ನಿನ್ನ ಪ್ರೀತಿ ಮಳೆಯಂತೆಯೇ! ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸಕವಿತೆ

ತೇಟ್ ಮಳೆಯಂತೆಯೇ ನಿನ್ನ ಪ್ರೀತಿ!
ಒಮ್ಮೊಮ್ಮೆ ತುಂತುರು; ನನ್ನ ಕಾಡುವಂತ ನೆನಪಾದಾಗ!
ಮಗದೊಮ್ಮೆ ಜೋರು; ನನ್ನ ಮೇಲೆ ಸಿಟ್ಟು ಬಂದಾಗ!
ಆಗಾಗ ಚಿಟಪಟ; ನನ್ನ ಬೆಂಬಿಡದೆ ಬೈಯುವಾಗ!

ನೀ ಮಳೆಗಾಲ; ನನ್ನ ಕವಿತೆಗಳ ಓದುವಾಗ!
ಬಿಸಿಲ ಮಳೆ; ವಿರಹದುರಿಯ ಪದಗಳು ಸಿಕ್ಕಾಗ!
ಸೋನೆ ಮಳೆ; ಪ್ರೀತಿಯ ರಾಗದಿ ತೇಲುವಾಗ!
ಮುಸಲ ಧಾರೆ; ನಿನ್ನ ಕವಿತೆಗಳ ಬರೆಯದಿದ್ದಾಗ!

ಕಪ್ಪು ಮೋಡಗಳ ತೂಗಾಟ; ತವರಿಂದ ಕರೆ ಬಂದಾಗ!
ಮಿಂಚುಗಳ ಫಳ್ಗುಟ್ಟುವಿಕೆ; ನಾ ಮುನಿಸಿಕೊಂಡಿರುವಾಗ!
ಇದ್ದಕ್ಕಿಂದ್ದಂತೆ ಗುಡುಗು; ನಾ ಒಳಕೋಣೆಗೆ ಹೊಕ್ಕಾಗ!
ಸಿಡಿಲುಗಳ ಬಡಿತ; ಜೊತೆ ಜೊತೆ ನಡೆಯದಾದಾಗ!
ಶಾಂತ ಚಿತ್ತ ಮಳೆ; ಕೈಹಿಡಿದು ನಡುಬಳಸಿ ಹೊರಟಾಗ!

ನೀ ನನ್ನೆಲ್ಲ ಆಸೆ ಕನಸುಗಳ ಜೋಕಾಲಿ
ಬಿಟ್ಟು ಬಿಡದೆ ಹಿಂದೆ ಬರುವ ಮೊದಲ ಮಳೆಯ
ಮಣ್ಣ ಘಮ ಗಂಧದ ಮತ್ತೇರಿಸುವ ಅಶ್ವಿನಿಯೇ!
ಭರಪೂರ ಚಿಟಪಟ ಚುನಕುರುಳಿ ಮಾತುಗಳ ಹೊನಲು
ಮನೆತುಂಬ ಮೇಘಮಂದಾರ ಹಾಡುಗಳ ಗುನುಗು
ನೀ ಭರಪೂರ ಭರಣಿಯಾದಾಗಲೆ!
ನೀನಿದ್ದರೆ ಮನೆ ಮನದ ತುಂಬ ನಕ್ಷತ್ರದೊಳಪು
ಕೃತ್ತಿಕೆಯ ಮಿನುಗು ನಿಂತು ನಿಂತು ಬಳುಕುತ ಬರುವ
ನಿನ್ನ ವೃೆಯಾರವೇ ಸೊಗಸು!
ಹೂಗಳ ಮಕರಂದವೆಲ್ಲ ಹರಡಿ ಮದರಂಗಿ ಅಂದ ಚೆಲ್ಲಿ
ತನುಮನ ಹೊಲದ ತುಂಬ ಆಹ್ಲಾದದ ಹೂಮಳೆಯೇ
ನನ್ನ ರೋಹಿಣೀ!
ಬಿಡದ ಜನ್ಮ ಜನ್ಮದ ಅನುಬಂಧ ನಮ್ಮ ಒಲವಿನ ಬಂಧ
ಚಂದಿರನಲ್ಲಿ ಹೊಳೆವ ಛಾಯೆ ನೀ ಬರುತ್ತಿರುವಾಗ
ನನ್ನಲ್ಲಿ ಅಳಿಸದ ಅಚ್ಚೆಯ ಬೆಸುಗೆಯೇ ಮೃಗಶಿರಾ!
ನೀ ಇರದೆ ಇಲ್ಲೆಲ್ಲ ಏನೇನು ಇಲ್ಲ ಹಗಲಿರುಳಿಗು
ಹೊರ ಒಳಗು ನೀ ಹೆಜ್ಜೆ ಇಟ್ಟರೆ ಆಹಾ ಆನಂದದ ಕಲರವ
ಸಂತೃಪ್ತಿಯ ಝರಿಯೇ ಆರಿದ್ರಾ!
ತನುಮನಕೆ ಹಬ್ಬದೂಟ ನಿತ್ಯವು ನಿನ್ನ ಪುಟ್ಟ ಕೇದಗೆ
ಪಾದಗಳ ಹೆಜ್ಜೆಗಳ ಕಿರುಸದ್ದಿನಲ್ಲಿ ಪುನಃ ಪುನಃ ಕೇಳಬೇಕೆನ್ನುವ
ಕಲ್ಯಾಣಿ ರಾಗದ ಪುನರ್ವಸು!
ಮಾತು ತಪ್ಪದ ನಲ್ಲೆ ಮುತ್ತಿನ ಮಳೆಯ ಮಲ್ಲೆ
ದಿಗಂತದಿ ಮೋಡವಿದ್ದರೆ ಮಳೆಯ ಭಾಗ್ಯ
ನೀ ಮನೆಯಲ್ಲಿದ್ದರೆ ಪುಣ್ಯ ವಿಶೇಷ ನನ್ನ ಪುಷ್ಯ!
ಮನೆತುಂಬ ಸಿರಿವಂತಿಕೆ ಮನತುಂಬ ಹೃದಯವಂತಿಕೆ
ತಿರುಗಿನೋಡುವ ಜೀವಂತಿಕೆ ನೀನಿರಲು ಅಂದಂದ
ಹಸಿರು ಉಸಿರು ಆಶ್ಲೇಷಾ!
ನೀ ಒಪ್ಪಿದರೆ ಮನೆಯಲ್ಲೆಲ್ಲ ಒಲವ ದೈವದ ವರ
ಮುನಿದರೆ ಪ್ರೀತಿಗೇ ಬರಗಾಲ ಬರದ ಶಾಪ
ನನ್ನ ಮನೆತನ ಬೆಳೆಸುವ ಮೇರು ಮನ ಮೇಘವೇ ಮಘೇ!
ನೀ ಒಲಿದು ಬರುತಿರೆ ಇಹಪರಕ್ಕು ಸಂಪತ್ತು
ನಿತ್ಯವೂ ದಿಬ್ಬಣದ ಉತ್ಸವ ದಿನದಿನವೂ ಮನೆಯಲ್ಲಿ
ಹಬ್ಬ ತಂದಿರುವೆಯಲ್ಲೇ ಹುಬ್ಬೆ!
ನೀ ಮಾತನಾಡುತ್ತಿರೆ ನಾ ಮೌನಿ ನೀ ಹಾಡುತ್ತಿರೇ ನಾ ಧ್ಯಾನಿ
ನೀ ಉತ್ತರಿಸುತ್ತಿರೆ ನಾ ನಿರುತ್ತರಾ ನನಗೆ ನೀನೇ ಉತ್ತರೇ!
ಚಿತ್ತದಲ್ಲಿ ನೀ ಪಟ್ಟಾಗಿ ಕುಳಿತು ಹಸ್ತದಲ್ಲಿ ನೀ ಒತ್ತಾದ
ರೇಖೆಯಾಗಿರುವ ತನಕ ನಾ ಭಾಗ್ಯವಂತನೇ ಸರಿ ನನ್ನ ಹಸ್ತೆ!
ನಿನ್ನ ಮನದಿಂದ ಅರಳಿದ ಒಲವು ನನ್ನೆಲ್ಲ ಬಾಳಿಗೆ
ಸುಗಂಧ ಹರಡುತ್ತಲಿ ಮೈಮನ ಪ್ರಫುಲ್ಲಗೊಳಿಸಿದೆ
ನೀನೆ ನನ್ನ ಬದುಕಿನ ಚಿತ್ತೇ!
ದಿನಕರನಿಂದ ಇಳೆಗೆ ನಿತ್ಯ ಬೆಳಕಿನಾರತಿ ಬೆಳಗು ಬೈಗಿಗು ಹಗಲು ರಾತ್ರಿಗು
ನಿನ್ನಿಂದ ಸುಖದ ಮುತ್ತಿನಾರತಿ ನೀನಿರುವಾಗ ಕೀರ್ತಿ ನನ್ನ ಸ್ವಾತಿ!
ಹಲವು ನೋವು ದುಃಖ ದುಮ್ಮಾನ ಎಡರು ತೊಡರುಗಳ
ನಿವಾರಿಸಿ ಮೈಮನ ಹಗುರಗೊಳಿಸುವ ವಿಷಾದವೆಂದು
ಸುತ್ತ ಸುಳಿಯದಂತೆ ಕಾಯುವ ನೀ ನನ್ನ ವಿಸ್ಮಯ ವಿಶಾಖಾ!

ಮಳೆಯೇ ನೀ ನನ್ನ ಗಗನವೇ ನಾ ನಿನ್ನ ಭೂಮಿಯೇ!
ನೀ ಸುರಿದಷ್ಟೂ ನಲಿವು ಹಾಡುವೆ ಹಚ್ಚಸಿರ ಒಲವು!
—————————————————————–

Leave a Reply

Back To Top