ಮೊದಲ ಪ್ರೇಮ ನಿವೇದನೆಯಲ್ಲಿಯೇ ಇಂದಿಗೂ ನೆನಪಾದವಳು’ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲಹರಿ

ಹರಿಯುವ ನೀರಿನ ತೊರೆ. ಶುಭ್ರವಾದ ಮೋಡ. ಸೋಯ್ಯಂ  ಎಂದು ಬೀಸುವ ತಂಗಾಳಿ. ಆ ತಂಗಾಳಿಗೆ ಮುಖಮಾಡಿ ಮೈಮನ ತಣಿಸಲು ಬರುವ ಹೂಗಳ ಘಮಲಿನ ಪರಿಮಳ.  ಆ ಪರಿಮಳ ನನ್ನ ಮೂಗಿಗೆ ಬಡಿಯಲು ಯಾಕೋ ಮನಸ್ಸು… ತಲ್ಲಣಿಸಿಬಿಡುತ್ತಿತ್ತು. ಹೃದಯ ಬಡಿತ ಹೆಚ್ಚಾಗುತ್ತಿತ್ತು.  ನನ್ನಲ್ಲಿ ಏನೋ ಬದಲಾವಣೆಯಾಗುತ್ತಿದೆ. ಆದರೆ ‘ಅವಳು’ ಬಂದಳೆಂದರೆ ಅದೆಂತಹದೋ ಯಾತನೆ. ಅವಳಾಸರೆಯನ್ನು ಬಯಸುವ ಮನಸ್ಸಿನ ಕೋಲಹಾಲ.  

ಅವಳೊಡನೆ ಬೆರೆಯಬೇಕು. ಅವಳ ಜೊತೆ ಮಾತನಾಡಬೇಕು. ಕೈ ಬೆರಳು ಹಿಡಿದು ಮೆಲ್ಲನೆ ತಣ್ಣನೆಯ ಗಾಳಿಯಲ್ಲಿ ಹೆಜ್ಜೆ ಹಾಕಬೇಕು.  ಆ ಹೆಜ್ಜೆಯ ಹಾದಿಯಲ್ಲಿ ತಂಗಾಳಿಗೆ ಬೀಸುವ ಅವಳ  ಮುಂಗುರುಳಿಗೆ ನನ್ನ ತುಟಿಗಳು ಮೆಲ್ಲನೆ ಮುತ್ತಿಡಬೇಕು. ಕಳ್ಳ ನೋಟದಲ್ಲಿ ಮಾತನಾಡಬೇಕು. ಅವಳ ಜೊತೆಗೂಡಿ ಮನಸಾರೆ ಗಹಗಹಿಸಿ ನಗಬೇಕು. ನಮ್ಮಿಬ್ಬರ ನಗುವಿಗೆ ತೋಟದ ಹೂಗಳು ಅರಳಿ ನಗುತಿರಬೇಕು. ಹೂವಿಗೂ ಅವಳ ನಗುವ ಕಂಡು ನಾಚಬೇಕು. ಈ ನಾಚಿಕೆಯ ಕ್ಷಣಗಳಲ್ಲಿ ಅವಳನ್ನು ಹೀಗೆ ಏನೇನೋ…!!

 ಕನಸಿನ ಮನಸ್ಸು, ನೂರಾರು ಕಲ್ಪನಾ ಲೋಕದಲ್ಲಿ ತೇಲುತ್ತಿರುವಾಗ, ನಮ್ಮ ಮನೆಯ ಮುಂದಿನ ಹಾದಿಯಲ್ಲಿ ಅವಳ ಕಾಲ್ಗೆಜ್ಜೆಯ ಸಪ್ಪಳ ಕೇಳಿಸಿದರೆ ಸಾಕು,  ಮಾತು ಮೌನವಾಗಿಬಿಡುತ್ತದೆ.
ಸದಾ ಅವಳನ್ನು  ಹುಡುಕಬೇಕು. ದೂರವಿದ್ದಾಗ ಏನೇನೋ ಬಯಸುವ ಮನಸ್ಸು :  ಹತ್ತಿರ ಬಂದಾಗ ಏನೂ ಮಾತನಾಡಲು ಆಗದಷ್ಟು ಹುಚ್ಚುಕೊಡಿತನ. ಅದೇ ಅಲ್ಲವೇ ಸೆಳೆತ. ಹುಡುಗುತನದ ಹುಡುಗಾಟ  ನನ್ನಲ್ಲಿ ಆವರಿಸಿಬಿಡುತ್ತಿತ್ತು.

ಅವತ್ತು ಕಾಲೇಜಿನಿಂದ ಎನ್ .ಎಸ್ .ಎಸ್. ಕ್ಯಾಂಪಿಗೆ ಹೋದಾಗ ಏನವಳ ಪ್ರೀತಿಯ ಮಾತುಗಳು. ಆಲಿಂಗನ, ಕಣ್ಣೋಟ,  ಅವಳ ಹಾಲ್ಗಲ್ಲದ ಕೆನ್ನೆಗಳನ್ನು ಕಂಡ ಆ ಚಂದ್ರ ನಸುನಕ್ಕು ನಾಚಿಬಿಟ್ಟ.  ಕೆಂದುಟಿಯ ಕಂಡ ತೊಂಡೆಹಣ್ಣು ತವಕಿಸಿಬಿಟ್ಟಿತ್ತು.  ಅವಳೆದೆಯ ಬಡಿತಕೆ ನಾಚಿದ ನಾನು ಮನಸಾರೆ ಮಾತನಾಡಬೇಕೆಂದು ಹಪಾಹಪಿಸಿದ್ದು ಸುಳ್ಳಲ್ಲ.

ಸೊಂಪಾಗಿ ಬೀಸುವ ರೋಮಾಂಚನಕಾರಿ ರೋಮಗಳ ನೋಟದ ದೃಷ್ಟಿಯನ್ನು, ತುಟಿ ಕಚ್ಚಿ ಹಿಡಿಯುವ ವಾಂಛೇಯನ್ನು,  ಅವಳ ಅನುಪಮ ರೂಪರಾಶಿಯ ಬಗ್ಗೆ  ಬರೆಯುವುದಾದರೂ ಹೇಗೆ…?

ಕೊನೆಗೂ…ಅವಳ ಮುಗುಳ್ನಗೆಗೆ ಸೋತ ನಾನು..ಪತ್ರದೊಂದಿಗೆ ಮುಖಾಮುಖಿಯಾಗಲು ಮನಸ್ಸು ಮಾಡಿದೆ.

“ಪ್ರೀತಿಯ ನನ್ನ ಹುಡುಗಿ ನಿನ್ನ ನೋಡಿ ನನಗೆ ಮನಸ್ಸು ವಿಲ ವಿಲ ಒದ್ದಾಡಿ, ಕಣ್ಣುಗಳಲ್ಲಿ  ನಿನೇ ಕಾಣುತ್ತಿರುವಿ. ಕಾರಣ ಇಷ್ಟೇ, ಈ ಜನ್ಮಕ್ಕೆ ಸಾಕಾಗುವಷ್ಟು ನಿನ್ನ ಪ್ರೀತಿಸುತ್ತಿದ್ದೇನೆ.

ಪ್ರಿಯ ಸಖಿ,  ಜನ್ಮದೂದ್ದಕ್ಕೂ ನಿನ್ನನ್ನು ಪ್ರೀತಿಸಿ ನಿನ್ನೊಂದಿಗೆ ಬಾಳಬೇಕೆಂದಿದ್ದೇನೆ. ದಯವಿಟ್ಟು ಬೇಡವೆನ್ನದಿರು…”  ಈ ಎರಡು ಸಾಲಿನ  ಪತ್ರಕ್ಕೆ ಅಷ್ಟೇ ಸೊಗಸಾಗಿ ಉತ್ತರ ಬಂದಿತು.

“ಪ್ರೀತಿಯ ಹುಡುಗಾ, ನೀ ಮೆಚ್ಚುವ ಮುನ್ನವೇ ನಾನು ನಿನ್ನನ್ನು ಮನಸಾರೆ ಇಷ್ಟಪಟ್ಟಿದ್ದೆ. ಆದರೆ  ನಮ್ಮಿಬ್ಬರ ಪ್ರೀತಿಯು ಜಾತಿಯ ಅಗ್ನಿಕುಂಡದಲ್ಲಿ ಬೆಂದು ಹೋಗದಿರಲಿ, ನಾನು ನಿನ್ನೊಳಗೆ ಅವ್ಯಕ್ತಳಾಗಿ ಹಾಗೆಯೇ ಉಳಿದುಬಿಡುವೆ.  ನೀನು ಅಷ್ಟೇ, ನನ್ನೊಳಗೆ ಸದಾ ಹುದುಗಿಬಿಡು..!  ಇದರಿಂದ ಯಾರೂ ನಮ್ಮನ್ನು ಬೇರ್ಪಡಿಸಲಾರರು.  ಸದಾ ನಿನ್ನ ನೆನಪಿನೊಳಗೆ ಇರುವ….”

 ಎನ್ನುವ ಸಾಲುಗಳು ಓದಿದಾಕ್ಷಣ ಮನಸ್ಸು ಕುದ್ದು ಹೋಯಿತು. ಅವಳು ದೂರದಿಂದಲೇ ಕೈಮಾಡಿ ಕರೆದಂತಾಗಿ ಹೊರಳಿ ನೋಡಿದೆ. ಮಂಚದ ಮೇಲೆ ಮಲಗಿದ್ದ ನಾನು  ಹಾಸಿಗೆಯಿಂದ ದೊಪ್ಪನೆ ಬಿದ್ದೆ.  ತಕ್ಷಣ ಎಚ್ಚರಾಯಿತು. ನನ್ನ ಹೆಂಡತಿ ಮುಸಿಮುಸಿ ನಕ್ಕಳು.  “ಅಯ್ಯೋ ಇದು ಕನಸಾ…ಎಂದುಕೊಂಡೆ. ಅಂದಿನ ಕಾಲೇಜು ಕನ್ಯೆ ನನ್ನನ್ನು ಈಗಲೂ ಸದಾ ಕಾಡುತ್ತಾಳೆ. ನೆನಪುಗಳಲ್ಲಿ ಅವಳೊಡನೆ ತೇಲಿಹೋದೆ. ಅತ್ತ ಸೂರ್ಯ ಮೂಡಣದಲ್ಲಿ ಬೆಳಗುತ್ತಿದ್ದನು. ಅವಳು ಮತ್ತಷ್ಟು ಸುಂದರವಾಗಿ ಹೆಂಡತಿಯ ಮುಖದಲ್ಲಿ ಮಿಂಚಿದಳು.


Leave a Reply

Back To Top