ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಕನ್ನಡಿ ಒಳಗಿನ ಬಿಂಬ
ಸ್ವಾರ್ಥದ ಗೂಡೊಳಗೆ
ನೆಲೆಸಿರುವವರೇ ಎಲ್ಲ
ನಿಸ್ವಾರ್ಥ ಸೇವೆಗೆ
ಯಾವುದೇ ಬೆಲೆಯಿಲ್ಲ ಇಲ್ಲಿ
ಕೆಲಸ ಮುಗಿದ ಮೇಲೆ
ಮರೆಯುವವರೆ ಎಲ್ಲ
ಭಾವನೆಗಳ ಜಟಿ ಮಳೆಯು
ಕಣ್ಣೀರಾಗಿ ಸುರಿಯುವುದು
ನೋವು ನಮ್ಮೊಳಗೆ ಕುಳಿತು
ಬಿಕ್ಕಿ ಬಿಕ್ಕಿ ಅತ್ತುಕರೆಯುವುದು
ಆ ಮುಖ ಈ ಮುಖಗಳು
ಕಣ್ಣೆದಿರು ಬಂದು ಹೋಗುವುದು
ಯಾವ ಮುಖವು ಜೊತೆಯಲ್ಲಿ
ಉಳಿಯದು ಕೊನೆಯ ತನಕ
ಅವಶ್ಯಕತೆ ಮುಗಿದ ಮೇಲೆ
ಎಲ್ಲವೂ ದೂರ ದೂರ
ಹೊತ್ತು ಮುಂದೆ ಸಾಗಲಾರದು
ಮನವು ಇನ್ನು ಹೆಣಭಾರ
ಅವರಿವರಂತೆ ನಾವಾಗದೇ
ಕನ್ನಡಿಯದುರಿನ ಬಿಂಬದಂತಿರಬೇಕು
ಕತ್ತೆತ್ತಿ ನೋಡಿದರೆ ಎದಿರು
ನಕ್ಕು ಹಗುರಾಗಬೇಕು
ಬೆನ್ನ ಹಿಂತಿರುಗಿಸಿ ಹೊರಟರೆ
ನಾವು ನಮ್ಮತನವ ಬಿಡದೆ
ಹಿಂತಿರುಗಿ ನೋಡದೆ ಹೊರಟುಬಿಡಬೇಕು
ದೂರವೆಂದರೆ ದೂರವಲ್ಲದೆ
ಹತ್ತಿರವೆಂದರೆ ತೀರ ಹತ್ತಿರವಲ್ಲದೆ
ಕನ್ನಡಿ ಒಳಗಿನ ಬಿಂಬದಂತೆ
ಬದುಕುವುದ ಕಲಿಯಬೇಕು
ಇದ್ದುದರಲ್ಲಿಯೇ ನಲಿಯುತ ಬೆಳೆಯಬೇಕು
ನಾಗರಾಜ ಜಿ. ಎನ್. ಬಾಡ