ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ನಿನ್ನ ಮೊಡವೆಗಳ ಚಿವುಟದಿರು

ಮೊಡವೆಗಳಿಂದ
ನಿನಗೆ ಚೆಲುವು
ನಿನ್ನ ಚೆಲುವಿಗೆ ನನ್ನ ಒಲವು

ಮೊಡವೆಗಳ ಚಿವುಟದಿರು
ನನ್ನ ಹೃದಯವಿಲ್ಲಿ ಹಿಂಡಿದಂತಾಗಿ ನೋಯುವುದು!
ಹಾಗೆ ನಯವಾಗಿ ಸವರುತಿರು
ನನ್ನ ಮೈಮನವೆಲ್ಲ ಪುಳಕಗೊಳ್ಳುವುದು!

ಮೊಡವೆಗಳ ಹೀಗಳೆಯದಿರು
ನನ್ನ ಕವಿತೆಗಳೆಲ್ಲ ದುಃಖಿಸಿ ಕಣ್ಣೀರಾಗುವವು!

ಮೊಡವೆಗಳೇ ಮುತ್ತು!
ಮತ್ತೇಕೆ ನಿನಗೆ ಮುತ್ತು ರತ್ನ ಚಿನ್ನ ವಜ್ರ?

ನಿನ್ನ ಮೊಡವೆಗಳ ನೋಡಲು
ನನಗಿಂತ ಮೊದಲೇ
ನನ್ನ ಕವಿತೆಗಳೆಲ್ಲ ನಿನ್ನ ಮನೆ ಬಳಿ ಕಾವಲು ನಿಂತಿವೆ!

ಕವಿತೆಗು ನನಗು
ಮುದ್ದು ಮೊಡವೆಗಳ ಹುಡುಗಿ ನೀನೆಂದರೇ ಇಷ್ಟ!

ನೀ ನನ್ನೊಳಗೊ
ನನ್ನ ಕವಿತೆಯೊಳಗೊ ಕಾಣೆ
ನಾ ಮಾತ್ರ ನಿನ್ನ ಮೊಡವೆಯೊಳಗೆ ಜಾಣೆ!

ನಾ ನಿನ್ನ ಹತ್ತಿರ ಬರುವವರೆಗೆ
ನಿನ್ನ ಗುಲ್ಕನ್ ಕೆನ್ನೆಯ ಮೇಲೆ ಮೊಡವೆ
ನಾ ಬಂದ ಮೇಲೆ ನಾನೇ ನಿನ್ನ ಕೆನ್ನೆಯೊಡವೆ!

ನೀ ದೂರವಿದ್ದರು ಕಾಡುವೆ ಸನಿಹಕ್ಕೆ ಸೆಳೆಯುವೆ
ಇದಕ್ಕೆಲ್ಲ ಕಾರಣವೇ ಮೊಡವೆ!

ನೀ ನಕ್ಕಾಗಲು ಕೋಪಿಸಿಕೊಂಡಾಗಲು
ಮೊಡವೆಗಳಿಗೆ ಮೆರುಗು
ನನ್ನೆದೆಯಲ್ಲಿ ಒಲವಿನ ಗುನುಗು


Leave a Reply

Back To Top