ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
“ಸದ್ವಿನಿಯೋಗ”ಅವಶ್ಯವೇ?
ನಾವೆಲ್ಲರೂ ಯೋಚಿಸುವುದು ಮುಂದಿನ ಭವಿಷ್ಯ,, ಚರಾಸ್ತಿ ಸ್ಥಿರಾಸ್ತಿ ಮುಂದಿನ ಮೂರು ತಲೆಮಾರು ಕೂತು ತಿನ್ನುವಷ್ಟು ಕೂಡಿಡಬೇಕೆಂಬ ಧಾವಂತ…ಹೌದರಿ,ನಾವು ಹುಟ್ಟುವಾಗಲೇ ಬಂಗಾರ,ಬೆಳ್ಳಿ ಚಮಚ ಬಾಯಲ್ಲಿ ಇಟ್ಟು ಕೊಂಡು ಹುಟ್ಟಿದವರು…ನಮಗೆ ಯಾವುದಕ್ಕೂ ಕಮ್ಮಿಯಿಲ್ಲ….ಎಂದು ಬೀಗುವವರು ನಮ್ಮ ಆಸುಪಾಸು ಇರಬಹುದು. ಅವರಿಗೆ ಬಡವರ ಕಂಡರೆ ಪ್ರೀತಿ ವಿಶ್ವಾಸ ಎಲ್ಲವೂ ಇದೆ… ಆದರೆ, ಅವರಿಗಾಗಿ ದುಡಿಮೆಯ ದಾರಿ ತೋರುವವರು ಕೆಲವೇ ಕೆಲವರು… ಪಿತ್ರಾರ್ಜಿತ ಆಸ್ತಿ ಕರಗುವ ತನಕ…ಸದ್ವಿನಿಯೋಗ ಎಂಬುದು ಪುರಾಣ ಪುಣ್ಯ ಕಥೆಗಳಲ್ಲಿ ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಅಭಿಮನ್ಯು, ಶಿಶುಪಾಲ ಇವರಿಬ್ಬರ ನಡುವಿನ ವ್ಯತ್ಯಾಸ ನಮಗರಿವಿದೆ.ನಮ್ಮ ಆಯ್ಕೆ ಯಾವುದೆಂದು ನಿರ್ಧರಿಸುವುದು ಬಹುಮುಖ್ಯ. ಮನುಷ್ಯನ ವಿಚಲಿತ ಬುದ್ದಿ ಮುಂದೆನಾಗಬಹುದೆಂಬುದಕ್ಕೆ ಮಹಾಕಾವ್ಯಗಳು ಜೀವಂತ ಉದಾಹರಣೆ. ಹೀಗಿರುವಾಗ ಯಾವುದು ಅವಶ್ಯಕವೆಂದು ಕಾಲಚಕ್ರದ ಪಥಸಂಚನಲದಲ್ಲಿ…ಮುಖ್ಯವಾದದ್ದು ತಿಳಿಯುವ ಗೋಜಿಗೆ ಹೋಗುವ ಮುನ್ನವೇ ಎಲ್ಲವೂ ಮುಗಿದಿರುತ್ತದೆ…. ಎಷ್ಟೊಂದು ಅಹಂಕಾರ ಈ ಜನ್ಮಕೆ? ಅಷ್ಟೇ ಸಾಂತ್ವಾನ ಪಡಿಸುವ ಮನಸ್ಸು ನಮ್ಮೊಳಗೆ ಇದೆಯೆಂದರೆ ತಪ್ಪಾಗದು.
ಭಾರತದ ಇತಿಹಾಸದಲ್ಲಿ ಒಬ್ಬ ವ್ಯಕ್ತಿ ಅಜರಾಮರನಾಗಿ ಉಳಿಯುವುದೆಂದರೆ ಅಷ್ಟು ಸುಲಭವಾ?.. ಕೋಟಿ ಕೋಟಿ ಜನರಲ್ಲಿ ಅಸಾಮಾನ್ಯರಾಗಿ ಬೆಳೆದು ಆಗಸದ ತಾರೆಯಾಗಿ ಮಿನುಗಿದ ರತನ್ ಟಾಟಾ ಯಾರಿಗೆ ತಾನೆ ಗೊತ್ತಿಲ್ಲ..!. ಬಡವನಿಗೂ ಒಂದು ಆಸೆ,ಕನಸು ಇದ್ದು, ಅದನ್ನು ಈಡೇರಿಸಲು.. ಹರಸಾಹಸ ಪಡುವ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ನ್ಯಾನೋ ಕಾರು…ರೋಡಿಗಿಳಿಸಿ ಕಾರಲ್ಲಿ ಕುಟುಂಬ ಸಮೇತ ಓಡಾಡುವ ಆಸೆಯನ್ನು ಪೂರೈಸಿದ ಕೀರ್ತಿ.. ಸಲ್ಲಬೇಕಾಗಿದ್ದು ಇವರಿಗೆ ತಾನೆ!… ಇದೊಂದೇ ಪಾಠವಲ್ಲ ಬದುಕಿಗೆ. ಶ್ರೀಮಂತರಾದರೂ,ಐಶಾರಾಮಿ ಜೀವನವಿದ್ದರೂ,ತುಂಬಾ ಸರಳಾಗಿ ಬದುಕಿದ ವ್ಯಕ್ತಿ… ಮೊಬೈಲ್ ಬಳಸುತ್ತಿರಲಿಲ್ಲವೆಂಬ ವಿಷಯ ಎಷ್ಟು ಅರ್ಥಗರ್ಭಿತ. ನಮಗೆ ಮೊಬೈಲ್ ಇಲ್ಲದಿದ್ದರೆ ದಿನದ ಬೆಳಗು ಕತ್ತಲೆಯಂತೆ…ಹುಟ್ಟಿದ ಮಗುವಿಗೂ ಮೊಬೈಲ್ ರೂಢಿಮಾಡಿಸಿದ ಕುಖ್ಯಾತಿಗಳು ನಾವು…..ಮತ್ತು ಮಕ್ಕಳಿಗೆ ಬೈಯ್ಯವವರು ನಾವೆ?. ಅವಶ್ಯಕತೆ ಬಿಟ್ಟು ಅನವಶ್ಯಕವಾಗಿ ಬಳಸಲು ನೀಡಿ ಮುಂದಾಗುವ ದೃಷ್ಟಿ, ನರ ದೌರ್ಬಲ್ಯ, ಮಾನಸಿಕ ಕಿರಿಕಿರಿ,ಬರಿ ಮೊಬೈಲ್ ಕೊಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡವರೆಷ್ಟೋ,ಸನ್ಮಾರ್ಗದಲ್ಲಿ ನಡೆಯದೆ,ಸಂಸ್ಕಾರಗಳನ್ನು ಗಾಳಿಗೆ ತೂರಿ,ಹಿರಿಯರು ಕಿರಿಯರೆಂಬುದನ್ನು ಮರೆತು ಮನಬಂದಂತೆ ವರ್ತಿಸುವವರು,ಹೆಣ್ಣು ಮಕ್ಕಳಿಗೆ ಸುರಕ್ಷತೆಯ ಕೊರತೆ, ಹೆತ್ತವರಿಗೆ ನರಕ ತೋರಿಸುವ ಮಕ್ಕಳು ಹೋದರೆ ಹತ್ತು ಹಲವು ರೂಪಗಳು ನಮ್ಮ ಮುಂದೆ ಪ್ರತ್ಯಕ್ಷವಾಗುತ್ತವೆ.
ನೂರಕ್ಕೆ ನೂರು ಬರಬೇಕು…ಜಗತ್ತು ಸೃಷ್ಟಿಯಾದಾಗ ಹೀಗೆ ಇತ್ತು.ಮನುಷ್ಯನ ಇತಿ ಮಿತಿಗಳು ಕೂಡ. ಕೊಡಗು,ಕೇರಳ,ಭೂಕುಸಿತ ಪ್ರದೇಶಗಳು,ಶಿರಾಲಿ ಗುಡ್ಡಕುಸಿತ,ಪ್ರವಾಹಗಳು,ಭೂಕಂಪಗಳು, ಕಾಡ್ಗಿಚ್ಚು ಅಮೇಜಾನ್ ಕಾಡು ನಾಶವಾಗಿದ್ದು,ಯುದ್ದಗಳು,ಪ್ರಕೃತಿ ವಿಕೋಪಗಳು ಯಾವುದನ್ನು ಅಲ್ಲಗಳೆದರೆ,ಇನ್ಯಾವುದೋ ಹೊಸ ರೂಪಾಂತರ ಹೊಂದಿ ನಮ್ಮ ಮುಂದೆ ದುತ್ತನೆ ನಿಲ್ಲುತ್ತದೆ.ತಪ್ಪಲಾ ತಿಂದು ರೋಗನಿರೋಧಕ ಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಸಮಯ ನಮ್ಮ ಕಣ್ಣೆದುರು ಹಾದು ಹೋದಾಗ,ನಾವು ಹಾಗೆ ಬದುಕಬೇಕಿತ್ತು ಅನ್ನಿಸಲು ಶುರುವಾಗುತ್ತದೆ.ಕಾಡಿಲ್ಲದ ನಾಡಿನಲ್ಲಿ ನಮ್ಮದೊಂದು ಪಯಣವನ್ನು ಆರಂಭಿಸಿದರೆ,ಚಿತ್ರಪಟದಲ್ಲಿರುವ ದಟ್ಟವಾದ ಅರಣ್ಯ ಕ್ರಮೇಣ ಮೇಣದಂತೆ ಕರಗಲು ಪ್ರಾರಂಭವಾಗುತ್ತದೆ.ಹೀಗೆ ನೋಡಿ ನಮ್ಮೆದುರು ಕಾಣುವ ‘ಅರಿವಿನ’ ಹರಿವಾಣವನ್ನು ಮೈಮರೆತಂತೆ.
ನಮ್ಮದು ಉಹಾಪೂಹ ಜೀವನ ನಿಜವೆಂದು ನಂಬಿ ಬಿಡುವ ಮುಗ್ದ ಮನಸ್ಸು.ಮುಂದಾಗುವ ಭವಿಷ್ಯದ ಬಗ್ಗೆ ನಮಗಾವ ಚಿಂತೆಯಿಲ್ಲ.ಕಾರಣ ಕಲಿತಿದ್ದಕ್ಕೆ ತಕ್ಕ ನೌಕರಿ ಸಿಕ್ಕಿತು ಎಂಬ ಭರವಸೆಯಂತೂ ಇಲ್ಲ!. ಅದಕ್ಕಾಗಿ ರೈತನಾಗುವುದಕ್ಕೂ ಸೈ,ದೇಶ ಕಾಯ್ವ ಸೈನಿಕನಾಗಲೂ ಸೈ ಎಂಬ ಮನೋಭಾವ ಹೊತ್ತಿರುವ ಪ್ರತಿಯೊಬ್ಬನು..’ನಾಯಕ’ನಾಗಲು ಸಾಧ್ಯ!.ಇವರಿಬ್ಬರನ್ನು ಕೈ ಬಿಟ್ಟವರ ಪಾಡು ಮುಂದೊಂದು ದಿನ ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಅವರ ಭವಿಷ್ಯ ದಾಖಲಾಗುತ್ತದೆ.ಅಂಕಿಅಂಶಗಳ ಮೇಲೆ ಪ್ರಭಾವ ಬೀರುವ ಮೂಲಕ ನೈಜವಾಗಿ ಎಷ್ಟು ಪ್ರತಿಶತ ಜನ ಭಾಗಿಯಾಗಿದ್ದಾರೆ ಎಂಬುದನ್ನು ಕೇವಲ ಲೆಕ್ಕಪತ್ರದಲ್ಲಿ ನಮೂದಿಸಬಹುದು.ಬಡವ,ಬಲ್ಲಿದ ಕ್ಯಾಟಗೇರಿಯಲ್ಲಿ ಎರಿಳಿತವಷ್ಟೇ…ಮತ್ತೇನು ಬದಲಾಗದು.
ಉಳುಮೆ ಮಾಡಲು ಭೂಮಿ ದಿನದಿಂದ ದಿನಕ್ಕೆ ಆವಿಯಾಗುತ್ತಿದೆ…. ನಿಜ ಅಲ್ವಾ?… ರೈತ ಕಾಸೆಣಿಸಿಕೊಂಡು ಬ್ಯಾಂಕ್ ನಿಂದ ಬರುವ ಬಡ್ಡಿಯಲ್ಲಿ ಜೀವನ ಸಾಗಿಸುವ ಮಟ್ಟಕ್ಕೆ ಬರುತ್ತಿದ್ದಾನೆಂದರೆ ಇನ್ನೇನು ಬೇಕು?… ಅವನದು ತಪ್ಪಿಲ್ಲ…ಬೆಳೆದ ಬೆಳೆಗೆ ನ್ಯಾಯ ಸಿಗದಿದ್ದಾಗ,ರೋಡಿಗೆ ಸುರಿವ ಟೊಮ್ಯಾಟೊ, ಇರುಳ್ಳಿ ನೆನೆದರೆ ಸಾಕು!.ಅನ್ನದಾತನಿಗೆ ಗೌರವ ನೀಡಬೇಕಾಗಿದ್ದು ಯಾರ ಕರ್ತವ್ಯ.ಎಲ್ಲರಿಗೂ ಅನ್ನ ತಾನೆ ಬೇಕು? ದುಡ್ಡಿದ್ದರೆ ಎಲ್ಲವನ್ನೂ ಕೊಳ್ಳಬಹುದು.ಆದರೆ ಬರಿ ದುಡ್ಡಿನಿಂದ ಬತ್ತ ಉದುರಿಸಲು ಸಾಧ್ಯವಿಲ್ಲ!.ನಮ್ಮದಾದ ಜೀವ ಜಗತ್ತು… ಬರಿ ಆತ್ಮಗಳ ಸಂಚಲನವಾದರೆ ಆಶ್ಚರ್ಯ ಪಟ್ಟರು ವಿಶೇಷವೇನಿಲ್ಲ.ನಾವ್ಯಾರು ಅತಿಯಾಗಿ ಯಾರನ್ನು ಅವಲಂಬಿಸಲು ಸಾಧ್ಯವಿಲ್ಲ.ಅವರಿಗೂ ಹೊರೆಯಾಗಿ ಬದುಕಲು ಮನಸ್ಸು ಒಪ್ಪಿತೇ?.
ಒಟ್ಟಾರೆಯಾಗಿ ಹೇಳುವುದಾದರೆ, ಜೀವನದ ಲಕ್ಷ್ಯ ಭಿನ್ನವಾದರೂ, ಸಮಾನ ಮನಸ್ಥಿತಿಯ ಅಭಾವದ ಪರಿಣಾಮವಾಗಿ ದೇಶದ ಸ್ವಾವಲಂಬನೆ ಸಾಧಿಸುವ ಗುರಿಯತ್ತ ಅನೇಕ ವಿಘ್ನಗಳು ತಲೆದೂರಲು ಕಾರಣವಾಗುತ್ತವೆ.ದೇಶದ ಅಭ್ಯುದಯಕ್ಕೆ ದುಡಿಯುವ,ಎಲೆಮರೆಯ ಜೀವಗಳು,ತಮ್ಮೆಲ್ಲ ಲಾಭಾಂಶವನ್ನು ಬಡವ,ಮಧ್ಯಮ ವರ್ಗದ ಜನರಿಗೆ ಸಿಗುವಂತೆ ಮಾಡುವ ವಿಶಾಲ ಮನೋಭಾವ ಇರಬೇಕು.”ಪುಗಸಟ್ಟೆ ಸಿಗುತ್ತದೆ” ಎಂಬುದಕ್ಕೆ ಸೋಮಾರಿಯಾಗಿ ಬದುಕುವ ಜನರಿಗೆ ಕೈಗೆಟುಕುವ ರೀತಿಯಲ್ಲಿ ಸಿಗಲುಬಾರದು.”ಅಜ್ಜ ನೆಟ್ಟ ಆಲದ ಮರಕೆ ಮೊಮ್ಮಗ ಬಲಿಯಾಗುವ ಮಟ್ಟಕ್ಕೆ ಹುಂಬನಾಗಬಾರದು” ಆಲದ ಮರದ ಮಹತ್ವ ಅರಿಯುವತ್ತ ಚಿತ್ತಹಾಯಿಸಬೇಕಾಗಿದೆ.ಸಮಾಜದ ಸಾಧಕ/ಬಾಧಕಗಳ ಬಗ್ಗೆ ಬುದ್ದಿವಂತ ಸಮುದಾಯ ಒರೆಹಚ್ಚಿದಷ್ಟು ಸುಧಾರಿಸಲು ಸಾಧ್ಯ.ಇಲ್ಲವಾದರೆ ಹೊಸದ್ಯಾವ ಚಿಂತನೆಗಳು ಹುಟ್ಟುವ ಮೊದಲೆ ಮೂಲೆಗುಂಪಾಗುವುದು ಖಚಿತ….ಅರಿವು ಪ್ರತಿಯೊಬ್ಬರಿಗೂ ಇದೆ..ಚಿಂತನೆಗೆ ಒರೆಹಚ್ಚಿದಷ್ಟು ನಮಗೆ ಒಳಿತು..
ಶಿವಲೀಲಾ ಶಂಕರ್
ಶಿವಲೀಲಾ ಹುಣಸಗಿ ಶಿಕ್ಷಕಿಯಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸ.ಹಿ.ಪ್ರಾ ಶಾಲೆ ಅರಬೈಲ್ ದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಣೆ.ಪ್ರಕಟಿತ ಕೃತಿಗಳು,ಬಿಚ್ಚಿಟ್ಟಮನ (ಕವನಸಂಕಲನ)ಬದುಕಂದ್ರೆ ಹೀಗೆನಾ? (ಕವನಸಂಕಲನ)ಗೋರಿಯ ಸುತ್ತ ಸಪ್ತಪದಿ ತುಳಿದಾಗ ( ಕಥಾಸಂಕಲನ)ಗಿರಿನವಿಲ ನೆನಪುಗಳು( ಪ್ರೇಮ ಲಹರಿಗಳು)
ಬಾಂಧವ್ಯದ ಮೆರಗು (ಅಂಕಣ ಬರಹ)ಬೊಗಸೆಯೊಳಗಿನ ಆಕಾಶ (ಅಂಕಣ ಬರಹ)ಸಂಕಲ್ಪೋತ್ಸವ ಕನ್ನಡ ನುಡಿಗವಿತೆಗಳು ( ಸಂಪಾದಕೀಯ ಕವನಸಂಕಲನ)ಚಿಣ್ಣರ ಕವಿತೆಗಳು ( ಸಂಪಾದಕೀಯ ಕವನ ಸಂಕಲನ)ಸಕಾಲ (ಅಂಕಣ ಬರಹ) ಬೇಲಿಯಾಚಿನ ಪಿಸುಮಾತು ( ಕವನ ಸಂಕಲನ).
ಅತೀ ಸುಂದರ ಲೇಖನ.
ತುಂಬಾ ಚನ್ನಾಗಿದೆ ಮೇಡಂ ತಮ್ಮ ಲೇಖನ.ಆ ಮೇರು ವ್ಯಕ್ತಿತ್ವದ ಬಗ್ಗೆ ಇನ್ನೂ ಓದಬೇಕು ,ಇನ್ನೂ ತಿಳಿದುಕೊಳ್ಳಬೇಕೆಂದೆನಿಸುತ್ತದೆ.
Tumba chennagi ide.. Deshake ene samsaya yaduradre tana yalla asti mari kapaduve yanda nijavada desha bhaktaru avaru. Miss u ratan tata sir.
ಸುಂದರವಾದ,ಅರ್ಥಪೂರ್ಣವಾದ ಲೇಖನ.ಸೂಪರ್