‘ಹೃದಯ ಕವಾಟದೊಳಗೆ ಪ್ರೀತಿಯ ಮುದ್ರೆ ಒತ್ತಿದ ನಲ್ಲನಿಗೆ..’ಹೀಗೊಂದು ಪ್ರೇಮ ಪತ್ರ-ಅರುಣಾ ನರೇಂದ್ರ

ಬೆಳಗಾಗುತ್ತಲೇ ನಿನ್ನ ನೆನಪುಗಳೊಂದಿಗೆ ಏಳುತ್ತೇನೆ. ದಿನದ ಕೆಲಸದಿಂದ ಬಳಲಿದ ದೇಹ ಮತ್ತು ಮನಸ್ಸಿಗೆ ನಿನ್ನ ನೆನಪು ಚೇತೋಹಾರಿಯಾಗಿ ಅಮೃತ ಸಿಂಚನ ನೀಡುತ್ತದೆ.ಕತ್ತಲದೊಡನೆ ಸುಂದರ ಕನಸುಗಳ ಹಚ್ಚಡ ಹೊದೆಯುತ್ತೇನೆ. ಹಚ್ಚಡದೊಳಗೆ ನೀ ಬಚ್ಚಿಟ್ಟ ಪ್ರೀತಿಯ ಸವಿ ಸವಿಯುತ್ತಿರುವಾಗಲೇ ಬೆಳಗಾಗುತ್ತದೆ. ಜೀವನದ ಪಯಣದಲ್ಲಿ ನಿನ್ನ ಪರಿಚಯವಾದ ಆ ಘಳಿಗೆ, ಕನ್ನಡಕದೊಳಗಿಂದ ಕದ್ದು ಕದ್ದು ನನ್ನ ನೋಡಿದ ಆ ನೋಟ, ಮಾತು ಮೌನವಾಗಿ ಕಣ್ಣಲ್ಲೇ ಮಾತಾಡಿ ಹೃದಯ ಹೃದಯವು ಕೂಡಿ, ತುಟಿ ಅಂಚಿನಲ್ಲಿ ಮಿಂಚು ಸಂಚರಿಸಿದ ಆ ಕ್ಷಣ ನೆನಪಾದಾಗಲೆಲ್ಲ ಮೈಯಲ್ಲಿ ಪುಳಕ ! ದಪ್ಪ ಮೀಸೆಯ ಅಂಚಲ್ಲಿ ನೀನೊಮ್ಮೆ ನಕ್ಕರೆ ಸಾಕು ಅದೆಷ್ಟೋ ಹುಡುಗಿಯರು ಹುಚ್ಚರಾಗಿ ಬಿಡುತ್ತಾರೆ.ನಿನ್ನ ಒಲವಿಗಾಗಿ ಅಸಂಖ್ಯಾತ ನಕ್ಷತ್ರಗಳು ಕಾದಿದ್ದರೂ ನೀನು ನನ್ನನ್ನೇ ಹುಡುಕಿರುವಿ ಗೆಳೆಯ.ನೀನು ನನ್ನವನೆಂಬ ಹೆಮ್ಮೆಯಿಂದ ಬೀಗುತ್ತೇನೆ ನಾನು.ನೀನಿಲ್ಲದ ಬೆಳದಿಂಗಳ ರಾತ್ರಿ ಮೋಡಗಳ ಹಿಂಡಿನೊಳಗಿಂದ ಆಗೊಮ್ಮೆ ಈಗೊಮ್ಮೆ ಇಣುಕುವ ಚಂದ್ರನಲಿ ನಿನ್ನದೇ ಬಿಂಬ ಕಾಣುತ್ತಲೇ ಕಣ್ತುಂಬಿಕೊಳ್ಳುತ್ತೇನೆ.ತಂಗಾಳಿ ಮುಂಗುರುಳ ಚದುರಿಸಿ ತುಂಟಾಟವಾಡಲು ಹವಣಿಸುತ್ತಿದೆ.ಬಂದು ಬಿಡು ಒಲವೇ..
ನನ್ನೆಲ್ಲ ಆಸೆಗಳಿಗೆ ರೆಕ್ಕೆ ಹಚ್ಚಿ ಹಾರಿ ಬಿಟ್ಟವನು ನೀನು.ತಣ್ಣನೆಯ ಮಳೆಯ ಹನಿಯಂತೆ ಎದೆಗಿಳಿದಿದೆ ಪ್ರೀತಿ.ಕನಸುಗಳಿಗೀಗ ಸುಗ್ಗಿ ಕಾಲ.ನನ್ನೊಡನೆ ನೀ ಸರಸಕ್ಕಿಳಿದಾಗ ಕೈಬಳೆಗೆ ಘಲ್ಲೆನುವ ತವಕ!ಕಾಲ್ಗೆಜ್ಜೆಗೆ ಘಲಿರೆನುವ ಕಾತುರ! ನಿನ್ನ ತೋಳ ತಲೆದಿಂಬಿನಲಿ ನಾ ಮುಡಿದ ಮಲ್ಲಿಗೆಗೆ ಮೆತ್ತಗಾಗುವ ಹಂಬಲ.!

 ಹಗಲು ರಾತ್ರಿಗಳ ಅರಿವಿಲ್ಲದಂತೆ ನಿನಗಾಗಿ ಕಾಯುತಿರುವೆ ಬಂದು ಬಿಡು ಗೆಳೆಯ.ಈ ರಾತ್ರಿ ನಮ್ಮದಿದೆ.!ಸಗ್ಗವು ಕರುಬುವಂತೆ ನಿನ್ನಪ್ಪುಗೆಯಲ್ಲಿ ಸುಖಿಸಬೇಕಿದೆ ನಾನು. ಹರೆಯದ ಬೆಚ್ಚಗಿನ ಕಾವಲ್ಲಿ ನಿನ್ನ ಕರಗಿಸಬೇಕಿದೆ ನಾನು. ಅದೆಷ್ಟೋ ಜನ್ಮದ ವಿರಹಕ್ಕೆ ವಿದಾಯ ಹೇಳಿ ನಿನ್ನೆದೆಯೊಳಗೆ ಮುಖ ಹುದುಗಿಸಿ ಜಗದ ಜಂಜಡ ಮರೆತು ಬಿಡುವೆ.ರಾತ್ರಿ ಕರಗುವ ಮುನ್ನ ಬಂದು ಬಿಡು. ಕಣ್ಣ ಬಟ್ಟಲಲಿ ಹಣತೆ ಹಚ್ಚಿಟ್ಟಿರುವೆ.ನೀ ಬರು ದಾರಿಯಲಿ ಪ್ರೀತಿಯ ಚಳೆ ಹೊಡೆದು,ಭಾವದೆಳೆಯ ರಂಗವಲ್ಲಿ ಬಿಡಿಸಿದ್ದೇನೆ.ನೀ ಬರುವಿ ಎಂಬ ಭಾವ ಮನದಲಿ ಹೊಳೆದು ಶುರುವಾಗಿದೆ ಎದೆಯ ಪರದೆಯ ಮೇಲೆ ನವಿಲುಗಳ ಕುಣಿತ!.ಚಿಗುರೊಡೆದ ಕನಸುಗಳಿಗೆ ಬಣ್ಣ ಬರೆಯುವ ಚೆಲುವ ನಿನಗಾಗಿ ಕಾದಿರುವೆ ನೀನೆಂದು ಬರುವಿ ??..

——————–

One thought on “‘ಹೃದಯ ಕವಾಟದೊಳಗೆ ಪ್ರೀತಿಯ ಮುದ್ರೆ ಒತ್ತಿದ ನಲ್ಲನಿಗೆ..’ಹೀಗೊಂದು ಪ್ರೇಮ ಪತ್ರ-ಅರುಣಾ ನರೇಂದ್ರ

Leave a Reply

Back To Top