನುಷ್ಯ ಜೀವಂತ ಇಲ್ಲದಾಗ ಇಲ್ಲಸಲ್ಲದ ಕಥೆ ಕಟ್ಟುವವರೇ ಬಹಳ. ಮಾಧ್ಯಮದವರಂತೂ ಬರೀ ಊಹಾಪೋಹಗಳಲ್ಲಿ ಸುದ್ದಿ ಬಿತ್ತತೊಡಗಿದ್ದಾರೆ.
ಅದೇನೇ ಇರಲಿ, ಗುರುಪ್ರಸಾದ್ ಸಾವಂತೂ ನ್ಯಾಯವಾದುದಲ್ಲ. ದುಡ್ಡಿದ್ದವರು ಅವರ ಸಹಾಯಕ್ಕೆ ಕೈಜೋಡಿಸಬಹುದಾಗಿತ್ತು.
ನಿಮ್ಮ ಲೇಖನ ಸಾಮಾಜಿಕ ಜವಾಬ್ದಾರಿ, ಜೀವನದ ಮೌಲ್ಯ ತಿಳಿಸುತ್ತದೆ ಸರ್