ಕನ್ನಡ ರಾಜ್ಯೋತ್ಸವ”(ಕನ್ನಡಿಗರ ಹೃದಯೋತ್ಸವ)

 ಭಾರತದ ಸ್ವಾತಂತ್ರ್ಯದ ನಂತರ ಸಂವಿಧಾನ ರಚನೆಯಾಗಿ ಭಾಷೆಗಳ ಆಧಾರದ ಮೇಲೆ ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ನೆಲ, ಜಲ, ಜನರನ್ನು ಒಟ್ಟುಗೂಡಿಸಿ ರಚಿಸಿದ ಸುವರ್ಣ ಘಳಿಗೆ ಪ್ರತಿವರ್ಷ ನವೆಂಬರ್ ೧ ರಂದು ಕರ್ನಾಟಕ ಅಥವಾ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ೧೯೫೬ ರ ನವೆಂಬರ್ ೧ ರಂದು ಮೈಸೂರು ರಾಜ್ಯ ಉದಯವಾದ ಮರೆಯಲಾಗದ ದಿನವಾಗಿದೆ. ಕನ್ನಡಿಗರ ಅಸ್ಮಿತೆಗಾಗಿ ಅನೇಕ ಮಹನೀಯರು ಹೋರಾಟ ಮಾಡುವ ಮೂಲಕ ಕನ್ನಡ ನುಡಿಗೆ ಶಕ್ತಿ ತುಂಬುವ ಕೆಲಸ ಮಾಡುವ ಮೂಲಕ ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ ಕನ್ನಡದ ಕುಲಪುರೋಹಿತರಾದ “ಕರ್ನಾಟಕದ ಗತವೈಭವ”ಕೃತಿ ರಚನೆಕಾರರಾದ ಆಲೂರು ವೆಂಕಟರಾಯರು, ೧೯೦೫ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಆರಂಭಿಸಿದರು. ಇವರ ಜೊತೆಯಲ್ಲಿ ಕನ್ನಡದ ಮನಸುಗಳು ಅನಕೃ, ಶಿವರಾಮಕಾರಂತ,  ಕುವೆಂಪು, ಮಾಸ್ತಿ, ಎ ಎನ್ ಕೃಷ್ಣರಾವ್, ಬಿಎಂಶ್ರೀ,  ಜಯದೇವಿ ತಾಯಿಲಿಗಾಡೆ, ಅದರಗುಂಚಿ ಶಂಕರಗೌಡ ಪಾಟೀಲರ ಅಮರಣಾಂತ ಉಪವಾಸ, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಏಕೀಕರಣ ಸಭಾ ಇನ್ನೂ ಮುಂತಾದವರ ಹೋರಾಟದ ಪರಿಶ್ರಮದಿಂದ ಹಾಗೂ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ರಚಿಸಿದ  ಹುಯಿಲಗೋಳ ನಾರಾಯಣರಾಯರು, ಕುವೆಂಪು ಅವರ ಜಯಭಾರತ ಜನನೀಯ ತನುಜಾತೆ ಗೀತೆ ಈಗೆ ಎಲ್ಲರೂ ಕನ್ನಡತನಕ್ಕೆ ಹೋರಾಟ ಮಾಡಿದರು. ೧೯೫೦ ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ದಕ್ಷಿಣ ಭಾರತದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯಿಸಿತು. ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೇ ಮೈಸೂರು ಎಂಬುದಾಗಿ ಮೂರು ಪ್ರದೇಶಗಳಲ್ಲಿ ಸುಮಾರು ೧೯ ಜಿಲ್ಲೆಗಳನ್ನು ರಚಿಸಲಾಯಿತು. ಉತ್ತರ ಕರ್ನಾಟಕದ ಜನರ ಒತ್ತಾಯ ಹಾಗೂ ಹಲವಾರು ಕವಿಗಳು, ರಾಜಕೀಯ ನಾಯಕರ ಒತ್ತಡ, ಹಿರಿಯ ಕನ್ನಡದ ಮನಸುಗಳ ಆಶಯದಂತೆ  ೧೯೭೩ ನವೆಂಬರ್ ೧ ರಂದು “ಕರ್ನಾಟಕ”ಎಂದು ಮರುನಾಮಕರಣ ಮಾಡಿದ ಕೀರ್ತಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ದೇವರಾಜ್ ಅರಸು ಅವರಿಗೆ ಸಲ್ಲುತ್ತದೆ.

ಕನ್ನಡ ಬಾವುಟ: ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕನ್ನಡಕ್ಕೊಂದು ಬಾವುಟದ ಅವಶ್ಯಕತೆಯನ್ನು  ಅರಿತ ಕನ್ನಡ ಹೋರಾಟಗಾರರಾದ ಎಂ.ರಾಮಮೂರ್ತಿಗಳು ಹಳದಿ ಹಾಗೂ ಕೆಂಪು ಬಣ್ಣ ಬಳಸಿ ಬಾವುಟವನ್ನು ಸಿದ್ದಪಡಿಸಿದರು. ಮೂಲತ ಹಳದಿ ಬಣ್ಣವು ಕನ್ನಡಾಂಬೆಯ ಅರಿಶಿಣ ಮತ್ತು ಕೆಂಪು ಬಣ್ಣ ಕುಂಕುಮವನ್ನು ಸೂಚಿಸುತ್ತದೆ. ಜೊತೆಗೆ ಹಳದಿ ಬಣ್ಣವು ಶಾಂತಿ, ಸೌಹಾರ್ದತೆಯನ್ನು  ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶವನ್ನು ನೀಡುತ್ತದೆ. ಆರಂಭದಲ್ಲಿ ಕನ್ನಡ ಬಾವುಟ ಸಿದ್ದಗೊಂಡಾಗ ಬಾವುಟದ ಮಧ್ಯೆ ಕರ್ನಾಟಕದ ಭೂಪಟ ಹಾಗೂ ಅದರ ನಡುವಿನಲ್ಲಿ ಏಳು ಕವಲುಗಳುಳ್ಳ ತೆನೆಯ ಚಿತ್ರವಿತ್ತು ಮುದ್ರಿಸಲು ಕಷ್ಟವಾಗುತ್ತಿದ್ದರಿಂದ ಅದನ್ನು ತೆಗೆದು ಕೇವಲ ಹಳದಿ ಮತ್ತು ಕೆಂಪು ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

 ಕನ್ನಡ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆಯನ್ನು ಕರ್ನಾಟಕದ  ಬಹುತೇಕ ಹಿಂದೂಗಳು, ಮುಸ್ಲಿಂರು,  ಕ್ರಿಶ್ಚಿಯನ್ನರು, ಯಾವುದೇ ಧರ್ಮದ ಭೇದವಿಲ್ಲದೆ ಸಂತೋಷದಿಂದ ಸಡಗರದಿಂದ ಆಚರಿಸುತ್ತಾರೆ. ಸಾಮಾನ್ಯ ಜನರು ಕೂಡ ತಮ್ಮ ತಮ್ಮ ವಾಹನಗಳಿಗೆ ಕನ್ನಡ ಬಾವುಟವನ್ನು ಅಲಂಕರಿಸುವ ಮೂಲಕ ಹಾಗೂ ಆಟೋ ಸಂಘದವರು ಕನ್ನಡ ಬಾವುಟದೊಂದಿಗೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ಪೋಟೋಗಳೊಂದಿಗೆ ಅಲಂಕರಿಸಿ ಸಿಹಿಯನ್ನು ಹಂಚಿ ಸಂಭ್ರಮದಿಂದ ಆಚರಿಸುತ್ತಾರೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ಉತ್ಸಾಹದಿಂದ ಜರುಗುತ್ತವೆ. ಕರ್ನಾಟದಲ್ಲಿ ಅಲ್ಲದೇ ಮುಂಬೈ, ದೆಹಲಿ,ಹಾಗೂ ವಿದೇಶಗಳಲ್ಲಿ  ಪ್ರಮುಖವಾಗಿ ಅಮೇರಿಕಾ, ಇಂಗ್ಲೆಂಡ್, ಸಿಂಗಾಪುರ, ದುಬೈ, ದಕ್ಷಿಣಕೋರಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸ್ಕಾಟ್ಲೆಂಡ್, ಐರ್ಲೆಂಡ್, ಮೊದಲಾದ ದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು ಅಭಿಮಾನ ಪ್ರೀತಿ ಮತ್ತು ಗೌರವದಿಂದ ಆಚರಿಸುತ್ತಾರೆ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ಕನ್ನಡಿಗರ ಆದ್ಯ ಕರ್ತವ್ಯವಾಗಿದೆ.ಕನ್ನಡನಾಡು , ನುಡಿ , ಜಲ, ಸಂಪತ್ತು, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವುದರೊಂದಿಗೆ ಕನ್ನಡ ಭಾಷೆಗೆ ಕನ್ನಡದ ನೆಲಕ್ಕೆ ಯಾವುದೇ ಧಕ್ಕೆಯಾಗದಂತೆ ಅನ್ಯಭಾಷಿಕರ ದಬ್ಬಾಳಿಕೆ, ದರ್ಪವನ್ನು ಮೆಟ್ಟಿನಿಂತು, ಸೂಕ್ತ ಭಾಷೆಯಲ್ಲಿ ಎಚ್ಚರಿಕೆಯನ್ನು ನೀಡುವ ಮೂಲಕ ಕನ್ನಡವನ್ನು ಬಳಸುವ ಮತ್ತು ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ಕನ್ನಡಿಗರ ಒಂದು ಮಾಡುವ ಇಂಥದೊಂದು ಕನಸನ್ನು ನನಸು ಮಾಡಲು ಹೋರಾಟ ಮಾಡಿದ ಎಲ್ಲಾ ಕನ್ನಡ ಮನಸುಗಳ ತ್ಯಾಗ ಮತ್ತು ಬಲಿದಾನದ ಫಲ ಇಂದಿನ ನಮ್ಮ ಹೆಮ್ಮೆಯ ಕರ್ನಾಟಕವಾಗಿದೆ.ಕನ್ನಡ ನುಡಿಯು ಸೂರ್ಯ ಚಂದ್ರರಂತೆ ಅನಂತವಾಗಿ ತನ್ನ ಬೆಳಕನ್ನು ವಿಶ್ವದೆಲ್ಲೆಡೆ ಬೆಳಗಲಿ …

ಸಿರಿಗನ್ನಡಂ ಗೆಲ್ಗೆ. !!!
ಕನ್ನಡಿಗರ ಹೃದಯೋತ್ಸವ
ಅಭಿಮಾನದ ಮಹೋತ್ಸವ
ಕನ್ನಡದ ನಿತ್ಯೋತ್ಸವ !!!


Leave a Reply

Back To Top