ಹಮೀದಾಬೇಗಂ ದೇಸಾಯಿ ಅವರ ಗಜಲ್

ಕುಸುಮ ರಂಗುಗಳಲಿ ಅದ್ದಿ ಮನದ ಲೆಕ್ಕಣಿಕೆಯಿಂದ ನಿನಗೊಂದು ಓಲೆಯನು  ಬರೆದಿಹೆನು ಇನಿಯಾ
ಭಾವದಂಗಳದಿ ಮೂಡಿದ ಪದಗಳನು ಒಲುಮೆಯಲಿ ಜೋಡಿಸಿ ಮೆಲುದನಿಯಲಿ ಉಲಿದಿಹೆನು ಇನಿಯಾ

ಗರಿಗೆದರಿ ರೆಕ್ಕೆಬಡಿದು ರಂಗೇರಿ ಕನಸುಗಳು ಹುಚ್ಚೆದ್ಧು ಕುಣಿಯುತಿವೆ ಗೊತ್ತೇ ನಿನಗೆ
ಎದೆಯ ಒರತೆಯಲಿ ಚಿಮ್ಮುತ ನಲಿವ ಬಯಕೆಗಳನು ನಿನಗಾಗಿ ಜತನದಿ ಇರಿಸಿಹೆನು ಇನಿಯಾ

ನೋಡುತಿರುವೆ ದೂರ ತನಕ ಎವೆ ಮುಚ್ಚದೆ ನೀನು ಬರುವ ದಾರಿಯಲಿ ಹೂಗಳನು ಹಾಸಿ
ಪ್ರೀತಿಯಲಿ ಕೊರೆದ ಕಾಡಿಗೆಯು ಕರಗದಂತೆ ನಯನ ದಳಗಳಿಗೆ ತಾಕೀತು ಮಾಡಿಹೆನು ಇನಿಯಾ

ಪದೇ ಪದೇ ಕೇಳದೆ ಮುತ್ತಿಡುತಿವೆ ಕೆಂಪು ಕೆನ್ನೆಗೆ ತುಂಟ ಮುಂಗುರುಳುಗಳು ಮೆಲ್ಲನೆ
ಘಮ ಘಮಿಸಿ ಅಮಲೇರಿಸುವ ನಾಜೂಕಿನ ಅರಳಿದ ಬಕುಳ ಮಾಲೆಯನು ಮುಡಿದಿಹೆನು ಇನಿಯಾ

ಮುಸ್ಸಂಜೆಯ ಓಕುಳಿ ಆಡಿ ದಣಿದು ಪಡುವಣ ಮನೆಗೆ ಹೊರಟನದೋ ಭಾಸ್ಕರ  ನಗುತ
ಇರುಳ ಕತ್ತಲೆಯ ಮುಸುಕು ಸರಿಸಲು ನಿನ್ನ ಬೇಗಂ  ಶಮೆಯ ಬೆಳಗಿಹೆನು ಇನಿಯಾ


Leave a Reply

Back To Top