ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಕನ್ನಡದ ಮಣ್ಣೆನಗೆ ಹೊನ್ನು ,
ಭುವಿಯೇ ಹೂವಿನ ರಾಶಿ.
ಕನ್ನಡದ ನೆಲವೆನಗೆ ಇನ್ನು
ಪುಣ್ಯಕ್ಷೇತ್ರದ ಕಾಶಿ.

ಕನ್ನಡದ ತಾಯೆನಗೆ
ಪೊರೆದು ಸಲಹುವ ಧರಣಿ
ಕನ್ನಡದ ಭಾಷೆ ಎನಗೆ,
ಅನ್ನ ನೀಡಿದ ಜನನಿ

ನಿನ್ನ ಮೊಲೆವುಂಡು ತೊದಲು
ಕಲಿತ ಎನಗೆ ಹೆಮ್ಮೆ.
ಸಲಹು ತಾಯೇ ಈ ನೆಲದಿ
ಮಣ್ಣಾಗುವುದೇ ಮಹಿಮೆ.

ಸೈಹ್ಯಾದ್ರಿ ,ಮಲೆ, ಕೃಷ್ಣೆ ,ತುಂಗೆಯರೇ
ನಿನ್ನ ಐಸಿರಿಯ ತೋಳ ತೊಟ್ಟಿಲು.
ಕನ್ನಡದ ಸ್ವರ ರಾಗ ,ಅಕ್ಕರದ
ನುಡಿಯೇ ಅಮೃತದ ಬಟ್ಟಲು.

ಕನ್ನಡದ ಪದಸಿರಿ ನಿತ್ಯ ಜೋಗುಳದ
ಸುಮಧುರ ಮಂಜುಳ ಗಾನ.
ಪೊರೆದು ಉಸಿರಿದ ಬದುಕಿದು
ಈ ನೆಲದಿ ಪರಮ ಪಾವನ.

ಹಕ್ಕಿಗಳ ಇಂಚರವೆ ಮಧುರ
ಗಾನ ,ಗಂಧರ್ವರ ಗೋಷ್ಠಿ.
ಸುಳಿಗಾಳಿಗೆ ಮೈ ನೆರೆದ
ಫಸಲುಗಳೇ ಪೊರೆವವು ಸಮಷ್ಟಿ.

ಕನ್ನಡದ ಬದುಕಿದು ಎನಗೆ
ಸಿರಿ ಭಾಗ್ಯದ ಹೊನಲು.
ಕನ್ನಡದ ನುಡಿಗಲ್ತು, ಉಲಿದು
ಬದುಕಿದೆ ಇರುಳು ಹಗಲು.

ಕನ್ನಡದನಿಯ ಇಂಚರವಿದು ವೇಣುಗ್ರಾಮ
ನವಿಲುತೀರ್ಥ ಏಳುಕೊಳ್ಳವೇ ಮೇಲು
ಕಿಷ್ಕಿಂದೆಯ ಋಷ್ಯಶೃಂಗ ಪರ್ವತಧಾಮ
ನಭೋ ಮಂಡಲವೆ ದೀಪಗಳ ಸಾಲು

ಸನ್ನಡತೆ ಸದುವಿನಯ ನಿನ್ನಾಭರಣ
ಕನ್ನಡವೆನೇ ಸರ್ವರಲಿ ಸಮಬಾಳು.
ಕನ್ನಡತಿ ನನ್ನೊಡತಿ ಪಥ ತೋರೆನಗೆ
ಕನ್ನಡಾಂಬೆ ನೀ ಬಲು ಕರುಣಾಳು.

ನಾಡ ಮಹಿಮೆಯೇ ಸರಿ, ಕನ್ನಡವೆನಗೆ
ಅಗಣಿತ ಕಲ್ಪವೃಕ್ಷ ಕಾಮಧೇನು.
ನೆಲದ ಮಣ್ಣಿನ ಕಣ- ಕಣಜದ
ಅಕ್ಕರದ ಅನ್ನವುಂಡು ಬದುಕಿದೆನು .

ಭುವನೇಶ್ವರಿಯೇ ಸಲಹೆನ್ನ
ಈ ಕಂದನ್ನ, ನಿನ್ನ ಎದೆಗಪ್ಪಿ.
ತೀರಿಸಲಾರೆ ಋಣಭಾರವ
ನನ್ನ ಕೈ ಬಿಡದಿರು ತಪ್ಪಿ.

ಹೆಸರಿಟ್ಟ ಸುವರ್ಣ ಸಂಭ್ರಮಕೆ
ನಲ್ನುಡಿಯ ತೋರಣ
ಹಸಿರುಟ್ಟ ಹಂಸಗಮನೆ
ನಿನ್ನಡಿಗೆ ,ಸಿರಿಮುಡಿಗೆ ಈ ಬಾಗಿನ

ತೀರಿಸುವೆನು ಈ ಋಣವ
ಕನ್ನಡದ ಮಣ್ಣಾಗುವ ಮುನ್ನ.
ನೆಲದಿ ಬೀಜವಾಗಿ ಚಿಗುರೊಡೆದು
ಹಸಿರಾಗುವುದೇ ಧನ್ಯ.


4 thoughts on “ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

  1. ಸುಂದರ ರಚನೆ ಮೇಡಂ ರಾಜ್ಯೋತ್ಸವದ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು

    1. ತುಂಬಾ ಚೆನ್ನಾಗಿದೆ ಮ್ಯಾಮ್…ಕನ್ನಡಮ್ಮಗೆ ಇಷ್ಟವಾಗದೇ ಇರದು…

      ಸುಶಿ

  2. ಕನ್ನಡಾಂಬೆಯ ಅಪ೯ಣೆಯ ಕವಿತೆ ಸುಂದರ ಮೇಡಂ ಜೀ
    ದೀಪಾವಳಿ ಹಾಗೂ ರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳು ಮೇಡಂ ಜೀ

Leave a Reply