ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
ಹನಿಗವನಗಳು
ದೀಪಾವಳಿ
ಮೊನ್ನೆ ದೀಪದ ಹಬ್ಬ
ಅವರ ಮನೆಯಲ್ಲಿ ಅವರು
ನಮ್ಮ ಮನೆಯಲ್ಲಿ ನಾವು
ದೀಪ ಹಚ್ಚಿದೆವು ಮನೆತುಂಬ
ಆದರೆ,
ನಮ್ಮ ಮನದ ನಡುವಿನ
ಕತ್ತಲು ಮಾತ್ರ
ಕಳೆಯಲೇ ಇಲ್ಲ!
——————
ಸೋಲು – ಗೆಲುವು
ಅವರು ಗೆದ್ದಿದ್ದಾರೆ
ನಾನು ಸೋತಿದ್ದೇನೆ
ಹೌದು
ಅವರು
ನನ್ನ ಮನಸ್ಸು
ಗೆದ್ದಿದ್ದಾರೆ!
ನಾನು
ಅವರ ಪ್ರೀತಿಗೆ
ಸೋತಿದ್ದೇನೆ!
—————-
ಕಣ್ಣುಗಳು
ದ್ವೇಷಿಸುವ ಕಣ್ಣುಗಳು
ಕಿಡಿಕಾರುತ್ತವೆ
ಹೆಜ್ಜೆ ಹೆಜ್ಜೆಗೂ
ಪ್ರೀತಿಸುವ ಕಣ್ಣುಗಳು
ಮುಗುಳ್ನಗುತ್ತವೆ
ಅನುದಿನವು….
ಅನುಕ್ಷಣವು…..
——————-
ಧರಣಿಗೆ
ಬಿಸಿಲ ಬೇಗೆಗೆ
ಬಾಯ್ದೆರೆದು ನಿಂತ ಭೂಮಿ
ಬಸವಳಿಯುತ್ತಿದೆ ಬರದಿಂದ
ಅದಕ್ಕೆ,
ರೈತರೆಲ್ಲ ದೊಡ್ಡ ದೊಡ್ಡ
ಪ್ಯಾನ್ ಹಾಕಿಸಿದ್ದಾರೆ
ಹೊಲದ ತುಂಬಾ
ದಣಿವಾರಿಸಿಕೊಳ್ಳಲು
ಧರಣಿಗೆ!
————-
ಕನಸು ಮತ್ತು ಕವನ
ಕನಸುಗಳ ಕಟ್ಟುತ್ತೇನೆ
ಕವನದೊಳಗೆ
ಅಲ್ಲಿ ನನ್ನ ಕನಸುಗಳನ್ಯಾರು
ಕಸಿಯಲಾರರು
ಅದಕ್ಕೆ
ಕನಸಿನ ಗಾರೆಗಳ ಜೋಡಿಸುತ್ತ
ಕವನ ಕಟ್ಟುತ್ತೇನೆ
ಕನಸುಗಾರಳಾಗಿ…
—————–
ಡಾ. ಸುಮಂಗಲಾ ಅತ್ತಿಗೇರಿ
Super