ನಾನು ಮಾತನಾಡುವುದಿಲ್ಲ

ತಣ್ಣಗೆ ಹರಿವ ನದಿಯಂತೆ ಹರಿಯುತ್ತಿರುತ್ತೇನೆ
ಸ್ಪರ್ಶವೆಲ್ಲಾ ಸುಗಂಧ..
ನೀರಲ್ಲ ‘Water’
ಎಂಬ ಶಬ್ದ ಕೇಳಿ ನಗುತ್ತೇನೆ
ಕಾಡೆಲ್ಲಾ ‘Forest’ ಆದಾಗ
ಬೆರಗಾಗುತ್ತೇನೆ
ನನ್ನ ಕಂಪ ಹೊದ್ದು ಸಾಗುವ
ಘರ್ಜನೆಗಳು…ರೆಕ್ಕೆಗಳು
lion, Tiger,Parrot, Peacock
ಆದಾಗ ಸರಿದು ನಿಂತು
ಕೈಕೊಟ್ಟಿಕೊಂಡಿದ್ದೇನೆ..
ಕ್ಷಮಿಸಿ, ನಾನು ಮಾತನಾಡುವುದಿಲ್ಲ
“Sorry” ಹೇಳಬೇಕಿತ್ತಲ್ಲಾ…
ಇಲ್ಲವಾದಲ್ಲಿ ನಿಮಗರ್ಥವಾಗುವುದಿಲ್ಲ…
ಧನ್ಯವಾದ ಹೇಳಲು ತಡವರಿಸಿ ‘ Thanks ‘ ಎಂದರಷ್ಟೇ ‘welcome’ ಸಿಗುವುದಲಾ..
ಪುಟ್ಟ ಕೈಗಂಟಲು ಹಂಬಲಿಸಿ
ಸೋತು ನಾಲಗೆಗೂ ಸೋಕದೆ
ಅಲ್ಲೆಲ್ಲೋ ಇಣುಕುತ್ತೇನೆ
ಕ್ಷಮಿಸಿ, ನಾನು ಮಾತನಾಡುವುದಿಲ್ಲ
ಈಗಂತೂ ಬೆಣ್ಣೆ ಕಂದಮ್ಮಗಳಿಗೆ ಆಂಗ್ಲರ ಆಶೀರ್ವಾದ ಬೇಕು..
ಅಲ್ಲಲ್ಲಿ ಭಿತ್ತಿ ಪತ್ರಗಳಲ್ಲಿ…
ಇಲ್ಲೆಲ್ಲೋ ಗೋಡೆಗಳಲ್ಲಿ…
ಸೋತಿದ್ದೇನೆ ಹುಡುಕಿ
ನನ್ನೇ ನಾ…
ಕ್ಷಮಿಸಿ, ನಾನು ಮಾತನಾಡುವುದಿಲ್ಲ
ಪುಸ್ತಕ ಬೇಡ, books ಅಷ್ಟೇ ಸಾಕು…
ನವೆಂಬರ್ ೧ ರಂದು ಹಾಡುತ್ತಾ…”Happy Kannada Rajyothsava” ಎನ್ನುತ್ತಾ ಇರಲು
ಜೋರಾಗಿ ನಕ್ಕು
ಸುಮ್ಮನಾಗುತ್ತೇನೆ
ಕ್ಷಮಿಸಿ, ನಾನು ಮಾತನಾಡುವುದಿಲ್ಲ


Leave a Reply