ಲಹರಿ ಸಂಗಾತಿ
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ
‘ಮೈ ಬೆಸ್ಟ್ ಪ್ರೆಂಡ್’
ಹೀಗೊಂದು ಲಹರಿ
ಮೈ ಬೆಸ್ಟ್ ಪ್ರೆಂಡ್
ಆಕೆ ಮತ್ತು ನಾನು ಅಕ್ಕಪಕ್ಕದ ಮನೆಯವರಲ್ಲ ; ಬಾಲ್ಯ ಸ್ನೇಹಿತೆಯಂತೂ ಮೊದಲೇ ಅಲ್ಲ, ಶಾಲಾ ಕಾಲೇಜಿನಲ್ಲಿ ಒಟ್ಟಿಗೆ ಓದಿದವರಂತೂ ಅಲ್ವೇ ಅಲ್ಲ.
ಹಾಗಾದರೆ ಅವಳಾರು ? ಆಕೆ ಬಿಚ್ಚು ಮನಸ್ಸಿನ, ಅಚ್ಚು ಮೆಚ್ಚಿನ ಹುಡುಗಿ,ತುಂಟಾಟದ ಬೆಡಗಿ. ನಾಮಾಧೇಯ ಬಂದು ಸುಮತಿ. ದಿನಾಲೂ ಬಸ್ಸಿನಲ್ಲಿ ಮುಖಾಮುಖಿಯಾಗುತ್ತಿದ್ದ ಒಡನಾಡಿ.ನಮ್ಮಿಬ್ಬರ ವೃತ್ತಿ ಬೇರೆ ಬೇರೆಯಾದರೂ ಕಾರ್ಯನಿಮಿತ್ತ ನಾವಿಬ್ಬರೂ ಹೆಚ್ಚಾಗಿ ಒಂದೇ ಬಸ್ಸಿನಲ್ಲಿ ಓಡಾಡುತ್ತಿದ್ದೆವು. ಮೊದಲ ಬಾರಿ ನಾ ಆಕೆಯನ್ನು ಕಂಡಾಗ ಮುಖದಲ್ಲಿ ಸಣ್ಣಗೆ ನಗು ಚೆಲ್ಲಿದ್ದಳು ನನ್ನತ್ತ. ಎರಡನೆಯ ದಿನ ಆ ನಗು ಪರಿಚಯವಾಗಿ ತುಸು ಮಾತು ಶುರುವಾಯಿತು. ಮಾತು ಮರುದಿನ ಜೋರಾಯಿತು. ಆಹ್ಮಾಂ..! ಇನ್ನು ಕೇಳಬೇಕೆ ? ಮಾತೂ ನಮ್ಮದೇ, ಸೀಟೂ ನಮ್ಮದೇ, ಕೋನೆಗೆ ಬಸ್ಸೂ ನಮ್ಮದೇ ; ನಮ್ಮ ಮಾತುಕತೆ ಏನಿದ್ದರೂ ದಿನಾ ಬಸ್ಸಿನಲ್ಲೆ ನಡೆಯಯುತ್ತಿತ್ತು. ಅಪರೂಪಕ್ಕೆ ಹೊರಗಡೆ ಸಿಕ್ಕರೂ ಹೆಚ್ಚು ಆಪ್ತರೆನಿಸಿದ್ದು ಬಸ್ಸಿನಲ್ಲಿ ಮಾತ್ರ, ಅದು ಬಸ್ಸಿನೊಳಗಡೆ ಸೀಟು ಸಿಗದಿದ್ದರೂ ನಮ್ಮ ಮಾತೇನು ನಿಲ್ಲುತ್ತಿರಲಿಲ್ಲ, ನಿಂತು ನೇತಾಡಿಯಾದರೂ ಮಾತನಾಡುತ್ತಿದ್ದೆವು. ನೋಡುಗರಿಗೆ ಬಸ್ಸು ಪೂರ್ತಿ ಇವರದೋ ಎಂಬಂತೆ ಭಾಸವಾಗುತ್ತಿತ್ತೋ ಏನೋ ನಮಗದು ತಿಳಿಯದು ಅಷ್ಟು ಜೋರಾಗಿತ್ತು ನಮ್ಮ ಮಾತು.
ಅಂಥ ಒಡನಾಟ ಕೊಟ್ಟ ಸ್ನೇಹಿತೆಯಾಕೆ. ನಾನೇನದರೂ ಅವಳ ಬಳಿಯಿದ್ದ ಹೊಸ ವಸ್ತುವನ್ನು ಚೆನ್ನಾಗಿದೆ ಎಂದರೆ ಸಾಕು; ನನಗೆ ಈಗಲೂ ನೆನಪಿದೆ, ಅದೇ ಬಸ್ಸಿನಲ್ಲಿ ಕುಳಿತು ಒಂದು ದಿನ “ ಏ ನಿನ್ನ ಕಿವಿಯೋಳೆ ಚೆನ್ನಾಗಿದೆ ಕಣೆ, ಎಲ್ಲಿಂದ ತಗೊಂಡೆ ? ಕೇಳಿದರೆ“ ನಿನಗೂ ಇದು ಇಷ್ಟವಾಯ್ತ ? ತಗೋ ಇದು ನಿನಗಾಯಿತು, ನನ್ನ ಬಳಿ ಇನ್ನೊಂದಿದೆ “ ಎಂದು ಏನನ್ನೂ ಯೋಚಿಸದೆ ಕೊಡಲು ಮುಂದಾಗುತ್ತಿದ್ದಳು. ಏನೆನ್ನಲಿ ಅವಳ ಬಗ್ಗೆ ಆಕೆ ನಿಜಕ್ಕೂ ನಿಸ್ವಾರ್ಥಿ, ಅದೆಷ್ಟು ಪ್ರೀತಿ ನೀಡುತ್ತಿದ್ದಳು.
ಪ್ರತಿಯೊಂದು ಹೆಣ್ಣಿನ ಬಾಳಿನಲ್ಲಿ ಬರುವ ಸುಂದರ ಗಳಿಗೆ ಮದುವೆ ಎನ್ನುವ ಒಂದು ಮರೆಯಲಾಗದ ದಿನ. ನನ್ನ ಮದುವೆ ಸಂಭ್ರಮದಲ್ಲಿ ಆಕೆ ನನ್ನ ಜೊತೆಯಿದ್ದಳು. ವಿಷಾದವೆಂದರೆ ನಾನವಳ ಮಾಂಗಲ್ಯಧಾರಣೆಯ ಶುಭ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಾಧ್ಯವವಾಗಲಿಲ್ಲ. ಆಕೆ ಬೇಜಾರುಮಾಡಿಕೊಳ್ಳಬಹುದಾಗಿತ್ತು, ನನ್ನ ಜೊತೆ ಕೋಪಮಾಡಿಕೊಳ್ಳಬಹುದಾಗಿತ್ತು. ಇಲ್ಲ; ಅಂಥಾ ಗುಣ ನನ್ನ ಗೆಳತಿಗಿಲ್ಲ. ಬದಲು ನಾ ಬಾಣಂತನದ ಸಮಯದಲ್ಲಿ ತವರೂರಿನಲ್ಲಿ ಇದ್ದಾಗ ರಾತ್ರಿ ಒಂಭತ್ತು ಗಂಟೆಗೆ ಸುಳಿವೇ ನೀಡದೆ ತನ್ನ ಅಕ್ಕನ ಮಗಳೊಂದಿಗೆ ನನ್ನನ್ನೂ , ನನ್ನ ಪುಟ್ಟ ಪಾಪುವನ್ನೂ ಕ್ಷೇಮ ನೋಡಲು ಬಂದಿದ್ದಳು ಅದೇ ಗೆಳತಿ. ನೆನಪಿದೆ ನನಗೆ ಯಾವುದೂ ಮರೆತಿಲ್ಲ. ಅವಳಿಗೆ ಅಗತ್ಯವೇನಾದರೂ ಏನಿತ್ತು ? ನನ್ನ ನೋಡೋಕೆ ಬರಲು ? ತಾನು ತನ್ನ ಸಂಸಾರ ಎಂದೆಂದುಕೊಂಡು ಇರಬಹುದಾಗಿತ್ತು.ಇಲ್ಲ; ಆ ರೀತಿ ಮಾಡಲಾರಳು ನನ್ನ ಗೆಳತಿ; ಅವಳು ಅಪ್ಪಟ ಅಪರಂಜಿ.
ಇನ್ನೂ ಒಂದು ವಿಷಯ ಹೇಳುವುದಾದರೆ, ನನ್ನ ಖುಷಿಯ ಕ್ಷಣದ ಭಾವಚಿತ್ರ ಅಥವಾ ವೀಡಿಯೋಗಳ ತುಣುಕನ್ನು ಆಕೆ ತನ್ನ ಸಾಮಾಜಿಕ ಜಾಲತಾಣದ ಸ್ಟೇಟಸ್ ,ಸ್ಟೋರಿಯಲ್ಲಿ ಹಾಕಿ ನನ್ನ ಹರುಷದಲ್ಲಿ ಅವಳು ಸಂಭ್ರಮ ಪಡುತ್ತಾಳೆ. ನಿಜಕ್ಕೂ ಮನತುಂಬಿ ಬರುವುದು ಅವಳ ಪ್ರೀತಿ, ಅಭಿಮಾನಕ್ಕೆ. ನಿಜ ಅರ್ಥದಲ್ಲಿ ಎಲ್ಲರ ಬಾಳಿನಲ್ಲಿ ಇಂಥ ನಿಸ್ವಾರ್ಥ ಸ್ನೇಹಿತೆ ಎಲ್ಲರಿಗೂ ಸಿಗುವುದಿಲ್ಲ. ನನಗೆ ಅವಳ ಜೊತೆ ಆತ್ಮೀಯ ಸಂಬಂಧ ನೀಡಿದ ಆ ಭಗವಂತನನ್ನು ಸ್ಮರಿಸುತ್ತ ಆಕೆಯ ಮುಂದಿನ ಪ್ರತಿಯೊಂದು ಹೆಜ್ಜೆಯೂ ಅದೃಷ್ಟದೊಡನೆ ಯಶಸ್ಸಿನತ್ತ ದಾಪುಗಾಲಿಡಲಿ ಎಂದು ಆಶಿಸುತ್ತ..
ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ