ದಿಪಾವಳಿ ಹಬ್ಬದ ಶುಭಾಷಯಗಳಿಂದ ಫೋನ್ ತುಂಬಿ ಹೋಗ್ಯಾದ. ದಿವಾಳಿಯ ಶುಭಾಷಯಗಳು ಅಂತ ಅವರು ಕಳಿಸಿದ್ದ ಮೆಸೇಜ್ ಓದಿ ನಮಗ ದಿವಾಳಿ ಎಬ್ಬಿಸಿ ಬಿಡಬೇಕು ಅಂತ ಮಾಡ್ಯಾರ ಅಂತ ಮುನಸಿನಿಂದಲೆ ಎಲ್ಲರ ಮೇಸೆಜ್ ಗಳಿಗೂ ಥ್ಯಾಂಕ್ಸ ಅಂತ  ಎರಡು ಕೈ ಜೋಡಸಿದ್ದ ಇಮೋಜಿ ಒತ್ತಿ ಸಾಕಾಯ್ತು. ತಲ್ಯಾಗ  ಒಂದು ಹುಳ ಹೊಕ್ಕತು ನೋಡ್ರಿ. ಯಾರ್ಯರು ದಿಪಾವಳಿ ಬದಲಿಗೆ ದಿವಾಳಿ ಅಂತ ಶುಭಾಶಯ ಕಳಸ್ಯಾರ , ಅವರಿಗೆಲ್ಲ  ತಿರಗಿ ನಿಮಗೂ ಹ್ಯಾಪಿ ದಿವಾಳಿ ಅಂತ ಕಳಸ್ದೆ. ಈಗ ಸಮಾಧನ ಆಯ್ತು ನೋಡ್ರಿ.

ಅಲ್ಲ ಉತ್ತರದವರ  ಸಂಪ್ರದಾಯನೆ ಬೇರೆ.ನಮ್ಮ ಸಂಪ್ರದಾಯನೆ ಬೇರೆ. ಅವರು ದಿವಾಳಿ ಅಂದ್ರ ನಾವೂ ದಿಪಾವಳಿಗಿ ದಿವಾಳಿ ಅನ್ನಬೇಕ.. ದಿವಾಳಿ ಅಂದ್ರ ಪಾಪರ್ ಆಗೋಗು. ಲಾಸ್ ಆಗೋದು ಅಂತ ಕನ್ನಡ ತಿಳದಿರೊ ಎಲ್ಲರಿಗೂ ಗೊತ್ತದ.ಅಂದ್ರೂ ದಿವಾಳಿ ಹಬ್ಬದ ಶುಭಾಶಯ ಅಂತ ಅದ್ಯಾಂಗ್ ಹೇಳತಾರೋ ಎನೋ. ಅಷ್ಟು  ವಿಚಾರ ಮಾಡಲಕ್ಕ ಯಾರಿಗಿ ಟೈಮ್ ಇರತದರಿ. ಅವರಿಗಿ ಬಂದಿದ್ದ ಮೆಸೇಜ್ ಮತ್ತೊಬ್ಬರಿಗಿ ಫಾರ್ವರ್ಡ್ ಮಾಡತಾರ ಪಾಪ.

ನಾನಂತೂ ನಿಮಗ ಹ್ಯಾಪಿ ದಿವಾಳಿ ಅಂತ ಮೆಸೇಜ್ ಕಳಿಸಿದವರಿಗೆಲ್ಲ ತಿರುಗಿ ನಿಮಗೂ ದಿವಾಳಿ ಹ್ಯಾಪಿ ಆಗ್ಲಿ ಅಂತ  ಶುಭಾಶಯ ಹೆಳ್ದೆ ಅನ್ನಿ.ಈಗ ಮುಂದ ಈ ದಿವಾಳಿ ಪದ ಬಿಟ್ಟು ದಿಪಾವಳಿ ಅಂತ ನಾವು ಕನ್ನಡದವರೆಲ್ಲ ಕರೇರಿ , ಎನಂತೀರಿ.

ದಿಪಾವಳಿ ಹಬ್ಬ ಅಂದ್ರ ನಮಗ ದೊಡ್ಡ ಆಕರ್ಷಣೆ ಅಂದ್ರ  ಹಬ್ಬಕ್ಕ ತಿಂಡಿ ಫರಾಳ ಮಾಡೋದು. ಹಬ್ಬ ಎಂಟ ದಿನ ಅದ ಅಂದ್ರ  ನಾವು ಹೆಂಗಸರು ಯಾರೂ ಸಿಕ್ಕರು ಮೊದಲ ಕೇಳೋ ಪ್ರಶ್ನೆ ಹಬ್ಬದ ತಯ್ಯಾರಿ ಶುರು ಮಾಡಿರೇನ್ರಿ.. ಏನೇನು ಮಾಡಲತಿರಿ , ಎಂದು.ಹಿಂದಿನ ಕಾಲದಂಗ ಈಗ ತಿಂಡಿ ತಿರ್ಥ ಮಾಡಲಕ ಹಬ್ಬನೇ ಇರಬೇಕು ಅಂತೇನಿಲ್ಲ ಬಿಡ್ರೀ. ಆದ್ರೂ ಈ ದಿಪಾವಳಿಗಿ ಮಾತ್ರ ವೆರೈಟಿ ತಿಂಡಿ  ಮಾಡ್ಧೆ ಇದ್ರ ಹಬ್ಬನೆ ಅನಸಲ್ಲ ನೋಡ್ರಿ.ಎಲ್ಲರ ಮನ್ಯಾಗೂ ಕೊಡುಬ್ಯಾಳಿ , ಚಕ್ಕಲಿ , ಕರ್ಜಿಕಾಯಿ , ಲಡ್ಡು , ಖಾರಾಬೂಂದಿ , ಖಾರಾ ಸೇವು , ಇನ್ನೂ ಎನೇನೋ. ಮನ್ಯಾಗಿಂದ ಹೊರಗ ಬಂದ್ರ ಬೀದ್ಯಾಗ ಕಮ್ಮಗ ಕರಿಯುವ ವಾಸನೆ.

ಈಗೀಗ ಈ ತಿಂಡಿ ಮಾಡಾದು ಒಂದು ರೀತಿ ಜಿದ್ದಗಿ ಬಿದ್ದವರಂಗ  ಮಾಡಾದು  ಹೆಚ್ಚಾಗ್ಯಾದ .ಆಜು ಬಾಜೂದವರು ಮಾಡಲತಾರಂತ ನಾವೂ ಮಾಡಾದು.ಅವರು ಇಷ್ಟು ಮಾಡಿದ್ರ ನಾವು ಅವರಿಗಿಂತ ಹೆಚ್ಚು ಮಾಡಾದು. ತಿಂಡಿಗಳು ಮಾಡಿ ಮನೆವ್ರು ತಿನ್ನೊದಕ್ಕಿಂತ ತಾಟಿನಾಗ ಹಾಕಿ ಆಜು ಬಾಜುದವ್ರಿಗಿ ಹಂಚೋ ಹುಮ್ಮಸ್ಸು ಹೆಚ್ಚದ ಅನಸ್ತದ.

ಒಬ್ಬರಿಗೊಬ್ರು ಹಂಚಕೊಂಡ್ರ ಬಾಂಧವ್ಯ ವೃದ್ಧಿಯಾಗತದ ನಿಜ. ಆದ್ರ ಅವಶ್ಯಕತೆ ಇಲ್ದ ಒಬ್ಬರಿಗೊಬ್ರು ಕೊಟ್ಟಕೊಂಡ್ರ ಅದರಿಂದ ಅನಕೊಲಕ್ಕಿಂತ ಅನಾನೂಕೂಲನೆ ಜಾಸ್ತಿ.ನಾನು ಹೇಳೊದೆನಂದ್ರ ಈ ತರಾವರಿ ತಿಂಡಿಗಳನ್ನು ಮಾಡಿ ಯಾರ ಮನ್ಯಾಗ ಮಾಡಿರಲ್ಲೋ ಅಂತವರ ಮನಿಗಿ ಒಂದಷ್ಟು ಕೊಟ್ರ ಅವರಿಗಿ ಉಪಯೋಗ .ಆದ್ರ ಇವೆ ತಿಂಡಿ ಮಾಡಿರೋರ ಮನೀಗಿ ಮತ್ತ ತಾಟಿನಾಗ ಹಾಕಿ ನಮದಿಷ್ಟ ಟೇಷ್ಟ ಮಾಡ್ರಿ ಅಂತ ಕೊಟ್ರ ಅವರು ನೀವು ಮಾಡಿದ್ದ ತಿನಬೇಕಾ , ಇಲ್ಲ ಅವರ ಮನ್ಯಾಗ ಮಾಡಿದ್ದ ತಿನ್ಬೇಕಾ…  ತಿಂಡಿಗಳು ಮಾಡಿ ಕೊಟ್ಟು ತಗೊಂಡು  ಅವರಿವರು ಕೊಟ್ಟದ್ದು ನಾವು ಮಾಡಿದ್ದು ಎಲ್ಲ ಮಿಕ್ಸ ಆಗಿ ತಿನ್ನೊ ಹಂಬಲಾನೆ ಹೋಗಿ ಬಿಡತದ. ಆಗೆಲ್ಲ ಕೂಡು ಕುಟುಂಬ ಗಳಿರತಿದ್ವು. ಮಾಡಿದ್ದು ಕೊಟ್ಟದು ಎಲ್ಲಾ ಖರ್ಚು ಆಗಿಬಿಡತಿತ್ತು .ಈಗ ಮನ್ಯಾಗ ಇರೋರೆ ಮೂರು ನಾಲ್ಕು ಜನ , ಅದೂ ಹಬ್ಬದ ಸಂದರ್ಭದಲ್ಲಿ  . ಇಲ್ಲದಿದ್ರ ಮನಿ ಅಂದ್ರ ಅದರಾಗ ಇರೋರು ಇಬ್ರೆ ಈಗ.  ಹಂಗಾಗಿ ಹೈರಾಣ ಆಗಿ ತಿಂಡಿಗಳು ಮಾಡಿ ಅವರಿವರಿಗಿ ಹಂಚಿ , ಅವರಿವರು ಕೊಟ್ಟದ್ದು ತಿನ್ನಲಕ್ಕೂ ಆಗ್ಧ ಬಿಸಾಡಲಕ್ಕೂ ಆಗ್ದೆ ಇಡಬೇಕು. ಕರಿದ ತಿಂಡಿ ಆದ್ರೂ ಎಷ್ಡು ದಿನ ಇರತವ.ಜಲ್ದಿ ಎಣ್ಣಿ ವಾಸನಿ ಬರತವ.

ಅದಕ್ಕ ದಿಪಾವಳಿ ಬಂತಂದ್ರ ನಮ್ಮ ಹೆಣ್ಣಮಕ್ಕಳು
ಎನ್ ತಿಂಡಿ ಮಾಡಬೇಕು ಎನಿಲ್ಲ ಅಂತ ಬಡದಾಡೋದ ನೋಡಿ ನನಗ ಹಿಂಗೆಲ್ಲ ಅನಿಸ್ತದ.

ಆದ್ರೂ ಈಗ ಮನ್ಯಾಗ ಮಾಡಿ ತಿನ್ನೋ ಆಸಕ್ತಿನೂ ಕಮ್ಮಿ ಆಗ್ಯಾದ ಬಿಡ್ರಿ. ಎಲ್ಲರಿಗೂ ಶುಗರ ಬಿ ಪಿ , ಎನ್ ತಿಂದ್ರೂ ಲೆಕ್ಕ ಹಾಕಿ ತಿನ್ನೊ ಪರಿಸ್ಥಿತಿ. ಮಕ್ಕಳಂತೂ ಡಯಟ್ ಡಯಟ್ ಅನ್ನಕೊಂತ ಇರತಾವ. ಮುಕಡಿ ಮಾಡದೇಟು , ಸೀನದೇಟು ಅಂಬಂಗ ಅದ ಈಗಿನವರ ಪರಿಸ್ಥಿತಿ.

ಆ ಟಿ ವಿ ಸೀರಿಯಲ್ ಗಳದಾಗ ನೋಡಿನೆ  ನಮಗೂ ಹಬ್ಬ ಅಂದ್ರ ಹೀಗಿರತವ ಅಂತನ್ನಸ್ತದ. ನಮ್ಮ ಮುಂದಿನ ಪೀಳಿಗೆ ಅಂತೂ  ಹಬ್ಬ ಅಂದ್ರೆನು ಅಂಬದೆ ಮರೆತು ಬಿಡತಾವ.  ನಾವರ ಎಲ್ಲಿ ಉತ್ಸಾಹ ್ಇಂದ ಹಬ್ಬ ಮಾಡತೀವಿ   ,   ತಿಂಗಳಿಗೊಂದು ಹಬ್ಬ ಇದ್ರ  ಏನ್ ಮಾಡಬೇಕು ಮತ್ತ.. ಎಲ್ಲಾ ಯಾಂತ್ರಿಕ  .  ಮನ್ಯಾಗ ಅಡಗಿ ಮಾಡಿ ತಿಂದು ಭಾಂಡಿ ತೊಳೆಯೊದ್ರೋಳಗ ಹಬ್ಬನೆ ಮುಗದಿರತದ.

ಅಲ್ಲ ಆ ಧಾರಾವಾಹಿ ಮನಿಯೊಳಗೆಲ್ಲ ಅವ್ರು ಎಷ್ಟ ಚಂದ ಹಬ್ಬ ಮಾಡತಾರೀ .. ಅಡಗಿ ಮಾಡಪರಿನೂ ಚಂದ ಚಂದ ಸೀರಿ ಉಟಕೋತಾರ. ಮೈಕೈ  ಒಂದೀಟು ಅಸ್ತವ್ಯಸ್ಥ ಆಗಲಾರದಂಗ  ಅಡಗಿ ಮಾಡಿ  ಪೂಜಾ ‌ಪಾಠ ಎಲ್ಲಾ ಮಾಡತಾರಲ್ಲ.ನಮಗ್ಯಾಕ ಹಂಗ ಆಗಲ್ಲ ಅಂತೀನಿ. ನಮ್ಮ ಹೆಣ್ಣಮಕ್ಕಳಿಗಂತೂ ಈ ಹಬ್ಬ ಯಾಕಾರ ಬರತಾವ ಅಪ್ಪ ಅನಸತಿರತದ. ನನಗಂತೂ ಹಬ್ಬ ಮಾಡದು ಬಿಟ್ಟು ಚಂದ ಉಟಕೊಂಡು ತೊಟಕೊಂಡು ನಕ್ಕೊತ ಖೇಲಕೋತ ಹಬ್ಬ ಮಾಡೋರಿಗಿ ನೋಡಕೋತ ಕೂಡಬೇಕು ಅನಸ್ತದ ನೋಡ್ರೀ. ಊರಾಗಿನ ಮಂದಿಗಿ  ನೋಡಕೊಂತ  ಕೂಡದಲ್ಲರಿ ,,  ಟಿ ವಿ ದಾಗಿನ ಮಂದಿಗಿ. ಯಾಕಂದ್ರ  ಉರಾಗಿನ ಮನಿಯೊಳಗಿನ ಹಬ್ಬಗಳು ನೋಡಬೇಕು , ಬೆಳಗಾದ್ರ  ಧಪ್ಪ ಧೋಪ್ , ಟೆನ್ಷನ್ , ಹಬ್ಕಕ್ಕ ಸೂಟಿ ಅಂತ ಮನಿಯೊಳಗಿದ್ದ ಮಕ್ಕಳಿಗೆ ಬೈಯೋದು , ಎಲ್ಲಾ ಸಿಟ್ಟ ತಂದು ಗಂಡನ ಮ್ಯಾಲ ಒಗಿಯೋದು. ದೇವರಿಗಿ ಬೈಕೋತ ಪೂಜೆ ಮಾಡೊದು , ಭಾಂಡಿ ಎತ್ತಿ ಬಡಕ್ಕೊಂತ  ಹೋಳಗಿ ಮಾಡಿ ಸಿಡಮಿಡಿ ಗುಟ್ಟತಾ ಊರ ದೇವರಿಗೆಲ್ಲ ನೈವೇದ್ಯ ಕೊಟ್ಟು  ಯಪ್ಪಾ ಮುಂದಿನ ವರ್ಷ ತನಕ ಬೇಫಿಕ್ರೀ , ಅಂತ ನೀರಾಳ ಆಗೋಷ್ಟರಲ್ಲಿ ಮತ್ತೊಂದು ಹಬ್ಬ ಬರತದ.  ಅಸದರ ಟಿ ವಿಯೊಳಗಿನ  ಮನಿಯೊಳಗೆಲ್ಲ ಹೊಸ ಹೊಸ ನಮೂನಿ ಸೀರಿ ಮೇಕಪ್ , ಒಡವೆ ಎಲ್ಲಾ ಉಟಕೊಂಡು ತೊಟಕ್ಕೊಂಡು ಹಬ್ಬ ಮಾಡತಾರ . ಆದ್ರ ನಮ್ಮ ಊರು ಮನಿಯೊಳಗ ಮತ್ತದೆ ಧಪ್ಪ ಧೋಪ್.

 ವರ್ಷ ವರ್ಷ  ಇವೆಲ್ಲಾ ಹೀಂಗ ನಡಿತಿರತಾವ ಬಿಡ್ರಿ.ಜೀವನ ಅಂದ್ರ ಇದೇ ಮತ್ತೇನು .

ನಮ್ಮ ಬಾಜು ಮನಿ ಅಕ್ಕೊರು ಹಬ್ಬಕ್ಕ ಏನೇನು ಮಾಡಲತಿರಿ ಅಕ್ಕೊರೆ ಅಂತ ಕೇಳದಾಗ  ಐ , ಎನಿಲ್ಲರಿ , ಎಲ್ಲಾ ಖರೀದಿ ಸಿಗತದ ತಂದು ತಿಂದ್ರಾಯ್ತುರಿ. ರೊಟ್ಟಿ ಪಲ್ಯ ಬಿಟ್ಟು ಮತ್ತೇನು ತಿಂಬೋ ಆಸಕ್ತಿ ಇಲ್ಲ ನೋಡ್ರಿ ನಮಗ ಅಂದೆ ನಿರುತ್ಸಾಹದಿಂದ.

ಹಂಗಂದ್ರ ಹ್ಯಾಂಗ್ರಿ , ಮಕ್ಕಳು ಬರತಾರ ಹಬ್ಬಕ್ಕ ಏನಾರ ಮಾಡರಿ ಬರ್ರಿ. ನಾನು ನೇರವಾಗತಿನಿ ಅಂದ್ರು. ಅವರ ಉತ್ಸಾಹ ನೋಡಿ ನಾನೂ ಉತ್ಸಾಹಗೊಂಡು  ತಿಂಡಿ ತಯ್ಯಾರಿ  ಶುರು ಮಾಡ್ದೆವು  , ಚಕ್ಕಲಿ , ಖಾರಾಬೂಂದಿ , ಬಾಲುಷಾ , ಜಾಮೂನು ,  ಅವಲಕ್ಕಿ ಚೂಡಾ ಮಾಡಿ ಡಬ್ಬಿಯಲ್ಲಿ ತುಂಬಿಟ್ಟು ಹಬ್ಬ ಜೋರಾಯ್ತು ಅಂತ ಬೀಗಿದೆ.

 ಹಾಸ್ಟಲ್ ನಿಂದ ಮಕ್ಕಳು ಬಂದ್ರೂ , ನಾನು ಕಷ್ಟ ಪಟ್ಟು ಮಾಡಿದ್ದು ಅವ್ರು ಇಷ್ಟಪಟ್ಟು ತಿಂದ್ರು ಅಂದ್ರಾ..  ಉಹೂಂ  ,  ನಮಗ ಬರಿ ರೊಟ್ಟಿ ಪಲ್ಯ ಮಾಡಕೋಡು ಇವೆಲ್ಲ ಕರ್ದಿದ್ದ ತಿಂಡಿ  ಬ್ಯಾಡ ಅಂತ ಪೋನ್ ಮಾರಿಗಿ ಹಿಡಕೊಂಡು ಕುಂತಬಿಟ್ವು.

ಈಗ ಹಬ್ಬ ಅಂದ್ರ ಇಷ್ಟ. ಸೂಟಿ ಇದ್ರ ತಡ ತನ ಮಕ್ಕೋಳದು . ಟಿ ವಿ , ಫೋನ್. ಒಂದು ಉಟ್ಟಕ್ಕೊಳ್ಳೋ ಆಸಕ್ತಿ ಇಲ್ಲ. ತಿನ್ನೋ ಆಸಕ್ತಿ ಇಲ್ಲ .
ಅಷ್ಟು ಇಷ್ಟು ಮನ್ಯಾಗಿನ ದೊಡ್ಡವರೆ ಕೈ ಕಾಲು ಬಡಕ್ಕೊಂತ ಹಬ್ಬ ಹಬ್ಬ ಅಂತಾರ , ಈಗೀನ ಪೀಳಿಗಿ ಅಂತೂ  ನಿರುತ್ಸಾಹದ ವುಗಳು.

ನಾನೂ ಒಬ್ಬಕೀನೆ ಎನ್ ಹಬ್ಬ ಹಬ್ಬ ಅಂತ ಬಡದಾಡೋದು ,  ತಿನ್ನೊದು ..  ನಾನೂ ಪೋನ್ ತಗೊಂಡು ಹ್ಯಾಪಿ ದಿವಾಳಿ ಗಳಿಗೆಲ್ಲ ಸೇಮ್ ಟು ಯು ಅಂತ ರಿಪ್ಲೆ ಮಾಡಕ್ಕೊಂತ ಕುಂತೆ.


Leave a Reply

Back To Top