ಹಗ್ಗದ ಮೇಲಣ ಸ್ವತಂತ್ರ ಬದುಕಿನ ಯಶೋಗಾಥೆ

[4:58 pm, 31/10/2024] Dr. Yallamma K.: ಬದುಕು ಅದೆಷ್ಟು ಘೋರತರ ಎಂದರೆ..? ಕಲ್ಪನೆಗೂ ಮೀರಿದ, ಸಾಧ್ಯ – ಅಸಾಧ್ಯತೆಗಳ ಆಗರ, ಅದರ ಆಳ – ಹರವು ತಿಳಿದವರಾರು..?

ಎಲ್ಲರೂ ತಮ್ಮ ತಮ್ಮ ಕಾಲ ಮೇಲೆ ನಿಂತುಕೊಳ್ಳಬೇಕು, ಬದುಕಿನಲ್ಲಿ ನೆಲೆಗೊಳ್ಳಬೇಕೆಂದು ಕನಸು ಹೊತ್ತು, ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವವರೇ ಹೆಚ್ಚು, ಅದೊಂದು ಹುಚ್ಚು ಎನ್ನಬಹುದೇನೋ..?

ನಾವು ನಮ್ಮ ನಿತ್ಯ ಜೀವನದಲ್ಲಿ ಸಾಮಾನ್ಯವಾಗಿ ಒಬ್ಬರ ಮೇಲೊಬ್ಬರು ದೂರುತ್ತಾ ಕೂರುತ್ತೇವೆ. ನಾನು ಯಾಕಾದರೂ ನಿನ್ನ ಹೊಟ್ಟೆಯಲ್ಲಿ ಹುಟ್ಟಿದೆನೋ..! ನಾನು ಅನಿಲ್ ಅಂಬಾನಿ.., ಮುಖೇಶ್ ಅಂಬಾನಿ.., ಅಂಥವರ ಹೊಟ್ಟೆಯಲ್ಲಿ ಹುಟ್ಟಿದ್ದರೆ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಬಹುದಿತ್ತು, ಎಂದು ತಮಗೊದಗಿದ ಕಿತ್ತು ತಿನ್ನುವ ಬಡತನಕ್ಕೆ, ಹೆತ್ತು-ಹೊತ್ತ ಮುಗ್ಧ ತಂದೆ-ತಾಯಂದಿರುಗಳಿಗೆ ಹಿಡಿಶಾಪ ಹಾಕುವವರೇ ಹೆಚ್ಚು..! ಸಿರಿತನದ ಉಪ್ಪರಿಗೆಯಲ್ಲಿರುವವರು ಹೊಟ್ಟೆ ತುಂಬ ಊಟ, ಕಣ್ಣುಂಬ ನಿದ್ದೆ ಬಾರದ ದಿನಗಳನ್ನೆಷ್ಟು..? ಕಳೆದಿರುತ್ತಾರೆ ಎಂಬುದನ್ನು ನಾವು ಯಾರೂ ಕೂಡ ಯೋಚಿಸುವುದಿಲ್ಲ.

ಬದುಕೆಂಬುದು ಯಾರ..? ಬಾಳಿನಲ್ಲೂ ಹೂವಿನ ಹಾಸಿಗೆ ಯಾಗಿರುವುದಿಲ್ಲ; ಹಾಗಂತ ಮುಳ್ಳಿನ ಹಾಸಿಗೆಯೂ ಅಲ್ಲ..! ನಾವು ಬದುಕನ್ನು ಹೇಗೆ..? ಕಟ್ಟಿಕೊಳ್ಳುತ್ತೇವೆ ಎಂಬುದರ ಮೇಲೆ ಅದು ನಿಂತಿರುತ್ತದೆ.
ನೆಲದ ಮೇಲಣದ ಬದುಕಲ್ಲಿ ‘ಅ’ಭದ್ರತೆಯ ಭಯ ನಮ್ಮನ್ನು ಬಿಡದೇ ಕಾಡುತ್ತದೆ. ಇಲ್ಲೊಬ್ಬ ನೆರೆಯ ರಾಜ್ಯವಾದ ಛತ್ತೀಸ್ತಡ, ಬಿಲಾಸ್ಪು‌ರ್ ಜಿಲ್ಲೆಯ ಮಸ್ತೂರಿ ತಾಲೂಕಿನವರಾದ ವಿಕಲಚೇತನ ‘ಸುಖ್ ಚಂದ್’ ಮತ್ತವರ ಕುಟುಂಬದ ‘ಹಗ್ಗದ ಮೇಲಣ ಸ್ವತಂತ್ರ ಬದುಕಿ’ನ ಯಶೋಗಾಥೆ ಇದು.

ನಾಲ್ಕು ಜನ ಅಣ್ಣಂದಿರ ತುಂಬು ಸಂಸಾರ, ಬಡತನ, ನಿರುದ್ಯೋಗ, ನಿಲ್ಲಲು ನೆಲೆಯಿಲ್ಲ, ಉಣಲು ಬಾನವಿಲ್ಲದೆ ಕೂಲಿ-ನಾಲಿ ಮಾಡಿ ಜೀವನ ಬಂಡಿ ಸಾಗಿತ್ತು. ವಿಧಿಯಾಟ ಅಕಾಲಿಕ ಮರಣಕ್ಕೆ ತುತ್ತಾದ ತಂದೆ ; ಗಂಡನ ಚಿಂತೆಯಲ್ಲಿ ಚಿತೆ ಏರಿದ ತಾಯಿ. ಸುಖ್ ಚಂದ್ ಕೊನೆಯವ. ಮೂರು ಜನ ದುಡಿದು ನಾಲ್ಕು ಕಾಸು ಅಂತ ಸಂಪಾದನೆ ಮಾಡಿಕೊಂಡು, ತಮ್ಮ ತಮ್ಮ ಬಳಗದಲ್ಲಿಯೇ ಹೆಣ್ಣುನೋಡಿ ಮದುವೆ ಮಾಡಿಕೊಂಡು, ಹೆಳವ ತಮ್ಮನನ್ನು ಕಡೆಗಾಣಿಸಿದರು.

ಹೊಟ್ಟೆ ಬಲು ಕೆಟ್ಟದ್ದು ಅದನ್ನೊರೆಯಲು ಗಾರೆ ಕೆಲಸಕ್ಕೆ ನಡೆದ, ಕೆಲಸದ ಮಧ್ಯ ಬಿದ್ದ ಪೆಟ್ಟು, ಅಸಾಧ್ಯ ನೋವು ಮತ್ತಷ್ಟು ಬಲಹೀನಗೊಳಿಸಿತ್ತು. ಹೀಗೆ ಒಂದು ದಿನ ಸಂತೆ ಬಜಾರ್ ನಲ್ಲಿ ನಡೆದ ಸರ್ಕಸ್ ನ್ನು ನೋಡುತ್ತ ನಿಂತಿದ್ದ, ಹಗ್ಗದ ಮೇಲಣ ನಡೆ, ಅವರ ನುಡಿ ಇವನಿಗೆ ಉತ್ಸಾಹ ನೀಡಿತ್ತು, ಆ ತಂಡದ ಮಾಲೀಕನನ್ನು ಭೇಟಿಯಾಗಿ, ನಾನು ತಂದೆ-ತಾಯಿ ಇಲ್ಲದ ತಬ್ಬಲಿ ನಿಮ್ಮಲ್ಲಿ ಕೆಲಸಕ್ಕೆ ಇಟ್ಟುಕೊಳ್ಳಿ ಕೂಲಿ ಬೇಡ, ನಾನು ನಿಮ್ಮಲ್ಲೊಬ್ಬನಾಗಿರುತ್ತೇನೆಂದು ಬೇಡಿದ. ಮಾಲೀಕ ನಾಮದೇವ್ ಹೇಳಿದ – ನಾನೇ ತಿರಿದು ತಿನ್ನುವವ, ‘ತಿರ್ಕಂಡು ತಿಂದರೂ ಕರ್ಕಂಡ್ ತಿನ್ನಬೇಕು’ ಅಂತ ಗಾದೆನೇ ಇದೆ, ಸರಿ ಇರು ನೀನೊಬ್ಬ ನನಗೆ ಹೊರೆಯಾಗಲ್ಲ ಅಂತ ಸಮ್ಮತಿಸಿದ, ದಿನಕಳೆದಂತೆ ಆ ತಂಡದಲ್ಲಿ ಬಲು ಚುರುಕಿನಿಂದ ಎಲ್ಲ ಸರ್ಕಸ್ ಎಲ್ಲ ಕಲೆಗಳನ್ನು ಕರಗತ ಮಾಡಿಕೊಂಡ, ಹೆಳವ, ಬಿದ್ದ ಪೆಟ್ಟು, ಅಸಾಧ್ಯ ನೋವನ್ನು ಸಹಿಸುತ್ತ, ವಿದೂಷಕನ ಪಾತ್ರ ಮಾಡಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ, ನಾಮದೇವನ ಮೂರು ಜನ ಹೆಣ್ಮಕ್ಕಳಲ್ಲಿ ಕೊನೆಯವಳು ಇವನನ್ನು ಬಹುವಾಗಿ ಮೆಚ್ಚಿಕೊಂಡಿದ್ದಳು, ಅವನಿಗೆ ಆಸರೆಯಾಗುವ ಭರವಸೆಯನ್ನು ನೀಡಿದ್ದಳು. ತಂದೆಯೊಂದಿಗೆ ವಿಷಯ ಪ್ರಸ್ಥಾಪಿಸಿ ವೈವಾಹಿಕ ಬಂಧನಕ್ಕೆ ಕಾಲಿರಿಸಿದ್ದಳು ಪ್ರಣತಿ.

‘ಬಡತನಕ್ಕೆ ಸೌಂದರ್ಯ ಮತ್ತು ಸಂತಾನ ಜಾಸ್ತಿ’ ಎಂಬಂತೆ ಆರು ವರ್ಷದ ದಾಂಪತ್ಯದಲ್ಲಿ ಮೂರು ಹೆಣ್ಣು ಮಕ್ಕಳನ್ನು ಪಡೆದ, ಬದುಕು ಸಾಗಿಸುವುದು ದುಸ್ತರವಾಯಿತು, ಕರುನಾಡು ಕೈ ಮಾಡಿ ಕರೆಯಿತು. ಬಂದು ತಾಲ್ಲೂಕಾ ಕೇಂದ್ರದಲ್ಲಿ ಬಿಡಾರ ಹೂಡಿ,ರಾಜರಥ ” – ‘TVS XL Super heavy duty’ ಗಾಡಿ, ಕುಟುಂಬದೊಂದಿಗೆ ಸಾಮಗ್ರಿಗಳನ್ನು ಹೊತ್ತೊಯ್ದು, ದಿನಕ್ಕೆ ಮೂರ್ನಾಲ್ಕು ಹಳ್ಳಿಗಳಿಗೆ ತಿರುಗಿ ತನ್ನ ಕಲೆಯನ್ನು ಪ್ರದರ್ಶಿಸಿ ದಿನವೊಂದಕ್ಕೆ ಸಾವಿರದಿಂದ – ಸಾವಿರದೈನೂರು ಸಂಪಾದಿಸಿ ಬಾಳ ಸಾಗಿಸುತ್ತಿದ್ದ.

ಬಡವನ ದುಡಿತ ಎಲ್ಲಿಯವರೆಗೆ..? ರಟ್ಟೆಯಲ್ಲಿ ಶಕ್ತಿಯಿರುವವರಗೆ, ನೋವು ಮರೆಯಲು ಆಗಾಗ ಕುಡಿತ ಬೇರೆ, ಹೆಂಡತಿ ಮಕ್ಕಳು ಕುಡಿಯುವುದು ಬೇಡ ಅನ್ನಲಾದೀತೆ..? ಅಪ್ಪನ ನೋವಿಗೆ ; ಸೇಂದಿ ಮದ್ದು, ದುಡಿದ ಜೀವ ಕುಡಿದುಂಡು ಮಲಗಲು ಸಮ್ಮತಿಸಿತ್ತು. ಹಿರಿಯ ಮಗಳು ಸ್ಫೂರ್ತಿ, ಕೈಗೆ ಬಂದಳು, ಎಷ್ಟೆಂದರೆ..? ಅಪ್ಪನ ಬಾಳ ಬಂಡಿಯ ನೊಗಕ್ಕೆ ಹೆಗಲು ಕೊಡುವಷ್ಟು..! ಹೆಂಣೆಂದರೆ..? ಆಕರ್ಷಕ ವ್ಯಕ್ತಿತ್ವ..! ಸ್ಫೂರ್ತಿಯ ‘ಹಗ್ಗದ ಮೇಲನ ನಡೆ, ಎ.ಆರ್.ರೆಹಮಾನ್ ರ ಹಿಂದಿ ಹಾಡಿಗೆ ಹೆಜ್ಜೆ ಹಾಕುವ ದೃಶ್ಯ ಜನ-ಮನ ಸೂರೆಗೊಳ್ಳುವಂತದ್ದು.
ಹೆಂಣೆಂದರೆ..? ಬಾಯ್ಯಾಯ್ ಬಿಡುವ ಜನರ ಜೊತೆಗೆ ಕಲೆಯ ಆರಾಧಕರು ಕೂಡ ಮೆಚ್ಚಿ ದುಡ್ಡನ್ನು ನೀಡುತ್ತಾ ಇದ್ದರು, ಬದುಕು ಸಾಗಿದೆ, ಎಲ್ಲಿಗೆ ಪಯಣ ಎಂದರಿಯದೆ..!

ಹೆಳವ ಕೂಡ ಹೆದ್ದಾರಿ ಪಯಣ ಕ್ರಮಿಸಿ ಗುರಿಮುಟ್ಟಬಲ್ಲ ಎಂಬುದಕ್ಕೆ ಹೆಸರಿನಲ್ಲಿಯೇ ಸುಖವನ್ನು ಹೊಂದಿದ ಈ ‘ಸುಖ್ ಚಂದ’ ನಮಗೆ ಆತ್ಮವಿಶ್ವಾಸ ತುಂಬಿದರೆ, ಮತ್ತೋರ್ವರ ಬಾಳಿಗೆ ಬೆಳುಕು ನೀಡಿದ ಪ್ರಣತಿ ಆದರ್ಶಪ್ರಾಯಳು ಎನಿಸಿದರೆ.., ಹೆಂಣೆಂದರೆ ಹೀಗಳೆಯುವ ಜನಕ್ಕೆ ತಂದೆಯ ಕಷ್ಟಕ್ಕೆ ಮಿಡಿದು, ಜವಾಬ್ದಾರಿಯನ್ನು ಹೊತ್ತವಳು ನಮ್ಮೆಲ್ಲರಿಗೂ ‘ಸ್ಪೂರ್ತಿ’ಯ ಸೆಲೆಯಾಗಿದ್ದಾಳೆ.


Leave a Reply

Back To Top